ಕನ್ನಡ – ಕರ್ನಾಟಕ ಜಾಗೃತಿಯಲ್ಲಿ ಕನ್ನಡ ಚಿತ್ರರಂಗದ ಪಾತ್ರ

ಕನ್ನಡ ಚಿತ್ರರಂಗ ಮದರಾಸಿನಲ್ಲಿ ತೆವಳುತ್ತಿದ್ದ ಕಾಲ ಒಂದಿತ್ತು. ಕನ್ನಡ ಚಿತ್ರರಂಗ ಕನ್ನಡದ ನೆಲದಲ್ಲೇ ಬೇರೂರಬೇಕೆಂಬ ಸಾಹಿತಿಗಳ, ಪತ್ರಕರ್ತರ, ಕನ್ನಡ ಚಳುವಳಿಕಾರರ ಕೂಗಿಗೆ ಚಿತ್ರರಂಗದ ಜನರೂ ಓಗೊಟ್ಟರು. ನಮ್ಮ ಹಿರಿಯ ನಟ ಬಾಲಕೃಷ್ಣ ಅನೇಕ ತಾಪತ್ರಯಗಳ ಮಧ್ಯೆ ಕೆಂಗೇರಿಯಲ್ಲಿ ‘ಅಭಿಮಾನ ಸ್ಟುಡಿಯೋ’ ಕಟ್ಟುವುದರ ಮೂಲಕ ತಮ್ಮ ಕನ್ನಡಾಭಿಮಾನವನ್ನು ಮೆರೆದ ಪ್ರಥಮರು. ಇದರಿಂದಾಗಿ ಬಾಲಕೃಷ್ಣ ಅವರಿಗೆ ಅನುಕೂಲವಾಯಿತೋ ಇಲ್ಲವೋ ಚಿತ್ರರಂಗಕ್ಕಂತೂ ಈಗ ಬಹಳಷ್ಟು ಅನುಕೂಲವೇ ಆಗಿದೆ. ಇದೇ ರೀತಿ ನಮ್ಮ ಸರ್ಕಾರ ಕಂಠೀರವ ಸ್ಟುಡಿಯೋ ತೆಗೆದರೆ, ಉದ್ಯಮಿಗಳು ಚಾಮುಂಡೇಶ್ವರಿ ಸ್ಟುಡಿಯೋ ನಿರ್ಮಿಸಿದರು. ಮೈಸೂರಿನಲ್ಲಿ ಪ್ರೀಮಿಯರ್ ಸ್ಟುಡಿಯೋ ಆರಂಭವಾಗಿ ಚಿತ್ರರಂಗಕ್ಕೆ ಚೇತನ ನೀಡಿತು. ಸರ್ಕಾರದ ತೆರಿಗೆ ವಿನಾಯಿತಿಯೂ ಕುಮ್ಮಕ್ಕು ನೀಡಿ ಮದರಾಸಿನಲ್ಲಿದ್ದ ಚಿತ್ರರಂಗವನ್ನು ಕರ್ನಾಟಕಕ್ಕೆ ಎಳೆತಂದಿತು. ನಾವು ಕಂಡಂತೆ ಸಿನಿಮಾರಂಗಕ್ಕೆ ಬಂದ ಅನಂತನಾಗ್-ಶಂಕರನಾಗ್ ಸಂಕೇತ ಸ್ಟುಡಿಯೋವನ್ನು ಕಟ್ಟಿ ನಿಲ್ಲಿಸಿದ ಸಾಹಸಿಗಳು, ದೊಡ್ಡವರೇ ಮಾಡಲಾಗದ, ಗಮನಕೊಡದ ಈ ಮಹಾಕಾರ್ಯವನ್ನು ಇವರಿಬ್ಬರು ಮಾಡಿ ತೋರಿಸಿದರು. ಇದಿಷ್ಟೂ ಸ್ಟುಡಿಯೋಗಳು ಕನ್ನಡ ನೆಲಕ್ಕೆ ಬಂದ ಮಾತು. ಈ ಪ್ರಕರಣದಲ್ಲಿ ಕನ್ನಡ ಜಾಗೃತಿಯೇ ವಿಶೇಷವಾಗಿ ಕೆಲಸಮಾಡಿದೆ.

