ಆಧುನಿಕ ವಚನ ಸಾಹಿತ್ಯದಲ್ಲಿ ವೈಚಾರಿಕ ಪ್ರಜ್ಞೆ

ಆಧುನಿಕ ವಚನ ಸಾಹಿತ್ಯದಲ್ಲಿ ವೈಚಾರಿಕ ಪ್ರಜ್ಞೆ

ಆಧುನಿಕ ಕಾಲದಲ್ಲಿ ಸಾಹಿತ್ಯದ ಎಲ್ಲ ಪ್ರಕಾರಗಳು ಜನ ಮೆಚ್ಚಿಕೊಂಡಂತೆ ಅದರಲ್ಲಿ ವಚನ ಸಾಹಿತ್ಯವು ಅಷ್ಟೇ ಪ್ರಭಾವಿಯಾಗಿ, ಮುಕ್ತವಾಗಿ ಜನರ ಮನಸ್ಸಿನ ಮೇಲೆ ಬೀರಿದೆ ಎಂದರೆ ಅತಿಶಯೋಕಿತಯೇನಲ್ಲ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಗಣಕಯಂತ್ರಗಳು, ಅಂತರಜಾಲ (ಇಂಟರನೇಟ್) ಬಂದ ಮೇಲೆ ಜಗತ್ತು ಸಂಕುಚಿತಗೊಂಡಿದೆ ಎಂಬ ಭಾವ ಬಂದರೆ ತಪ್ಪೇನಲ್ಲ. ಏಕೆಂದರೆ ಜಗತ್ತಿನ ಯಾವ ಮೂಲೆಯಲ್ಲಿ ಏನು ನಡೆದರೂ ಅವುಗಳೆಲ್ಲ ಕ್ಷಣಾರ್ಧದಲ್ಲಿ ನಮ್ಮ ಟಿ.ವಿ. ಪರದೇಯ ಮೇಲಾಗಲಿ, ಕಂಪ್ಯೂಟರ್‌ನಲ್ಲಾಗಲಿ ನೋಡಲು ಅವಕಾಶವಾಗಿದೆ. ಅಷ್ಟೇ ಅಲ್ಲದೆ ಮುಖಾ ಮುಖಿ ದೂರದಲ್ಲಿದ್ದು ಸಂದರ್ಶಿಸುವ ಮಾತನಾಡುವ ಕಾಲ ಕೂಡಿ ಬಂದಿದೆ. ಹೀಗಾಗಿ ಮಾನವನಿಗೆ ಸುದೀರ್ಘವಾಗಿ ಅಭ್ಯಾಸ ಮಾಡಲಾಗಲಿ, ವಿವೇಚನೆ ಮಾಡುವುದಾಗಲಿ ಮಾಡಲು ಸಮಯವೇ ಇಲ್ಲದಂತಾಗಿದೆ. ಬೃಹದ ಕಥೆ, ಕಾದಂಬರಿ, ಖಂಡ ಕಾವ್ಯಗಳಂತೂ ಜನರಿಂದ ದೂರಾಗುತ್ತಿವೆಯೋ ಎಂದೆನಿಸಿದೆ. ಬದಲಿಗೆ ಅವುಗಳ ತಾಣದಲ್ಲಿ ಹನಿಗವನಗಳು, ಚಟುಕುಗಳು, ಕಿರುಕಾವ್ಯಗಳು ಜನರ ಮನ ಸೋರೆಗೊಂಡು ಕ್ಷಣಹೊತ್ತು ಅಹ್ಲಾದ ನೀಡಲು ಯಶಸ್ವಿಯಾಗಿವೆ. ಆದರೆ ಇಷ್ಟಕ್ಕೆ ನಮ್ಮ ಬೌದ್ಧಿಕತೆಗೆ ಸಾಲದೆಂಬಂತೆ ಮತ್ತೆ ನಾವು ಅಂದಿನ ಶರಣರ, ಸಂತರ ವಚನಗಳು, ತ್ರಿಪದಿಗಳು ಓದುವ ಕಾಲ ಕೂಡಿ ಬಂದು ಜನರು ವಚನಗಳ ಅಧ್ಯಯನ ಶೀಲರಾಗ ತೊಡಗಿದರು. ಸ್ವಲ್ಪ ಶಬ್ದಗಳಲ್ಲಿ ಅನೇಕ ಸಾಂದರ್ಭಿಕ ವಿಷಯಗಳಿಗೆ ಕ್ರೋಡಿಕರಿಸಿ ಓದುಗರ ಪದರಿನಲ್ಲಿ ವಚನಕಾರರು/ವಚನಗಳನ್ನು ಹಾಕಿ ಅವರ ಮನಸ್ಸನ್ನು ಸೂರೆಗೊಂಡರು.

