ಬುವಿಬಾನಳೆದುರವಣಿಸಿದ
ಹರಿ ಪಾದಕೆ ತಲೆಯೊಡ್ಡುತ
ಕೆಳ ಲೋಕಕೆ ತೆರಳುತ್ತಿಹ
ಬಲಿದೊರೆಯಂದದೊಳು,
ಮಿಗುವಿರುಳಿನ ನಿಡು ನೀಟಿದ
ದೆಸೆ ಮೆಟ್ಟಿದ ಮುಗಿಲಡಿಯಡಿ
ಮರೆಯಾದುದು ಪಗಲೈಸಿರಿ
ಪಡುವಣ ಕಮರಿಯೊಳು
ಹಿಮವದ್ಗಿರಿಗಹ್ವರದೆಡೆ
ತಪವೆಸಗುವ ವರ ಯೋಗಿಯ
ನಿಶ್ಚಲ ಕಿಂಚಿನ್ಮೀಲಿತ-
ಫಾಲಾಂಬಕಮೆನಲು,
ಬೆಳ್ಳಂಚಿನ ಕರಿಮುಗಿಲಿನ
ನಡುವಣ ಬಾನಿನ ನೆತ್ತಿಯೊ-
ಳೆಂತೊಪ್ಪಿದೆ ಹೊಂಬಣ್ಣದ
ಬಿದಿಗೆಯ ಪೆರೆಯೆಸಳು.
ಚಣ ಚಣಕೂ ಮಿರುಮಿಂಚುವ
ಕೋಲ್ಕಿಂಚಿನ ಸಂಚೇನಿದು-
ತಪ ಭಂಗಕೆ ಕುಸುವಾಸ್ತ್ರವ-
ನಣಿಗೈವನೊ ಮಾರಂ?
ಚಣ ಚಣಕೂ ಕಿವಿಗಿನಿದೆನೆ
ಗುಡುಗುಡುಗುವ ದನಿಯೇನಿದು –
ಸಿಂಗಾಡಿಗೆ ಹೆದೆಯೇರಿಸಿ
ಮಿಡಿವನೊ ಎದೆಗಾರಂ?
ಕಣ್ಮನಗಳ ನೀರಡಿಸುವ
ನಿಶ್ಯಾಂತಿಯ ಈ ಇರುಳೊಳು
ಉತ್ಸುಕಿಸಿಹೆ, ಕಾತರಿಸಿಹೆ,
ಭಾವುಕ ಕತಮೇನೈ?
ಕಣ್ಸೋಲಲು ನಿಟ್ಟಿಸುವೀ
ಕಿವಿ ಸೋಲಲು ಲಾಲಿಸುವೀ
ಬಗೆ ಸೋಲಲು ಭಾವಿಸುವೀ
ಭ್ರಾಂತಿಯ ಬಗೆಯೇನೈ?
ನೇಪುರದಿನಿದನಿ ಯಾವುದ
ಸೂಡಿದ ಪೂಗಂಪಾವುದ
ನೋಟದ ಕುಣಿಮಿಂಚಾವುದ
ಸ್ಮೃತಿಧನುವಿಂದೊಗೆದು,
ನಿನ್ನೆದೆಗವಿಯೊಳಗಿಂತೆಯೆ
ತವಿಪ ನಿರಾಶೆಯ ರುದ್ರನ
ಎಚ್ಚರಿಸುತ, ಒಲವಾವುದು
ಬೇಳುವೆಯಾಗಿಹುದು?
*****