ಪಿ.ಯು.ಸಿ. ಆದ ಮೇಲೆ ನನ್ನ ನಾಟಕ ಬರೆಯುವ ಭರಾಟೆ ಹೆಚ್ಚಾಗಿತ್ತು. ತಾಳಿಕೋಟೆಗೆ ಬಂದ ಕಂಪನಿ ನಾಟಕಗಳನ್ನು ನೋಡಿ, ನೋಡಿ ಆಕರ್ಷಿತನಾಗಿದ್ದೆ. ನಾಟಕದ ಪಾತ್ರ ಮಾಡುವ ಕಲೆಗಿಂತಲೂ ಬರೆಯುವ ಗೀಳು ಹೆಚ್ಚಾಗಿತ್ತು. ಕಂಪನಿ ನಾಟಕಗಳಲ್ಲಿ ಬರುವ ನಾಯಕನ ಪಾತ್ರದ ಸಂಭಾಷಣೆ, ನಾಯಕಿಯ ಒನಪು, ವೈಯಾರಗಳನ್ನು, ಪುಟ ಗಟ್ಟಲೆ ಬರೆದು ಅನ್ನುವುದಕ್ಕಿಂತ ಕೊರದು ಪುಟಗಳನ್ನು ತುಂಬಿಸ್ತಿದ್ದೆ. ಹೀಗೆ ‘ವಿಷದ ಬಟ್ಟಲು’, ಜೀವನದ ಜ್ಯೋತಿ, ಮುಂತಾದ ನಾಟಕಗಳನ್ನು ಆಗಲೇ ಬರೆದಾಗಿತ್ತು. ನನಗೆ ನಾಟಕ ಹುಚ್ಚು ಎಷ್ಟಿತ್ತೆಂದರೆ, ಮನೆಯ ಪಡಸಾಲೆಯನ್ನೇ ರಂಗ ಮಂದಿರವನ್ನಾಗಿ ಮಾಡಿಕೊಂಡು ಅಕ್ಕಪಕ್ಕದ ಹುಡುಗರನ್ನ ಕಟ್ಟಿಕೊಂಡು, ಓಣಿಯವರಿಗಾಗಿ ಪುಕ್ಕಟೆ ಪ್ರದರ್ಶನಗಳನ್ನಷ್ಟೋ ಮಾಡಿಸಿಬಿಟ್ಟಿದ್ದೆ. ಸೀರೆಗಳನ್ನೇ ಪರದೆಗಳನ್ನಾಗಿ ಹೊಲಿದು, ಎಳೆಯುವಂತೆ ಮಾಡಿದ್ದೆ. ಮುಂದಿನ ಕಪಾಟುಗಳನ್ನು ಸಹ ಪಟ್ಟಿಗಳಿಗೆ ಮೊಳೆಹೊಡಿದು, ಪೇಪರ್ ಅಂಟಿಸಿ, ರಂಗ ಸಜ್ಜಿಕೆಯನ್ನು ನಾನೇ ತಯಾರಿಸುತ್ತಿದ್ದೆ. ನಾನು ಬರೆದ ನಾಟಕವನ್ನು ಮಾಡಿಸ್ತಿದ್ರಿಂದ ಪಾತ್ರಧಾರಿಗಳೆಲ್ಲರ ಊಟದ ಖರ್ಚು, ಕೊನೆ ದಿನದ ಗ್ಯಾಸ್ ಲೈಟ್‍ನ ಖರ್ಚು, ಎಲ್ಲವೂ ನನ್ನದೆ ಎಂದು ಯಾವ ಬಾಯಿಯಿಂದ ಹೇಳಲಿ? ಒಟ್ಟಿನಲ್ಲಿ ನಾನು ಬರೆದ ನಾಟಕ ರಂಗಪ್ರದರ್ಶನವಾಗಬೇಕಷ್ಟೇ. ಕಡಿಮೆ ಅಂದ್ರೆ ೧೫ ದಿನ ತಾಲೀಮು ನಾಟಕದ ಮಾಸ್ತರ್, ಊಟ ತಿಂಡಿ ಅಂತ ೧೯೭೦ನೇ ಇಸವಿಯಲ್ಲಿ ಒಂದು ಸಾವಿರ ರೂಪಾಯಿ ಆಗೋದು.
