ಮೂಲ: ತಾರಾಪದ ರಾಯ್
ಹೇಳು ಕಲ್ಕತ್ತಾ,
ನನ್ನ ಬಳಿಯಿದ್ದ ಹಸಿರಂಗಿ, ಪಾಸ್ ಪೋರ್ಟುಗಳ
ನೆನಪಿದೆಯೆ ನಿನಗೆ?
ಪೂರ್ವ ಪಾಕಿಸ್ತಾನದಿಂದ ಓಡುತ್ತ ಬಂದ ರೈಲಿಂದ ಇಳಿದು
ಸಿಯಾಲ್ದಾ ನಿಲ್ದಾಣದ ಹೆಬ್ಬಾಗಿಲನ್ನು ದಾಟಿ ಬಂದೆ ಸುರಿಮಳೆಯಲ್ಲಿ.
ನನ್ನ ಜೀವನದಲ್ಲೆ ಮೊದಲ ಸಲ ಕಂಡೆ
ಷೂ ಪಾಲಿಷ್ ಮಾಡುವ ಹುಡುಗನನ್ನು;
ನೋಡಿ ರೋಮಾಂಚಗೊಂಡೆ,
ನನ್ನ ಕನಸಿನ ನಗರ ಕಂಡುಕೊಂಡೆ.
ಮೊದಲ ಬಾರಿಗೆ ಒಂದು ಟ್ರಾಮ್‌ಕಾರು ಕಂಡದ್ದು ನಿನ್ನಲ್ಲೆ,
ಮೊದಲ ದರ್ಜೆಯ ಸೀಟು ಕೂಡ ಇತ್ತು ಅದಕ್ಕೆ.
ಮೊದಲ ದರ್ಜೆಯೆ ನೀನೂ ಕಲ್ಕತ್ತಾ.
ಒಂದೊಂದು ಮನೆಯನ್ನೂ ಮುಗಿಲು ಕವಿದಿತ್ತು
ಒಂದೊಂದು ಮನೆಗೂ ನಿಗೂಢ ಕಿಟಕಿ ಇತ್ತು
ಆಟವಾಡುತ್ತಿತ್ತು ಅವುಗಳ ಮುಖದ ಮೇಲೆ
ಮಬ್ಬುಗತ್ತಲೆ ಬೆಳಕು.
ಹಸಿರು ಷರಟನ್ನು
ಹರಿದ ಬೂಟನ್ನು
ತೊಟ್ಟು ತಿರುಗಿದೆ ಇಡೀ ಕಲ್ಕತ್ತೆಯನ್ನು.
ತಿರುಕರನ್ನು ಮತ್ತು ಹುಚ್ಚರನ್ನು
ಹುಚ್ಚಾಗಿ ಕುಡಿದು ಅಮಲೇರಿದವರನ್ನು
ದಿಕ್ಕಿಂದ ದಿಕ್ಕಿಗೆ ಕಾಮನಬಿಲ್ಲಿನ ಹಾಗೆ
ಬಾಗಿ ಸಾಗಿದ್ದ ಮೆರವಣಿಗೆ ಸಾಲನ್ನು
ಜನ ಮುಸುರುತ್ತಿದ್ದ ಚಾ ಅಂಗಡಿಗಳನ್ನು
ದಾರಿ ಮೂಲೆಗಳಲ್ಲಿ ಹರಟೆಕೊಚ್ಚುತ್ತಿದ್ದ
ಸೋಮಾರಿ ಗುಂಪನ್ನು.
ಮಧ್ಯಾಹ್ನಕ್ಕೆ ಮುಂಚೆ ಗಾಳಿ ಬಡಿತಕ್ಕೆ ಕಳಚಿ
ಚೆಲ್ಲಾಪಿಲ್ಲಿ ಬಿದ್ದ ತರಗೆಲೆಗಳನ್ನು
ಬಯಲ ಬಿಸಿಲಲ್ಲಿ ಚಾಚಿ ಬೆಳೆದಿದ್ದರೂ
ಯಾರನ್ನೂ ಎಲ್ಲಿಗೂ ಒಯ್ದು ಮುಟ್ಟಿಸದ
ಆನೆದಂತದ ಹಾಗೆ ಬಾಗಿ ಸಾಗಿದ್ದ ಟ್ರಾಮ್ ಕಾರು ಹಳಿಯನ್ನು-
ಕಂಡೆ ನಿನ್ನನ್ನು.
ಏಕೋ ಒಮ್ಮೊಮ್ಮೆ ಅನ್ನಿಸುವುದು ನಾ ನಿನ್ನ
ತೆಕ್ಕೆಯೊಳಗಿಲ್ಲವೆಂದು.
ನನ್ನ ಆ ನಗರ ಎಲ್ಲಿ ಹೋಯಿತು ಈಗ?
ಹಿಂದೊಮ್ಮೆ ಎರಡು ಲೈಟ್ ಕಂಬಗಳ ನಡುವೆ
ಪೆನಾಲ್ಟಿ ಕಿಕ್ ಸಿಕ್ಕ ಫುಟ್‌ಬಾಲ್ ಆಟಗಾರ
ಚಂದ್ರನನ್ನ ನಡು ಅತರಿಕ್ಷಕ್ಕೆ ಒದ್ದದ್ದು,
ಗ್ಯಾಲರಿಗಳನ್ನೇರಿ ಕುಳಿತ ಜನ ಒಟ್ಟಾಗಿ
‘ಗೋಲ್’ ಎಂದು ಕಿರುಚಿದ್ದು ಎಲ್ಲ ನೆನಪೀಗ.
ಕಳೆದ ಇಪ್ಪತ್ತು ವರುಷ ನಮ್ಮ ನಡುವೆ ಏಕೋ
ಹೊಂದಿ ಬರಲಿಲ್ಲ. ನನ್ನ
ಮುರಿದ ಕನಸುಗಳು ಹರಿದೆಸೆದ ಕವನಗಳು
ಚಿಂದಿ ಆಯುವ ಜನರ ಚೀಲದಲ್ಲಿದ್ದಾವೆ.
ಇಪ್ಪತ್ತು ವರುಷವಿಡೀ ಅವನ್ನು ಆಯ್ದಿದ್ದಾರೆ.
ತೂಕಕ್ಕೆ ಹಾಕಿ, ಬೆಲೆಕಟ್ಟಿ ಕನಸುಗಳನ್ನು
ಗೇಲಿ ಮಾಡಿದ್ದಾರೆ.
ಒಂದೇ ರಹಸ್ಯ ಕಿಟಕಿ ನನಗಾಗಿ ಎಂದೂ
ಇಲ್ಲಿ ತೆರೆದದ್ದಿಲ್ಲ.
ನನ್ನ ಛಾವಣಿ ಬಿಟ್ಟು ಮೇಲೇರಿ ಮುಗಿಲುಗಳ ಕಡೆಗೆ ಸಾಗಿದ್ದಿಲ್ಲ.
ಅಂದಮೇಲೆ ನನ್ನ ಷರಟಿನ ಬಣ್ಣವನ್ನು
ಬೂಟಿನ ಅಳತೆಯನ್ನು
ಬದಲಿಸಲು ನನಗೆ ಕಾರಣವೆ ಕಂಡಿಲ್ಲ.
*****
















