ಸಿಡಿಲು

ಸಿಡಿಲು

ಲೀಲಾವತಿಯು ಒಬ್ಬ ಬಡ ಬ್ರಾಮ್ಹಣನ ಮಗಳು. ಅವಳ ತಂದೆಯು ಒಂದು ಅಂಗಡಿಯಲ್ಲಿ ಕಾರಕೂನನನಾಗಿದ್ದನು. ಆತನಿಗೆ ಪಿತ್ರಾರ್‍ಜಿತ ಆಸ್ತಿಯೆಂದರೆ ಒಂದೇ ಒಂದು ಸಣ್ಣ ಬಾಗಾಯತ್ತು. ಹಾಗೂ ಹೀಗೂ ಮನೆಯ ವೆಚ್ಚ ಸಾಗುತ್ತಿದ್ದಿತು. ಬೇರೆಯವರಂತೆ ಚಹಾಫಲಾಹಾರದ ರೂಢಿಯು ಇವರಲ್ಲಿರಲಿಲ್ಲವಾದ್ದರಿಂದ ಬಂದಷ್ಟರಲ್ಲಿಯೇ ವೆಚ್ಚವು ನೀಗುತ್ತಿದ್ದಿತು. ಮನೆಯಲ್ಲಿ ಲೀಲಾವತಿಯ ತಾಯಿ, ತಂದೆ, ತಂಗಿ, ಇಬ್ಬರು ತಮ್ಮಂದಿರು ಹೀಗೆ ಒಟ್ಟಾರೆ ಆರು ಜನರು. ಲೀಲಾವತಿಯೇ ಹಿರಿಯಮಗಳಾದ್ದರಿಂದ ಎಲ್ಲರೂ ತುಂಬಾ ಪ್ರೀತಿಸುತ್ತಿದ್ದರು.
ಲೀಲಾವತಿಯೆಂದರೆ ಸೌಂದರ್‍ಯದ ಸಾಗರದಲ್ಲಿಂದ ಆಯ್ದು ತೆಗೆದ ದಿವ್ಯ ರತ್ನ! ರೂಪದಲ್ಲಿ ಅವಳನ್ನು ಹಿಮ್ಮೆಟ್ಟಿಸುವವರು ದೇವಲೋಕದಲ್ಲಿ ಕೂಡ ಯಾರೂ ದೊರೆಯರು. ದುಂಡಾದ ಶೋಭಿಸುವ ಮುಖ ಕಳೆಯುಳ್ಳ ಕಣ್ಣುಗಳು. ಕರ್ರಗಿನ ಉದ್ದವಾದ ಕೇಶರಾಶಿ ಹವಳದಂತೆ ಒಪ್ಪುವ ತುಟಿಗಳು. ಅದಮ್ಯಕಾಂತಿಯನ್ನು ಬೆಳಗುವ ಮೃದುವಾದ ಕಪೋಲಗಳು. ಊರ ಜನರೆಲ್ಲರಿಗೂ ಅವಳನ್ನು ಕಂಡರೆ ತುಂಬಾ ಸಂತೋಷ. ವಯಸ್ಸಿಗೆ  ಬಂದ ಹಾಗೆಲ್ಲ ಅವಳ ಸೌಂದರ್‍ಯವು ಹುಣ್ಣಿಮೆಯ ಚಂದ್ರನಂತೆ ಹೆಚ್ಚೆಚ್ಚಾಗ ತೊಡಗಿತ್ತು.
ಹುಡಿಗೆ ದೊಡ್ಡವಳಾದಳೆಂದು ಅವಳ ತಂದೆ ವರವನ್ನು ಶೋಧಿಸತೊಡಗಿದನು. ಹಿಂದೂ ಸಮಾಜದಲ್ಲಿ ಬೆಳೆದ ಹುಡಿಗೆಯನ್ನು ಕುಮಾರಿಯಾಗಿಡುವದು ಸಾಮಾಜಿಕ ಅಪರಾಧವೆಂದು ಭಾವನೆ. ಅದಕ್ಕಾಗಿ ತಾಯಿತಂದೆಗಳೆಲ್ಲರಿಗೂ ಲಗ್ನದ ಬಗ್ಗೆ ದೊಡ್ಡದೊಂದು ಚಿಂತೆಯು ಆಗಿದ್ದಿತು. ಲೀಲಾವತಿಗೆ ಮಾತ್ರ ಚಿಂತೆಯ ಕಾರಣ ತಿಳಿಯದು.
