ಜೀವನದ ಜ್ವಾಲೆಗಳು ಸುಟ್ಟ ಹೃದಯವು ಬೆಂದು
ತಾಳಲಾರದೆ ನೋವ, ತನ್ನ ತಾ ಮರೆಯಲೆನೆ
ಬಿನದವನೆ ಮರೆಹೊಕ್ಕು ತೋಯುವದು ತಪತಪನೆ
ಸರಸಗೋಷ್ಠಿ ವಿಹಾರದೊಂದು ರಚನೆಯಲಿಂದು.
ಜಕ್ಕವಕ್ಕಿಗಳ ಬೆಳದಿಂಗಳೂಟವ ತಂದು
ತಿನಿಸುವದು. ಹೂಗಣೆಯ ಗುರಿಯನೆಸಗುವ ಸ್ಮರನೆ
ಬಂದಂತೆ ಕುಣಿಸುವದು, ಇಳೆಯ ಸ್ವರ್‍ಲೋಕವೆನೆ
ಹರಡುವದು ಸುಖದ ನರುಗಂಪನೆಲ್ಲೆಡೆ. ಎಂದು
ಬಹುದಿದಕೆ ಮಿಗಿಲಾದ ಹಿರಿಬಿನದ? ಕಾರ್‍ಮೊಳಗು
ನಿನದಿಸಲು ಮುಗಿಲೋಳಿ ಮುತ್ತಿ ಮೇಲೂ ಕೆಳಗು
ಆಣೆಕಟ್ಟೆನುವಂತೆ ನಿಂತು ಮಳೆಗರೆಯುತಿದೆ,-
ಶಾಂತಸುಂದರನಾಗಿ ಒಂದು ಮೆಲುನಗೆ ನಕ್ಕು
ಮೆಲ್ಲಡಿಯನಿಡುವ ಬೆಂಗದಿರನನು ನೋಡಿದರೆ?
ಹಿರಿಬಿನದವದು; ಬಂತು ಉಬ್ಬಿಗನೆದೆಯ ಹೊಕ್ಕು.
*****



