ಸ್ಪಂದಿಸುವ ಹಾಡುಗಳ ಮಹಾಪೂರ
ನಮ್ಮ ಕವಿ ಸಾಹಿತಿಗಳಂತೆಯೇ ಸಿನಿಮಾಕವಿ ಸಾಹಿತಿಗಳೂ ಕನ್ನಡದ ಬಗ್ಗೆ ಬಹಳ ಸ್ಪಂದಿಸಿದ್ದಾರೆ. ಜನರ ಮನದಲ್ಲಿ ಕನ್ನಡ ಜಾಗೃತಿಯ ಬೀಜ ಬಿತ್ತಿದ್ದಾರೆ. ಉದಾಹರಣೆಗೆ – ‘ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ತಾಯ್ನಾಡ ಜಯಭೇರಿ ನಾವಾದೆವೆನ್ನಿ’ – ಜಿ.ಕೆ. ವೆಂಕಟೇಶ್ ಅವರು ‘ಕಣ್ತೆರೆದು ನೋಡು’ ಚಿತ್ರಕ್ಕಾಗಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಹಾಡಿದ ಈ ಗೀತೆಯನ್ನ ಕೇಳದ ಕನ್ನಡಿಗನಿದ್ದರೆ – ಅವನಂತೂ ಕನ್ನಡಿಗನೇ ಅಲ್ಲ. ‘ಹಾಡು ಬಾ ಕೋಗಿಲೆ ನಲಿದಾಡು ಬಾರೆ ನವಿಲೆ ಸಿರಿಗನ್ನಡಾಂಬೆಯ ಜಯಧ್ವನಿ ಮೊಳಗಲಿ.’ ಹುಣಸೂರರ ಈ ಗೀತೆ ವಿಜಯನಗರ ಸಾಮ್ರಾಜ್ಯವನ್ನೇ ಕಣ್ಣಮುಂದೆ ತಂದು ನಿಲ್ಲಿಸಿಬಿಡುತ್ತದೆ . ‘ಅ ಆ ಇ ಈ ಕನ್ನಡದ ಅಕ್ಷರಮಾಲೆ, ಅಮ್ಮ ಎಂಬುದೆ ಕನ್ನಡ ಕಂದನ ಕರೆಯೋಲೆ’ ವರ್ಣಮಾಲೆಯನ್ನು ಬಳಸಿ ನೀತಿಪಾಠ ಹೇಳಿಬಿಟ್ಟಿದ್ದಾನೆ ಸಿನಿಮಾ ಕವಿ.

ಡಾ|| ರಾಜ್ಕುಮಾರ್ ಹಾಡಿದ ‘ಜೇನಿನ ಹೊಳೆಯೋ, ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿನುಡಿಯೋ’ – ಚಿ. ಉದಯಶಂಕರರ ಈ ಗೀತೆ ಕನ್ನಡಿಗರ ಮನದಲ್ಲಿ ಹೂ ಅರಳಿಸುವುದಿಲ್ಲವೆ ? ಅದರಲ್ಲೂ ಡಾ|| ರಾಜ್ ಹಾಡಿದ ಶೈಲಿಯಲ್ಲಿ ಅದೆಂತಹ ಅಭಿಮಾನದ ಜೇನು ಸುರಿದಿದೆ ! ಪತ್ರಕರ್ತ ಶಾಮಸುಂದರ ಕುಲಕರ್ಣಿ ಅವರ ಈ ಗೀತೆ ನೋಡಿ. ‘ಕರ್ನಾಟಕ ಇತಿಹಾಸದಲ್ಲಿ ಬಂಗಾರದ ಯುಗದ ಕತೆಯನ್ನು ಹಾಡುವೆ ಕೇಳಿ ನಾ ಹಾಡುವೆ ಕೇಳಿ…’ ಹಂಪೆಯಲ್ಲಿ ಚಿತ್ರಿಸಿರುವ ಈ ಹಾಡಿನ ಚಿತ್ರೀಕರಣದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯ ಕನ್ನಡಿಗರ ಎದೆಯಲ್ಲಿ ಕೆಚ್ಚನ್ನು ಮೂಡಿಸದೆ ಇರಲು ಸಾಧ್ಯವೆ? ಹಂಸಲೇಖರ ‘ಕರುನಾಡ ತಾಯಿ ಸದಾ ಚಿನ್ಮಯಿ’ ಎಂಬ ಗೀತೆಗೆ ರವಿಚಂದ್ರನ್ ಹಾಡಿ ಕುಣಿವಾಗ ಕನ್ನಡಿಗರ ಮನಕ್ಕೆ ರೆಕ್ಕೆ ಮೂಡದಿರಲು ಸಾಧ್ಯವೆ ? ಇವಿಷ್ಟು ದೇಶಪ್ರೇಮ ಗೀತೆಗಳು. ಕನ್ನಡದ ಜಾಗೃತಿಗೆ ಕಾಣಿಕೆಗಳಿವು.

