ಸ್ವಾಮಿ ಪುರಂದರರೆ
ಮಾತೆಲ್ಲ ಸ್ಫಟಿಕ ಮಣಿಮಾಲೆ ಎನ್ನಿಸುವಂತೆ
ಉಪನಿಷತ್ತಿನ ತಿರುಳೆ ಅರಳಿತೆನ್ನಿಸುವಂತೆ
ಚಳಿಯ ಕೆನ್ನೆಯ ಬಿಸಿಲು ನೇವರಿಸಿತೆಂಬಂತೆ
ನುಡಿದ ಋಷಿವರರೆ
ಎಲ್ಲಿ ಪಡೆದಿರಿ ನೀವು ಇದ್ದಕಿದ್ದಂತೆಯೇ
ನಭದೆತ್ತರಕೆ ನುಡಿವ ಇಂಥ ವರವ ?
ಹೇಗೆ ಪಡೆದಿರಿ ಸ್ವಾಮಿ ಎದೆಹುಣ್ಣ ಮಾಯಿಸಿ
ಜಗವ ಸಂತೈಸುವ ಇಂಥ ಸ್ವರವ ?
ಹೊರಳಿದ್ದು ಹೇಗೆ ನೀವು ಆಲ್ಲಿಂದ ಇಲ್ಲಿಗೆ,
ಕೋಟಿವರಹದ ಕೋಟೆಯಿಂದ ರಥಬೀದಿಗೆ?

ಎಲ್ಲಿ ಏನಾಯಿತು? ನಿಜಘಟನೆ ತಿಳಿಸಿ
ನಿಮಗೆ ಮಿಂಚಿದ ದಾರಿ ನಮಗಷ್ಟು ಉಳಿಸಿ
ನೆಚ್ಚಿದ್ದ ನಾಗನಿಧಿ ಕಚ್ಚಿ ಕೈಕೊಟ್ಟಿತೆ,
ಸುಖದ ಭ್ರಮೆಯ ಪಿಶಾಚಿ ಕೆಳಹಾಕಿ ಮೆಟ್ಟಿತೆ?
ಇರುವುದನು ಬಿಟ್ಟು ಇರದುದರೆಡೆಗೆ ತುಡಿದಿರಿ ಯಾಕೆ?
ಏನಾಯಿತು ಸ್ವಾಮಿ ಏನಾಯಿತು,
ಗಜಬಟ್ಟೆ ಹೇಗೆ ಬಾನಾಯಿತು?
ಸಿರಿಯ ಜರಿಸೆರಗ ನಾಟ್ಯಕ್ಕೆ ಕಣ್ ಕೋರೈಸಿ
ಗರಹೊಡೆದ ಹಾಗೆ ನಿಂತಿದ್ದ ನಾಯಕರೆ,
ಹೇಗೆ ಒಡೆದಿರಿ ಹರಿಗು ನಿಮಗೂ ನಡುವೆ ಇದ್ದ
ಮಣಿ ಹರಳ ಗೋಡೆಯ ?
ಹೇಗೆ ಮುರಿದಿರಿ ಹೇಳಿ ನಾನೆಂಬ ಮಾಯೆಯ
ಮದ್ದಾನೆ ದಾಡೆಯ?

ಏನೋ ವದಂತಿ ನಡುವೆ ಸಿಕ್ಕು ನಿಜಸಂಗತಿ
ದಂತಕಥೆಯಾಗಿದೆ ಸತ್ಯ ತಿಳಿಸಿ
ಏನೋ ಪವಾಡ ನಡೆದು ಬೆಚ್ಚಿ ಹರಿಚರಣಕ್ಕೆ
ಶರಣು ಹೋದಿರಿ ಎಂಬ ಸುಳ್ಳ ಅಳಿಸಿ.
ಸಲ್ಲದ ಪವಾಡಗಳ ಟೊಳ್ಳು ಚುಚ್ಚುವ ಮದ್ದು
ನಿಮ್ಮಲೆ ಇತ್ತು.
ತರ್ಕ ಶಂಕೆಗಳೆ ಗಟ್ಟಿ ವರ್ತಕನ ಗುಟ್ಟು
ಏನೋ ಸಂಕಟದ ಒಳಕೋಣೆ ಕದ ತೆರೆದು.
ಮಿಥ್ಯೆ ತನ್ನ ಕುರೂಪ ತೋರಿಸಿತ್ತೆ?
ಆ ಮುಹೂರ್ತಕ್ಕೇ ತುಡಿದು ಆಕಾಶ ಬಾಯ್ತೆರೆದು
ಗುಡುಗು ಸತ್ಯದ ದುಡಿಯ ಬಾರಿಸಿತ್ತೆ?

