ವಿಮಾ ಏಜಂಟರಿಗಿಂತ ಎರಡು ಮಾತುಗಳನ್ನು ಹೆಚ್ಚಾಗಿ ಮಾತಾಡಿ, ಆಡಿದ ಸುಳ್ಳನ್ನು ಸತ್ಯವೆಂದೇ ಹಟ ವಿಡಿದು ವಾದಿಸುವ ಏಜಂಟರಾರೂ ಇರುವರಾದರೆ- ಅವರೇ ಇವರು ಮದುವೆಯ ಏಜಂಟರು. ಅಷ್ಟೇ ಅಲ್ಲ, ವಿಮಾ ಏಜಂಟರು ತಿಳಿಯದ ಒಂದೆರಡು ಚಿಕ್ಕ ಆಟಗಳನ್ನು ಈ ಏಜಂಟರು ಅರಿತಿರುವರು.

ರಾಮಚಂದ್ರನಾಯ್ಕರು ತಮ್ಮ ಹೆಂಡತಿಯ ಅಕಾಲ ನಿಧನವನ್ನು ಚಿಂತಿಸುತ್ತ ಈ ಐವತ್ತನೆ ವಯಸ್ಸಿನಲ್ಲಿ ತನಗೆ ಮತ್ತೊಂದು ಹೆಣ್ಣನ್ನು ಕೊಡುವ ವಿವೇಕಿಯು ಈ ಮೂಢ ಜಗತ್ತಿನಲ್ಲಿರುವನೇ ಎಂದು ಆಶ್ಚರ್ಯ ಪಡುತ್ತಿರಲು, ಹರೆ ಕಳ ಗೋವರ್ಧನರಾಯರು- ಶತ್ರು ಸೈನ್ಯದಿಂದಾವೃತನಾಗಿ ಚಿಂತಿಸುತ್ತಿದ್ದ ಅರಸನ ಸಮ್ಮುಖಕ್ಕೆ ಬರುವ ಸಾಹಸೀ ಸೇನಾ ನಾಯಕನಂತೆ ನೆಟ್ಟಗೆ ಬಂದು, “ನಮಸ್ಕಾರ!” ಎಂದರು.

ಮಾತುಕತೆಗಳು ನಡೆದುವು. ಮೂಲ್ಕಿಯಲ್ಲಿ ಸಂಪದ್ಗಿರಿರಾಯರ ಮಗಳು ಬೆಳೆದಂತೆಯೂ, ಅವರು ರಾಮಚಂದ್ರ ನಾಯ್ಕರ ಧ್ಯಾನದಲ್ಲೆ ಇದ್ದಂತೆಯೂ ತಿಳಿದು ಬಂತು. ಗೋವರ್ಧನರಾಯರು ಜತೆಯಲ್ಲಿ, ಆ ಹುಡುಗಿಯ ಫೋಟೋವನ್ನೂ ತಂದಿದ್ದರು. ಸಂಪದ್ಗಿರಿರಾಯರು ಒಂದುವರೆ ಸಾವಿರ ವರದಕ್ಷಿಣೆ ಕೊಡುವರು; ವಿವಾಹಕ್ಕೆ ಒಪ್ಪಿಗೆಯನ್ನು ಮರುದಿನವೇ ಕಳುಹಬೇಕಾಗಿ ಹೇಳಿ ಕಳುಹಿರುವರು. ಗೋವರ್ಧನರಾಯರು ಪರೋಪಕಾರಾರ್ಥ ಇತ್ತ ಬಂದಿರುವರು; – ಇವಿಷ್ಟು ಸಂಗತಿಗಳು ಹೊರಬಿದ್ದುವು.

ರಾಮಚಂದ್ರನಾಯ್ಕರು ಅವರನ್ನು ಚೆನ್ನಾಗಿ ಸತ್ಕರಿಸಿದರು. ಮದುವೆಯಾಗಲು ತನ್ನ ಆಕ್ಷೇಪವೇನೂ ಇಲ್ಲವೆಂದರು. ಆ ಮೇಲೆ ಫೋಟೋ ನೋಡಿದರು. ಆನಂತರ, ಪುನಃ ತಮ್ಮ ಆಕ್ಷೇಪವೇನೇನೂ ಇಲ್ಲವೆಂದರು.

ತನಗೆ ಸಂತೋಷವಾಯಿತೆಂದರು ಗೋವರ್ಧನ ರಾಯರು, ಆ ರಾತ್ರೆ ಅಲ್ಲೆ ಉಳಕೊಂಡು, ಮರುದಿನ ಎದ್ದು, ನಾಯ್ಕ ರೊಂದಿಗೆ ಫಲಾಹಾರ ತೀರಿಸಿ, ಮೂಲ್ಕಿಗೆ ಹೋಗಿ ಬರಲು ಹತ್ತು ರೂಪಾಯಿಗಳನ್ನು ನಾಯ್ಕರಿಂದ ಪಡೆದು, ತಾನು ತಂದ ಫೋಟೋವನ್ನು ನಾಯ್ಕರೊಡನೆ ಬಿಟ್ಟು ತೆರಳಿದರು, ಅದೇ ಅವರ ಕೊನೆಯ ಭೇಟಿ.