ಇನ್ನು ಸಿನಿಮಾ ಕವಿಗಳು ಅಕಡೆಮಕ್ ಕವಿಗಳಂತೆ ಉತ್ತಮ ಮೌಲ್ಯವಿರುವ ಕವಿತೆಗಳನ್ನು ಕನ್ನಡದ ಖಜಾನೆಗೆ ತುಂಬುವುದರಲ್ಲಿ ಹಿಂದೆ ಬಿದ್ದಿಲ್ಲ.

“ಹೂವು ಚೆಲುವೆಲ್ಲಾ ತನದೆಂದಿತು, ಹೆಣ್ಣು ಅದ ಮುಡಿದು ಚೆಲುವೆ ತಾನೆಂದಿತು.” ಆರ್.ಎನ್. ಜಯಗೋಪಾಲರ ಈ ಚಿತ್ರಕತೆಯಲ್ಲಿ ಸುಮಧುರ ಭಾವನೆ ಹಾಸುಹೊಕ್ಕಾಗಿ ಹರಿದಿದೆ. “ಯಾವ ಹೂವು ಯಾರ ಮುಡಿಗೋ ! ಯಾರ ಒಲವು ಯಾರ ಕಡೆಗೋ…” ಎಂದು ಚಕಿತರಾಗುತಾರೆ ಕುಲಕರ್ಣಿ, ‘ಹೃದಯದಲಿ ಇದೇನಿದು ನದಿಯೊಂದು ಓಡಿದೆ’ ಎಂದು ರೋಮಾಂಚನ ಗೊಳ್ಳುತಾರೆ ಉದಯಶಂಕರ್ ‘ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು? ದಾಳಿ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು’ – ಎಂದು ಪ್ರೇಮಬನಿ ಹರಿಸುತಾರೆ ಹಂಸಲೇಖ. ‘ನಾನೊಂದು ತೀರ ನೀನೊಂದು ತೀರ, ಪ್ರೀತಿ ಹೃದಯ ಭಾರ…’ ಎಂದು ಭಾವುಕರಾಗುತ್ತಾರೆ, ದೊಡ್ಡರಂಗೇಗೌಡ ‘ಮಾನವ ಮೂಳೆ ಮಾಂಸದ ತಡಿಕೆ ಒಳಗೆ ತುಂಬಿದೆ ಕಾಮಾದಿ ಬಯಕೆ…’ ಎಂದು ಆದ್ಯಾತ್ಮಿಕ ದರ್ಶನ ಮಾಡಿಸುತ್ತಾರೆ. ಹುಣಸೂರ ಕೃಷ್ಣಮೂರ್ತಿ, ಹೀಗೆ ಸಿನಿಮಾ ಕವಿಗಳು ಕನ್ನಡಮ್ಮನ ಮುಡಿಗೆ ಸುಗಂಧಭರಿತ ಪುಷ್ಪಗಳನ್ನು ಆಗಾಗ ಮುಡಿಸಿ ಶೃಂಗರಿಸುತ್ತಲೇ ಇದ್ದಾರೆ. ನೇರವಾಗಿ ಹೇಳಬೇಕೆಂದರೆ ಈ ಸಿನಿಮಾ ಕವಿತೆಗಳೇ ಹೆಚ್ಚು ಜನಪ್ರಿಯ. ಸಿನಿಮಾ ಕವಿಗಳೇ ಅಕಾಡೆಮಿಕ್ ಕವಿಗಳಿಗಿಂತ ಹೆಚ್ಚು ಜನಜನಿತ. ಕಾರಣ ಸರಳತೆ, ತ್ರಾಸಕೊಡದ ಪ್ರಾಸ, ಗೇಯತೆ, ಲಯ-ಜೊತೆಗೆ ಸಂಗೀತ ಲೇಪನದಿಂದಾಗಿ ಈ ಗೀತೆಗಳು ಮನೆಮಂದಿಯ ಹಾಡುಗಳಾಗಿ ಬಿಡುತ್ತವೆ.

