ಯಾರೋ ಬಂದರು ಯಾರೋ ಹೋದರು
ಗೋಡೆ ಮೇಲೆಲ್ಲ ನೆರಳು,
ಚಲಿಸಿದಂತಾಗಿ ಕುತ್ತಿಗೆ ಬೆನ್ನೊಳು
ಯಾರದೋ ನುಣುಪು ಬೆರಳು,
ಬಂದಿದ್ದರು, ನಿಂತಿದ್ದರು, ನುಡಿಸಲು
ಎಣಿಸಿದ್ದರು ಎಂಬ
ಭಾವವೊಂದೆ ಉಳಿದಿದೆ, ಕತ್ತೆತ್ತಲು
ಏನಿದೆ, ಬರಿಬಯಲು!

ಹೂ ಪರಿಮಳ ಹಾಯಾಗಿ ಹಬ್ಬುತಿದೆ
ಇಡಿಕೊಠಡಿಯ ತುಂಬ;
ಜರಿವಸ್ತ್ರದ ಸರಪರಸದ್ದಿನ್ನೂ
ನಿಂತಿದೆ ಕಿವಿತುಂಬ;
ತಾಯಿಕೈಯ ನೇವರಿಕೆಯೆ, ಆದರು
ತಲೆಯನೆತ್ತಲಿಲ್ಲ,
ಕರುಣೆ ತೋರಿ ಬಳಿ ಬಂದಿರೆ ದಿನವೂ
ನಮಿಸಿದ ಪ್ರತಿಬಿಂಬ.

ನೀವು ಬಂದಾಗ ಕರೆಯಲಿಲ್ಲೆಂದು
ಕೋಪವೇನು ನಿಮಗೆ?
ಕೊಡಿ ಎಂದು ನಯ ನುಡಿಯಲಿಲ್ಲ
ಬೇರಾಯಿತೆ ನಿಮ್ಮ ಬಗೆ?
ಏತರಲೋ ಹೂತಿತ್ತು ಮನಸು, ಬರಿ
ಕಾತರ ಕನವರಿಕೆ;
ಮಂಕು ಮುಚ್ಚಿ ತಪ್ಪಿದೆ ನಿಜ, ಅಷ್ಟಕೆ
ಹೊರಟೇ ಬಿಡುವುದೆ ಹೊರಕೆ?

ಬನ್ನಿ ಕಾದಿರುವ ನಿಮ್ಮದೇ ಧ್ಯಾನ
ಶಬರಿಯ ಹಂಬಲಿಕೆ,
ಲೌಕಿಕದಲಿ ಬಗೆದೈವವ ಮರೆತೆನು
ಶಪಿಸಬೇಡಿ ಅದಕೆ.
ಸ್ವಪ್ನಚಿತ್ತರನು ಯಾರು ದೂರುವರು
ಕಂಡರು ಕಾಣದಕೆ?
ತಿಳಿಯದೆ ತಪ್ಪಿದರದೆ ಕಾರಣವೆ
ಬಂದುದು ಬಾರದಕೆ?
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)