ಮಾನವನ ಮೂಲ ಆಶಯ ಬೌದ್ಧಿಕತೆ, ಆ ಬೌದ್ಧಿಕತೆಯ ವಿಸ್ತಾರ, ಆಳ ಚಿಂತನೆಗಳ ಮೆಲಕು ಹಾಕಲು ನಮಗೆ ಸಾಹಿತ್ಯ ಜರೂರಿಯಾಗಿ ಬೇಕಾಯಿತು. ಅಂತಹ ಮೌಲಿಕ ಸಾಹಿತ್ಯ ಚಟುಕು, ತ್ರಿಪದಿ, ಮಿನಿಗಾವ್ಯ, ಹನಿಗಾವ್ಯಗಳ ಮೂಲಕ ಕೊಡಲು ಸಾಧ್ಯವಾಗದೆ ವಚನಗಳು ಬರೆಯಲೇ ಬೇಕಾದ ಪ್ರಸಂಗಗಳು ನಮ್ಮನ್ನು ಬೆನ್ನಟ್ಟಿದವು. ಆ ನಿಟ್ಟಿನಲ್ಲಿಯೇ ಅಂದಿನ ಶರಣರ ಯುಗದಂತೆ ವಚನ ಯುಗದಂತೆ ಇಂದು ಮತ್ತೊಮ್ಮೆ ಆಧುನಿಕ ವಚನಗಳ ರಚನೆ ಇದು ನಾಂದಿಯಾಯಿತು.

ಆಧುನಿಕ ವಚನ ಸಾಹಿತ್ಯ ಇತ್ತೀಚೆಗೆ ಪರಿಣಾಮಕಾರಿಯಾಗಿ ಬೆಳಗುತ್ತಿರುವುದು ಆರೋಗ್ಯಕರ ಲಕ್ಷಣ. ಅಂದಿನ ಶರಣರಯುಗದ ನಂತರವೂ ಅನೇಕ ಶತಮಾನ ೧೭ನೇ, ೧೮ನೇ ಶತಮಾನಗಳಲ್ಲೂ ವಚನಕಾರರು ವಚನಗಳು ಬರೆದರೂ ಶರಣರ ಕಾಲದ ವಚನದೆತ್ತರಕ್ಕೆ ಹೋಗದಿರುವುದು ವಿಷಾಧನೀಯ. ಆದರೂ ೧೬ನೇ ಶತಮಾನದಲ್ಲಿ ಶರಣರು ವೈಚಾರಿಕತೆಯ ನೆಲೆ ಗಟ್ಟಿನ ಮೇಲೆ ಸಾಹಿತ್ಯ ರಚಿಸಲು ಕ್ರಿಯಾಶೀಲರಾಗಿ ಬರೆದರು. ೧೬ನೇ ಶತಮಾನದ ತೋಂಟದ ಸಿದ್ಧಲಿಂಗಯತಿಗಳು ಒಂದು ವಚನ ಹೀಗೆ ಬರೆಯುತ್ತಾರೆ.

ದಶಕಾಯದೊಳಗಣ ಜೀವ ಹೇಗಿಷ್ಟುದೆಂದಡೆ ಒಳಗೊಂದು ಬೆಳಗುವ ಜ್ಯೋತಿಯಂತಿಪ್ಪುದಯ್ಯಾ ಕಾಯಕವೇ ಶರಣ, ಜೀವವೇ ಲಿಂಗವೆಂಬು ಪಾಯವನಾರೂ ತಿಳಿಯುರಲ್ಲಾ/ಜೀವನ ಬೆಳಗು ಕಾಯುವ ನುಂಗಲು ಕಾಯನಿರವಯ ವಾಯಿತಯ್ಯಾ, ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೇ, ಹೀಗೆ ಬರೆಯುತ್ತಾರೆ.

ಸಾಮಾನ್ಯವಾಗಿ ಅಂದಿನ ದಿನಗಳ ವಚನಗಳೆಲ್ಲವೂ ಸಮಾಜಮುಖಿಯಾಗಿರದೆ ಧರ್ಮಮುಖಿಯಾಗಿದ್ದು, ಕಂಡು ಬರುತ್ತದೆ ಎಂದು ಇದಕ್ಕೆ ಆ ಕಾಲಘಟದ ತುರ್ತು ಮತ್ತು ಒತ್ತಡಗಳೇ ಕಾರಣ ಇರಬಹುದೆಂದು ಖ್ಯಾತ ವಿದ್ವಾಂಸರಾದ ಡಾ.ವಿದ್ಯಾಶಂಕರ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ೧೬ನೇ ಶತಮಾನದಲ್ಲಿ ಅನೇಕ ವಚನಕಾರರು ವಚನಗಳನ್ನು ರಚಿಸಿದರೂ ಅವರೆಲ್ಲರೂ ಪುರಾಣ ಸಾಹಿತ್ಯಕ್ಕೆ ಆದ್ಯತೆ ನೀಡಿರುವುದು ಕಂಡು ಬರುತ್ತದೆ.