ಸಿನಿಮಾದಲ್ಲಿ ಕನ್ನಡದ ನಾಡುನುಡಿಯ ಬಗೆಗಿನ ಡೈಲಾಗ್ಗಳಿದ್ದರಂತೂ ಥಿಯೇಟರಿನಲ್ಲಿ ಕಿವಿಗಡಚಿಕ್ಕುವ ಚಪ್ಪಾಳೆ, ಆ ಮಾತುಗಳು ಡಾ|| ರಾಜ್ ಅವರ ಬಾಯಲ್ಲಿ ಮೂಡಿ ಬಂದರಂತೂ ನಮ್ಮ ಜನ ಹುಚ್ಚೆದ್ದು ಚಪ್ಪಾಳೆ ಹಾಕುತ್ತಾರೆ. ‘ನಾವಾಡುವ ನುಡಿಯೆ ಕನ್ನಡ ನುಡಿ, ನಾವಿರುವ ತಾಣವೆ ಗಂಧದ ಗುಡಿ – ಶ್ರೀಗಂಧದ ಗುಡಿ…’ ಎಂದು ರಾಜ್ ಕುಮಾರ್ ಹಾಡುತ್ತಾ ಅಭಿನಯಿಸುವಾಗ ಕನ್ನಡದ ಬಗ್ಗೆ ಯಾರು ಜಾಗೃತರಾಗುವುದಿಲ್ಲ? ತಾನು ಕನ್ನಡಿಗನೆಂದು ಯಾರು ಬೀಗುವುದಿಲ್ಲ?

ರಾಜ್ ಕುಮಾರ್ ಅಭಿನಯಿಸಿದ ಚಿತ್ರಗಳಲ್ಲಿ ಕನ್ನಡಾಭಿಮಾನಕ್ಕೆ ಮೊದಲ ಸ್ಥಾನ.. ಕನ್ನಡ ಐತಿಹಾಸಿಕ ವೀರರ ಬಗ್ಗೆ ಅವರು ಅಭಿನಯಿಸಿ ವೀರರಿಗೊಂದು ಸ್ಪಷ್ಟರೂಪ ಕೊಟ್ಟು ನಮ್ಮ ಮನದಲ್ಲಿ ಕೆತ್ತಿ ನಿಲ್ಲಿಸಿಬಿಟ್ಟಿದ್ದಾರೆ. ‘ರಣಧೀರ ಕಂಠೀರವ’, ‘ಪುಲಿಕೇಶಿ’, ‘ಮಯೂರ ’, ‘ಎಚ್ಚಮ ನಾಯಕ’ ಇತ್ಯಾದಿ ವಿಜೃಂಭಿಸಿದ ಚಿತ್ರದ ಸಣ್ಣತುಣುಕನ್ನೂ ನಮ್ಮ ಜನ ಮರೆಯಲು ಸಾಧ್ಯವಿಲ್ಲ. ‘ಸಂತ ತುಕಾರಾಂ’, ‘ಭಕ್ತ ಕನಕದಾಸ’, ‘ಕುಂಬಾರ’, ‘ಪುರಂದರ’ ಹಾಗೆಯೆ ಸರ್ವಜ್ಞನಿಗೂ ಜೀವಕೊಟ್ಟು ತೆರೆಗೆ ತಂದ ಡಾ|| ರಾಜ್ ತಮ್ಮ ಚಿತ್ರಗಳಲ್ಲಿ ಕನ್ನಡದ ಜಾಗೃತಿ ಮೂಡಿಸಲು ಅವಿರತ ಪ್ರಯತ್ನಿಸಿದವರು. ಸದಭಿರುಚಿಯ ಚಿತ್ರಗಳನ್ನು ನೀಡಿದ ನಿರ್ಮಾಪಕರೂ ಸಹ.