“ಲಗ್ನವಾಗದಿದ್ದರೇವಾಯಿತು? ಇಷ್ಟೇಕೆ ಚಿಂತಿಸುವಿರಿ” ಎಂದು ಅನ್ನವಳು.
ಅವಳ ತಂದೆಯ ದೂರದೂರದ ನೆಂಟರೂ ಮಿತ್ರರೂ ಸಹ ಇವಳಿಗಾಗಿ ವರ ತಪಾಸು ನಡೆಸಿದ್ದರು. ಎಲ್ಲಿಯೂ ಹೊಂದಿಕೆಯಾಗಲಿಲ್ಲ. ಕೆಲವು ವರಗಳು ಬಂದಾಗ ಪುರೋಹಿತರು ವಿಘ್ನ ತಂದು ಬಿಟ್ಟರು. ಹುಡಿಗಿಗೆ ಮಂಗಳವಿದೆ. ಮಂಗಳಗ್ರಹದ ವರನೇ ಬೇಕು. ಇಲ್ಲವಾದರೆ ಅಪಶಕುನವಾಗಿ ಬಿಡುವದು, ಎಂದು ಘೋಷಿಸಿದರು. ಪುರೋಹಿತರ ಮುಂದೆ ಯಾರ ಆಟ ನಡೆಯುವದು?
ಮೋಹನನು ಅದೇ ಊರ ಶಾನಭೋಗರ ಮಗನು. ಕನ್ನಡ ನಾಲ್ಕನೆಯ ಇಯತ್ತೆ ಯವರೆಗೂ ಒಂದೇ ಶಾಲೆಯಲ್ಲಿ ಲೀಲಾವತಿಯೊಡನೆ ಕೂಡಿ ಕಲಿತಿದ್ದನು. ಆದರೆ ಪಾಪ! ಸ್ತ್ರೀಯರಿಗೆ ಹೆಚ್ಚು ಕಲಿಸಿದರೆ ಕೆಟ್ಟು ಹೋದಾರೆಂಬ ತಿಳುವಳಿಕೆಯೊಂದಿದೆಯಲ್ಲ! ಅಲ್ಲಿಗೆ ಲೀಲಾವತಿಗೆ ಶಿಕ್ಷಣದ ಕೊನೆಯಾಗಿದ್ದಿತು. ಮೋಹನ-ಲೀಲಾವತಿಯರ ಮನೆಯವರಿಗೆ ಎಂದಿನಿಂದಲೂ ಋಣಾನುಬಂಧ! ಬಳಿಕೆ ಬಹಳ. ಹೀಗಾಗಿ ಇಬ್ಬರೂ ಒಳ್ಳೇ ಕಕ್ಕುಲತೆಯಿಂದ ಬಾಲ್ಯವನ್ನು ಕಳೆದಿದ್ದರು. ಮೋಹನನು ಇಂಗ್ಲೀಷ ಕಲಿಯಲಿಕ್ಕೆಂದು ಪಟ್ಟಣಕ್ಕೆ ಹೋದ ಲಾಗಾಯ್ತು ಅವರ ಬಾಲಲೀಲಾಕಾಂಡವು ಸಮಾಪ್ತಿಯಾಯಿತೆನ್ನಬಹುದು.
