ಜರ್ಮನಿಯ ರೈತ

ಇಂಡಿಯಾದ ಭೂಪಟದಲ್ಲಿ ದುರ್ಬೀನು ಹಾಕಿಕೊಂಡು ಹುಡುಕಿದರೂ ಕಾಣದಿರುವ ಕಟ್ಟಿಗೇನಹಳ್ಳಿ ಗ್ರಾಮಕ್ಕೆ ಎಪ್ಪತ್ತರ ದಶಕದಲ್ಲಿ ಇವನು ಬಂದು ತಳ ಊರಿದ. ನೀರಿನಂತೆ ಜನರ ರಕ್ತ ಹೀರಿದ ಹಿಟ್ಲರ್ ನೆಲದಿಂದ ಬಂದವನಾದರೂ ಇವನು ಗಾಂಧಿಯ ನೆರಳಿನಲ್ಲಿದ್ದ. ಏಳು ಅಡಿಗಿಂತ ಎತ್ತರವಿದ್ದ ಇವನು ಸೇಬಿನ ಬಣ್ಣ ಹೊಂದಿದ್ದ. ಇವನು ಪ್ಯಾಂಟ್ ಹಾಕಿದ್ದನ್ನು ನಾನು ನೋಡಲೇಯಿಲ್ಲ. ಬಣ್ಣಬಣ್ಣದ ಚೆಡ್ಡಿಗಳನ್ನು ಧರಿಸುತ್ತಿದ್ದ, ನಮ್ಮಂತೆ ಮಾಮೂಲಿ ಅಂಗಿ ತೊಡುತ್ತಿದ್ದ. ಕಟ್ಟಿಗೇನಹಳ್ಳಿಯ ತಿಗಳನೊಬ್ಬನಿಂದ ತೋಟ ಖರೀದಿಸಿದ. ಯಲಹಂಕದಿಂದ ಕೇವಲ ಮೂರು ಮೈಲು ದೂರದಲ್ಲಿರುವ ಬಾಗಲೂರು ಕ್ರಾಸ್‌ನಿಂದ ಬಲಕ್ಕೆ ತಿರುಗಿಕೊಂಡು, ಅಲ್ಲಿಂದ ಮೂರು ಮೈಲು ಮುಂದೆ ಸಾಗಿದರೆ ಬಲಕ್ಕೆ ಕಟ್ಟಿಗೇನಹಳ್ಳಿ ಸಿಗುವುದು. ಆ ಗ್ರಾಮದಲ್ಲಿ ಹೇರಳವಾಗಿ ತಿಗಳರೇ ವಾಸಿಸುವುದು, ಅವರನ್ನು ಹೊರತುಪಡಿಸಿದರೆ ದಲಿತರು. ತಮಟೆ ಕಟ್ಟಿಕೊಂಡೋ ಚಪ್ಪಲಿ ಹೊಲೆದುಕೊಂಡು ಇವರು ಜೀವನ ತೂಗಿಸುವರು. ತಿಗಳರು ಕೃಷಿ ಮತ್ತು ಬೇಟೆಯಲ್ಲಿ ಪರಿಣಿತರು. ಒಂದು ಏಡಿಗಾಗಿ ಏಳು ಕೆರೆಗಳ ಕಟ್ಟೆಗಳನ್ನು ಒಡೆದರೆಂದು ನಮ್ಮಲ್ಲಿ ಹೇಳುತ್ತಾರೆ.