ಈ ಹಣಕ್ಕೆ ನಾನೇನು ಮಾಡಿದೆ ಅಂತ ಕೇಳ್ತೀರಾ? ಇರೋನು ನಾನೊಬ್ಬನೇ ಮಗ, ತಂದೆ ನಾನು ಹುಟ್ಟೋಕೆ ಎರಡು ತಿಂಗಳು ಇರುವಾಗ್ಲೆ ತಿರುಗಿ ಬಾರದ ಊರಿಗೆ ಹೋಗಿದ್ರು. ನಮ್ಮವ್ವ ನಮ್ಮಕ್ಕ ನಾನು ಮೂರೆಜನ. ಒಂದೆಂಟು ಎಕರೆ ಜಮೀನು ಇತ್ತಲ್ಲ. ನಮ್ಮವ್ವನಿಗೆ ಹೇಳದಂತೆ ವಯಸ್ಸಿಗೆ ಬಂದದ್ರಿಂದ ಒಂದೆರಡು ಎಕರೆ ಒತ್ತೆ ಇಡೋದು. ಉಳ್ಳವರ ಹತ್ರ ಹಣ ಪಡಿಯೋದು, ನಾಟಕಕ್ಕೆ ಹೀಂಗ ಖರ್ಚು ಮಾಡೋದು ಮಾಡ್ತಿದ್ದೆ. ಈ ರೀತಿಯಾಗಿ ನಾಟಕ ಬರವಣಿಗೆಯ ವಿಪರೀತ ಹುಚ್ಚಿನಿಂದಾಗಿ ನಾನು ಒಂದು ರೀತಿಯಾಗಿ ಆರೆಹುಚ್ಚನೇ ಆಗಿ ಬಿಟ್ಟಿದ್ದೆ. ಜುಬ್ಬಾ, ಪೈಜಾಮ, ಗೇಣುದ್ದ ಜಡೆ ಬಿಟ್ಕೊಂಡು ಬಗಲ ಚೀಲದೊಳಗೆ ೪-೫ ನಾನೇ ಬರೆದ ನಾಟಕದ ಪುಸ್ತಕಗಳ್ನ ಇಟ್ಕೊಂಡು ನಾಟಕದ ಕಂಪನಿಗಳು ಇರೋ ಸ್ಥಳಗಳ್ನ ಪತ್ತೆ ಹಚ್ಚಿ ಹೊಂಟ್ ಬಿಡ್ತಿದ್ದೆ. ನಾಟಕ ಬರೆಯೋ ಚಟವೊಂದು ಬಿಟ್ರೆ, ಇನ್ಯಾವ ಚಟಗಳೂ ಸಹ ನನ್ನ ಹತ್ರ ಸುಳಿದಿರಲಿಲ್ಲ. ಊರಲ್ಲೆಲ್ಲಾ “ಏನಪ್ಪಾ ಕವಿ? ಏನ್ಬರಿಯ್ಯಾಕಹತ್ತಿದಿ?” ಎಂದು ಜನ ಕೇಳುತ್ತಿದ್ದರು. ಅಷ್ಟೊಂದು ಜನರ ಮನಸ್ಸಿನಲ್ಲಿ ನಾನು ಸಾಹಿತಿ (ಕವಿ) ಅಂತೇ ಗುರುತು ಹಿಡಿತಿದ್ರು.