ಒಳ್ಳಿತೇ ಆಯಿತೆಂದಿರಿ ಆದದ್ದೆಲ್ಲ
ಆದದ್ದಾದರೂ ಏನು?
ಹಮ್ಮು ಬಿಮ್ಮನ್ನೆಲ್ಲ ಊರ ಮೋರಿಗೆ ತೂರಿ
ದಂಡಿಗೆ ಬೆತ್ತ ಹಿಡಿದದ್ದು ಹೇಗೆ?
ಸೆರಯಿಡಲು ಬಂದವರೆ ಬಿಡುಗಡೆಗೆ ಸಲಿಸಿದರೆ
ಮುಗಿಲ ಮದ್ದಲೆಗೆ ಕುಣಿದಿತ್ತೆ ಸೋಗೆ?

ಆಶ್ಚರ್ಯವೂ ಅಲ್ಲ ಆಕಸ್ಮಿಕವೂ ಅಲ್ಲ
ಆದ ರೂಪಾಂತರ
ಸಾಹಿತ್ಯ, ಸಂಗೀತ-ಒಳಗೆ ಕಡಲೆರಡೂ
ಅಪ್ಪಳಿಸಿ ದಡಕ್ಕೆ ಬಡಿದು
ಮೊರೆದಿದ್ದುವಲ್ಲವೆ?
ಬಡಿತಕ್ಕೆ ರತ್ನಪಡಿಯಂಗಡಿಯ ತಳ ಅದುರಿ
ದಡಬಡಿಸಿತ್ತಲ್ಲವೆ?
ಸರಸ್ವತೀ ಸ್ತನವೆರಡೂ ಧಾರಾಳ ಸುಧೆಯುಣಿಸಿ
ಓಲೆ, ತಂಬೂರಿ ಕರೆದಿದ್ದುವಲ್ಲವೆ?
ಹುಟ್ಟು ಪ್ರತಿಭೆ ಹೆದೆಯ ಬಿಗಿಯಲೆಂದೇ ವಂಶ
ಭಾಗವತ ದಂಡ ಕೈಗೆ ದಾಟಿಸಿತ್ತಲ್ಲವೆ?
ಹೂಡೇ ಬಿಟ್ಟಿರಿ ಹೆದೆಗೆ ಯಾವ ಎಗ್ಗಿಲ್ಲದೆ
ನಾರಾಯಣಾಸ್ತ್ರ
ಮೊದಲು ಸುಟ್ಟಿತು ಅದು ರತ್ನಪಡಿಯಂಗಡಿ
ಆಸ್ತಿ ಕ್ರಯಪತ್ರ!

ತಿರುಗಿದಿರಿ ಊರೂರು
ಮನೆಮನೆಗು ಕಲ್ಪತರು ಸಸಿಯ ಹಂಚುತ್ತ
ಹರಿನಾಮ ಹಾಡಿ ಪಡೆದನ್ನ ಭುಜಿಸುವ ನೆಪದಿ
ಭಕ್ತಿಯೋಡಿನಲಿ ‘ಅಹಂ-ಬೀಜ’ ಹುರಿಯುತ್ತ,
ಕಳಚಿದಿರಿ ಕೊರಳಿಂದ ಹೆನ್ನು ಹೊನ್ನಿನ ಕುಣಿಕೆ;
ಬಿದ್ದು ಫಟ್ಟೆಂದವು ಎಷ್ಟೋ ಜನ್ಮಗಳಿಂದ
ಹೆಗಲೇರಿಕೊಂಡಿದ್ದ ಮಣ್ಣಕುಡಿಕೆ.

ಕೆರೆಯ ನೀರನು ಕೆರೆಗೆ ಚೆಲ್ಲಿದಿರಿ, ಜೊತೆಗೇ
ವರವ ವಡೆದವದಂತೆ ಹಾಡಿದಿರಿ ಕೂಡ
ಈಸಿದಿರಿ ಇದ್ದು ಜೈಸಿದಿರಿ ಜೊತೆಗೇ
ಹರಿಭಕ್ತಿ ರಸದಲ್ಲಿ ತೊಯಿಸಿದಿರಿ ನಾಡ.
ಕಾಣಿಸದೆ ಕರೆವ ದನಿಯತ್ತ ಮುಗಿದಿರಿ ಕೈಯ
‘ದಾಸರೆಂದರೆ ಪುದಂದರ ದಾಸರಯ್ಯ’
*****