ಸಮುದ್ರ ದಂಡೆಯಲ್ಲಿ ತೆಂಗಿನಮರಗಳು ಇರುವಂತೆ, ಹೆದ್ದಾರಿ ತುದಿಗೆ ನನ್ನ ವೆಂಕಟಾಲ ಗ್ರಾಮ ಕಚ್ಚಿಕೊಂಡಿದೆ. ಹಾಗಾಗಿ ಹೆದ್ದಾರಿ ಬದುಕು ನನಗೆ ಅತ್ಯಂತ ಪರಿಚಿತ ಮತ್ತು ಆಪ್ತ. ನನ್ನ ಮನೆಗೆ ಬಾಗಿಲು ಇರಲಿಲ್ಲವಾದ್ದರಿಂದ ಹೆದ್ದಾರಿಯಲ್ಲಿ ಘಟಿಸುವ ಘಟನೆಗಳು, ಸಾಗಿಹೋಗುವ ವಾಹನಗೆಳೆಲ್ಲವೂ ಕಾಣುತ್ತಿದ್ದವು. ಬೆಳಿಗ್ಗೆ ಐದು ಗಂಟೆಗೆ ರಾಯಲ್ ಎನ್‌ಫೀಲ್ಡ್‌ಗಳು ಕಿವಿ ಮೊರೆಯುತ್ತಿದ್ದವು. ಒಂದೋ ಎರಡೋ ಆದರೆ ಸರಿ, ನೂರರಿಂದ ಐನೂರು ಎನ್‌ಫೀಲ್ಡ್‌ಗಳು ಸರಿದುಹೋಗುತ್ತಿದ್ದವು. ನನ್ನ ಗ್ರಾಮದಿಂದ ಮೂನಾಲ್ಕು ಮೈಲುಗಳ ದೂರದಲ್ಲಿ ಗಡಿಭದ್ರತಾ ಪಡೆ ಇರುವುದರಿಂದ ಸೈನಿಕರು ಎನ್‌ಫೀಲ್ಡ್ ಮತ್ತು ವಿಲ್ಲೀಸ್ ಜೀಪುಗಳನ್ನು ಓಡಿಸಿಕೊಂಡು ಬರುತ್ತಿದ್ದರು. ತರಬೇತಿಯಲ್ಲಿರುತ್ತಿದ್ದ ಅವರು ಭಯಭೀತಿಯಿಂದ ನಡುಗುತ್ತಾ ಉಚ್ಚೆ ಹೊಯ್ದುಕೊಳ್ಳುತ್ತಿದ್ದರು. ತರಬೇತಿ ಹೇಗೆಂದರೆ, ಅಕ್ಷರಶಃ ಅವರ ಪಾಲಿಗೆ ನರಕವೇ. ಕಾಡಿನಂತೆ ಬೆಳೆದ ಸಾಲುಹುಣಸೆಮರಗಳ ನಡುವೆ ಒಂದೇ ವೇಗದಲ್ಲಿ ಎನ್‌ಫೀಲ್ಡ್‌ಗಳು ಸರಿದುಹೋಗುತ್ತಿದ್ದವು. ಆವೊತ್ತು ಪಾಪದ ಸೈನಿಕನೊಬ್ಬ ವೇಗದಲ್ಲಿ ವ್ಯತ್ಯಾಸ ಮಾಡಿದ. ನನ್ನ ಅಣ್ಣ ಎರಡು ಕಂಬಳಿಗಿಡಗಳನ್ನು ಬಳಸಿಕೊಂಡು ದೊಣ್ಣೆಗಳಿಂದ ಸುಖದ ಹಾಸಿಗೆ ಮಾಡಿದ್ದ. ಅದರ ಮೇಲೆ ಮಲಗಿಕೊಂಡು ನೋಡುತ್ತಿದ್ದೆ. ಆ ಸೈನಿಕನ ಹಿಂದೆ ಕುಳಿತಿದ್ದ ತರಬೇತುದಾರ ಏಕಾ‌ಏಕಿ ಹಿಂದಿಯಲ್ಲಿ ಗದರುತ್ತಾ ಅವನನ್ನು ಕೆಡವಿಕೊಂಡ. ಎನ್‌ಫೀಲ್ಡ್ ಹುಣಸೆಮರಕ್ಕೆ ಗುದ್ದಿಕೊಂಡಿತು. ನೆಲದಲ್ಲಿ ಬಿದ್ದ ಸೈನಿಕ ಹಿಂದುಹಿಂದಕ್ಕೆ ತೆವಳಿಕೊಳ್ಳುತ್ತಿದ್ದ. ತರಬೇತುದಾರನ ಬೂಟುಗಳು ಕಬ್ಬಿಣದ ಅಟ್ಟೆಯವು, ನೆಲದಲ್ಲಿ ಬಿದ್ದು ಹಾವಿನಂತೆ ಜಾರಿಕೊಳ್ಳಲೆತ್ನಿಸುತ್ತಿದ್ದ ಸೈನಿಕನ ಮೊಣಕಾಲುಗಳಿಗೆ ಬಲವಾಗಿ ಒದೆಯತೊಡಗಿದ. ನೋವಿನಿಂದ ಸೈನಿಕ ಚೀರಿದಷ್ಟೂ ಒದೆಗಳು ಜಡಿಮಳೆಯಂತೆ ಅವನ ಮೇಲೆ ಬೀಳುತ್ತಿತ್ತು. ಮೊಣಕಾಲಿನ ಬಳಿ ಕಬ್ಬಿಣದ ರೇಖಿನಂಥ ಪ್ಯಾಂಟ್ ಕಿತ್ತುಕೊಂಡು ದೊಳದೊಳನೆ ರಕ್ತ ಸುರಿಯತೊಡಗಿತು. ಆ ಸೈನಿಕನ ‘ಅಕ್ಕತಂಗಿ’ಯರನ್ನು ತನ್ನ ಅಶ್ಲೀಲ ಬೈಗುಳಕ್ಕೆ ಎಳೆದುಕೊಂಡು ಬೈಯುತ್ತಲೇ ಇದ್ದ.

ಇಂಥಾ ನರಕಸದೃಶ ಚಿತ್ರದೊಳಗೆ ಜರ್ಮನಿಯ ರೈತ ಅತ್ಯುತ್ತಮ ಕಲಾಕೃತಿಯಂತೆ ಕಂಡ; ಕಾರ್ಮೋಡದಲ್ಲಿ ಬೆಳ್ಳಕ್ಕಿ ಮೂಡಿದಂತೆ. ಕೆಂಪುಬಣ್ಣದ ರಾಯಲ್ ಎನ್‌ಪೀಲ್ಡ್ ಮೇಲೆ ಬರುತ್ತಿದ್ದ, ಬೀಜದ ಹೋರಿಯನ್ನು ನಿರ್ವಹಿಸಿದಂತೆ. ಹಲ್ಲುಗಳ ಮಧ್ಯೆ ಹಂಚಿಕಡ್ಡಿ ಇರುತ್ತಿತ್ತು. ಎನ್‌ಫೀಲ್ಡ್‌ಅನ್ನು ರಾಕೆಟ್‌ನಂತೆ ಓಡಿಸುತ್ತಿದ್ದ. ಮೋಟಾರ್‌ಸೈಕಲ್ ಬರುವ ಸದ್ದಾಗುತ್ತಿದ್ದಂತೆ ನಾನು ಆಚೆ ಓಡಿಬರುತ್ತಿದ್ದೆ, ಕ್ಷಣಾರ್ಧದಲ್ಲಿ ಅವನು ದೊಡ್ಡಮೋರಿ ಇಳಿಜಾರಿನಲ್ಲಿ ಕರಗಿಬಿಡುತ್ತಿದ್ದ. ಫುಕುವೋಕಾನ ಸಹಜಕೃಷಿ ಮಾದರಿಯನ್ನು ಬಹುವಾಗಿ ಮೆಚ್ಚುತ್ತಿದ್ದ ಇವನು ತೋಟ ಅಭಿವೃದ್ಧಿಪಡಿಸುವಲ್ಲಿ ಜೀವ ತೇಯುತ್ತಿದ್ದ. ಅದರೊಂದಿಗೆ ಆಧುನಿಕ ಕೃಷಿಯೆಡೆಗೂ ಪ್ರಯೋಗ ಕೈಗೊಳ್ಳುತ್ತಿದ್ದ. ಪ್ರತಿ ಭಾನುವಾರ ಸಂಜೆ ನಾನು ನನ್ನ ಅಣ್ಣ ಮತ್ತು ಅಮ್ಮನೊಂದಿಗೆ ಸಂತೆಗೆ ಹೋಗುತ್ತಿದ್ದೆ. ಬಿಡಿಗಾಸಿನಲ್ಲಿ ಅಮ್ಮ ತರಕಾರಿ ಕೊಳ್ಳುವಲ್ಲಿ ಹೆಣಗುತ್ತಿದ್ದರೆ, ನಾವಿಬ್ಬರೂ ಆಟದ ಸಾಮಾನುಗಳನ್ನೇ ಆಸೆಯಿಂದ ದಿಟ್ಟಿಸುತ್ತಿದ್ದೆವು. ನಮ್ಮಿಂದ ಕೆಲದೂರದಲ್ಲಿ ಜೋರು ವ್ಯಾಪಾರ ವಹಿವಾಟಿನ ಗದ್ದಲ ಕೇಳಿಬರತೊಡಗಿತು. ನಾಟಿಕೋಳಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ ನನಗೆ ಕಂಡಿದ್ದು ಅಷ್ಟುಜನರಲ್ಲಿ, ಆ ವ್ಯಾಪಾರ ಭರಾಟೆಯಲ್ಲಿ ಆಕಾಶವನ್ನು ತಿವಿಯುವಂತಿದ್ದ ಎತ್ತರದ ಜರ್ಮನಿಯ ಆ ರೈತ. ಹಂಚಿಕಡ್ಡಿಯನ್ನು ಬಾಯಿಯಲ್ಲಿ ಅತ್ತಿಂದಿತ್ತ ಆಡಿಸುತ್ತಾ ನಾಟಿಕೋಳಿಗಳನ್ನು ಪರೀಕ್ಷಿಸುತ್ತಿದ್ದ. ಇಂಡಿಯಾದ ಎಂದಿನ ಚೌಕಾಶಿ, ಕ್ಷುಲ್ಲಕ ಮಾತುಗಾರಿಕೆಯನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಂಡಿದ್ದ. ವಿದೇಶದವನೆಂದು ನಾಟಿಕೋಳಿ ವ್ಯಾಪಾರಸ್ಥ ದುರಾಸೆಯ ಬೆಲೆ ಒಡ್ಡಿದರೂ ಪ್ರಯೋಜನ ಕಾಣಲಿಲ್ಲ. ಈ ನೆಲದ ಬೆಲೆಗೆ ಇಳಿದು ಹತ್ತಾರು ನಾಟಿಕೋಳಿಗಳನ್ನು ಕೊಂಡು ಎನ್‌ಫೀಲ್ಡ್ ಮೇಲೆ ಹೊತ್ತು ಹಾಕಿಕೊಂಡು ಭರ್ರನೆ ನುಗ್ಗಿದ. ಆನಂತರ ಅವನೇ ಪೌಲ್ಟ್ರಿ ಫಾರಂ ಆರಂಭಿಸಿದ.

ಎಂದಿನಂತೆ ಹರಿದ ಸ್ಕೂಲು ಯೂನಿಫಾರಮ್ಮನ್ನು ಹೊಲೆದುಕೊಂಡು ಯಲಹಂಕದ ಹೈಸ್ಕೂಲಿಗೆ ನಾನು ಮತ್ತು ಅಣ್ಣ ಹೊರಟೆವು. ಹತ್ತು ಗಂಟೆಗೆ ರೈಲ್ವೆಗೇಟು ಬಿತ್ತು. ರೈಲು ಹಾದು, ಗೇಟು ಮೇಲೇಳುವವರೆಗೂ ನಾವು ಅಲ್ಲೇ ನಿಂತಿರುತ್ತಿದ್ದೆವು. ಎರಡೂ ಬದಿಯಲ್ಲಿ ಎತ್ತಿನಬಂಡಿಗಳು, ಬಸ್ಸು, ಮೋಟಾರ್‌ಸೈಕಲ್, ಸೈಕಲ್ಲುಗಳು ನೆರೆದಿದ್ದವು. ರೈಲು ಹೊರಟು, ಗೇಟು ತೆರೆಯುತ್ತಿದ್ದಂತೆ ಮುನ್ನುಗ್ಗಿ ಹೋಗಲು ಹಾತೊರೆಯುತ್ತಿದ್ದವು. ಸನಿಹದಲ್ಲೇ ಇರಬೇಕು, ರೈಲು ಕೂಗುವ ಸದ್ದು ಕೇಳಿಸಿತು. ಜರ್ಮನಿಯ ರೈತ ಬಹಳ ಹಿಂದೆ ಇದ್ದನೆಂದು ಕಾಣುತ್ತದೆ. ಭೂಗೋಳವನ್ನು ಎತ್ತಿ ಹಿಡಿದುಕೊಂಡಂತೆ ಸೈಕಲ್‌ಅನ್ನು ತಲೆ ಮೇಲಿಟ್ಟುಕೊಂಡು ಜನರು, ವಾಹನಗಳ ಮಧ್ಯೆ ನಡೆದು ಗೇಟು ದಾಟಿಕೊಂಡು, ಸೈಕಲ್‌ಅನ್ನು ಕೆಳಗೆ ಇಟ್ಟು, ಹತ್ತಿಕೊಂಡು ಮುಂದಕ್ಕೆ ಹೊರಟ ದೈತ್ಯ. ಇವನಿಗಿಂತ ಎತ್ತರದ, ದೃಢಕಾಯರು ತಲ್ಲಣಿಸಿಹೋದರು. ದಾರಿಯಿದ್ದರೂ ಮುಂದೆ ಸಾಗದ ಹಿಂಜರಿಕೆಯ, ಡೋಲಾಯಮಾನದ ಜನ ಅವನ ಎದೆಗಾರಿಕೆಗೆ ನಡುಗಿದರು.