ಹಿಂಗೆ ನಾಟಕ ಕಂಪನಿಯೊಂದು ಮುದ್ದೇಬಿಹಾಳದ ಹತ್ರ ಇರೋ ನಿಡಗುಂದಿಯಲ್ಲಿ ಐತಿ, ಅಂತ ಖಚಿತ ಮಾಹಿತಿ ಪಡೆದು ಕೊಂಡಿದ್ದೆ. ತಾಳಿಕೋಟೆವರೆಗೆ ನಡಕೊಂಡು ಬಂದು ಬಸ್ ಹತ್ತಿಬಿಟ್ಟೆ. ಅಂತೂ ಸಂಜೆ ಹೊತ್ತಿಗೆ ನಿಡುಗುಂದಿ ತಲುಪಿದ ಮೇಲೆ ಬಗಲಚೀಲದೊಂದಿಗೆ ಬಸ್ ಸ್ಟ್ಯಾಂಡ್ ನಲ್ಲಿ ಇಳಿದು ಅಗಸಿಬಾಗಿಲದಲ್ಲಿ ಹೊಯ್ದು, ನಾಟಕದ ಪ್ರಚಾರದ ಬೋರ್ಡ್ ನೋಡ್ಕೊಂಡು ಹೋದೆ. ಶೆಟ್ಟರ ಅಂಗಡಿ ಮೇಲೆ ಹಾಕಿದ “ಬಸ್ ಕಂಡಕ್ಟರ್” ನಾಟಕ ಬೋರ್ಡ್ ಕಾಣಿಸಿತು. ಹತ್ತಿರ ಹೋಗಿ ನೋಡಿದಾಗ ಮಾಸಿಹೋಗಿತ್ತಲ್ಲದೇ, ಅಲ್ಲಲ್ಲಿ ಹರಿದಿತ್ತು. ಅಲ್ಲಿ ನಿಂತಿದ್ದ ಒಬ್ಬರಿಗೆ “ರ್ರೀ… ಅಣ್ಣಾರಾ ಈ ಬಸ್‍ಕಂಡೆಕ್ಟರ್, ನಾಟಕ ಕಂಪನಿ ಟೆಂಟ್ ಹೋಗ್ಯಾದೋ ಅಥವಾ ಐತೋ?” ಎಂದು ಕೇಳಿದೆ. ಅದಕ್ಕವರು “ಇನ್ನು ಆದರೀ ಮಳಿ ಬಿತ್ತಲ್ರಿ, ನಾಟ್ಕಗೋಳು ನಡೀದಂಗಾಗಿ ಮೊಕ್ಕೊಂಡು ಬಿಟ್ಟಾದ ನೋಡ್ರಿ, ಹಿಂಗಾ ಹೋಗ್ರಿ, ಅಲ್ಲೇ ಕಂಪ್ನಿ ಅದಾ…” ಎಂದು ಹೇಳಿ ಹೋದರು.
ನಾನು ಲಗುಬಗೆಯಿಂದ ಹೋಗಿ ನೋಡಿದೆ. ನೆಟ್ಟ ಕಂಪನಿ ಬೋರ್ಡ್ ಮುರಿದು ಬಿದ್ದಿತ್ತು. ಹಾಕಿದ ತಗಡು ಹಾರಿ ಹೋಗಿತ್ತು. ಸ್ಟೇಜ್ ಪರದೆಗಳು ಸುರುಳಿ ಸುತ್ತಿದ್ದು ಇನ್ನೂ ಬಿಚ್ಚಿರಲಿಲ್ಲ. ಅಲ್ಲೊಂದು ಇಲ್ಲೊಂದು ನಾಯಿಗಳು ಹೋಗಿ ಸ್ಟೇಜಿನ ಮ್ಯಾಲೆ ಮಕ್ಕೊಂಡಿದ್ವು. “ಇದೇನಿದು ಈ ಗತಿ ಆಗ್ಯಾದ ಕಂಪ್ನಿ?” ಎಂದು ಅಲ್ಲೇ ನಿಂತಿದ್ದ ಕಾಕಾ ಒಬ್ಬರಿಗೆ ಕೇಳಿದೆ. “ಹೂಂನ್ರಿ, ಮಳೆಬಿಡಾಣಿಲ್ರಾ, ಅದ್ಕಾ ನಾಟ್ಕ ನಡೀದನೆ ಪಾಪ ಭಾಳತ್ರಾಸ ಆಗ್ಯಾದ ಕಂಪನಿ ಮಾಲೀಕರಿಗೆ? ಅವರ ಜೀವ ಬಾಳ ಪಸಂದ್ ಇಲ್ರಿ ಅಣ್ಣೋರಾ? ತಾವ್ಯಾರು ಆರ್ಟಿಸ್ಟ್ ಕಂಡಂಗೆ ಕಣ್ತೀರಿ?” ಎಂದಂದ ಕಾಕ.
