ಕಾಣದ ಚೇತನ ತುಂಬಿದೆಯೊ
ಕನ್ನಡ ಮಣ್ಣಲ್ಲಿ
ಮೀರಿದ ಸತ್ವವು ಅಡಗಿದೆಯೊ
ಕನ್ನಡ ನುಡಿಯಲ್ಲಿ
ಕಬ್ಬಿಗರುದಿಸಿ ಹಾಡಿದರೊ
ಕೊಳಲಿನ ಕಂಠದಲಿ
ಗಂಡುಗಲಿಗಳು ಮೆರೆದಾರೊ
ಕತ್ತಿಯ ಹಿಡಿಯುತಲಿ
ಕನ್ನಡ ಕೀರ್ತಿ ಹರಡಿದರೊ
ಎಂಟೂ ದಿಕ್ಕಿನಲಿ
ಕನ್ನಡ ಬಾವುಟ ಹಿಡಿದಾರೊ
ಮುಗಿಲಿನ ಮಟ್ಟದಲಿ
ಮುತ್ತಿನ ಮಣಿಗಳು ಉದುರುತಿವೆ
ಸ್ವಾತಿಯ ಮಳೆಯಾಗಿ
ಎಲ್ಲೂ ಹಸಿರು ತೆನೆಯುತಿದೆ
ಸ್ಫೂರ್ತಿಯ ಸೆಲೆಯಾಗಿ
ಕವಿ ಕೋಗಿಲೆಗಳು ಹಾಡುತಿವೆ
ಚೆಲುವಿಗೆ ಸೆರೆಯಾಗಿ
ಈ ಅಂದವ ನಾ ಸವಿಯುತಿಹೆ
ಪುಣ್ಯದ ಫಲವಾಗಿ
*****