ಒಂದು ತಿಂಗಳ ನಂತರ, ನಾಯ್ಕರು ಸಂಪದ್ಗಿರಿರಾಯರಿಗೆ ಕಾಗದ ಬರೆದರು. ತನಗೆ ಮಗಳೇ ಇಲ್ಲವೆಂದೂ, ನಾಯ್ಕರ ಪತ್ರವನ್ನು ನೋಡಿ ತಾನು ಆಶ್ಚರ್ಯಪಟ್ಟಿರುವೆನೆಂದೂ, ಗೋವರ್ಧನ ಎಂಬ ಹೆಸರಿನವರನ್ನು ತಾನರಿಯೆನೆಂದೂ ಸಂಪದ್ಗಿರಿರಾಯರಿಂದ ಉತ್ತರ ಬಂತು.

ನಾಯ್ಕರು, ಗೋವರ್ಧನರಾಯರು ತಂದ ಫೋಟೋವನ್ನು ಸಂಪದ್ಗಿರಿರಾಯರಿಗೆ ಕಳುಹಿದರು. ಎರಡು ದಿನಗಳಲ್ಲಿ ಸಂಪದ್ಗಿರಿರಾಯರಿಂದ ಪುನಃ ಉತ್ತರ ಬಂತು:- “ನೀವು ಕಳುಹಿಸಿದ ಫೋಟೋ ನನ್ನ ಮೃತಪತ್ನಿಯದು. ಒಂದು ತಿಂಗಳ ಹಿಂದೆ ‘ಶ್ರೀಧರರಾಯ’ ಎಂಬ ಹೆಸರಿನವ ರೊಬ್ಬರು ನನ್ನ ಮನೆಗೆ ಬಂದಿದ್ದರು. ಒಂದು ದಿನ ಉಳಕೊಂಡು,
ನನಗೆ ಎರಡನೆ ಸಂಬಂಧವೊಂದನ್ನು ಸೂಚಿಸಿ, “ಉಡುಪಿ ನಾರಾಯಣರಾಯರ ಮಗಳ ಫೋಟೋ” ಎನ್ನುತ್ತ ಒಂದು ಫೋಟೋ ಕೊಟ್ಟರು. ಮರುದಿನ ೫ ರೂಪಾಯಿ ಗಳೊಂದಿಗೆ ಹೋದವರು, ಈ ತನಕ ಪತ್ತೆಯಿಲ್ಲ. ಆಗಲೇ ನನ್ನ ಮೃತಪತ್ನಿಯ ಫೋಟೋ ಕಾಣೆಯಾಗಿತ್ತು …… ಎಂದು ಮುಂತಾಗಿ ಬರೆದು, ಆ ‘ಶ್ರೀಧರರಾಯ’ರ ರೂಪವನ್ನು ಕೊಂಚ ವರ್ಣಿಸಿದ್ದರು.

ರಾಮಚಂದ್ರನಾಯ್ಕರಿಗೆ ಎದೆ ಧಸಕ್ಕೆಂದಿತು. ಒಳಗಿನ ಕೊಠಡಿಗೆ ಹೋಗಿ ತಮ್ಮ ಮಗಳ ಫೋಟೋ ಕಡೆಗೆ ನೋಡಿದರು. ಅವರೆಣಿಸಿದುದೇ- ಫೋಟೋ ಕಾಣೆಯಾಗಿದೆ!

ಇನ್ನೊಬ್ಬ ವಿವಾಹಾತುರ ವಿದುರನು ರಾಮಚಂದ್ರನಾಯ್ಕರಿಗೆ- “ನಿಮ್ಮ ಮಗಳ ಫೋಟೋ ನೋಡಿ ಒಪ್ಪಿಗೆಯಾಯಿತು. ಎಷ್ಟು ವರದಕ್ಷಿಣೆ ಕೊಡುವಿರಿ?” ಎಂದು ಪತ್ರ ಬರೆವ ತನಕ ಶ್ರೀಧರ ಯಾನೆ ಗೋವರ್ಧನ ರಾಯರ ಪತ್ತೆ ಮಾಡದೆ ಸುಮ್ಮನೆ ಕುಳಿತುಕೊಳ್ಳುವುದು ತಪ್ಪು – ಎಂದು ಕೊಳ್ಳುತ್ತ ನಾಯ್ಕರು ಪತ್ತೆಗಾರಂಭಿಸಿರುವರು.

ಆದರೆ ………!
*****