ಬೇಸಿಗೆಯ ಬಿಡುವಾದ್ದರಿಂದ ಮೋಹನನು ಊರಲ್ಲಿಯೇ ಇದ್ದ ಒಂದು ದಿನ ಅವನು ಗಾಳೀ ತಿನ್ನಲಿಕ್ಕೆಂದು ತೋಟದ ಕಡೆಗೆ ನಡೆದಿದ್ದ. ರೂಢಿಯಂತೆ ದಾರಿಯಲ್ಲಿಯ ದುರ್‍ಗಾದೇವಿಯ ಮುಂದೆ ಶಿರಬಾಗಿದನು. ತಕ್ಷಣವೇ ಅದೊಂದು ಮೋಹದ ಮಿಂಚು ಅವನನ್ನು ಮುಂದೆ ಹೋಗಗೊಡಲಿಲ್ಲ. ಬೆಪ್ಪನಂತೆ ನಿಂತುಬಿಟ್ಟನು. ‘ದೇವಿ ಸುಮಂಗಲೇ ಸರ್‍ವಮಂಗಲೇ ಮೋಹನನೊಡನೆ ನನ್ನ ಮದುವೆಯನ್ನು ಮಾಡುವ ಬುದ್ಧಿಯನ್ನು ತಂದೆತಾಯಿಗಳಿಗೆ ನೀಡು. ಆ ಮುದಿಹದ್ದಿನೊಡನೇ ನಾನು ಬಾಳುವೆ ಮಾಡಲಾರೆ?’ ಎಂದು ಕೋಗಿಲೆಯ ಕಂಠದಿಂದ ಮಂಜುಳನಾದ ದೈನ್ಯಬೆರೆತ ಧ್ವನಿಯೊಂದು ಅಲ್ಲಿಂದ ಹೊರಟಿತು.
ಮೋಹನನು ಬೇಕೆಂತಲೆ ಆರಿಯದವರಂತೆ ಮಂದಿರವನ್ನು ಸೇರಿ ಗಂಟೆಯನ್ನು ಬಾರಿಸಿದನು. ನಮಸ್ಕಾರದ ಪ್ರಕರಣವನ್ನು ಮುಗಿಸಿದ ಬಳಿಕ, ಏನು ಲೀಲಾ ಸಂಜೆಯಾಯಿತು. ಒಬ್ಬಳೇ ಬಂದುಬಿಟ್ಟಿಯಲ್ಲ, ಎಂದು ಕೇಳಿದ.
‘ಗೆಳತಿಯರು ಮುಂಚೆ ಬಂದು ಹೋದರು. ಮನೆಗೆಲಸ ಮುಗಿಸಿ ಕೊಂಡು ಬರಲು ತಡವಾಯಿತು.
ಮುಂದೆ ಒಂದು ಗಳಿಗೆ ಇಬ್ಬರೂ ಮೌನವಾಗಿದ್ದರು. ಇಂದಿನ ಅವಳ ರೂಪರಾಶಿಯು ಮೋಹನನನ್ನು ಬಹಳ ಹುಚ್ಚನಂತಾಗಿ ಮಾಡಿದ್ದಿತು. ತಾರುಣ್ಯದಿಂದ ಉಕ್ಕೇರುವ ಆ ಮುಖದ ಬೆಡಗು, ಬಳಕುವ ಪುಷ್ಟವಾದ ಆ  ಶರೀರ, ಆಕರ್‍ಷಯುಕ್ತವಾದ ಆ ನೋಟ. ಇವೆಲ್ಲವುಗಳೂ ಅವನನ್ನು ದಂಗು ಬಡಿಸಿದವು. ತಂಗಾಳಿಯ ಸೆಳೆತದಿಂದ ಹಾರಾಡುವ ಅವಳ ಆ ಉಂಗುರು ಗೂದಲಗಳನ್ನು ಸಾವರಿಸುವ ಭಾಗ್ಯವು ತನಗೆ ದೊರೆಯಬಹುದೋ ಎಂದು  ಚಿಂತಿಸುತ್ತಿದ್ದನೊ ಎನ್ನುವಂತೆ ನಟ್ಟ ದೃಷ್ಟಿಯಿಂದ ಅವಳನ್ನು ನೋಡುತ್ತಿದ್ದನು. ಮನದಲ್ಲಿಯೇ ಅವಳ ಸೌಂದರ್‍ಯಾಮೃತವನ್ನು ಸೇವಿಸತೊಡಗಿದನು. ಅವಳೂ ಇದೇ ಆನಂದವನ್ನು ಭೋಗಿಸಿತ್ತಿದ್ದಳು. ಮಿಂಚಿನಂತೆ ಇಬ್ಬರ ಮುಖದಲ್ಲಿಯೂ ನಗೆಮಲ್ಲಿಗೆ ! ಲೀಲಾವತಿಗೆ ಲಜ್ಜೆಯು ತಲೆಬಾಗಿಸಿತು. ಮಾತನಾಡಿಸಬೇಕೆಂದು ಮೋಹನನ ಸಮೀಪಕ್ಕೆ ಬರಬೇಕೆನ್ನುವಷ್ಟರಲ್ಲಿಯೇ ಹೊರಗೆ ಕಾಲು ಸದ್ದು! ಕಾಯಿ ಒಡಿಸಲಿಕ್ಕೆಂದು ನಾಲ್ಕಾರು   ಜನರು ಬರಲು ಇಬ್ಬರೂ ತಮ್ಮ ತಮ್ಮ ಮನೆಯ ದಾರೀ ಹಿಡಿದು ಬಿಟ್ಟರು.
