ಫಿಲ್ (ಅರ್ಥಾತ್ ಫಿಲಿಪ್ ಕಾರ್ನಬಿ)
ಶೆಲ್ಫಿನಲ್ಲಿ ಪುಸ್ತಕಗಳ ನಡುವೆ
ತಲೆಬುರುಡೆಯೊಂದನ್ನ
ಇರಿಸಿಕೊಂಡಿದ್ದಾನೆ.

ಸಾಹಿತ್ಯದ ವಿದ್ಯಾರ್ಥಿ ಫಿಲ್
ತುಂಬಾ ಓದುತ್ತಾನೆ-
ಶೇಕ್ಸ್‌ಪಿಯರ್, ಮಿಲ್ಟನ್, ಲಾರೆನ್ಸ್,
ಇತ್ಯಾದಿ ಇತ್ಯಾದಿ

ನಾಟಕದ ಹುಚ್ಚು ಬೇರೆ. ತಾನೇ ಕೆಲವು
ಬೀದಿ ನಾಟಕಗಳನ್ನ ಬರೆದಿದ್ದಾನೆ
(ಸದ್ಯ ಒಂದು ಗುಂಪು ಕಟ್ಟಿಕೊಂಡು
ಬರ್ಲಿನಿಗೆ ಹೋಗಿದ್ದಾನೆ)

ಕಾಲೇಜಿಗೆ ಸೇರುವ ಮೊದಲು ಫಿಲ್
ಸಿಮೆಟ್ರಿಯೊಂದರಲ್ಲಿದ್ದ
ಸತ್ತವರಿಗೋಸ್ಕರ
ಗೋರಿ ತೆಗೆಯುತ್ತ

ಅಲ್ಲಿಂದಲೇ ಇರಬಹುದು ಈ
ತಲೆಬುರುಡೆಯನ್ನವನು ತಂದುದು.
ತಿಳಿದರೆ ಅವನನ್ನು
ಜೈಲಿಗೊಯ್ಯಲೂಬಹುದು

ನಾನೊಮ್ಮೆ ಕೇಳಿದಾಗ ಅಂದ-
ನಾಟಕದಲ್ಲಿ ಉಪಯೋಗಿಸಲು ಬರುತ್ತದೆ.
ಅಲ್ಲದೆ ಚರ್ಮದ ಕೆಳಗೇನಿದೆ ಎಂಬುದನ್ನ
ನನಗೆ ಸದಾ ನೆನಪಿಸುತ್ತದೆ.

ಮತ್ತೊಂದು ದಿನ ನಾನು ಆಶ್‌ಟ್ರೇ ಹುಡುಕಿದಾಗ
ಫಿಲ್ ಅದನ್ನೇ ತೆಗೆದು
ನನ್ನ ಮುಂದಿಟ್ಟು-ಇಲ್ಲಿಲ್ಲ!
ಹಾಗೆಂದು ನಾನು ಕನವರಿಸಿದೆ!
*****