೧೬ನೇ ಶತಮಾನದ ನಂತರ ಬಂದ ವಚನಗಳಲ್ಲಿ ಕೆಲವು ಸುದೀರ್ಘ ವಚನಗಳಾಗಿ ರಚನೆಗೊಂಡಿದ್ದು ಕಾಣುತ್ತೇವೆ. ಅಂಕಿತಗಳು ಬಳಸಿಕೊಂಡರೂ ಅವು ಬುದ್ಧಿ ಪೂರ್ವಕವಾಗಿ ಬಳಸಿಕೊಂಡಿರಬಹುದು. ಜಂಗಮಕ್ಕೆ ಬದಲಾಗಿ ಸ್ಥಾವರಕ್ಕೆ ಪ್ರಾಧ್ಯಾನತೆ ನೀಡಿರುವುದು ವೈಚಾರಿಕತೆ ಅಸ್ಪದವಿಲ್ಲವಾಯಿತು.

ಅಂದಿನ ಕಾಲದಲ್ಲಿ ತ್ರಿಪದಿಗಳಿಗೆ ವಚನಗಳೆಂದೇ ಕರೆಯುವ ರೂಢಿಯಾಯಿತು. ಕ್ರಿ.ಶ.೧೬ನೇಯ ಶತಮಾನದಿಂದ ಅಷ್ಟಾಗಿ ಸಾಹಿತ್ಯಾಂಶ ಕಂಡು ಬರುವುದಿಲ್ಲವೆಂದು ಡಾ.ಪಿ.ವಿ. ನಾರಾಯಣ ಅಭಿಪ್ರಾಯ ಪಟ್ಟಿದ್ದಾರೆ. ಆ ಕಾಲದ ವಚನಗಳು ಬಾಹ್ಯಾನುಕರಣೆ, ಮಾತಿನ ಸೋಲು, ಕೇವಲ ಆಡಂಬರದ ಅಲಂಕಾರಗಳಿಂದ ಕೂಡಿವೆ ಎಂದಿದ್ದಾರೆ.

ಹನ್ನೆರಡನೆಯ ಶತಮಾನದಲ್ಲಿ ನಡೆದ ವಚನ ಕೃಷಿ ಅವುಗಳ ಸಾಹಿತ್ಯ ಸೃಜನಶೀಲತೆ ಅನುಭಾವ, ಮಾನವೀಯ ಮೌಲ್ಯಗಳಿಂದ ತುಂಬಿದ ಆ ವಚನಗಳು ಶತಮಾನದಿಂದ ಶತಮಾನಕ್ಕೆ ವಚನಗಳನ್ನು ಬರೆಯಲು ಪ್ರೇರಣೆಯಾದವು. ಅನೇಕರು ಶರಣರ ರೈಲಿಯಲ್ಲಿ ವಚನಗಳು ಬರೆದರೂ ಅವುಗಳಲ್ಲಿ ವೈಚಾರಿಕ ಚಿಂತನೆಗಳು, ಕಾವ್ಯರಸವಂತಿಕೆ ಅಷ್ಟೊಂದು ಕಂಡು ಬರಲಾರದು.

ಆಧುನಿಕ ವಚನಗಳ ಹೋಲಿಕೆಯಲ್ಲಿ ೧೨ನೇಯ ಶತಮಾನದ ವಚನಗಳಂತೆ ರಚಿಸಿರುವುದು ಕ೦ಡು ಬ೦ದರೂ ಅವುಗಳು ಕೇವಲ ಬಾಹ್ಯಾಡಂಬರವೆಂದೆನ್ನಬಹುದು ಹೊರತು ಪಡಿಸಿ ರಚನೆ ಸಾಮ್ಯತೆ, ಮುಕ್ತಕ ಸ್ವರೂಪ, ಅಂಕಿತ ಬಳಕೆ, ಭಾಷಾ ಶೈಲಿ, ಪ್ರತಿಮೆಗಳು, ರೂಪಕಗಳಲ್ಲಿ ಕಂಡಾಗ ಆಧುನಿಕ ವಚನಕಾರರು, ಕೇವಲ ವಚನಕಾರರಾಗಿರದೆ ಅವರು ಎಲ್ಲ ಪ್ರಕಾರದ ಸಾಹಿತ್ಯವನ್ನು ರಚಿಸಿರಬಹುದೆಂಬುದು ಗಮನಿಸಬಹುದು. ಆಧುನಿಕ ವಚನಕಾರರು ಕೇವಲ ವಚನಗಳನ್ನು ರಚನೆ ಮಾಡುವದೊಂದಿಗೆ ತಾವು ವಚನಕಾರರೆಂದು ತೋರ್ಪಡಿಸಿದಂತಿದೆ.