ಆದಿನ ಲೀಲಾವತಿಗೆ ಮನೆಗೆ ಬಂದ ಬಳಿಕ ಸಮಾಧಾನವೇ ಇಲ್ಲ. ಮೋಹನನೊಡನೆ ಮದುವೆಯಾದರೆ ಅಪಶಕುನವೆಂದು ಪುರೋಹಿತರು ಬೊಗಳಿಬಿಟ್ಟಿದ್ದರಂತೆ. ಈ ವರೆಗೆ ಅವಳ ಜಾತಕಕ್ಕೆ ಸರಿಯಾದ ವರನೆಂದರೆ ಒಬ್ಬ ೫೦ ವರುಷದ ಮುದುಕನಿದ್ದನು. ಪುರೋಹಿತರು ಪರಿಶ್ರಮ ಪೂರ್‍ವಕವಾಗಿ ಹುಡುಕಿ ತೆಗೆದ ವರವಿದು. (ಪರಿಶ್ರಮಕ್ಕೆ ತಕ್ಕ ಫಲ  (ಲಂಚ) ತುಂಬಾ ಇರಬಹುದಲ್ಲವೇ?) ಅವಳಿಗೆ ಈ ಸಂಗತಿ ನೆನಪಾದಾಗೆಲ್ಲ ಮೋಹನನ ಮುಂದೆ ಮದುವೆಯ ಪ್ರಸ್ತಾಪವನ್ನು ತಾನಾಗಿಯೇ ಎತ್ತ ಕೂಡದೆಂದು ಅನ್ನಿಸುತ್ತಿದ್ದಿತು.
ದೇವಿಯ ಮಂದಿರದಲ್ಲಿ ಮತ್ತೊಂದು ದಿನ ಲೀಲಾವತಿ ಮೋಹನರ ಭೆಟ್ಟಿಯಾಯಿತು. ಲೀಲೆಯು ತನ್ನ ಕರುಣ ಕತೆಯನ್ನೆಲ್ಲ ಹೇಳಿ ಮೋಹನನ ಮನಕರಗಿಸಿದಳು.
“ಲೀಲಾ, ಇಷ್ಟರಲ್ಲಿಯೇ ನಿನ್ನ ತಂದೆಗೇನೂ ವರ ಸಿಕ್ಕುವ ಲಕ್ಷಣವಿಲ್ಲ. ನೀನು ಏನಾದರೊಂದು ಹೇಳಿ ಆದಷ್ಟು ಮುಂದೆ ತಳ್ಳು, ನಾನೀಗ ಎಂಟ್ಹತ್ತು ದಿನಗಳಲ್ಲಿಯೇ ಮತ್ತೆ ಕಲಿಯಲು ಹೋಗಬೇಕು. ಈ ವರ್‍ಷ ಪರೀಕ್ಷೆ ಮುಗಿದೊಡನೆ ನಮ್ಮ ತಂದೆಯ ಸಮ್ಮತಿ ಪಡೆದು ನಿನ್ನನ್ನು ವರಿಸಿಯೇ ತೀರುವೆನು.” ಮೋಹನನು ವಚನವನ್ನಿತ್ತ. ಇಬ್ಬರೂ ಹಿಗ್ಗಿನಲ್ಲಿದ್ದರು.
ಆ ಬಳಿಕ ಆಗಾಗ್ಗೆ ಇಬ್ಬರ ಮಿಲನವೂ ಆಗುತ್ತಿದ್ದಿತು.
