ಹುಟ್ಟಿದಂದೀಗಿ ಮೊದಲಽ ಹೊಟ್ಟಿಬ್ಯಾನೆಂಬೂದರಿಯ|
ಹೊಟ್ಟಿ ಕುಟ್ಟಂದಾವಲ್ಲಽಽ
ಎದ್ದಾಽಽವೇಳವ್ವಾ ಬ್ಯಾನಿ ತಾಳಲಾರೇನ ಬ್ಯಾನಿ ||೧||

ನಡ ಟೊಂಕ ಕೊಡಲೀಲಿ ಕಡದಂತ ತಡಬ್ಯಾನಿ|
ಬದಿಲಿ ಕುಂತವ್ವಗಳಿರ್‍ಯಾ ಹಡಿ ಹಽಡೀ ಅಂದಾರಲ್ಲ|
ಎದ್ದಾಽಽವೇ…. ||೨||

ಹೊತ್ತ ಹೊತ್ತೀನ ಬ್ಯಾನಿ ಕತ್ತೀಲಿ ಕಡದಂಗ|
ಹೆತ್ತವ್ವ ಬಾರ ಬದಿಯಲ್ಲಿ|
ಎದ್ದಾಽಽವೇ…. ||೩||

ತಾಸ ತಾಸೀನ ಬ್ಯಾನಿ ತಾಳಬಾರಿಸಿದಂಗ|
ತಾಯವ್ವ ಬಾರ ಬದಿಯಲ್ಲಿ|
ಎದ್ದಾಽಽವೇ…. ||೪||

ಆಡಗೀಯ ಮನಿಯಾಗ ಕಡಗ ಕಾಲೀನ ಮಂಚ|
ಬದಿಲಿ ಕುಂತವ್ವಗಳಿರ್‍ಯಾ ಹಡಿ ಹಽಡೀ ಅಂದಾರಲ್ಲ|
ಎದ್ದಾಽಽವೇ…. ||೫||

ಥರಥರ ನಡಗೂತ ತೊಡಿಗೊಳು ಅದರೂತ|
ತುರುಬಿನ ಕೂದಲ ಬಾಯೊಳೆಗಿಡವೂತ|
ಎದ್ದಾಽಽವೇ…. ||೬||

ಒಡಿಗಾಯಿ ಹಿಡಿಗಾಯಿ ಒಡೆಯ ತೆಂಗಿನ ಕಾಯಿ|
ಒಡೆಯ ಪರವೂತಮಲ್ಲ ಕಡಿಗಾದರು ಮಾಡ್ಯಾನಲ್ಲ|
ಎದ್ದಾಽಽವೇ…. ||೭||
*****
ಬೇನೆ ತಿನ್ನುವ ಹಾಡು

ಶಬ್ದ ಪ್ರಯೋಗಗಳು:- ಒಡಿಗಾಯಿ ಹಿಡಿಗಾಯಿ=ಹರಕೆ. ಓಕರಿಕೆ ಹುಟ್ಟಿಸುವುದಕ್ಕೆ ತುರುಬಿನ ಕೂದಲನ್ನು ಬಾಯೊಳಗೆ ಇಡುವರು.