ಕಳೆದ ಶತಮಾನದ ಆದಿಭಾಗದಲ್ಲಿ ದ.ರಾ. ಬೇಂದ್ರೆಯವರು ಕವನಗಳಿಗೆ ವಚನಗಳೆಂದು ಕರೆದುಕೊಂಡಿರುವುದು ತಿಳಿದು ಬರುತ್ತದೆ. ಅವರ ಕರುಳಿನ ವಚನಗಳು ಎಂಬ ಸಂಕಲನದಲ್ಲಿ ಇದನ್ನು ಕಾಣಬಹುದು ಇವು ೧೨ನೇಯ ಶತಮಾನದ ವಚನಗಳಂತಾಗಿರದೆ, ವಚನಗಳನ್ನು ಹದರದಿರುವುದು ನಾವು ಕಾಣಬಹುದು. ಈ ವಚನಗಳಿಗೆ ಅಂಕಿತ ನಾಮಗಳಿಲ್ಲದರುವುದು ಇವು ವಚನಗಳಿಗೆ ಸಾಕ್ಷಿಯಾಗಲಾರವು ಬದಲಿಗೆ ಅವುಗಳು ಸ್ವಚ್ಚಂದ ಕವನಗಳಾಗಿವೆ. ಈ ದಿಶೆಯಲ್ಲಿ ಅನೇಕರು ವಚನಗಳನ್ನು ರಚಿಸಿರುವುದು ನಾವು ಕಾಣುತ್ತೇವೆ. ಹರ್ಡೇಕರ್ ಮಂಜಪ್ಪ, ಎಸ್.ವಿ. ರಂಗಣ್ಣನವರು, ರಾ. ನರಸಿಂಹಚಾರ್ಯರು, ಕುವೆಂಪು, ಆನಂದ, ಸಿದ್ದಾಯ್ಯ ಪುರಾಣಿಕರು, ಆಧುನಿಕ ವಚನಗಳಿಗೆ ಅಡಿಪಾಯ ಹಾಕಿದ ಆದ್ಯರನ್ನಬಹುದು. ಡಾ. ಜಜಿನಿ, ಡಾ ಮೂಜಗಂ ಶ್ರೀ ಸದಾಶಿವ ಸ್ವಾಮಿಗಳು, ಶ್ರೀ ಟಿ.ಎನ್. ಮಹದೇಯ, ಜೋಳದರಾಶಿ ದೊಡ್ಡನ ಗೌಡರು, ಎಸ್.ವಿ. ಪರಮೇಶ್ವರಭಟ್ಟರು, ಡಾ.ಹೆಚ್ ತಿಪ್ಪೆರುದ್ರ ಸ್ವಾಮಿ ಮುಂತಾದವರು ಆಧುನಿಕ ವಚನಗಳ ವಚನಕಾರರಿಗೆ ಮಾರ್ಗಸೂಚಿಯಾಗಿದ್ದಾರೆ ಎಂದರೆ ತಪ್ಪಿಲ್ಲ. ಹೀಗೆ ಬರುಬರುತ್ತ ಆಧುನಿಕ ವಚನ ಸಾಹಿತ್ಯಕ್ಕೆ ಮೇಲ್ಕಂಡ ವಚನಕಾರರ ವಚನಗಳು ಮೈಲಿಗಲ್ಲಾಗಿ ನಿಂದಿವೆ.

ಇವತ್ತು ಸಾಹಿತ್ಯ ಪ್ರಕಾರದಲ್ಲಿ ಆಧುನಿಕ ವಚನ ಸಾಹಿತ್ಯ ಆರೋಗ್ಯಕರವಾಗಿ ಬೆಳೆಯುತ್ತಿರುವದು ಸ್ವಾಗತಾರ್ಹ. ಇವತ್ತಿನ ವಚನಕಾರರ ವಚನಗಳಲ್ಲಿ ವಾಸ್ತವ ಸತ್ಯ ಸಂಗತಿಗಳನ್ನು ವೈಭವಿ ಕರಿಸಿರುವುದು ಕಾಣುತ್ತೇವೆ. ಈ ವಚನಗಳಲ್ಲಿ ಜೀವ ಪರಕಾಳ್ಜಿಯುಳ್ಳವಾಗಿ ಸಮಕಾಲಿನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿ ಗೊಳಿಸಿದ್ದಾರೆ. ಮತ್ತೆ ಈ ವಚನಕಾರರ ವಚನಗಳಲ್ಲಿ ಬಹುಮುಖ ವಿಷಯಗಳು ಹರವು ಕಾಣುತ್ತೇವೆ. ಜನಪರ ಆಶಯಗಳ ಅಭಿವ್ಯಕ್ತಿಯಿಂದಾಗಿ ದಲಿತ ಬಂಡಾಯ, ವಿಚಾರಶೀಲತೆ ಮತ್ತು ಸಾಮಾಜಿಕ ಕಳಕಳಿಗಳು ಆಧುನಿಕ ವಚನ ಸಾಹಿತ್ಯದ ಆಶಯಗಳಾಗಿವೆ. ಹೊಸ ನುಡಿಗಟ್ಟುಗಳು ಸೇರ್ಪಡೆಯಿಂದಾಗಿ ಕನ್ನಡ ಭಾಷೆಯ ಅಭಿವ್ಯಕ್ತಿಯ ಸಾಮರ್ಥ್ಯವೂ ಹೆಚ್ಚಾಗಿದೆ. ಎಲ್ಲ ವರ್ಣ, ವರ್ಗ, ಜಾತಿ ಪಂಥದ ಲೇಖಕರು ಆಧುನಿಕ ವಚನಗಳ ರಚನೆಯಲ್ಲಿ ತೊಡಗಿರುವುದು ನಾವು ಕಾಣುತ್ತೇವೆ ವಚನಗಳ ಅಂಕಿತವೇ ವೈಶಿಷ್ಠ ಅವು ಒಂದು ಮತಧರ್ಮಕ್ಕೆ ಸೀಮಿತವಾಗದೇ ಇರುವುದು ಕಾಣಬಹುದು.