ತಿರುವ ಕೊಟ್ಟ ಪುಟ್ಟಣ್ಣ.
ತಂತ್ರಜ್ಞರಲ್ಲಿ ಕನ್ನಡದ ಬಗ್ಗೆ ಅಷ್ಟೇ ಅಭಿಮಾನ ತೋರಿದ ಮತ್ತೊಬ್ಬ ಧೀಮಂತ, ಪುಟ್ಟಣ್ಣಾಜೀ. ಇವರು ಕನ್ನಡ ಚಿತ್ರರಂಗಕ್ಕೊಂದು ಹೊಸರೂಪ ಕೊಟ್ಟ ಚಾಣಾಕ್ಷ ತಮ್ಮ ಚಿತ್ರಗಳಲ್ಲಿ ಕನ್ನಡ ಕಲಾವಿದರಿಗೇ ಅಗ್ರಸ್ಥಾನ.. ಕನ್ನಡ ನೆಲದಲ್ಲೇ ಚಿತ್ರೀಕರಣವಾಗಬೇಕೆಂದು ಹಠಹಿಡಿದವರು. ಕನ್ನಡ ಕೃತಿಗಳನ್ನು ಆಯ್ದು ಚಿತ್ರೀಕರಿಸಿ ಕನ್ನಡ ಸಾಹಿತ್ಯವನ್ನು ಅನಕ್ಷರಸ್ಥರಿಗೂ ಮುಟ್ಟಿಸಿದರು. ಕನ್ನಡ ಕಾದಂಬರಿಗಳನ್ನು ಅಚ್ಚುಕಟ್ಟಾಗಿ ತೆರೆಗೆ ತಂದು ಕನ್ನಡದ ಕಂಪನ್ನು ನಾಡಿನಾದ್ಯಂತ ಹರಡಿದ ಸಾಹಸಿ, ಐಹೊಳೆ, ಪಟ್ಟದಕಲು, ಬಿಜಾಪುರ, ಸೊಂಡೂರು, ಶೃಂಗೇರಿ, ವರದಾ ಇತ್ಯಾದಿ ಸ್ಥಳಗಳ ಸೊಬಗನ್ನು ಪತ್ತೆಹಚ್ಚಿ ಸೆರೆಹಿಡಿದು ನಮ್ಮ ನೆಲದ ಸಿರಿಯನ್ನು ಕನ್ನಡಿಗರಿಗೆ ತೋರಿಸಿದ ಕಲಾಕುಶಲಿ, ಅವರ ಚಿತ್ರಗಳಲ್ಲಿ ಸಂಪ್ರದಾಯ ಶರಣತೆ ಎದ್ದು ಕಾಣುತ್ತಿತ್ತು. ಇಷ್ಟೊಂದು ಉತ್ಕಟ ಕನ್ನಡಾಭಿಮಾನಿ ಸಂಗೀತಪ್ರೇಮ ಕನ್ನಡ ಚಿತ್ರರಂಗದಲ್ಲಿ ಹಿಂದೂ ಇರಲಿಲ್ಲ. ಈಗಂತೂ ಇಲ್ಲವೇ ಇಲ್ಲ.

ಖ್ಯಾತನಾಮರಾದ ಗಿರೀಶ್ ಕಾರ್ನಾಡ್, ಕಾರಂತ, ಕಾಸರವಳ್ಳಿ, ನಾಗಾಭರಣರಂತಹ ಪ್ರತಿಭಾನ್ವಿತರು ಚಿತ್ರರಂಗಕ್ಕೆ ಪಾದಾರ್ಪಣ ಮಾಡಿ ಕನ್ನಡ ಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಿದ್ದು ಉಲ್ಲೇಖಾರ್ಹ.

