ಜಗದೊಳಗೆ ಹುಟ್ಟಿಬೆಳೆದರೂ
ಜನರೊಳಗೆ ಬೆಳೆಯುವುದೇ ಸಾಧನೆ ವೇಮುಲ.

ಇಲ್ಲದ ಮೂಲದಲ್ಲೇ ಹುಟ್ಟಿದರೂ
ಇಲಾಖೆಗಳನ್ನೇ ಕಟ್ಟಬಲ್ಲವರು ಇಲ್ಲಿಹರು
ಇದ್ದರಮನೆಯ ಮಾರಿ ತಿಂದವರು ಇಹರು
ಪರಿಪರಿಯ ಪಂಡಿತರು, ಪಾಮರರು,
ಅರೆಬರೆಯ ಶಿಕ್ಷಿತರು ಎಲ್ಲರ ಗೂಡಲ್ಲವೇ ಇದು
ನಮ್ಮತನದ ಮೂಲ ಮಂತ್ರ. ವಿವಿಧತೆಯಲ್ಲಿ ಏಕತೆ
ರಾಷ್ಟ್ರ ಭಾವೈಕ್ಯತೆ
ಅಂಬೇಡ್ಕರ ನನಸಾದ ಕನಸಲ್ಲವೇ ಸಂವಿಧಾನ

ಓದಿಕೊಂಡಿರಲಿಲ್ಲವೇ ವೇಮುಲ
ನೀನು ಬಾಬಾ ಸಾಹೇಬರ?
ಓದಿದಿದ್ದರೆ ಓಡಿಹೋಗುತ್ತಿರಲಿಲ್ಲ
ಹೀಗೆ ಹೇಡಿಯಾಗಿ.
ಹೆತ್ತ ಹೊಟ್ಟೆಗೆ ಉರಿ‌ಅಟ್ಟಿ
ಬೇಯಿಸಿಕೊಳ್ಳುವುದಾದರೂ
ಏನಿತ್ತು ನಿನಗೆ?
ಹೆಸರಿಗಷ್ಟೇ ನೀನು ಹೋರಾಟಗಾರ ಅಂಬೇಡ್ಕರರಂತೆ ಎನಿಸಿಕೊಂಡೆ.
ಅವರ ನೋವಿನ ಹನಿ ರವವಷ್ಟೇ ಇರಬೇಕು
ನಿನಗೆ ತಗುಲಿದ ನೋವು
ಇರಲಿಲ್ಲ ಬಿಡು ನಿನ್ನಲ್ಲಿ ತಾಳಿಕೊಳ್ಳುವ
ತಾಕತ್ತು, ಅಪಮಾನ ಗೆಲ್ಲುವ ಗತ್ತು
ಇದ್ದರೆ ನೀನು ಮತ್ತೊಬ್ಬ ಬಾಬಾಸಾಹೇಬ ಆಗುತ್ತಿದ್ದೆ.
ಕೂಳನ್ನು ಕಸಿದುಕೊಂಡರಲ್ಲವೇ ಅವರು
ಅಸ್ಪೃಶ್ಯನೆಂದು ಕಪ್ಪು ಪಟ್ಟಿಯ ಸಿದ್ಧ ಮಾಡಿದರೆಂದೆ.
ಇತ್ತಿದ್ದರು ನೆಲೆ ನೀನು ಈ ನೆಲದ ಕುಡಿಯೆಂದು
ನಾಡ ಬೀಜವೆಂದು. ಉಗ್ರನಲ್ಲವೆಂದು
ವ್ಯಗ್ರನಾಗನೆಂದು.
ಹೊಟ್ಟೆಗೆ ಹಿಟ್ಟಿಲ್ಲದ ಹಟ್ಟಿಯಲ್ಲಿ ಹುಟ್ಟಿದೆ ನೀನು
ಹೋರಾಟದ ಬಿಂಬವ ಎದೆಯೊಳಗಿಟ್ಟುಕೊಂಡು
ತಣ್ಣೀರ ಬಟ್ಟೆ ಹೊಟ್ಟೆಗಿಟ್ಟು
ನಿನ್ನ ಮೆದುಳ ಪುಷ್ಟಿಗೊಳಿಸಬೇಕೆಂದರು ನಿನ್ನ
ಒಡಲಲ್ಲಿ ಹೊತ್ತವರು
ಅಡ್ಡಕಸುಬಿಗಳಿಗೆ ಅನುಯಾಯಿಯಾದೆ ನೀನು
ದೇಶ ಭಕ್ತಿಯ ಕುಡಿಗಳು ನೀವು
ದುಷ್ಟಸರ್ಪಗಳಿಗೇಕೆ ಹಾಲೆರೆದಿರಿ?
ಬದುಕಿದ್ದರೆ ಉತ್ತರಿಸುತ್ತಿದ್ದೆಯಾ?
ಅಥವಾ ಸರ್ಪಸಂಕುಲಕ್ಕೆ ಹಾಸುಗಂಬಳಿಯಾಗುತ್ತಿದ್ದೆಯಾ?
*****

Latest posts by ನಾಗರೇಖಾ ಗಾಂವಕರ (see all)