ಆಧುನಿಕ ವಚನ ಸಾಹಿತ್ಯಕ್ಕೆ ನಾಲ್ಕು ಆಯಾಮಗಳಿವೆ. ಭಕ್ತಿ, ಅನುಭಾವ, ವೈಚಾರಿಕ ಪ್ರಜ್ಞೆ ಮತ್ತು ಸಾಮಾಜಿಕ ಕಳಕಳಿ, ಕೆಲವೊಂದು ವಚನಗಳಲ್ಲಿ ವಿಚಾರಶೀಲತೆಯೇ ಪರಮೋಧೇಯವಾಗಿರುವುದು ಕಾಣಬಹುದು. ಆಧುನಿಕ ಕಾಲದ ಜೀವನ ರೀತಿ, ಸಮಸ್ಯೆಗಳು, ರಾಜಕೀಯ, ಧಾರ್ಮಿಕ, ಸಾಮಾಜಿಕ ಪಲ್ಲಟಗಳು ಸಹ ಸಮಕಾಲಿನ ಆಧುನಿಕ ವಚನಕಾರರಿಗೆ ವಿಫುಲವಾದ ವಸ್ತುಗಳಾಗಿವೆ. ಸ್ವಾತಂತ್ರ್ಯದ ನಂತರದ ಪ್ರಜಾಪ್ರಭುತ್ವ ವ್ಯವಸ್ಥೆಗಳಾಗಿವೆ. ಸ್ವಾತಂತ್ರ್ಯದ ನಂತರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ವೈರುಧ್ಯಗಳು, ಜಾಗತೀಕರಣ, ಉದ್ದಾರಿಕರಣ, ಖಾಸಗೀ ಕರಣದ ಪರಿಣಾಮಗಳು ಸಹ ವಚನಕಾರರ ಅಭಿವ್ಯಕ್ತಿ ಮಾದ್ಯಮಗಳಾಗಿವೆ. ಅನೇಕ ವಿಷಯಗಳಲ್ಲಿ ವೈರುಧ್ಯಗಳಿದ್ದರು ಆಧುನಿಕ ವಚನಗಳ ರಚನೆಗಾರರ, ವಿನ್ಯಾಸ ಮೌಲ್ಯ ಮತ್ತು ಸತ್ವಗಳಿಂದ ಕೂಡಿದ್ದು ಅಂದಿನ ೧೨ನೇಯ ಶತಮಾನದ ವಚನಗಳಿಗೆ ಹೋಲುತ್ತಿರುವುದು ವಿಶೇಷ ಆದುನಿಕ ವಚನಕಾರರು ಹಲವು ವ್ಯಕ್ತಿಗಳಿಂದ ಬಂದರೂ ಅವರ ವಚನಗಳಲ್ಲಿ ಸಾಮಾಜಿಕ ಧಾರ್ಮಿಕತೆಯ ಪ್ರಧಾನಯುತವಾಗಿ ಜೊತೆಗೆ ಲಿಂಗಾಯಿತೇತರು ವಚನಗಳನ್ನು ರಚಿಸಿದ್ದಾರೆ.

ಒಂದು ಅಂದಾಜಿನ ಪ್ರಕಾರ ಇಂದು ಒಂದು ಸಾವಿರಕ್ಕೂ ಮೀರಿ ಆಧುನಿಕ ವಚನಕಾರರು ವಚನಗಳು ಬರೆಯುತ್ತಿರುವುದು ವಚನ ಸಾಹಿತ್ಯ ಲೋಕವು ಶ್ರೀಮಂತ ಗೊಳ್ಳುತ್ತಿರುವುದು ನಿಜಕ್ಕೂ ಸ್ವಾಗತ. ಪ್ರಸ್ತುತ ಕಾಲಘಟ್ಟದ ಅನೇಕ ವಿದ್ಯಮಾನಗಳು, ಸುಳ್ಳು ಆಶ್ವಾಸನೆಗಳು, ಕೋಮುದ್ವೇಷ ಭಯೋತ್ಪಾದನೆ, ಬಾಂಬ ಸ್ಫೋಟಗಳು, ಸಾವು ನೋವುಗಳು, ಆಧುನಿಕ ವಚನಕಾರರಿಗೆ ವಿಷಯಗಳಾಗಿ ಮಾರ್ಪಟ್ಟಿವೆ. ಬೆಲೆ ಏರಿಕೆ ರೈತರ ಆತ್ಮಹತ್ಯೆ ಪರಿಸರ ಮಾಲಿನ್ಯ ನಾಗರೀಕರ ಒಳಿತಿಗೆ ಕಳಂಕವಾಗಿರುವುದು ಸಹ ಸಂಗತಿಗಳಾಗಿವೆ. ಕೈ ತುಂಬ ಸಂಬಳ ದೊರಕಿದರೂ ಲಂಚಕ್ಕೆ ಕೈ ಒಡ್ಡುವ ಭ್ರಷ್ಟ ಅಧಿಕಾರಿಗಳ ಲೋಭಿತನ, ರಾಜಕೀಯ ಜನತೆಯ ಗೋಮುಖ ವ್ಯಾಗ್ರತೆ ಮುಂತಾದವುಗಳು ಸಹ ವಚನಕಾರರಿಗೆ ಪರಿಣಾಮಕಾರಿಯಾಗಿ ವಚನಗಳ ರಚಿಸಿಲು ವಿಷಯಗಳಾಗಿವೆ. ಹೀಗೆ ಆಧುನಿಕ ವಚನಕಾರರಲ್ಲಿ ವೈವಿಧ್ಯತೆಯನ್ನು ಕಾಣುತ್ತೇವೆ. ಉಳಿದ ಸಾಹಿತ್ಯ ಪ್ರಕಾರಗಳಿಗಿಂತ ವಚನ ಸಾಹಿತ್ಯದಲ್ಲಿ ಹೀಗೆ ಎಲ್ಲವೂ ಪರಿಣಾಮಕಾರಿಯಾಗಿ ಬಿಂಬಿಸುವ ಕೇಳುಗರ ಹೃದಯಕ್ಕೆ ತಲುಪುವ ಅಂಕಿತ ನಾಮಗಳೊಂದಿಗೆ ವಚನಗಳ ಸೃಷ್ಟಿಸಲಾಗಿದೆ.

