(೧೯೪೩ನೆಯ ಇಸವಿಯ ಕೊನೆಯ ೪ ತಿಂಗಳಲ್ಲಿ ಬಂಗಾಲದಲ್ಲಿ ಕ್ಷಾಮಕ್ಕೂ ರೋಗಕ್ಕೂ ತುತ್ತಾದವರನ್ನು ಕುರಿತು)
ಸತ್ತರೇ ಅಕಟ ಮೂವತ್ತಯಿದು ಲಕ್ಷ
ಬಂಗಾಲದೊಳಗೆಮ್ಮ ಕಂಗಾಲ ಬಳಗಂ!
ಬೋನದಾ ದುರ್‍ಭಿಕ್ಷ, ಬೇನೆಯ ಸುಭಿಕ್ಷ –
ಕರು ಉಂಡಿತೇ ಹಾಲು ತುರು ಹಿಂಡೆ ಕೊಳಗಂ?
ಇಳೆ ಭಾರವನ್ನಿಂತೆ ಇಳುಹುದೆನೆ ತನ್ನ,
ಹೌರಕ್ಕೆ ಹೌರ ಗಡ ಭಾರತರೊ ಭಾರ?
ವಡಬಾಗ್ನಿಯಿಂ ತನ್ನ ಕಡಲಿಗೆನೆ ಬನ್ನ,
ಯೂರೋವದೌರ್‍ವದಿಂ ಭಾರತಕೊ ಘೋರ?
ಯಾರ ಸೊಕ್ಕಿಗೆ, ದೇವ, ಯಾರ ತಲೆ ದಂಡ?
ಸಾಲದೆನೆ ನಮ್ಮ ಏಗಾಲದೀ ಅಡಿಮೆ
ಮತ್ತೆ ಲೋಕದ ಪಾಪ ಹೊತ್ತ ಕುರಿವಿಂಡ
ಬೇನೆ ಬರ ಮುಕ್ಕೆ ಇನ್ನೇನೆಮಗೆ ಕಡಿಮೆ?
ಇನಿಸೆ ಭಾಗ್ಯಕೆ, ಜೀಯ, ಜನಿಸಿದೆವೆ ನಾವು?-
ಕೂಳಿದ್ದು ಉಪವಾಸ, ಬಾಳಿದ್ದು ಸಾವು!
*****