ವ್ಯಾಕರಣ ಶಿರೋಮಣಿ ರಣಾರಣ ಶ್ರೀ
ಕೂ ಮಂ ಭಟ್ಟರು ರಚಿಸಿದರು ಒಂದು ಕಾವ್ಯ
ಜನಿವಾರದಿಂದ ವೃತ್ತಗಳ ಹಾಕಿ
ಶಿವಲಿಂಗದಿಂದ ಮಾತ್ರೆಗಳ ತೂಗಿ
ಕರ್ಮರ ಬ್ರಾಹ್ಮಣನ ಮಮ್ಮಟ ಕಾವ್ಯ
ದಿವಿನಾಗಿ ಬಂತು
ಪರಂಪರೆಯ ಹವ್ಯ ಕವ್ಯ
ಮಟಮಟ ಮಧ್ಯಾಹ್ನ ಮೂಗು ತುದಿಯಿಂದ
ಬೆವರು ಬರುವಂತೆ
ಬೆವರು ಬರುವಂತಲ್ಲ ಸರಸ್ವತಿಯ
ಮೊಲೆ ಹಾಲಿನಂತೆ
ಹಾಲಿನಂತಲ್ಲ ಹುಚ್ಚು ಹೊಳೆಯಂತೆ
ಏನಾದರೇನಂತೆ ಅಚ್ಚಾಗಿ ಬಂತು
ಕುಪ್ಪಳಿಸಿ ಕುಪ್ಪಳಿಸಿ ಬಳಗಭಟ್ಟಾರಕರಿಂದ
ಜುಟ್ಟು ಹಿಡಿದೆತ್ತಿಸಿಕೊಂಡು
ದಕ್ಕಿಸಿಕೊಂಡರು ಪಾರಿತೋಷಕ ಒಂದಲ್ಲ ಎರಡಲ್ಲ
ಹೀಗೆ
ಕಾವ್ಯ ಪಾರಿತೋಷಕವಾಗಿ
ಪಾರಿತೋಷಕ ಭಟ್ಟರೇ ಆಗಿ
ಎರಡೂ ಸತ್ತವು ಒಂದು ಚಳಿಮಳೆಗಾಳಿಯ ದಿನ.
*****