ಕವನ ಶ್ರೀ ಸಿದ್ಧಯ್ಯ ಪುರಾಣಿಕರು ತಮ್ಮ ವಚನಗಳಲ್ಲಿ

ಸಾಯುವವರೆಗೂ ಶಾಸ್ತ್ರ ಹೇಳಿದರೇನು ಸುಳ್ಳೂ
ಹೇಳುವುದು ಬಿಡಲಿಲ್ಲ ಶಾಸ್ತ್ರಿಗಳ ಬಾಯಿ
ಸಾಯುವವರೆಗೂ ಪೂಜೆ ಮಾಡಿದೊಡೇನು
ಭಕ್ತರ ಬೋಳಿಸುವುದ ಬಿಡಲಿಲ್ಲ ಪೂಜಾರಿಯ ಕೈ

ಹೀಗೆ ಪುಜಾರಿಗಳ ಭಂಡತನ ಶ್ರೀ ಪುರಾಣಿಕರು ತಮ್ಮ ವಚನಗಳ ಅಂಗಳದಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸುತ್ತಾರೆ.

ತಿಪ್ಪೆರುದ್ರ ಪ್ರಭುವೆ ಎಂಬ ಅಂಕಿತ ನಾಮದಿಂದ ಡಾ.ಎಚ್. ತಿಪ್ಪೆರುದ್ರ ಸ್ವಾಮಿಯವರು

ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ
ಇದು ಸಾಮಾಜಿಕ ಒಳಿತಿನ ಶಾಂತಿ ಸೂತ,
ಶಿಕ್ಷಿಸುವ ಅಧಿಕಾರ ಪೀಠಗಳನ್ನು
ದುಷ್ಟರೆ, ಆಕ್ರಮಿಸಿ ಕುಳಿತ ದಿನಗಳಲ್ಲಿ
ಈ ಸೂತ್ರ ತಲೆ ಕೆಲಕಾಗುತ್ತಿದೆ
ಶಿಕ್ಷಿಸುವವರೇ ಭಕ್ತಿಸುವವರಾಗಿ
ಶಿಷ್ಟತೆಯೇ ಮೂರ್ಖತನವಾಗುತ್ತಿದೆ

ಎನ್ನುವಲ್ಲಿ ಡಾ. ಎಚ್. ತಿಪ್ಪೆರುದ್ರಸ್ವಾಮಿ ಸಮಾಜದ ಅಂತರಂಗವನ್ನು ಬಿಚ್ಚಿಟ್ಟಿದ್ದಾರೆ.

ಸಿದ್ದರಾಮ ಪೋಲಿಸ್ ಪಾಟೀಲರು ತ್ರಿಪದಿಯ ರೂಪದಲ್ಲಿ ವಚನಗಳು ಬರೆದಿದ್ದು

ಉದಾರೀಕರಣದಿಂ ಹದಗೆಟ್ಟ ಜನರ ಸ್ಥಿತಿ
ಉದರ ಘೋಷಣೆಯ ಸಣ್ಣ ಉದ್ದಿಮೆ ನಿಂತು
ಎದೆಯೊಡೆದು ಹೋಯ್ತು, ||ಸತ್ಯಜ್ಞ||

ಎಂಬುವಲ್ಲಿ ಉದಾರೀಕರಣದಿಂದ ಬಡವನು ಅನುಭವಿಸುತ್ತಿರುವ ಕಷ್ಟವನ್ನು ಕೆಲವೇ ಶಬ್ದಗಳಲ್ಲಿ ಸಣ್ಣ ಉದ್ದಿಮೆದಾರರ ಸ್ಥಿತಿ ವಿವರಿಸಿದ್ದಾರೆ.

