ನೆರಳಲ್ಲಿ ನಿಂತು, ಸಾವಿರಬಾರಿ,
ಇದೆಲ್ಲ ನಡೆಯುವುದು, ನೋಡಿದ್ದೇನೆ.
ಕಳ್ಳತನ ಮೊದಲು, ಕೊಲೆ ಆಮೇಲೆ,
ಮಾನಭಂಗ, ನಂತರ ಕುರುಡು ಕೈಯ ದಾರುಣ ಕೃತ್ಯಗಳು.
ಪ್ರತಿ ಬಾರಿ ಹೊಸತಾಗಿ ಪ್ರಾರ್ಥಿಸಿದ್ದೇನೆ,
ಇಲ್ಲವೆ ಹಳೆಯ ಪ್ರಾರ್ಥನೆಯನ್ನೆ ಹೊಸದಾಗಿ ಹೇಳಿದ್ದೇನೆ.
ನೋವಿನಲ್ಲಿ ಕವಿತೆ ಹುಡುಕುತ್ತ
ನನ್ನ ಆತ್ಮದ ಬೆಲೆ ತೆತ್ತು
ಮೌನವೆ ಉತ್ತಮವೆಂದು ತಿಳಿದಿದ್ದೇನೆ.
ನಾನು ಕೇವಲ ಕಣ್ಣುಮಾತ್ರ
ಒಳಿತು ಸೋಲುತ್ತಿರುವುದರ ಸಾಕ್ಷಿ;
ಹುಟ್ಟಿದ ಮಕ್ಕಳ ಸೌಂದರ್ಯ ಕಾಣುತ್ತ
ಕ್ಯಾನ್ಸರ್ ಕಾದಿರುವುದು ತಿಳಿದಿದ್ದೇನೆ.
ಬದುಕನ್ನು ಇತ್ಯರ್ಥ ಮಾಡುವವನಲ್ಲಿ
ನನ್ನದೊಂದೇ ಕೋರಿಕೆ :
ಸತ್ಯ ಸುಂದರವಾಗಲಿ.

ಮಂಜೂರಾಗಲಿಲ್ಲ.
*****
ಮೂಲ: ಆರ್ ಎಸ್ ಥಾಮಸ್

ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)