ಕೋಟಿಗಟ್ಟಲೆ ಖರ್ಚುಮಾಡಿ ಕನ್ನಡಿಗನನ್ನು ಬೇರೆ ಭಾಷೆಯವರೂ ನಿಬ್ಬೆರಗಾಗಿ ನೋಡುವಂತೆ ಮೋಡಿ ಮಾಡಿದ ರವಿಚಂದ್ರನ್ ಕಾಣಿಕೆಯೂ ಕಡಿಮೆಯದೇನಲ್ಲ. ಈಗಂತೂ ಸಿನಿಮಾ ಜನವೆಂದು ಯಾರೂ ನಿಕೃಷ್ಟವಾಗಿ ಕಾಣುವಂತೆಯೇ ಇಲ್ಲ, ಯಾಕೆಂದರೆ ನಮ್ಮ ಕನ್ನಡದ ಅತಿಶ್ರೇಷ್ಠ ಸಾಹಿತಿಗಳಿಂದ ಹಿಡಿದು ಜನಪ್ರಿಯ ಸಾಹಿತಿಗಳ ಕಾದಂಬರಿಗಳನ್ನು ತೆರೆಗೆ ತಂದು ಸಾಹಿತ್ಯ ಸೌರಭವನ್ನು ಹಳ್ಳಿಗಳ್ಳಿಗೂ, ಮನೆಮನೆಗೂ ತುಂಬಿಸಿದ ಕೀರ್ತಿ ನಮ್ಮ ಸಿನಿಮಾ ಜನರ ಪಾಲಿಗಿದೆ. ದೊರೆ – ಭಗವಾನ್, ಕೆ.ವಿ. ಜಯರಾಂ, ಸಿದ್ದಲಿಂಗಯ್ಯ, ರಾಜೇಂದ್ರಬಾಬು ಕಾದಂಬರಿ ಆಧಾರಿತ ಚಿತ್ರಗಳಿಂದಲೇ ತಮ್ಮ ಛಾಪು ಮೂಡಿಸಿದವರು. ‘ಬಂಗಾರದ ಮನುಷ್ಯ’, ‘ಭೂತಯ್ಯನ ಮಗ ಅಯ್ಯು’ ಕಾದಂಬರಿ ಚಿತ್ರಗಳನ್ನು ಅಸಂಖ್ಯ ಜನರು ನೋಡಿ ನಲಿದಿದ್ದಾರೆ. ‘ನಾಗರಹಾವು’, ‘ಶರಪಂಜರ’, ‘ಗೆಜ್ಜೆಪೂಜೆ’, ‘ಬಾಡಿದ ಹೂವು’, ‘ಹೊಂಬಿಸಿಲು’, ‘ಪ್ರೇಮಪರ್ವ’, ‘ಬಂಧನ’, ‘ಪರಾಜಿತ, ‘ರಾಮರಾಜ್ಯದಲ್ಲಿ ರಾಕ್ಷಸರು’, ‘ಸಂಕ್ರಾಂತಿ’, ‘ಕಾಡಿನ ಬೆಂಕಿ’- ಇತ್ಯಾದಿ ಕನ್ನಡದ ಕಾದಂಬರಿಗಳು ಚಲನಚಿತ್ರರೂಪ ಪಡೆದು ಕಾದಂಬರಿಗಳಷ್ಟೆ ಜನಪ್ರಿಯವಾಗಿರುವುದು ಸುಳ್ಳಲ್ಲ.

ನಮ್ಮ ಕವಿವರ್ಯರಾದ ಕುವೆಂಪು, ಬೇ೦ದ್ರ, ಕೆ.ಎಸ್. ನರಸಿಂಹಸ್ವಾಮಿ, ಜಿ.ಪಿ.ರಾಜರತ್ನಂ, ಜಿ.ಎಸ್. ಶಿವರುದ್ರಪ್ಪ, ನಿಸಾರ್ ಅವರ ಗೀತೆಗಳನ್ನು ಸಹ ನಮ್ಮ ಸಿನಿಮಾ ಜನ ಅಭಿಮಾನದಿಂದ ಬಳಸಿಕೊಂಡಿದ್ದಾರೆ. ಡಾ|| ಶಿವರಾಮ ಕಾರಂತರಂತವರೂ ಸಿನಿಮಾಕ್ಕೆ ಕಾದಂಬರಿಗಳನ್ನು ಕೊಟ್ಟದ್ದಷ್ಟೆ ಅಲ್ಲ; ‘ಕುಡಿಯರ ಕೂಸು’ ಕಾದಂಬರಿ ಆಧರಿಸಿ ಚಿತ್ರವನ್ನೂ ಮಾಡಿದರು. ಅವರ ‘ಚೋಮನದುಡಿ’, ಅನಂತಮೂರ್ತಿಯವರ ‘ಸಂಸ್ಕಾರ’. ಭೈರಪ್ಪನವರ ‘ವಂಶವೃಕ್ಷ’, ಎಂ.ಕೆ.ಇಂದಿರಾ ರವರ ‘ಫಣಿಯಮ್ಮ’ ಆಲನಹಳ್ಳಿಯವರ ‘ಕಾಡು’ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಗಟ್ಟಿತನವನ್ನು ಪ್ರದರ್ಶಿಸಿ ರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿವೆ. ಕನ್ನಡ ಜನತೆ ಇತರ ಭಾಷೆಯವರೆದುರು ಬೀಗುವಂತೆ ಮಾಡಿವೆ. ಕರ್ನಾಟಕದ ಖ್ಯಾತಿ ಭಾರತದಾದ್ಯಂತ ಪಸರಿಸಲು ಚಿತ್ರರಂಗ ನೀಡಿದ ಈ ಕೊಡುಗೆಗಳೇನು ಕಡೆಗಣಿಸುವಂಥದ್ದಲ್ಲ.