“ಹೌದು ನಾನು ಒಂದು ರೀತಿ ಆರ್ಟಿಸ್ಟ್‍ನೆ ಕಾಕ. ಇರಲಿ ಕಂಪನಿಯವರ ಬೋರ್ಡಿಂಗ್ ಎಲ್ಲಿ ಅದರಿ?” ಎಂದೆ. ಆತ ಕೈ ಮಾಡಿ ತೋರಿಸಿದ. ಹಂಗೆ ಹೋದೆ. ಸಂಜೆ ೬ ಗಂಟೆ ಆಗಿತ್ತು. ಬಾಗಿಲು ತೆರೆದಿತ್ತು. ಸಾಮಾನು ಎಲ್ಲೆಂದ್ರಲ್ಲೇ ಬಿದ್ದಿದ್ದು, ಹಾಸಿಗೆ, ಬಟ್ಟೆ ಬರೆ ಚಲ್ಲಾಪಿಲ್ಲಿಯಾಗಿದ್ವು, ಎರಡು ಮೂರು ಜನ ಗೋಡೆಗೆ ಬೆನ್ನು ಆನ್ಸಿ ಚಿಂತೆ ಮಾಡಾಕ ಹತ್ತಿದ್ರು. ನನ್ನನ್ನು ನೋಡಿದವರೆ “ಯಾವೂರ ಆಸಾಮಿ ಅದಾನಪ್ಪ ಇವ್ನು?” ಎಂದೆಂದುಕೊಂಡು, “ಬರ್ರಿ… ಕಲಾವಿದ್ರಾ, ನಮ್ಮನ್ನ ನೋಡಾಕ ಬಂದಿರೇನ್ರೀ? ನಾವು ಹಿಂಗದೀವಿ ನೋಡ್ರಿ. ಮಾಲಕರು ರೊಕ್ಕ ತರ್‍ತೀನಿ ಅಂತ ಅವ್ರ ಊರಿಗೆ ಹೋಗ್ಯಾರ. ಹೀರೋ ಪಾತ್ರ ಮಾಡೋನು ಹಿರೋಯಿನ್‍ನನ್ನ ಹೊಡ್ಕೊಂಡು ಬ್ಯಾರೆ ಕಂಪನಿಗೆ ಜಿಗಿದುಹೋದ. ಉಳಿದವ್ರಿಗೆ ಗತಿ ಇಲ್ಲಾಂತ ಹಿಂಗ ಕಾಲ ಕಳೆಯಾಕ ಹತ್ತಿವಿ ನೋಡ್ರಿ. ನಿವೊಬ್ರು ನಮ್ಮ ಜತಿಯಾದ್ರಿ ನೋಡ್ರಿ.” ಎಂದು ಪಟಪಟ ಅರಳು ಹುರಿದಂತೆ ಮಾತನಾಡಿದ ಒಬ್ಬ.