ಒಬ್ಬರ ಮುಂದೊಬ್ಬರು ತಮ್ಮ ಹೃದಯ ವೇದನೆಯನ್ನು ತೋಡಿ ಹೇಳುತ್ತಿದ್ದರು. ಆದರೆ ಸಮಾಜದ ಕ್ರೂರ ದೃಷ್ಟಿಗೆ ಇದೆಂತು ಸಹನವಾಗ ಬೇಕು? ಲಿಲಾವತಿ ಮೋಹನರು ಭ್ರಷ್ಟಾಚಾರ ನಡಿಸಿದರೆಂದು ಊರ ತುಂಬ ಹರಡಿ ಹೋಯಿತು. ಶಿಷ್ಟಬ್ರಾಹ್ಮಣರೆಲ್ಲ ಸೇರಿ ಲೀಲಾವತಿಯ ತಂದೆಗೆ ಎಚ್ಚರಿಕೆ ಕೊಟ್ಟರು. “ಅವಳ ಮದುವೆಯನ್ನು ಬೇಗನೆ ಮಾಡದೆ ಹೋದರೆ ನಿಮಗೆ ನಮ್ಮ ಸಮಾಜದಿಂದ ಹೊರಗೆ ತಳ್ಳಲಾಗುವುದು” ಎಂದು ಹೇಳಿದರು. ಇದೇ ವಾರದಲ್ಲಿ ಪುರೋಹಿತನು ಶೋಧಿಸಿ ತೆಗೆದ ವೃದ್ಧ ತರುಣನೊಡನೆಯೇ  ಮದುವೆಯಾಗುವದೆಂದು ನಿರ್‍ಣಯವಾಯಿತು.
ದಿನಗಳು ದಾಟುವದೇನು ತಡ? ಇಂದೇ ಮುದಿ ಮುದುವೆಯ ಮಹೋತ್ಸವ! ವರನು ಬಾಗಿಲಿಗೆ ಬಂದನು. ಅಳಿಯನನ್ನು ಬರಮಾಡಿ ಕೊಳ್ಳಲು ಎಲ್ಲರೂ ಸಂಭ್ರಮದಿಂದ ಹೊರಗೆಹೋದರು. ವರ ಸತ್ಕಾರದ ಕೆಲಸ ಬೇಗನೆ ಮುಗಿಸಬೇಕಾಗಿತ್ತು. ಯಾಕಂದರೆ ಆಕಾಶವು ಮೋಡಗಳಿಂದ  ಮುಸುಕಿ ಮಳೆಯ ಚಿನ್ಹಬಲವಾಗಿದ್ದಿತು. ಗುಡುಗು ಮಿಂಚುಗಳ ಕೋಲಾಹಲವೆದ್ದಿದ್ದಿತು. ಲೀಲಾವತಿಯು ಮಾತ್ರ ಒಂದು ಚಿಕ್ಕ ಕೋಣೆಯಲ್ಲಿ ಕುಳಿತು, ತನ್ನ ದೈವಲೀಲೆ, ದುರ್‍ಭಾಗ್ಯ, ಮತ್ತು ಸಮಾಜದ ನಿರಂಕುಶತ್ವವನ್ನು ನೆನೆದು ದಾರೆ ದಾರಿಯಾಗಿ ಕಣ್ಣೀರು ಸುರಿಸುತ್ತಿದ್ದಳು. ಅಕಸ್ಮಾತ್ತಾಗಿ ಕಿಡಿಕಿಯಿಂದ ಏನೋ ಬಿದ್ದ ಹಾಗೆ ಸಪ್ಪಳವಾಯಿತು. ಅದೇ ಕಾಲಕ್ಕೆ ಆಕಾಶದಲ್ಲಿ ಖಡ-ಖಡಲ್‌ಯೆಂಬ ಸದ್ದಾಯಿತು. ಬಿದ್ದ ವಸ್ತುವು ಅವಳ  ಮುಂಬದಿಯಲ್ಲಿಯೇ ಕಾಣಿಸಿತು. ಒಂದು ಕಲ್ಲು ಅದಕ್ಕೊಂದು ಮಡಿಕೆ ಹಾಕಿದ ಕಾಗದವನ್ನು ಕಟ್ಟಲಾಗಿತ್ತು. ಆಶ್ಚರ್‍ಯಚಕಿತಳಾಗಿ, ಸರ್ರನೆ ಅದನ್ನು ಉಚ್ಚಿನೋಡಿದಳು. ಮೋಹನನ ಪತ್ರ.
ಏನಿದು? ಆಕಾಶದಿಂದ ಬಿದ್ದ ಸಿಡಿಲೋ ಅಥವಾ ನಿಜವಾಗಿಯೂ ಮೋಹನನ ಪತ್ರವೋ?
ಓದ ತೊಡಗಿದಳು.
“ಹೃದಯ ದೇವಿ ಅಕಸ್ಮಾತ್ತಾಗಿ ನಿನಗೊದಗಿರುವ ಸಂಕಟನನ್ನು ನಾನು ಬಲ್ಲೆನು. ಮಾಡುವದೇನು? ಪ್ರೇಮವು ಕುರುಡಾದದ್ದು ಆದರ ಸಮಾಜವು ನಿರಂಕುಶವುಳ್ಳದು ಪ್ರಕೃತಿಯು ನಮ್ಮಿಬ್ಬರನ್ನು ಕೂಡಿಸಿದ್ದಿತು. ಗುಣಕರ್‍ಮ ಸ್ವಭಾವಗಳು ಒಂದಾಗಿದ್ದವು. ಆದರೇನು? ಈ ಕಠೋರ ಸಮಾಜವು ಆಶ್ರಯವನ್ನು ಕೊಡಲಿಲ್ಲ! ಉಪಾಯವಿಲ್ಲ. ಇನ್ನು ನೀನು ನನ್ನ ಮೇಲಿನ ಮೋಹವನ್ನು ಬಿಡು. ನಿನ್ನ ಹೃದಯಮಂದಿರದಲ್ಲಿಂದ ನನ್ನನ್ನು ತೆಗೆದು ಹಾಕಿ ಹಿಂದೂ ಸ್ತ್ರೀಯು ಮಾಡಬೇಕಾದ ಪವಿತ್ರ ಕರ್‍ತವ್ಯವನ್ನು ಪಾಲಿಸು. ನಾನಿನ್ನು ಯಾರಿಗೂ ದೊರೆಯೆನು. ಅಂದರೆ ಆತ್ಮಹತ್ಯ ಮಾಡಿಕೊಳ್ಳುವೆನೆಂದು ಮಾತ್ರ ಭಾವಿಸಬೇಡ. ಸಮಾಜಸುಧಾರಣೆಗಾಗಿ  ನನ್ನ ದೇಹವನ್ನು ಧಾರೆಯೆರೆಯುವೆನು”
-ಮೋಹನ
“ಇದೀಗ ಬಿದ್ದ ಸಿಡಿಲು ಆಕಾಶದಿಂದ ಬಿದ್ದುದಾದರೆ ಇದು ಸಮಾಜ ರಾಕ್ಷಸನಿಂದ ಎಸೆಯಲ್ಪಟ್ಟ ಸಿಡಿಲು” ಯೆಂದೆನಿಸಿರಬಹುದು ಲೀಲಾವತಿಗೆ.
ಓಲೆಯನ್ನು ಓದಿದೊಡನೆ ಆಕೆಗೆ ಕತ್ತಲು ಕವಿದಂತಾಯ್ತು. ಭೂಕಂಪವಾಯಿತು! ವಿಚಾರಕ್ರಾಂತಿಯುಂಟಾಯಿತು” ನಾನು ಈ ನನ್ನ ಕೋಮಲವಾದ ಪವಿತ್ರ ದೇಹವನ್ನು ಒಬ್ಬ ನರಾಧಮನಿಗೆ ಅರ್ಪಿಸಲಾ? ಛೆ…. ಮುದಿ ಹದ್ದಿಗೆ… ಮನಸ್ಸಿಗೆ ಬಾರದವನಿಗೆ ಶಕ್ಯವೇ ಇಲ್ಲ” ಎಂದು ಸರ್ರನೆ ಮಹಡಿಗೆ ಹೋದಳು. ಮೆಟ್ಟಿಲುಗಳು ಸಣ್ಣವಾದ್ದರಿಂದ ಆಶ್ರಯಕ್ಕಾಗಿ ಆಲ್ಲಿ ಒಂದು ಹಗ್ಗವನ್ನು ಕಟ್ಟಿದ್ದರು. ಮೇಲೆ ಹೋದವಳೇ ಆ ಹೆಗ್ಗವನ್ನು ಕುತ್ತಿಗೆಗೆ ಬಿಗಿಯಾಗಿ ಕಟ್ಟಿಕೊಂಡು ಆತ್ಮಾರ್‍ಪಣೆಯನ್ನು ಮಾಡಿದಳು.