ವೆಂಕಟಾಲದ ಬಸ್‌ನಿಲ್ದಾಣದಲ್ಲಿ ಗೋಣಿಮರದ ನೆರಳಿನಲ್ಲಿ ಮಾರಮ್ಮನ ದೇವಸ್ಥಾನವಿತ್ತು. ಪ್ರತಿ ಮಂಗಳವಾರ, ಗುರುವಾರ ಮತ್ತು ಶುಕ್ರವಾರ ಪೂಜೆ. ಹುಸಿನುಡಿಯುವವನು ಬೆಸ್ತರ ಜನಾಂಗದ ಪೂಜಾರಿ. ಮಲಯಾಳಿಗಳು, ಮುಸ್ಲಿಮರು ಮತ್ತು ಕೊಡವರು ಇವನನ್ನು ಅರಸಿಕೊಂಡು ಬರುತ್ತಿದ್ದವರು. ಏರ್‌ಫೋರ್ಸ್‌ನಲ್ಲಿ ಪಿಯುಸಿ ಓದುತ್ತಿದ್ದ ಜೀವನೇಶನ್ ಗೆಳೆಯರೊಂದಿಗೆ ಪೂಜಾರಿ ಹತ್ತಿರ ತನ್ನ ಫಲಿತಾಂಶ ಕೇಳಲು ಬಂದ. ‘ಹೋಗು ಮಗ್ನೆ, ನೀನು ಫಸ್ಟ್‌ಕ್ಲಾಸ್ನಲ್ಲಿ ಪಾಸಾಗ್ತೀಯ’ ಭವಿಷ್ಯ ನುಡಿದ. ಜೀವನೇಶನ್ ಪಿಯುಸಿಯಲ್ಲಿ ಅತ್ಯಂತ ಕೆಳದರ್ಜೆಯಲ್ಲಿ ಅನುತ್ತೀರ್ಣನಾಗಿ ವಾರವೇ ಕಳೆದಿತ್ತು. ಹಾಗಾಗಿ ಗ್ರಾಮದವಯಾರೂ ಕೂಡ ಅವನ ಬಳಿ ಸುಳಿಯುತ್ತಿರಲಿಲ್ಲ. ನಾನು ಗೆಳೆಯರೊಂದಿಗೆ ಗೋಣಿಮರದ ಬುಡದಲ್ಲಿ ನಿಂತುಕೊಂಡು ಈ ಹುಸಿಪೂಜಾರಿಯ ಅವತಾರಗಳನ್ನು ಗಮನಿಸುತ್ತಿದ್ದೆ. ಬದುಕಿನ ಸಂಕಷ್ಟದಲ್ಲಿ ನೊಂದಹೆಣ್ಣು ಅವನ ಮುಂದೆ ನಿಂತು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಳು. ದೇವರು ಬಂದಂತೆ ನಾಟಕವಾಡಿ ನೆಲದಲ್ಲಿ ಬಿದ್ದು, ‘ತಾಯೇ…’ ಎಂದು ಹೊರಳಾಡುತ್ತಿದ್ದ. ತನ್ನ ಸುತ್ತಲೂ ಕೆಂಪುಬಣ್ಣದ್ದೋ, ಅರಿಶಿಣವರ್ಣದ ಸೀರೆಯನ್ನೋ ಕಟ್ಟಿಕೊಳ್ಳುತ್ತಿದ್ದ. ಆ ಮರೆಯಲ್ಲೇ ದೇವರನ್ನು ಆವಾಹಿಸಿಕೊಳ್ಳುವುದು ಮಾಡುತ್ತಿದ್ದ. ‘ನನ್ನ ಸವತಿ, ಆ ಮೂಲೆಗ್ಯಾಕೆ ನಿಂತಿದ್ದೀಯ, ಮುಂದೆ ಬಾರೆ’ ಎಂದು ಹೆಣ್ಣಿನ ದನಿಯಲ್ಲಿ ಕರೆಯುತ್ತಿದ್ದ. ಅವಳು ಓಡಿಬಂದವಳೇ ಕೈಮುಗಿಯುತ್ತಾ ಉದ್ದಕ್ಕೆ ಮಲಗಿಕೊಳ್ಳುತ್ತಿದ್ದಳು. ಪೂಜಾರಿ ಎದ್ದು ನಿಂತು ಅವಳ ಅಂಕುಡೊಂಕಿನ ದೇಹದ ಭಾಗಗಳನ್ನು ತುಳಿದು ನೀರು ಮಾಡುತ್ತಿದ್ದ. ನಂತರ ನಿಂಬೆಹಣ್ಣುಗಳನ್ನು ನೀಡಿ, ‘ತಗಳೇ, ಈ ನಿಂಬೆಕಾಯಿಗಳನ್ನ. ಮೂರು ದಾರಿ ಕೂಡ ಕಡೆ ತುಳಿಯೇ, ಪೀಡೆ ತೊಲಗ್ತದೆ’ ಚೀರುತ್ತಿದ್ದ. ಜರ್ಮನಿಯ ರೈತ ಎನ್‌ಫೀಲ್ಡ್‌ನಲ್ಲಿ ಬಂದು ಮಾರಮ್ಮನ ಗುಡಿಯ ಮುಂದೆ ನಿಂತ. ಇವನು ಹುಸಿ ಪೂಜಾರಿಯ ಬೂಟಾಟಿಕೆಯನ್ನು ಖಂಡಿಸುವನೆಂದು ಎಣಿಸಿದ್ದು ತಪ್ಪಾಯಿತು. ಈ ಪೂಜಾರಿಯೋ ಇವನನ್ನು ಕಂಡಿದ್ದೇ ಎದ್ದು ಕುಣಿದಾಡಿದ. ರೈತ ಎದೆಗುಂದಲಿಲ್ಲ, ಬಲಿಗಂಬದ ಮೇಲೆ ನೀರಿನಂತೆ ಸುರಿದಿದ್ದ ಕುಂಕುಮವನ್ನು ತನ್ನ ಹಣೆಗೆ ಇಟ್ಟುಕೊಂಡು, ಮಾರಮ್ಮನಿಗೆ ಕೈಮುಗಿದು ಎನ್‌ಫೀಲ್ಡ್ ಹತ್ತಿದ. ಜರ್ಮನಿಯ ರೈತ ಈ ನಾಡಿನ ದೇವರನ್ನು ಗೌರವಿಸುತ್ತಿದ್ದ ಬಗೆ ನನ್ನಲ್ಲಿ ಇವೊತ್ತಿಗೂ ನಿಗೂಢವಾಗಿ ಉಳಿದಿದೆಯಾದರೂ ಅವನು ನೆಲದೊಂದಿಗೆ ತನ್ನ ದೇಹವನ್ನು ಹೆಣೆದುಕೊಂಡಿದ್ದ.