ಅವನು ಕಂಪನಿ ಮ್ಯಾನೇಜರ್ ಕಲ್ಲನಗೌಡ ಅಂತಾ. ನಾನು ಅವರ ಮುಂದೆ ಕುತ್ಕೊಂಡೆ. ಬರೋಬ್ಬರಿ ಊಟದ ಟೈಮ್ ಆಯಿತು. ಬೋರ್ಡಿಂಗ್‍ನಲ್ಲಿ ಉಳಿದ ೨೦ ಜನಕ್ಕೆ ೩ ಕೆ.ಜಿ ಅಕ್ಕಿ ತಂದು ಬಸಿದಿದ್ರು. ಎರಡು ಲೀಟರ್ ಮೊಸರು ತಂದು, ಅದಕ್ಕ ಒಂದು ಬಕೆಟ್ ನೀರು ಹಾಕಿ ಎಲ್ಲರೂ ಆರ್ಧರ್ಧ ಪ್ಲೇಟ್ ಊಟ ಮಾಡಬೇಕಿತ್ತು. ಅಡುಗೆ ಭಟ್ಟರು “ಬರ್ರೀ ಕಲ್ಲನಗೌಡ್ರೆ ಉಟಕ್ಕ, ಎಲ್ಲಾರು ಬಂದವ್ರೆ ಎಂದರು. ನನ್ನನ್ನು ಒತ್ತಾಯ ಮಾಡಿ ಊಟಕ್ಕೆ ಕರೆದುಕೊಂಡು ಹೋದ್ರು. ಊಟ ಮಾಡಿದ್ವಿ. ದೊಡ್ಡ ಆಳಗಳಿಗೆ ಒಂದು ಹಿಡಿ ಅನ್ನ ಯಾವ ಕಡೆ ಸಾಕಾಗ್ತೈತಿ? ಆರು ಕಾಸು ಹೊಟ್ಟೆಗೆ ಮೂರು ಕಾಸು ಗಂಜಿ ಕುಡಿದು ಹೊಟ್ಟೆ ತುಂಬಿಸಿಕೊಳ್ಳುವವರಂಗೆ ಚೊಂಬು ಗಟ್ಟಲೆ ನೀರು ಕುಡಿದ್ವಿ. ಕಲ್ಲನಗೌಡರಿಗೆ ನನ್ನ ಪರಿಚಯ ಹೇಳಿಕೊಂಡಿದ್ದೆ. ಊಟಾದ ಬಳಿಕ, “ನೋಡ್ರಿ ಚಂದಣ್ಣನವರ, ಹಿಂಗ್ ನಡಿತೈತಿ ನೋಡಿ ನಮ್ಮ ಕತಿ. ಮಳೆಗಾಲ ಕಳಿಯೋದ್ರೊಳಗೆ ಎಲ್ಲಾ ಕಲಾವಿದರು ಹೋಗಿ, ನಾನೊಬ್ಬನೇ ಉಳಿತೀನಿ ಅಂತ ಕಾಣ್ತದೆ. ಇಂಥಾ ಪರಿಸ್ಥಿತಿಯಲ್ಲಿ ನಿಮ್ಮ ನಾಟಕ ಯಾರಾಡಿಸ್ತಾರೀ? ನೀವು ಪುಸ್ತಕದ ಚೀಲ ಏನ್ ಬಿಚ್ಚಕ್ಕೆ ಹೋಗಬೇಡ್ರಿ ಎಂದರು.
ವೃತ್ತಿ ರಂಗಭೂಮಿಯಲ್ಲಿರುವ ಈ ಸಣ್ಣ ಸಣ್ಣ ಕಂಪನಿಗಳ ಪಾಡು ಮಳೆ ಬಂದಾಗಿನ ಪರಿಸ್ಥಿತಿಯನ್ನು ನೆನಸಿಕೊಂಡರೆ, ಮೈ ಜುಮ್ ಎನ್ನುತ್ತದೆ. ಏಕೆಂದರೆ, ಆಟದ ಹಣದಿಂದಲೇ ಕಲಾವಿದರಿಗೆ ಸಂಬಳ ಕೊಡಬೇಕು, ಲೈಟ್ ಚಾರ್ಜ್ ಕೊಡಬೇಕು, ಮನೆ ಬಾಡಿಗೆ ಕಟ್ಟಬೇಕು, ಊಟದ ಖರ್ಚು ನೋಡಬೇಕು, ಪ್ರಚಾರಕ್ಕೆ ಖರ್ಚು ಮಾಡಬೇಕು, ಆಟಗಳು ಇಲ್ಲದಿರುವಾಗ ಇದೆಲ್ಲಾ ತೂಗಿಸುವುದು ದುರ್ಲಭವೇ. ಹೇಗಾದರೂ ಮಾಡಿ ಇಲ್ಲೇ ಉಳಿದು ಕಂಪನಿಯನ್ನು ಉದ್ದರಿಸಬೇಕೆಂಬ ಕನಸು ಹೊತ್ತ ಇಲ್ಲಿರುವ ಇಪ್ಪತ್ತು ಜನ ಕಲಾವಿದರಿಗೆ ನಾಳೆ ಊಟಕ್ಕೆ ಗತಿ ಇಲ್ಲ, ಎಂದರೆ ಏನರ್ಥ? ಇಂತಹ ಸಂದರ್ಭದಲ್ಲಿ ನಾನು ಬರೆದ ನಾಟಕವನ್ನು ಓದಲಾಗುತ್ತದೆಯೇ? ಅವರು ರಂಗಮಂಚದ ಮೇಲೆ ತರಲಾಗುತ್ತದೆಯೇ? ನನ್ನ ಕಲ್ಪನೆಯ ಪಾತ್ರಧಾರಿಗಳು ಜೀವನದ ಕತೆಯನ್ನು ನನ್ನ ಮುಂದೆ ತೋರಿಸಲಾಗುತ್ತದೆಯೇ? ಇದು ಅಸಾಧ್ಯವಾದ ಮಾತು ಮತ್ತು ಮನಕಲಕುವ ವಿಷಯ.