ಡಾ|| ರಾಜ್ ಆಪತ್ಬಾಂಧವ
ಬರೀ ಚಿತ್ರಮಾಡುವಷ್ಟಕ್ಕೇ ಚಿತ್ರರಂಗದವರು ಸೀಮಿತವಾಗಲಿಲ್ಲ. ‘ಗೋಕಾಕ್ ಚಳುವಳಿ’ ಕಾಲವನ್ನೇ ತೆಗೆದುಕೊಳ್ಳಿ, ಸಾಹಿತಿಗಳು ಕಲಾವಿದರೇ ಹಿಂಜರಿಯುತ್ತಿದ್ದಂತಹ ಸನ್ನಿವೇಶದಲ್ಲಿ ಡಾ|| ರಾಜ್‌ಕುಮಾರ್‌ ಗೋಕಾಕ್‌ ಚಳುವಳಿಯ ನೇತೃತ್ವ ವಹಿಸಿ ಮುಂದೆ ಬಂದ ಕನ್ನಡವೀರ. ಅವರ ಹಿಂದೆ ಸಾಹಸಸಿಂಹ ವಿಷ್ಣು, ರೆಬೆಲ್ ಅಂಬರೀಷ್, ಅಶೋಕ್, ಲೋಕೇಶ್ ಇತ್ಯಾದಿ ತಾರಾಮಣಿಗಳ ದಂಡೇ ಹರಿಯಿತು. ಗೋಕಾಕ್ ಚಳುವಳಿ ಯಶಸ್ವಿಯಾಗಲು ರಾಜ್ ಕುಮಾರ್ ಅವರ ಪ್ರಚಂಡ ಶಕ್ತಿ, ನೈತಿಕಬಲವೇ ಕಾರಣ ಎಂಬುದು ಉತ್ಪ್ರೆಕ್ಷೆಯ ಮಾತಲ್ಲ. ನಮ್ಮ ಬುದ್ದಿಜೀವಿ ಸಾಹಿತಿಗಳೂ ಅವರ ಜೊತೆಗಿದ್ದರು. ಕೀರ್ತಿಹನಿಯೋ, ಸ್ವಪ್ರತಿಷ್ಠೆಯೋ ಅಲ್ಲೂ ನಮ್ಮ ಈ ಸಾಹಿತಿಗಳಲ್ಲಿ ಒಡಕು ಹುಟ್ಟಿತು. ಆದರೆ ಚಿತ್ರಕಲಾವಿದರಲ್ಲಿ ಚಿತ್ರಸಾಹಿತಿಗಳಲ್ಲಿ ಇಂತಹ ಬಿರುಕುಗಳಿಲ್ಲ, ಕನ್ನಡ ಜನರನ್ನು ಜಾಗೃತಗೊಳಿಸಲು ಗೋಕಾಕ್ ಚಳವಳಿಯಲ್ಲಿ ಕಂಕಣ ಕಟ್ಟಿನಿಂತ ಚಿತ್ರರಂಗವನ್ನು ಲೇವಡಿ ಮಾಡಲು ಸಾಧ್ಯವೆ?

ನಮ್ಮ ಬುದ್ಧಿಜೀವಿ ಸಾಹಿತಿಗಳಲ್ಲಿ ಗೋಕಾಕ್ ಚಳವಳಿಯಲ್ಲಿ ಬಿರುಕು ಮೂಡಿದ ಹಾಗೆ ‘ತಿರುವಳ್ಳುವರ್ ಪ್ರತಿಮೆ’ ಸ್ಥಾಪನೆ ವಿಷಯದಲ್ಲೂ ಭಿನ್ನಾಭಿಪ್ರಾಯ. ಚಿತ್ರರಂಗದಲ್ಲಿಯೂ ಬೇಕಾದಷ್ಟು ಬಿರುಕು-ಭಿನಾಭಿಪ್ರಾಯವಿರಬಹುದು. ಆದರೆ ಕನ್ನಡದ ವಿಷಯ ಬಂದರೆ ಎಲ್ಲಾ ಕಲಾವಿದರು, ಸಿನಿಮಾ ಸಾಹಿತಿಗಳು ಒಂದಾಗಿಬಿಡುತ್ತಾರೆ. ಒಂದೇ ಕುಟುಂಬದವರಾಗಿಬಿಡುತ್ತಾರೆ. ಡಾ|| ರಾಜ್ ಅವರ ಮಾತಿಗೆ ಎದುರು ಮಾತಿಲ್ಲ.

