ಹುಟ್ಟಿನಲಿ ಹೆಮ್ಮೆ ಕೆಲವರಿಗೆ, ನೈಪುಣ್ಯದ್ದು
ಮತ್ತೆ ಕೆಲವರಿಗೆ, ಸಂಪತ್ತಿನೊಳು ಹಲವರಿಗೆ,
ದೇಹದಾರ್ಢ್ಯದಲಿ ಇತರರಿಗೆ, ಹೊಂದದೆ ಇದ್ದೂ
ಉಡುತೊಡುವ ಹೊಳಪಿನುಡುಪಗಳಲ್ಲಿ ಕೆಲವರಿಗೆ,
ಬೇಟೆನಾಯಿಗಳಲ್ಲಿ, ಗಿಡುಗ ಕುದುರೆಗಳಲ್ಲಿ
ಬಗೆಬಗೆಯ ಗೀಳು ಬಗೆಬಗೆ ಮನೋಧರ್ಮಕ್ಕೆ.
ರುಚಿಯಿಲ್ಲ ನನಗೆ ಈ ಯಾವುದೆ ವಿಷಯದಲ್ಲಿ
ಇದನೆಲ್ಲ ಮೀರಿನಿಂತಿರುವ ಸಿರಿಯೊಂದಕ್ಕೆ
ಮನ ಪೂರ ಮಾರುಹೋಗಿದೆ. ನನಗೆ ನಿನ್ನೊಲವು
ಹುಟ್ಟು, ನೈಪುಣ್ಯ, ಉಡುಪಿಗೂ ಮೇಲೆ ಎನ್ನುವೆನು,
ಗಿಡುಗ ಕುದುರೆಗಳನೂ ಮೀರಿಸಿದ ಸಂಪದವು
ಮನುಜರೆಲ್ಲರ ಹೆಮ್ಮೆ ನಿನ್ನ ಪಡೆದುಬ್ಬುವೆನು.
ಒಂದೆ ದುರ್ವಿಧಿ ನನಗೆ, ನೀನಿರಾದ ಪಕ್ಷಕ್ಕೆ
ಯಾವುದೂ ಇರದ ನತದೃಷ್ಟ ನಾಲೋಕಕ್ಕೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 91
Some glory in their birth, some in their skill