ತ್ರಿಪದಿಗಳ ಧಾಟಿಯಲ್ಲಿಯೇ ವಚನಗಳನ್ನು ಬರೆದಿರುವ ಶ್ರೀ ದೇಶಾಂಶ ಹುಡುಗಿ

ಸುಳಿಗೇಡಿಂತ್ತೆ ಕಿಡಗೇಡಿ ಮಾವ
ಕುಂತುಂಬ ಗಂಡ ಈ ಮೂವರು ಹೆಣ್ಣಿಗೆ
ಕಡು ವೈರಿಗಳೆಂದ ದಿಗಂಬರ ಕರಿಬಸವೇಶ್ವರ

ಎಂದು ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಈ ವಚನ ರಚನೆ ಮಾಡಿದ್ದಾರೆ ವಚನಕಾರರು.

 

ಎಂ.ಜಿ.ದೇಶಪಾಂಡೆಯವರು ತಮ್ಮ ವಚನಗಳಲ್ಲಿ

ಕಾವಿ ಹಾಕಿಯೂ ಆಸೆ ಬಿಡಲಿಲ್ಲ
ಖಾಕಿ ಹಾಕಿಯೂ ಸ್ವಾರ್ಥ ಬಿಡಲಿಲ್ಲ
ಖಾದಿ ಹಾಕಿಯೂ ಅನೇಕ ಬಿಡಲಿಲ್ಲ
ಕಾವಿ, ಖಾಕಿ, ಖಾದಿಗಳೆಲ್ಲವೂ
ನಿನ್ನ ತನುವ ಸಿಂಗರಿಸಿದೆವು
ನಿನ್ನ ಮನಸ್ಸಿಗೇನು ಅಂಬರ
ಉಡಿಸಿದೆ! ಮಾಣಿಕ್ಯ ವಿಠಲ

ಎಂಬುವಲ್ಲಿ ಇವತ್ತಿನ ಸಮಾಜದಲ್ಲಿ ಕಾವಿ, ಖಾಕಿ, ಖಾದಿ ಧರಿಗಳಿಂದಲೇ ಈ ಸಮಾಜದಲ್ಲಿ ನಡೆಯಬಾರದ ಸಂಗತಿಗಳು ನಡೆಯುತ್ತಿರುವುದು, ಶೋಚನೀಯ! ಕಾಯಕ್ಕೆ ಅಂಬರ ತೊಡಗಿಸಿದರೆ ಸಾಲದು ಮನಸ್ಸಿಗೆ ಹದ್ದು ಬದ್ದಿನಲ್ಲಿಡಲು ಅಂಬರ ತೊಡಿಸು ಎಂದು ವಚನಕಾರರು ಇಲ್ಲಿ ಅರಹುತ್ತಾರೆ.

ಜರಗನ ಹಳ್ಳಿ ಶಿವಶಂಕರರು ನಂಜುಂಡನ ವಚನಗಳು

ಅನ್ನೋನ್ಯ ವಚನದಲ್ಲಿ

ಬೆಳಕು ನೀಡುವ ಬತ್ತಿಯ ಜೊತೆಗೆ
ಬೇವಿನ ಎಣ್ಣೆಯಾದರೇನು
ಗೋವಿನ ತುಪ್ಪವಾದರೇನು
ತಂದೆ ನಂಜುಂಡನ ನಾಮವ
ನೆನೆಯುವ ಶರಣರ ನಡುವೆ
ಯಾರಿದ್ದರೇನು ಎಂಥಿದ್ದರೇನು

ಹೀಗೆ ಶರಣರ ವಿಶಾಲತೆಯನ್ನು ವಚನಕಾರರು ಇಲ್ಲಿ ಬಿತ್ತರಿಸುತ್ತಾರೆ. ಪ್ರೊ. ಸೊಗಯ್ಯ ಹಿರೇಮಠರು

ಐಟಿ ಮತ್ತು ಬಿಟಿ ಮೇಳದಲ್ಲಿ
ರಾಟಿ ಮೂಲಿಗೆ ಸೇರಿತಯ್ಯಾ
ನೀರಾ ಇಳಿಸುವ ಚಳುವಳಿಯಲ್ಲಿ
ರೈತ ಮಸಣ ಸೇರಿದನಯ್ಯಾ

ಎನ್ನುವಲ್ಲಿ ಇವತ್ತಿನ ಐಟಿ ಬಿಟಿ ತಮ್ಮ ವಚನದಲ್ಲಿ ವಿಡಂಬನಾತ್ಮಕವಾಗಿ ಹಿಡಿದಿಟ್ಟಿದ್ದಾರೆ.