ನಾಟಕದ ಬ್ಯಾಗನ್ನು ಬಿಚ್ಚಲಾಗದೇ, ಕಲ್ಲನಗೌಡರೇ ನಿಮ್ಮ ಕಂಪನಿ ಪರಿಸ್ಥಿತಿ ನೋಡಿ ನನಗೆ ಬಹಳ ದುಃಖವಾಗಿದೆ. ಇನ್ನೊಂದು ನಾಲ್ಕು ದಿನ ಹೆಂಗೋ ಮಾಡಿಕೊಂಡು ಇಲ್ಲೇ ಇರ್ರಿ, ನಾನು ಊರಿಗೆ ಹೋಗಿ ಬಂದು ಏನಾದ್ರು ವ್ಯವಸ್ಥೆ ಮಾಡ್ತೀನಿ, ಎಂದು ಹೇಳಿದವನು ಊರಿನೆಡೆಗೆ ಬಸ್ ಹತ್ತಿದೆ. ಸೀದಾ ಮನೆಗೆ ಹೋಗದೇ ಊರಿನ ಸಾಹುಕಾರರ ಮನೆಗೆ ಹೋಗಿ ನನ್ನ ಕೆಲಸಕ್ಕೆ ರೊಕ್ಕ ಕೊಡಬೇಕಾಗಿದೆ. ನನಗೆ ಅರ್ಜೆಂಟ್ ಎಂಟು ಸಾವಿರ ರೂಪಾಯಿ ಬೇಕು, ನಾಲ್ಕು ಎಕರೆ ಜಮೀನು ತಗೊಂಡು ಎಂಟು ಸಾವಿರ ರೂಪಾಯಿ ಕೊಡ್ರಲ್ಲಾ.. ಎಂದೆ. ಅವರಿಗೆ ಆಶ್ಚರ್ಯ! “ಏನೋ ತಮ್ಮ ನಿಮ್ಮ ತಾಯಿನ ಒಂದು ಮಾತು ಕೇಳಿದ್ಯೇನ್ ಎಂದ್ರು. ನಾನು ದೊಡ್ಡವನಾಗಿದೀನಿ ಸಾಹುಕಾರ್ರೇ, ಚಾಪಾ ಕಾಗದದ ಮೇಲೆ ಬರೆದು ಕೊಡ್ತೀನ್ರೀ, ಎಂಟು ಸಾವಿರ ರೂಪಾಯಿ ಬೇಕು, ಎಂದು ಹಠ ಹಿಡಿದೆ. ಅವರ ಮನೆಯಲ್ಲಿ ಕಾಲಿ ಛಾಪಾಕಾಗದ ಮೇಲೆ ಎರಡು, ಮೂರು ಕಡೆ ಸಹಿ ಮಾಡಿಸಿಕೊಂಡು ಎಂಟು ಸಾವಿರ ರೂಪಾಯಿ ಕೊಟ್ಟು, ಮುಂದಿನವಾರ ಮುದ್ದೇಬಿಹಾಳದಲ್ಲಿ ಖರೀದಿ ಮಾಡಿಕೊಡುವೆಯಂತಿ, ಎಂದು ಹೇಳಿದರು.