ವರಸತ್ಕಾರವನ್ನು ಮುಗಿಸಿಕೊಂಡು ಲೀಲಾವತಿಯನ್ನು ಸಮಾಧಾನ ಪಡಿಸುವದಕ್ಕಾಗಿ ಅವಳ ತಾಯಿ ಅವಳಿದ್ದ ಕೋಣೆಗೆ ಹೋದಳು. ಅಲ್ಲಿ ಅವಳಿರಲಿಲ್ಲ ಮಹಡಿಗೆ ನಡೆದಳು. ವಿಚಿತ್ರವಾದ ದೃಶ್ಯ ಲೀಲಾವತಿಯ ತನ್ನ ಪ್ರಿಯಕರನನ್ನು ಮನದಲ್ಲಿ ಪೂಜಿಸುತ್ತ ಹಗ್ಗದ ಗುಂಟ ತೂಗಾಡುತ್ತಿದ್ದಳು. ಕಣ್ಣು ಗುಡ್ಡೆಗಳು ಬೆಳ್ಳಗಾಗಿದ್ದವು. ಅಕರಾಳ ವಿಕರಾಳವಾದ ರೂಪ! ಪಸರಿಸಿದ ಕೂದಲು! ಹೊರಗೆ ತೆಗೆದ ನಾಲಿಗೆ! ಸಮಾಜ   ರಾಕ್ಷಸನೊಡನೆ ಹೋರಾಡಿದ ಸಾಕ್ಷಾತ್‌ ರಾಕ್ಷಸವೇ ಸರಿಯೆಂದು ಎಲ್ಲರಿಗೂ ಭಾಸವಾಗಹತ್ತಿತು. ಆದರೇನು ಗೆಲ್ಲಲಿಲ್ಲ. ಸೋತು ಪ್ರಾಣ ನೀಗಿದ್ದಿತು.
ಬಹಳ ದಿವಸದಿಂದಲೂ ಮೋಹನನ ಪತ್ತೆಯೇ ಯಾರಿಗೂ ಆಗಿರಲಿಲ್ಲ, ಹೆಣ್ಣಿನ ಹುಚ್ಚು ಹಿಡಿದು ದೇಶಾಂತರವಾದನೆಂದು ಕೆಲವು ಕುಹಕರು ಆಡುತ್ತಿದ್ದರು. ಮೊನ್ನೆ ತಾನೆ ಧಾರವಾಡ ಪಾಠಶಾಲೆಯ ಬೈಲಲ್ಲಿ “ಜನ್ಮ ಕುಂಡಲಿ ಹಾಗು ವಿವಾಹದ ಬಗ್ಗೆ ಕಲ್ಪನೆ” ಎಂಬ ವಿಷಯವಾಗಿ ವಾಖ್ಯಾನವಾಯಿತು. ಎಲ್ಲರ ಕಣ್ಣಲ್ಲಿಯೂ ಬಳಬಳ ನೀರು! ಅವನು ಸಮಾಜ  ಸುಧಾರಣೆಗಾಗಿ ಪಡುತ್ತಿದ್ದ ಸಾಹಸವನ್ನು ಕಂಡು ಎಲ್ಲರಿಗೂ ಸಂತೋಷವಾಯಿತು. ಬರೀ ಸಂತೋಷದಿಂದೇನು ಪ್ರಯೋಜನ? ಕೃತಿಯಲ್ಲಿ ತಂದರೆ ಮೋಹನನು ಪಡುವ ಶ್ರಮದ ಸಾರ್‍ಥಕ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ ತೇರು
Next post ಸಿರಿಗನ್ನಡ ವೈಭವ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…