ಗಗನ ಮಲ್ಲಿಗೆ ಮುಗಿಲ ಮಂಚದಿ
ರಂಗವಲ್ಲಿಯ ಬರೆಯಲಿ
ಪ್ರೀತಿ ಸಂಪಿಗೆ ತುಟಿಯ ಗುಡಿಯಲಿ
ತಾಯ ಹಾಡನು ಹಾಡಲಿ

ಸಿಡಿಲ ಮುಗಿಲಲಿ ಕಡಲ ಅಲೆಯಲಿ
ಆತ್ಮ ಚಂದಿರ ಮೂಡಲಿ
ಬಾಳ ತೋರಣ ಕಲೆಯ ಹೂರಣ
ಹರುಷ ಹೋಳಿಗೆ ಉಣಿಸಲಿ

ಅವ್ವ ತಾಯಿಯೆ ಅಬ್ಬೆ ದೇವಿಯೆ
ಆಡು ಆಡಿಸು ಈ ವನ
ಚಂಡು ಕಣಗಿಲ ಜಾಜಿ ಬಕುಲದ
ಹೂವು ಮಕ್ಕಳು ಈ ಜನ

ವಿಷವು ಏತಕೆ ವೈರವೇತಕೆ
ಮಂದಹಾಸವ ಬೆಳಗಿಸೌ
ಹಾಲುಗಲ್ಲದ ಕೂಸು ಗಲ್ಲಕೆ
ಜೇನುತುಪ್ಪವ ತೋಯಿಸೌ

ಚಂದ್ರವಾಗಲಿ ವೀಣೆ ಮಿಡಿಯಲಿ
ಕೊಳಲಗಾನವ ಕೇಳಲಿ
ನಿನ್ನ ಮುರಳಿಗೆ ಕೊರಳ ತೂಗಲಿ
ಯೋಗ ಜೋಗುಳ ಸವಿಯಲಿ
*****