ನಾನು ಖುಷಿಯಿಂದ ಕಿಸೆಗೆ ಹಣವನ್ನು ಇಳಿಸಿಕೊಂಡು ಮನೆಗೆ ಹೋಗದೇ ಸೀದಾ ನಿಡುಗುಂದಿ ಬಸ್ ಹತ್ತಿ, ಕಂಪನಿ ಬೋರ್ಡಿಂಗ್‍ಗೆ ಬಂದೆ. ಕಲ್ಲನಗೌಡರು ಮಜ್ಜಿಗೆ ಕುಡೀತಾ ಕೂತಿದ್ದ್ರು, ಅವರ ಮುಖದಲ್ಲಿ ನಿರಾಸೆ, ದುಃಖ, ಮುಂದೇನು…? ಎಂಬ ಪ್ರಶ್ನೆ ಮಡುವುಗಟ್ಟಿದ್ದವು. ಅವರ ಪರಿಸ್ಥಿತಿ ನೋಡಲಾಗದೇ ತಗೊಳ್ರ್‍ಇ ಕಲ್ಲನಗೌಡರೆ… ನನ್ನ ನಾಟಕ ನೀವು ಮಾಡದಿದ್ದರೂ ಪರವಾಗಿಲ್ಲ, ಈ ಎಂಟು ಸಾವಿರ ರೂಪಾಯಿ ತಗೊಳ್ರಿ. ಬೋರ್‍ಡಿಂಗ್‍ಗೆ ಬೇಕಾಗೋ ರೇಷನ್ ಎಲ್ಲಾ ತಗೋಬನ್ರಿ.. ಅಷ್ಟೊತ್ತಿಗೆ ಮಳೆ ನಿಂತು ಕೊಳ್ಳುತ್ತದೆ. ಮತ್ತೆ ನಾಟಕ ಪ್ರದರ್ಶನ ಚಾಲೂ ಮಾಡುವರ್ರಂತೆ ಎಂದು ಕೊಟ್ಟಾಗ ಅವರಿಗೆ ದಿಕ್ಕೇ ತೋಚದಂತಾಯ್ತು. “ನನಗೆ ಫಲಾಪೇಕ್ಷೆ ಏನಿಲ್ಲ” ಎಂದು ಕೈಗಿಟ್ಟೆ. ಅವರು ಪಡೆದುಕೊಂಡು, ಎಂಟು ದಿನಕ್ಕೆ ಬೇಕಾಗುವ ರೇಷನ್ ತಗೊಂಡು ಬಂದು, ಎಲ್ಲರಿಗೂ ನೂರು ನೂರು ರೂಪಾಯಿ ಅಡ್ವಾನ್ಸ್ ಕೊಟ್ಟು, ಆಳುಗಳು ಓಡಿ ಹೋಗಿ ರೇಷನ್ ಎಲ್ಲ ತಗೋ ಬಂದ್ರು. ಕಲ್ಲನಗೌಡರು ನನ್ನನ್ನು ಅಟ್ಟಕ್ಕೇರಿಸುತ್ತಾ “ಎಂಥಾ ಋಣಮಾಡಿದ್ರಿ, ಚಂದ್ರಣ್ಣ ನೀವು? ಅಷ್ಟೊಂದು ಹಣ ಎಲ್ಲಿಂದ ತಂದ್ರಿ? ಎಂತಾ ಪುಣ್ಯಾತ್ಮರು ನೀವು ಎಂದು ಹೇಳುತ್ತಿರುವಾಗ ಸಂಜೆಯಾಗಿತ್ತು.
