ಯಾರೇ ಕೂಗಾಡ್ಲಿ ಗೋಡ್ರೇ ಹೋರಾಡ್ಲಿ ಹುಬ್ಳಿ ಸಮಾವೇಶ ಆಗೇ ಹೋತಲ್ರಿ

ಅಧ್ವಾನೆದ್ದರೂ ಅಡ್ವಾಣಿ ಪಕ್ಷದ ಪದವಿಯನ್ನಾಗಲಿ ವಿರೋಧ ಪಕ್ಷದ ಸ್ಥಾನವನ್ನಾಗಲಿ ಬಿಡದೆ ಸತಾಯಿಸುತ್ತಾ ವಾಜಪೇಯಿ ಎಂಬ ಹಳೆಗುರಾಣಿಯ ರಕ್ಷಣೆ ಪಡೆಯುತ್ತಿರುವುದನ್ನು ಕಂಡು ಕೊತಕೊತನೆ ಕುದಿಯುತ್ತಿರುವ ಓಲ್ಡ್‌ ಆರೆಸ್ಸೆಸ್ಸಿನ ವಾನರ ಸೇನೆಗೀಗ ತೋರುತ್ತಿರುವುದು ಒಂದೇ ದಾರಿ. ಯಜ್ಞಯಾಗ ಹೋಮ-ಹವನಗಳನ್ನು ಮಾಡಿ ಅದರ ಬಲದಿಂದಲಾದರೂ ಸರಿ ಪಾಕಿಸ್ತಾನದಿಂದ ಬಂದ್ಮೇಲೆ ಭೂತವಾಗಿ ಕಾಡ್ತಿರೋ ಅಡ್ವಾಣಿನಾ ಮರಳಿ ಮನೆಗೆ ಅರ್ಥಾತ್
ಪಾಕಿಸ್ಥಾನಕ್ಕೇ ಒದ್ದು ಓಡಿಸಬೇಕೆಂಬ ಏಕೈಕ ಗುರಿ. ಅದರ ಸಾಧನೆಗೀಗ ನಾಗಪುರದ ತಮ್ಮ ಆಸ್ಥಾನದಲ್ಲಿ ನಡೆಸುವರೆ ತಯಾರಿ. ಮನದಲಾಲಖುರಾನ ಜನಾಕಿಸ್ಣಮೂತ್ರಿಗೆ ಗೋಲ್ಡ್ ಲಕ್ಷ್ಮಣ್ ಖಂಡೇಪಾಲರೆಲ್ಲಾ ಯಜ್ಞಯಾಗಗಳ ಅಡ್ವೈಜಗಳಾಗಿ ಭಾರಿ ಹೋಮ ನಡೆಸಿರುವಾಗಲೇ ಹೋಮದಿಂದೆದ್ದು ಬಂದ ಧೂಮದ ಪರಿ ಕಾಣಿಸಿಕೊಳ್ಳಬೇಕೆ – ಅರೆಬರೆ ಸಂನ್ಯಾಸಿನಿ ಉಮಕ್ಕ! ಒಳಗೇ ಹಳೆ ಸೇಡಿನ ಕಿಡಿ ಬೇರೆ. ಆರ್‌ಎಸ್ಸೆಸ್ಸೇ ಬಿಜೆಪಿಯ ಪೌಂಡೇಶನ್ನು. ಆದರಿಂದ ದೂರವಾದ್ರೆ ಬಿಚೆಪಿ ಸಡನ್ ಸ್ಪಾಟ್ ಡೆತ್ ಆಗೋದು ಗ್ಯಾರಂಟಿ. ಅದರ ಬದಲು ಅಡ್ವಾಣಿ ಎಂಬ ಅಧ್ವಾನದ ಮುದುಕನನ್ನೇ ದೂರ ಮಾಡಬಾರದೇಕೆಂದು ಬಿಟ್ಟಿ ಸಲಹೆ ನೀಡುತ್ತಾ ಯಜ್ಞಕ್ಕೆ ತನ್ನ ಕ್ಕೆಲಾದಷ್ಟು ಸಮಿತ್ತುಗಳನ್ನು ಹಾಕ್ಲಿಕ್ ಹತ್ತವಳೆ. ಇದೆಲ್ಲಾ ಗದ್ದಲವನ್ನು ಕಂಡು ಭೀಷ್ಮನಂತೆ ಇಚ್ಛಾಮರಣದ ಆಪೇಕ್ಷೆಯಲ್ಲಿರುವ ವಾಜಪೇಯಿಯು ಎಲ್ಲರ ಗಲ್ಲ ಸವರಿ, `ನೆಕ್ಸ್ಟ್ ಮಹಿನೇಮೆ ಸಭಿ ಕಾ ಸಬ್ ಹಕೀಕತ್ ಬಿಲ್ ಕುಲ್ ಸೀದಾ ಕರೂಂಗಾರೆ’ ಎಂದು ಭರೋಸಾ ಕೊಟ್ಟರೂ ಬಿಕ್ಕಟ್ಟು ಬಗೆಹರಿದೆ ಒಗ್ಗಟ್ಟಿಗೇ ಮುಗ್ಗಟ್ಟು `ಬಂದೀತೆ’. ದುಶ್ಮನ್ ಕಹಾಂ ಹೈ ಅಂದ್ರೆ ಕಾಂಗ್ರೆಸ್ ಮೆ ನಹಿಂ ಬಗಲ್ಮೆ ಹೈ ಎಂಬಂಗಾಗಿ ವಾಜಪೇಯಿ ಮಲಗಲು ಶರಪಂಜರ ರೆಡಿಮಾಡಿಕೊಳ್ಳಂಗಾಗೇತೆ.

ಅಡ್ವಾಣಿ ಎಂಬ ಭೂತ ಆರ್‌ಎಸ್ಸೆಸ್ನೋರ್ನ ಕಾಡ್ತಾ ಇರೋವಾಗ್ಲೆ ಕರ್ನಾಟಕದಾಗೆ ದ್ಯಾವೇಗೋಡ್ರಿಗೆ ಸಿದ್ರಾಮು ಎಂಬ ದೋಸ್ತಿಯೇ ಭೂತವಾಗಿ ಹೆಗಲೇರ್ಕಂಡೈತೆ. ಕೊಳ್ಳೆಗಾಲದ ಮಾಟಗಾರರನ್ನು ಕೇರಳ ಮಲೆಯಾಳಿ ಮಂತ್ರಿಕರನ್ನು ಈಗಾಗಲೆ ಮೀಟ್ ಮಾಡಿದ ಗೋಡ್ರುದು ಒಂದೇ ಅಹವಾಲು. ಹೆಂಗಾರ ಮಾಡಿ ಹುಬ್ಳಿ ಸಮಾವೇಶ ನೆಡಿದಂಗೆ ಮಂತ್ರ ಹಾಕ್ರಪ್ಪ. ನೆಡೆದ್ರೂವೆ ಜನವೇ ಬರದ್ರಿಂಗೆ ಮಾಟ ಮಾಡ್ರಪಾ, ಹಂಗೂ ಬಂದ್ರೆ ಜನ ತರೋ ಲಾರಿಗಳೇ ಆಕ್ಸಿಡೆಂಟ್ ಆಗಿ ಆರ್ಧದಾರಿಲೇ ಜನ ಸಿವನಪಾದ ಸೇರೋಹಂಗೆ ನಿಂಬೆಹಣ್ಣು ಕೊಯ್ಸಿರಪಾ ಬ್ರದರ್ಸ್ ಅಂತ ದುಂಬಾಲು ಬಿದ್ದವರೆ. “ಚೆಡಿ‌ಎಸ್ ನಲ್ಲಿ ನಂಬ್ಕೆ ಇರೋ ಯಾವ ನರಮಾನವನೂ ಹುಬ್ಳಿ ಸಮಾವೇಶ್ದಾಗೆ ಕಾಲಿಕ್ಕಬಾರದೆಂದು ಹೇಳ್ಳಿಕ್ಕೆ ನಾನ್ ಇಚ್ಛೆಪಡ್ತೀನಿ” ಎಂದು ಸ್ವಾಟೆ ಓರೆಮಾಡಿ ಆವಾಜೂ ಹಾಕವರೆ. ದಲಿತರು ಸಾಬರು ಹಿಂದುಳಿದೋರು ಹೆಣ್ಣುಮಕ್ಕಳ್ಳುನ್ನ ಮುಂದಕ್ಕೆ ತರಬೇಕಂತ್ಲೆ ನನ್ನ ಪ್ರೇತಾತ್ಮ ಡೇ ಆಂಡ್ ನ್ನೆಟ್ ವಿಲೇಜ್ ವಿಲೇಜ್ ಅಲಿತಾ ಇರೋವಾಗ, ದುಶ್ಮನ್ ಕಹಾಂ ಹೈ ಅಂದ್ರೆ ಬಗಲ್ಮೆ ಹೈ ಅನ್ನೋ ಟೈಪ್ ಜೆಡಿ‌ಎಸ್ ನಾಗಿದ್ಕಂಡೇ ಅದನ್ನೆ ಡ್ಯಾಮೇಜ್ ಮಾಡೋಕೆ ಹೊಂಟವನಲ್ಲ ನಮಕ್ ಹರಾಮ್ ಸಿದ್ರಾಮು ಅಂತ ಒಳಗೇ ಕುದಿತಾ ಸಿದ್ರಾಮು ರಾಜಕೀಯ ಸಮಾಧಿಗೆ ಸ್ಕೆಚ್ ಹಾತ್ತಾ ಕುಂತವರೆ. ಇತ್ತಾಕಡೆ ಸಿದ್ರಾಮು ಕಾಂಗ್ರಸ್ ಪಾಲಾದ್ರೆ ಬಿಜೆಪಿನೋರ ಸಪೊರ್ಟ್ ಮ್ಯಾಗೆ ಸರ್ಕಾರ ರಚನೆ ಮಾಡೋ ಡೀಲ್ ನಡೆಸವ್ನೆ ಸಾಯಿಲ್ ಸನ್‌ನ ಸೆಕೆಂಡ್ ಸನ್ ಕೊಮಾರಣ್ಣ ಅಂಬೋ ಸುದ್ದೀನೂ ಐತೆ. ಇದ್ನೆಲ್ಲಾ ನೋಡಿ ಅಗ್ದಿ ಖುಸಿಯಾದ ಕಾಂಗ್ರೆಸ್ ಕಿಂಗ್ ಧರಂಸಿಂಗ್ “ಯಾರ್ ಬೇಕಾರೂ ಹೋಗ್ರಲಾ” ಅಂತ ನೊ ಅಬ್ಜಕ್ಶನ್ ಸಾಂಗ್ ಹಾಡ್ತಾ ಅವರೆ. ಜೆಡಿ‌ಎಸ್ ನ ಮಿರಾಜುದ್ಧೀನು ಅನ್ಸಾರಿ ಆಜೀಮು ಸಾಬರ್ಯಾರು ಹೋಗಂಗಿಲ್ಲ ಅಂತ ರಾಂಗ್ ಆದ್ರೆ, “ಹೋಗೋರು ಹೋಗ್ಲಿ ಅಂತ ಇಬ್ರಾಹಿಮ್ಮು ಖವ್ವಾಲಿ ಹಾಡ್ಲಿಕ್ ಹತ್ತವರೆ. ಬಿಜೆಪೀನಾಗೂ ತಳಮಳ ಶುರುವಾಗೇದ. ಯತ್ನಾಳ ಸಮಾವೇಶಕ್ಕೆ ಕಚ್ಚೆ ಕಟ್ಟಿ ಹೊಂಟಿರೋದು ಯಡೂರಿಗೀಗ ಬಿಸಿತುಪ್ಪ ನುಂಗಿದಂಗೇ ಆಗೇದ. ಹುಬ್ಬಳ್ಳಿ ಶಹರದಾಗ ಎಲ್ಲೆಲ್ಲಿ ನೋಡಿದ್ರೂ ಅರಸು ಸಿದ್ರಾಮು ಬ್ಯಾನರ್ ಕಟೌಟಿಗಳ್ದೇ ಸಿಂಗಾರ. ಬ್ಯಾನರ್ದಾಗ ಬಸವ, ಅಂಬೇಡ್ಕರ, ಟಿಪ್ಪು, ಕನಕ, ಕೃಷ್ಣ, ವಾಲ್ಮೀಕಿ, ಮಾಚಯ್ಯ, ಹರಳಯ್ಯ, ಏಸು, ಸೇವಾಲಾಲ, ಸಾಯಿಬಾಬ ಎಲ್ಲಾ ದೇವಮಾನವರೂ ಗ್ರೂಪ್ ಫೋಟೋದಾಗೆ ಸೇರ್ಕಂಡು ಜಾತಿ ಸಿಂಬಲ್ ಗಳಾಗಿ “ಅಹಿಂದ ಜೈ” ಅಂತ ಕೂಗ್ಲಿಕ್ ಹತ್ತಾರೆ. ಯಾರೇ ಕೂಗಾಡ್ಲಿ ಮಾಟಮಂತ್ರ ಮಾಡಿಸ್ಲಿ ಹುಬ್ಳಿ ಸಮಾವೇಶವಂತೂ ನೆಡ್ದೇ ಹೋತ್ರಪಾ. ಗೋಡ್ರು ಪಾಂಡಿಚೇರಿಯ ಕಾರೈಕಲ್ ಫೇಮಸ್ ಶನೇಶ್ವರ ದೇಗುಳಕ್ಕೆ ಹೋಗಿ ಮಹಾಮಂಗಳಾರ್ತಿ ಮಾಡಿಸಿದ್ರೂವೆ ಸಮಾವೇಶಕ್ಕೆ ಜನ, ಸಾಗರದಂತೆ ನುಗ್ಗಿಬಂತು. ಇದು ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸುನಾಮಿ ಅಲೆ ಅಂತ ವರ್ಣಿಸಿದ ಇಬ್ರಾಹಿಮ್ಮುಗೆ ಚಪ್ಪಾಳೆಯ ಇನಾಮು ರಪರಪನೆ ಬಿತ್ತು. ಹಂಗೆಯಾ ಲಾಸ್ಟಿಗೆ ಮಾತಾಡಿದ ಸಮಾವೇಶದ ಸ್ಟಾರ್ ಸಿದ್ರಾಮು ಆವೇಶದಿಂದ ಗುಡುಗುತ್ಲು ರಪರಪ ಚಪ್ಪಾಳೆ ಜೊತೆನಾಗೆ ಮಳೆನೂಬಿತ್ತು. ಬಿದ್ರೂವೆ ಮಂದಿ ಮಳೆನಾಗೇ ಸ್ನಾನ ಮಾಡ್ಕೊಂಡು ಮರತೇ ಹೋಗಿದ್ದ ಇಂದಿರಮ್ಮ ಅರಸುನ ನೆಪ್ಪಿಗೆ ತಂದ್ಕೊಂಡ್ರು. “ಇಂದ್ರಮ್ಮನ ಜಮಾನದಾಗ ಈ ಪಾಟಿ ಮಂದಿ ಕಂಡಿದ್ವಿ ನೋಡ್ರಪಾ” ಅಂತ ಹುಬ್ಳಿ ಮಂದಿ ಉಬ್ಬಿಹೋತು ಎಂಬಲ್ಲಿಗೆ ಅರಸು ಇಂದಿರಮ್ಮನ ಸಾಲಿಗೆ ಸಿದ್ರಾಮಣ್ಣನು ಜಮಾ ಆಗೋದರು ಅಂಬೋದೆ ಸಮಾವೇಶದ ವಿಶೇಷ. ಆದ್ರೂ ಇದು ಸಿದ್ದು ಶಕ್ತಿ ಪ್ರದರ್ಶನವಲ್ಲ ಶೋಷಿತರ ಶಕ್ತಿ ಪ್ರದರ್ಶನ ಅಂತ ಸಿದ್ರಾಮು ವಸಿ ಸಂಕೋಚಪಟ್ಕೊಂಡ್ರೂ, “ಮುಂದಿನ ಸಿ‌ಎಂ ಸಾಹೇಬರು ಸಿದ್ದೂನೇ ಆಗ್ಬೇಕು” ಅಂತ ಬೊಮ್ಮಾಯಿ ಸನ್ ಸಮೇತ ಎಲ್ಲಾ ಭಾಷಣಕಾರರು ಭೀಕರವಾಗಿ ಅರಚಿದ್ದೊ ಅರಚಿದ್ದು! ಚಾಣಾಕ್ಷರಾದ ಜಾಲಪ್ಪ ಗೋಡ್ರ ಹೆಸರೆತ್ತದೆ ಜನ್ಮ ಜಾಲಾಡಿದರು. ಹಾವನೂರು ವೆಂಕಟಸ್ವಾಮಿ ಆಯೋಗಗಳ ವರದಿ ವಿರುದ್ದ ಮೆರವಣಿಗೆ ಹೊರಡಿಸಿದ ಗೌಡ ಅದೆಂಗ್ರಿ ಹಿಂದುಳಿದೋರ ಲೀಡರ್ ಆದಾರು? ಅಂತ ಅಂಗಾರಾದರು. ಕಾಂಗ್ರೆಸ್ಸಿನ ಇಸವನಾತು ರೇವಣ್ಣ ಚಿಮ್ಮನಕಟ್ಟಿ, ಮೋಟಮ್ಮ, ತೇಜಮ್ಮ, ಮಿಂಚಿಂಗ್, ಬಿಜೆಪಿಯ ಯತ್ನಾಳ, ಜೆಡಿಯುನ ಬೊಮ್ಮಾಯಿ ತರದವರು ಶೈನಿಂಗೋ ಶೈನಿಂಗು. ಇವರಿಂದಾಗಿ ಆಯಾ ಪಾರ್ಟಿಗಳಲಿ., ಸೂತಕದ ಪ್ಯಾಥಸ್ ಸಿಂಗ್ ಸಿಂಗಿಂಗೋ ಸಿಂಗಿಂಗು.

ಇಬ್ರಾಹಿಮ್ಮು ಮಾದೇವಪ್ಪ ಜಾರ್ಕಿ ಹೊಳಿ ಆಪಾಟಿ ಜನ ಸೋಡಿ ಆನಂದದ ಹೊಳಿನಾಗೆ ಮುಳುಗಿ ತೇಲಿಂಗೋ ತೇಲಿಂಗು. ಅನೇಕ ಕಾವಿಗಳೂ ಜಾಗ ಪಡೆದಿದ್ದೊಂದು ವಿಶೇಷ ಅದ್ರಾಗೂ ದುರ್ಗದ ಶಿವಮೂರ್ತಿ ಶರಣರು ಪಕ್ಕಾ ರಾಜಕಾರಣಿ-ಕಂ-ಯತಿವರ್ಯ ಪೇಜಾವರರ ಡಮ್ಮಿಯಂತೆ ಕಂಡರಲ್ಲದೆ, “ಬಡವನನ್ನು ಕೆಣಕಿದಿರೋ ಸಿಂಹವಾಗುತ್ತಾನೆ” ಅಂತ ನೆರದ ಮಂದಿಯನ್ನು ಹೆದರಿಸಿದರು ಎಂಬಲ್ಲಿಗೆ ಹುಬ್ಳಿ ಸಮಾವೇಶ ಸಮ ಎಂಡಾತು. ಸಿದ್ರಾಮು ಗೋಡ್ರ ಮುಖ ಉತ್ತರ ದಕ್ಷಿಣವಾದಂಗೂ ಆಗೋತು. ಉತ್ತರ ಪ್ರದೇಶ ಬಿಹಾರದಾಗೆ ಆದಂಗೆ ಕರ್ನಾಟಕದಾಗೂ `ಅಹಿಂದ ಅಲೆಯನ್ನೇ ಎಬ್ಬಿಸಹೊರಟಿರುವ ಡಿಸಿ‌ಎಂ ಸಿದ್ರಾಮು ಅಂಡ್ ಪಾರ್ಟಿ ಪ್ರಯತ್ನ ಮುಂದಿನ ದಿನದಾಗೆ ಯಾವ ಶೇಪ್ ತಗೋತದೋ ಯಾರ್ಯಾರ ಶೇಪ್ ತೆಗಿತದೋ ಅಂತ ಕಂಗಾಲಾದ ಓಟು ಹಾಕೋ ಮಂದಿ ಈಗ್ಗೆ ತೆಲಿಕೆಡಿಸ್ಕಂಡು ಅಗ್ದಿ ಹೊಯ್ದಾಡ್ಲಿಕ್ ಹತ್ತದೇರಿ.

ಇಷ್ಟೆಲ್ಲಾ ಹೈರಾಣಾದ್ರೂವೆ ಗೋಡ್ರುದು ನೋ ರೀ‌ಆಕ್ಶನ್. ಆದ್ರೂವೆ ವಾರೊಪ್ಪತ್ತಿನಾಗೆ ಗೋಡ್ರು ಒಂದು ನಮೂನೆ ಒಣಗಿ ಚಕ್ಕಳ ಕಟ್ಟಕ್ಸಂಡ ರಾಗಿ ಬಾಲ್ಸ್ ನಂಗಾಗಿ ಡೆಲ್ಲಿ ಈಮಾನ ಹತ್ತವರೆ. ಸೋನಿಯಾ ನನಗ್ಯಾವ ಲೆಕ್ಕ ಎಂಬಂತ್ತಿದ್ದ ಗೋಡ್ರು ಕಾಂಗ್ರಿಸ್ಸೋನರು ಇಟ್ಟ ಬತ್ತಿ ಸಿದ್ರಾಮು ಕೊಟ್ಟ ಗಸ್ತು ತಡಿಲಾರ್ದೆ ಶ್ಯಾನೆ ಸುಸ್ತಾಗಿ ಸೋನಿಯಾ ಪಾದಾರವಿಂದವನ್ನರಸಿ ಡೆಲ್ಲಿ ಟ್ಯೂರ್ ಹಾಕ್ಕಂಡಿದ್ದು ನಮ್ಮ ಮ್ಯಾಗೆಲ್ಲಾ ಚಾಡಿ ಹೇಳಾಕೇ ಕಣ್ರಿ ಅಂತ ಇಸ್ವನಾತು ಅಂಡ್ ಪಾರ್ಟಿಯೋರು ಮುಸಿ ಮುಸಿ ನಗ್ತಾ ಅವರೆ. ಯಾರೇನಂದ್ರೂ ತುಟಿ ಹೊಲ್ಕೊಂಡಂತಿರೋ ಗೋಡ್ರು ತುಟಿ ಬಿಚ್ಚೋದು ಓನ್ಲಿ ಇನ್ ಪ್ರಂಟ್ ಆಥ್ ದಿ ಕಾಂಗ್ರೆಸ್ ಮೇಡಂ ಆಟ್ ಡೆಲ್ಲಿ. ಡೆಲ್ಲಿಯಿಂದ ಬಂದಮ್ಯಾಲೆ ಗೋಡ್ರ ಗದ್ದಲ ಹೆಂಗೆಂಗಾತದೋ ಪಾಂಡಿಬೇರಿಯ ಕಾರೈಕಲ್ ಶನೇಶ್ವರನೇ ಬಲ್ಲ.
*****
( ದಿ. ೧೦-೦೮-೨೦೦೫)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಶ್ನೆಗೆ ಪ್ರಶ್ನೆ
Next post ಸ್ನಾಯುಗಳು

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

cheap jordans|wholesale air max|wholesale jordans|wholesale jewelry|wholesale jerseys