ಇಡೀ ರಾತ್ರಿ ಎದ್ದು ಕೂಡುತ್ತೇನೆ
ಬಿದ್ದ ಕೆಟ್ಟ ಕನಸಿನ ಅಬ್ಬರಕೆ.
ಮನದ ಎಲ್ಲಾ ಚಿತ್ರಗಳನ್ನು ಅಳುಕಿಸಿದರೂ
ಎದ್ದು ಬಂದು ನಿಲ್ಲುತ್ತದೆ ನಿನ್ನ ಮುಖ
ಕನ್ನಡಿ ಚೂರುಗಳಾಗಿವೆ ಮನದ ಮಾತುಗಳು.

ಹೂವಕಂಪ ನೆರಳಿಗೆ ಹಾಯ್ದು ಚಿಟ್ಟೆಯ
ರೆಕ್ಕೆಯಲ್ಲಿ ಕೆಂಪುರಕ್ತ ದುಃಖ ಬಿಕ್ಕುಗಳ
ಮಡಿಲಲ್ಲಿ ಒಂಟಿ ಹಕ್ಕಿ ರೆಪ್ಪೆ ಮುಚ್ಚಿದ
ಕಣ್ಣುಗಳು ಬೆಳಕು ಹರಿಯಲಿಲ್ಲ
ನೀಲಿ ಕಡಲಿನಲಿ ತೇಲುವ ಒಂಟಿ ದೋಣಿ.

ಉಪ್ಪುನೀರು ಅಂಗಳದಲಿ ಹರಳುಗಟ್ಟಿ
ಸೇವಂತಿಗೆ ಚಿಗುರಲಿಲ್ಲ ಹೂ ಬಿಡಲು
ಮೋಡದ ದಟ್ಟಕಪ್ಪು ಕಣ್ ಕಾಡಿಗೆ ಅಳುಕಿಸಿದೆ
ಸವರಿದ ಗಾಯ ಮಾಯದ ಉರಿ
ಬಾಯಾರಿದ ಸಾಲುಗಳು ಇಂಗಿವೆ ನದಿಯಲಿ.

ಗಿಡದಲಿ ಚಿಗುರಿದ ಹಸಿರು ಇಳಿದು
ಒಡಲಲಿ ಅರಳು ಕಾದು ಕುಳಿತ
ಚಿಟ್ಟೆ ಹೂವು ಬಟ್ಟಲು ಕಣ್ಣುಗಳ ಹೀರುನೋಟ
ನೆಲದ ಕಂಪ ಹೀರಿ ಎದೆಗೆ ಹಾಲು ಕರೆದು
ಕಾಯುತ್ತ ನಿಂತ ಕ್ಷಣ ಬಣ್ಣದ ಹೂಗಳ ಅರಳಿಸಲು.

ಕಲ್ಲರಳಿದ ಹೂವ ಮೊಗೆದ ಬೊಗಸೆ
ಕಡಲತುಂಬ ತುಂಬಿದ ಸೋನೆ ಹನಿ
ಕನಸುಗಳ ನೂರು ಗಾವುದ ನಡೆದ
ಹೆಜ್ಜೆ ಭಾರಗಳು ಒಜ್ಜೆ ಭಾವಗಳು
ಹಗುರ ಹಾಡಾಗಲಿ ನೀ ಬರುವ ನೀಲಿ ಹೂಗಳ ಹಾದಿಯಲಿ.
*****

ಕಸ್ತೂರಿ ಬಾಯರಿ

Latest posts by ಕಸ್ತೂರಿ ಬಾಯರಿ (see all)