ಕಟ್ಟಿಗೇನಹಳ್ಳಿಯ ತಿಗಳ ಹೆಂಗಸರೆಲ್ಲರೂ ಜರ್ಮನಿಯ ರೈತನ ದೇಹದಾಕಾರಕ್ಕೆ ಕಂಗೆಟ್ಟುಹೋಗಿದ್ದರು. ಅವನು ತನ್ನ ಹಲ್ಲುಗಳ ನಡುವೆ ಹಂಚಿಕಡ್ಡಿ ತೂರಿಸಿಕೊಂಡರೆ ಇವರೊಳಗೆ ವಿಚಿತ್ರ ನರಕ ಯಾತನೆಯ ಸುಖ ಹೊಮ್ಮುತ್ತಿತ್ತು. ಕುಕ್ಕರುಗಾಲಿನಲ್ಲಿ ಕುಳಿತು ಕಳೆ ಕೀಳುವಾಗಲಂತೂ ಅವನ ಆ ಅವಸ್ಥೆ ನೋಡಿ ಮುಸಿಮುಸಿ ನಗುತ್ತಿದ್ದರು. ಇವನ ಕೋಣೆಯ ಹತ್ತಿರ ಒಬ್ಬೊಬ್ಬರೆ ಹೋಗಿ ಬರಿಮೈನಲ್ಲಿ ಹಿಂತಿರುಗುತ್ತಿದ್ದ ಉದಾಹರಣೆಗಳಿಲ್ಲ. ಬಾಗಲೂರು ಜಾತ್ರೆಗೆ ತನ್ನ ಟಿಲ್ಲರ್‌ನಲ್ಲೇ ತೋಟದಲ್ಲಿ ದುಡಿಯುವ ಕೂಲಿಯಾಳುಗಳನ್ನು ಕರೆದುಕೊಂಡು ಹೋಗುತ್ತಿದ್ದ. ಆ ಗುಂಪಿನಲ್ಲಿದ್ದ ಅರ್ಧದಷ್ಟು ಹೆಂಗಸರು ಇವನೊಂದಿಗೆ ಮಲಗೆದ್ದವರೇ ಆಗಿರುತ್ತಿದ್ದರು. ಅವರಿಗೆ ಮಡಕೆ, ಕಡಲೆಪುರಿ, ಬೆಂಡುಬತ್ತಾಸು, ಸೌಟು ಕೊಡಿಸುತ್ತಿದ್ದ. ಹುಲಿವೇಷದ ಕುಣಿತದಲ್ಲಿ ಇವನು ಹೆಜ್ಜೆ ಕಿತ್ತಿಡುವಾಗಿನ ಮೋಜು ಕಂಡು ಜನ ನಿಬ್ಬೆರಗಾಗುತ್ತಿದ್ದರು. ಆಟಿಕೆಯ ತುತ್ತೂರಿ ಕೊಂಡು, ಬರುವಾಗ ಊದಿಕೊಂಡು ಸಂಭ್ರಮಿಸುತ್ತಿದ್ದ. ಗ್ರಾಮದಲ್ಲಿ ಯಾರಾದರೂ ತೀರಿಕೊಂಡರೆ ಮಣ್ಣಿನ ಕಾರ್ಯಕ್ಕೆ ಹಣ ನೀಡಿ, ಸಂತಾಪ ವ್ಯಕ್ತಪಡಿಸುತ್ತಿದ್ದ. ಮದುವೆ ಸಮಾರಂಭ ಇನ್ನಿತರ ಕಾರ್ಯಕ್ರಮಗಳಿಗೆ ಹೋಗುವಾಗಲೂ ಚೆಡ್ಡಿಯಲ್ಲೇ ಹೋಗುತ್ತಿದ್ದೆ, ಅವನ ಅಂಗಿಯ ಮೇಲೆ ಮಣ್ಣಿನ ಕಲೆಗಳಿರುತ್ತಿದ್ದವು.

ಇವನ ತೋಟದಲ್ಲಿ ಸಪೋಟ, ಸೀಬೆ, ಹಲಸು, ಮಾವು, ತೆಂಗು ಹುಲುಸಾಗಿ ಮೈನೆರೆದು ನಿಂತಿತ್ತು. ತೋಟದ ಮನೆಯ ಹಿತ್ತಿಲಿನಲ್ಲಿ ಒಂದು ಎಕರೆ ಭತ್ತ ನಾಟಿ ಮಾಡಿದ್ದ. ಜರ್ಮನಿಯಿಂದ ಮೋಟುಕುರಿಯೊಂದನ್ನು ತರಿಸಿ ತಳಿ ಮಾಡಿದ್ದ. ವಾರಕ್ಕೊಮ್ಮೆ ಬೆಳೆದ ತರಕಾರಿಗಳನ್ನು ಟಿಲ್ಲರ್‌ನಲ್ಲಿ ತುಂಬಿಕೊಂಡು ಯಲಹಂಕದ ಸಂತೆಗೆ ಮಾರಲು ಬರುತ್ತಿದ್ದ. ಟಿಲ್ಲರ್ ಬಸ್‌ಸ್ಟ್ಯಾಂಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ನಾವು ಹುಡುಗರೆಲ್ಲರೂ ಅವನೆಡೆಗೆ ಓಡುತ್ತಿದ್ದೆವು. ಹಂಚಿಕಡ್ಡಿಯನ್ನು ಅತ್ತಿಂದಿತ್ತ ಆಡಿಸುತ್ತಾ ನಮ್ಮ ಕಡೆ ನೋಡಿ ನಗುತ್ತಿದ್ದ. ಟಿಲ್ಲರ್‌ಅನ್ನು ನಿಧಾನಕ್ಕೆ ಓಡಿಸುತ್ತಿದ್ದದ್ದರಿಂದ ನಮ್ಮ ಕೈ ಕುಲುಕುತ್ತಿದ್ದ, ನಾವು ದೇವಮಾನವನನ್ನು ಸ್ಪರ್ಶಿಸಿದಂತೆ ಆ ದಿನ ಕಳೆಯುತ್ತಿದ್ದೆವು.