ಕನ್ನಡದ ಬಗ್ಗೆ ಕೆಚ್ಚು ರೊಚ್ಚು ಅಭಿಮಾನವನ್ನು ತುಂಬಲೆಂದೇ ಡಾ|| ರಾಜ್‌ಕುಮಾರ್‌ ಅಭಿಮಾನಿಗಳ ಸಂಘ ಶ್ರಮಿಸುತ್ತಿದೆ. ಕನ್ನಡ ಚಿತ್ರರಂಗದ ಪ್ರಥಮ ಆಕರ್ಷಣೆ, ಚಿತ್ರರಂಗ ಬೆಳೆಯಲು ಡಾ|| ರಾಜ್ ಮೂಲ ಪುರುಷರಾದಂತೆಯೇ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದ ನಮ್ಮ ಅನೇಕ ಸಾಹಿತ್ಯ ದಿಗ್ಗಜಗಳ ಸಾಲಿನಲ್ಲಿ ನಿಲ್ಲಬಲ್ಲ ಧೀಮಂತ ವ್ಯಕ್ತಿ ಕನ್ನಡ ಸಿನಿಮಾದವರು ಬಹಳಷ್ಟು ಚಾರಿತ್ರಿಕ ವ್ಯಕ್ತಿಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರ ಸಿಂಧೂರ ಲಕ್ಷ್ಮಣ, ಶರಣ ಬಸವಣ್ಣ, ಕವಿ ಕಾಳಿದಾಸ ಇವರೆಲ್ಲರನ್ನೂ ಕನ್ನಡದ ಅನಕ್ಷರಸ್ಥ ಮಂದಿಗೂ ತೋರಿಸಿ ಕನ್ನಡ ಜನರಲ್ಲಿ ಜಾಗೃತಿ ಮೂಡಿಸಲು ಅಪಾರವಾಗಿ ಶ್ರಮಿಸಿದ್ದಾರೆಂಬುದರಲ್ಲಿ ಯಾವುದೇ ರೀತಿ ಅನುಮಾನ ಪಡುವ ಅಗತ್ಯವೇ ಇಲ್ಲ. ಕನ್ನಡದ ಖ್ಯಾತಿಯನ್ನು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊಳಗಲು ಶಿಲ್ಪಿಗಳು, ಚಿತ್ರಕಾರರು, ಸಂಗೀತಗಾರರು, ನೃತ್ಯಪಟುಗಳು ಶ್ರಮಿಸಿದಂತೆ ಸಾಹಸತೋರಿದಂತೆ ಕನ್ನಡ ಚಿತ್ರರಂಗವೂ ತನ್ನ ಅಭಿರುಚಿ, ಅಭಿಮಾನ ಸಾಹಸ ಸಾಧನೆಯನ್ನು ತೋರಿಸಿದೆ. ಕನ್ನಡ ಜಾಗೃತಿ ಉಂಟುಮಾಡುವಲ್ಲಿ ಕನ್ನಡತನವನ್ನು ಉಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ.

ಕನ್ನಡ ಚಿತ್ರರಂಗದ ಸಾಹಿತ್ಯವನ್ನು ನಮ್ಮ ವಿದ್ವಾಂಸರು ಅಧ್ಯಯನದ ದೃಷ್ಟಿಯಿಂದ ನೋಡುವಂತಾದಾಗ, ಸಿನಿಮಾ ಸಾಹಿತಿಗಳನ್ನೂ ಅಸ್ಪೃಶ್ಯರಂತೆ ಕಾಣದೆ ಸಹೃದಯತೆ ತೋರಿದಾಗ ಮಾತ್ರ ಅಲ್ಲಿಯೂ ಗಟ್ಟಿ ಸಾಹಿತ್ಯ, ಸೃಜನಶೀಲ ಸಾಹಿತ್ಯ, ಶ್ರೇಷ್ಠ ಕವಿತೆಗಳಿಗೇನು ಕಡಿಮೆಯಿಲ್ಲವೆಂಬುದು ವೇದ್ಯವಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕರೆ
Next post ಕೆಟ್ಟ ಕಣ್ಣು

ಸಣ್ಣ ಕತೆ

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

 • ಗುಲ್ಬಾಯಿ

  ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

 • ಎರಡು ರೆಕ್ಕೆಗಳು

  ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

 • ಹೃದಯದ ತೀರ್ಪು

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

 • ಹುಟ್ಟು

  ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

cheap jordans|wholesale air max|wholesale jordans|wholesale jewelry|wholesale jerseys