ಅಷ್ಟೊತ್ತಿಗಾಗಲೇ ಬಿಸಿ ಬಿಸಿ ಊಟ ರೆಡಿಯಾಗಿತ್ತು. ಎಲ್ಲರಿಗೂ ಊಟಕ್ಕೆ ಕರೆದಾಗ ಸಾಲಾಗಿ ಬಂದು ಕುಳಿತರು. ಅವರ ತಟ್ಟೆಯಲ್ಲಿ ಹಾಕಿದ ಜೋಳದ ರೊಟ್ಟಿ, ಅನ್ನ, ಸಾರು, ಮಜ್ಜಿಗೆ, ಹುಳಿ, ಪಲ್ಯ, ಎಲ್ಲವನ್ನೂ ನೋಡಿ ಆರು ತಿಂಗಳಿಂದ ಉಪವಾಸವಿದ್ದವರಂತೆ ಗಪಗಪನೆ ತಿಂದು “ಎಂಥಹ ಮೃಷ್ಟಾನ್ನ ಭೋಜನರೀ ಮ್ಯಾನೇಜರೇ ಬಹಳ ತೃಪ್ತಿ ಆಯಿತು. ನಿಮಗೆ ದೊಡ್ಡ ನಮಸ್ಕಾರ, ಎಂದರು. ಅವರ ಧನ್ಯತೆಯಲ್ಲಿ ಸಾರ್ಥಕತೆಯ ಭಾವವಿತ್ತು. ನನಗೂ ಕೂಡ ಮನಸ್ಸಿಗೆ ಸಂತೋಷವಾಗಿತ್ತು. ಕಲ್ಲನಗೌಡರನ್ನು ಕರೆದು “ಕಲ್ಲನಗೌಡರೇ ಅರ್ಜೆಂಟ್ ಊರಿನಲ್ಲಿ ಕೆಲಸ ಇದೆ ನಾನು ಊರಿಗೆ ಹೋಗಿ ಬರ್‍ತೀನಿನ್ನ. ನಿಮ್ಮ ನಾಟಕ ಕಂಪನಿ ಚಲೋ ನಡೀವಾಗ ನನ ನಾಟಕ ಆಡುವರಂತೆ, ಪರವಾಗಿಲ್ಲ ಎಂದು ಹೇಳಿ, ಊರಿನೆಡೆಗೆ ಬಸ್ ಹತ್ತಿದೆ.
ಹೀಗೆ ಊರಿನಲ್ಲಿ ಕೆಲ ಕಾಲ ಕಳೆಯಿತು. ಕುಂಭದ್ರೋಣ ಮಳೆ ಇನ್ನೂ ಬಿಟ್ಟಿರಲಿಲ್ಲ. ೧೫ ದಿನ ಆದ ನಂತರ ಮನಸ್ಸಿಗೆ ತಡೆಯಲಾಗಲಿಲ್ಲ. ಮತ್ತೆ ನಿಡಗುಂದಿಯೆಡೆಗೆ ಕಂಪನಿ ನೋಡಲೆಂದು ಹೊರಟೆ. ಬಸ್‍ಸ್ಟಾಂಡ್‍ನಿಂದ ಇಳಿದು, ಕಂಪನಿ ಇದ್ದ ಸ್ಥಳಕ್ಕೆ ಹೋದಾಗ ಎಲ್ಲವನ್ನೂ ಖಾಲಿ ಮಾಡಿ ಕೊಂಡು ಹೋಗಿದ್ದರು. ಇವರು ಎಲ್ಲಿಗೆ ಹೋದರೂ ಅಂತ ಅಲ್ಲಿದ್ದವರೊಬ್ಬರಿಗೆ ಕೇಳಿದೆ. ಸಿಕ್ಕಾಪಟ್ಟೆ ಮಳೆಬಂದುದ್ದರಿಂದ ಎಲ್ಲಾ ಕಲಾವಿದರು ದೇಶಾವರಿ ಹೋದರು. ಆ ಮ್ಯಾನೇಜರ್ ಒಬ್ಬ ಸಾಹುಕಾರ್ ಬರಲಿಲ್ಲ ಅಂತ ಹೇಳಿ ಸ್ಟೇಜು, ಪರದೆ, ಖುರ್ಚಿ, ಎಲ್ಲಾ ಮಾರಿಕೊಂಡು ನಿನ್ನೆ ಅವನೂ ಹೋದ ನೋಡ್ರಿ… ಎಂದಾಗ, ಮುಗಿಲೇ ಕಳಚಿಬಿದ್ದಂತಾಯ್ತು ನನಗೆ. ಅಸಹಾಯಕನಾಗಿ ಕೊರಗುತ್ತಾ, ಮರಗುತ್ತಾ ಮರಳಿ ಊರಿಗೆ ಬಂದೆ.
*****