ನಾನು ‘ರಾಯಲ್ ಎನ್‌ಫೀಲ್ಡ್’ ಕಾದಂಬರಿ ಬರೆಯಲು ಪ್ರೇರಣೆ ಈ ಜರ್ಮನಿಯ ರೈತ ಮತ್ತು ಇಬ್ಬರು ಮಿಲಿಟರಿ ಅಧಿಕಾರಿಗಳು. ಈ ನೆಪದಲ್ಲಿ ಇವನ ನೆನಪುಗಳನ್ನು ಹೆಕ್ಕಿ ತೆಗೆಯಲು ಸಾಧ್ಯವಾಯಿತು. ಅವನನ್ನು ನಾನು ಮರೆತುಹೋಗಿದ್ದೆ, ಮೃತನಾಗಿದ್ದಾನೋ ಜರ್ಮನಿಗೆ ಹಿಂತಿರುಗಿದ್ದಾನೋ ಎನ್ನುವುದು ಕೂಡ ನನಗೆ ಗೊತ್ತಿರಲಿಲ್ಲ. ಖಲೀಲ ಕೊಟ್ಟ ಮಾಹಿತಿಯಂತೆ ಅವನು ತೀರಿಕೊಂಡಿದ್ದಾನೆ ಎಂಬುದು ತಿಳಿದುಬಂತು. ನಾನು ಅವನನ್ನು ಹೆಣವಾಗಿ ಸಂಭೋದಿಸಲಾರೆ, ಇಂಡಿಯಾದ ಮಣ್ಣಲ್ಲಿ ಮಣ್ಣಾಗಿಹೋದನೋ ಅಥವಾ ತನ್ನ ತಾಯ್ನಾಡು ಜರ್ಮನಿಗೆ ಮರಳಿದನೋ ತಿಳಿದುಬರಲಿಲ್ಲ. ಆಯಾ ನೆಲದಲ್ಲಿ ಹೇಗೆ ಪ್ರಾಮಾಣಿಕವಾಗಿ ಜೀವಿಸಬೇಕೆಂಬುದನ್ನು ಅವನು ಸರಿಯಾಗಿ ಅರಿತುಕೊಂಡಿದ್ದ. ಅವನು ಈ ನೆಲದಲ್ಲಿ ಇಟ್ಟ ಹೆಜ್ಜೆಗಳು ಇವೊತ್ತಿಗೂ ಜೀವಂತವಾಗಿಯೇನೋ ಎಂದೆನಿಸಿದಾಗ ರೋಮಾಂಚನವಾಗುತ್ತದೆ, ಕಣ್ಣು ಒದ್ದೆಯಾಗುತ್ತದೆ. ಅವನಿಗೆ ಅಂದು ತಂಗಾಳಿಯನ್ನೋ, ಬಿರುಗಾಳಿಯನ್ನೋ ಬೀಸಿದ ಮರಗಳು ಇಂದಿಗೂ ಅಲ್ಲಲ್ಲಿ ಉಳಿದುಕೊಂಡಿವೆ.

ಗಾಂಧಿ ಮತ್ತು ಫುಕುವೋಕಾನನ್ನು ನೋಡಲಿಲ್ಲ ಎನ್ನುವ ಹತಾಶೆ, ಕೊರಗು ನನ್ನಲ್ಲಿ ಇಂದಿಗೂ ಉಳಿದಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೧೯
Next post ಚಂದ್ರನ ಸವಾಲು

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys