ಇಲ್ಲಿ ಸಲ್ಲುವುದೆ ಅಲ್ಲಿಯೂ ಸಲ್ಲುವುದೆ
ಅಥವ ಅಲ್ಲಿ ಸಲ್ಲುವುದು ಬೇರೆಯೇ

ಇಲ್ಲಿಯ ಮಲ್ಲಿಗೆಯು ಅಲ್ಲಿಯು ಮಲ್ಲಿಗೆಯೆ
ಅಲ್ಲಿಯ ಮಲ್ಲಿಗೆಯು ಮಾಸುವುದೆ ಇಲ್ಲವೇ
ಇಲ್ಲಿಯ ಗುಲಾಬಿಯು ಅಲ್ಲಿಯು ಗುಲಾಬಿಯೆ
ಅಲ್ಲಿಯ ಗುಲಾಬಿಗೆ ಮುಳ್ಳುಗಳೆ ಇಲ್ಲವೇ

ಇಲ್ಲಿಯ ಪುಣ್ಯವು ಅಲ್ಲಿಯೂ ಪುಣ್ಯವೆ
ಅಲ್ಲಿಯ ಪುಣ್ಯಕ್ಕೆ ಕಳಂಕವೇ ಇಲ್ಲವೇ
ಇಲ್ಲಿಯ ಪಾಪವು ಅಲ್ಲಿಯೂ ಪಾಪವೇ
ಅಲ್ಲಿಯ ಪಾಪಕ್ಕೆ ಮೋಕ್ಷವೇ ಇಲ್ಲವೇ

ಇಲ್ಲಿಯ ಅಪೂರ್‍ಣತೆ ಅಲ್ಲಿಯೂ ಅಪೂರ್ಣತೆಯೆ
ಇಲ್ಲಿಯ ಅಶಾಂತಿ ಅಲ್ಲಿಯೂ ಅಶಾಂತಿಯೇ
ಇಲ್ಲಿಯ ಬೇಗುದಿ ಅಲ್ಲಿಯೂ ಬೇಗುದಿಯೆ
ಇಲ್ಲಿಯ ಸ್ವಪ್ನ ಅಲ್ಲಿಯೂ ಸ್ವಪ್ನವೇ

ಅಲ್ಲಿಯ ಸೂರ್‍ಯನಿಗೆ ಸೆಕೆಯಿರದ ಬೆಳಕೆ
ಅಲ್ಲಿಯ ಚಂದ್ರನಿಗೆ ಪಕ್ಷಗಳೆ ಇಲ್ಲವೇ
ಅಲ್ಲಿಯ ಮಳೆ ಅಮೃತವಾಹಿನಿಯೆ
ಅಲ್ಲಿಯ ಗಾಳೀ ಅನಂತಗಾನವೇ
*****