ಸಿ.ಪಿ.ಕೆ ರವರು ಕಾರಣಿಕ ಪ್ರಭು ವಚನಗಳು ಎಂಬ ಅಂಕಿತದಿಂದ

ನೀರಿನಲ್ಲಿ ಹುಟ್ಟಿದ ಪಾಚಿಯೆ ನೀರನ್ನು ಮರೆ ಮಾಡುವುದಯ್ಯ
ಕೆಂಡದಲ್ಲಿ ಹುಟ್ಟಿದ ಬೂದಿಯೇ ಕೆಂಡವನ್ನು ಮರೆ ಮಾಚುವುದಯ್ಯ

ಹೀಗೆ ಹೇಳುತ್ತ ಹೇಳುತ್ತ ವಚನಕಾರರು ಕೊನೆಗೆ ನಮ್ಮಲ್ಲಿ ಹುಟ್ಟಿದಂತಹ ಅಹಂಕಾರ ಮಮಕಾರಗಳೇ ನಮ್ಮ ಆತ್ಮವನ್ನೆ ಮರೆಮಾಚುವುದಯ್ಯಾ ಕಾರಣಿಕ ಪ್ರಭುವೆ ಎಂದು ತುಂಬ ಸುಂದರವಾಗಿ ತನುವಿಗೆ ಹೋಲಿಸಿ ಬರೆದಿದ್ದಾರೆ.

ಎಲ್ಲೇ ಗೌಡ ಬೆಸಗರಹಳ್ಳಿಯವರು ಎಲ್ಲೇಶಪ್ರಭು ಅಂಕಿತದಿಂದ ವಚನಗಳನ್ನು ಬರೆದು

ಬಸವಣ್ಣ ನಮ್ಮ ಜಾತಿವನಯ್ಯಾ
ಬಸವಣ್ಣ ನಿಮ್ಮ ಜಾತಿವನಯ್ಯ
ಬಸವಣ್ಣ ಎಲ್ಲರ ಜಾತಿಯಯ್ಯ ಎಲ್ಲೇಶಪ್ರಭು

ಹೀಗೆ ಬಸವಣ್ಣನ ಚಿಂತನೆಯನ್ನು ಗೌಡರವರು ಮಾಡಿದ್ದಾರೆ.

ಹಂಶಕವಿ ದತ್ತದಿಗಂಬರ ಅಂಕಿತನಾಮದಲ್ಲಿ ಸುಂದರ ಆಧುನಿಕ ವಚನಗಳ ಬರೆದಿದ್ದಾರೆ.

ಸತಿಗೆ ಪತಿಯರಿತು ಪತಿಗೆ ಸತಿಯರಿತು
ಸಂಸಾರ ದಾರಿಯಲ್ಲಿ ನೋವಿನಲಿ ನಲಿವಿನಲಿ
ಒಂದಾಗಿ ಬಾಳಿದರೆ ಆ ಮನೆಯೇ ಸ್ವರ್ಗವು
ಶಾಂತಿ ನೆಮ್ಮದಿ ನೋಡಾ ಎನ್ನ ದತ್ತದಿಗಂಬರಾ

ಎಂದು ಸಂಸಾರ ಸುಖದ ಗೂಡಾರ್ಥ ಈ ವಚನದಲ್ಲಿ ವಚನಕಾರರು ವಿಶದ ಪಡಿಸುತ್ತಾರೆ.

ಬಾಯಲ್ಲಿ ಬೆಣ್ಣೆ, ಕೈಯಲ್ಲಿ ದೊಣ್ಣೆ
ನುಡಿಯುವದೊಂದು ನಡೆಯುವದೊಂದು

ಎಂಬು ವಚನ ಡಾ.ಸಂಗಮೇಶ ಹಂಡಗಿ ಗೋಮುಖವ್ಯಾಘ್ರರ ಅಂತರಂಗ ಬಿತ್ತರಿಸುತ್ತಾರೆ.

ಹೀಗೆ ಒಟ್ಟಿನಲ್ಲಿ ಇಂದಿನ ದಿನಮಾನಗಳಲ್ಲಿ ಆಧುನಿಕತೆ ಬೆಳೆದ ಹಾಗೇ ಆಧುನಿಕ ವಚನಗಳು ಸಹ ವಿಧವಿಧವಾಗಿ ಚಾಚಿಕೊಂಡು ಅರಳುತ್ತಿವೆ. ಬುದ್ಧಿ ಜೀವಿಗಳು ಸಮಾಜದ ಅನೇಕ ವಿಚಾರಗಳನ್ನು ತಮ್ಮ ವಚನಗಳಲ್ಲಿ ಹಿಡಿದಿಟ್ಟು ವೈಚಾರಿಕ ಪ್ರಜ್ಞೆ ಮೂಡಿಸಿದ್ದಾರೆ. ಆದರೆ ಒಂದು ಕೊರಗು ಕಾಡುತ್ತಿದೆ. ಅಂದಿನ ಶರಣರು ವಚನಕಾರರ ಅಂತರಂಗ-ಬಹಿರಂಗ ಒಂದಾಗಿ ವಚನ ಬರೆದರು. ಈಗಲೂ ವಚನಕಾರರು ಅಂತಹ ದಾರಿಯಲ್ಲಿ ಸಾಗಿದರೆ ಈ ಆಧುನಿಕ ವಚನಗಳಿಗೆ ಇನ್ನಷ್ಟು ಮೌಲಿಕತೆ ಬರಲು ಸಾಧ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊಳದೆಡೆಯ ಇರುಳು
Next post ಉಮರನ ಒಸಗೆ – ೧೪

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

cheap jordans|wholesale air max|wholesale jordans|wholesale jewelry|wholesale jerseys