ನಮ್ಮ ಕಣ್ಣು ಬಹಳ ಕೆಟ್ಟವು ಸ್ವಾಮೀ,
ಒಳ್ಳೆದೆಂಬುದರಲೆಲ್ಲಾ ಕೆಟ್ಟದನೇ ಕಾಣ್ತಾವೆ,
ಕೆಟ್ಟ ಕೆಟ್ಟುದರಾಗೇ ಗಟ್ಟಿಯೇನೋ ಕಾಣ್ತಾವೆ,
ನೋಡಬಾರದಂಬೋವನೆಲ್ಲ ತಿರುತಿರುಗಿ ನೋಡ್ತಾವೆ,
ಹೋಗಬಾರದೆಂಬೆಡೆಯಲ್ಲಿ ಬೇಲಿ ದಾಟಬೇಕಂತಾವೆ
ಚೆಲುವಿನ ಸೆಲೆಗಳ ನೋಡುತ್ತ ಸೌಂದರ್ಯಮೀಮಾಂಸೆಗೆ
ತೊಡಗುತ್ತವೆ
ರಸಪಾತ್ರೆಗಳ ಅಳೆದುಸುರಿದು ಅವುಗಳ
ಜೀವ-ರಸಾಯನ ಶಾಸ್ತ್ರ ಪ್ರಮಾಣ ನಿಷ್ಕರ್ಷೆ ಮಾಡುತ್ತವೆ
ಬಣ್ಣ ಬಿಂದುಗಳ ವಾಸನೆ ಮೂಸುತ್ತಾ ಹೋಗಿ
ಅವುಗಳ ವಂಶವೃಕ್ಷ ಚರಿತ್ರೆಯ ತೋಡುತ್ತವೆ
ಕೋಟಿ ದೇವತೆಗಳನೆಲ್ಲ ಆಡಿಸಿದ ಆ ಸೂತ್ರದಿಂದ
ಈ ಮನುಕುಲದಾಧಿಪತ್ಯಗಳ ಮಣ್ಣು ಮಾಡಿ
ಆದಮೀವರ ಏಕಚಕ್ರಾಧಿಪತ್ಯಗಳ ಕಲ್ಪಿಸುತ್ತವೆ
ಈ ಕೊಂಬೆರೆಂಬೆಗಳ ನೇರ ದೊಂಬಿಗಳ ಕೆಳಗಿನ
ಬೇರನೇ ಗುರಿಯಿಡುತ್ತವೆ ಆದ್ದರಿಂದ
ನಿಮ್ಮ ದೃಷ್ಟಿಯಲ್ಲಿ ನಮ್ಮ ಕಣ್ಣು ಬಹಳ ಕೆಟ್ಟವು ಸ್ವಾಮಿ
*****