ಆ ಹಕ್ಕಿ ಈ ಹಕ್ಕಿ
ಯಾವುದೋ ಒಂದು ತಿರುವಿನಲ್ಲಿ ಸಿಕ್ಕಿ
ಮೊದಲ ನೋಟದ ಮಾತ್ರದಲಿ
ಮನಸು ಕೊಟ್ಟುಕೊಂಡು
ತಮ್ಮದೇ ಆದೊಂದು ಗೂಡನ್ನು ಎಬ್ಬಿಸುವ
ಕನಸನ್ನು ಕಾಣುತ್ತ
ಸಂಭ್ರಮದಿ ಓಲಾಡತೊಡಗಿದ್ದವು.

ಮತ್ತೊಂದು ತಿರುವಿನಲಿ
ಮುನಿದ ಪರಿಸರದೆದುರು
ಜೀವದಾಟವು ಏನೂ ಸಾಗದೆಂಬಂತೆ
ಹಿರಿಯರೆನಿಸಿಕೊಂಡವರ
ಚಂಡಮಾರುತದಂತ ರೂಢಿ ಭಾವಕ್ಕೆ ಸಿಲುಕಿ
ತೂರಿ ಹೋಯಿತು
ಎಳೆಯ ಹಕ್ಕಿಗಳ ಕಲ್ಪನೆಯ ಮಹಲು.

ದಾರಿ ಬೇರೆಯಾಗಿ
ಬಹುದೂರ ಸಾಗಿ
ತನ್ನದು, ತನ್ನವರು,
ಏನೆಲ್ಲಾ ಬದಲಾದರೂ
ಏನೇನೋ ತಿರುವುಗಳಲ್ಲಿ ಸಿಲುಕಿದರು; ನಲುಗಿದರು
ಗುಪ್ತಗಾಮಿನಿಯಾಗಿ
ಹಸಿರು ಹಸಿರಾಗಿಹುದು
ಅಂದು ಎದೆಯುಂಡ ಭಾವ.
*****