ಕಾಡುತಾವ ನೆನಪುಗಳು – ೯

ಕಾಡುತಾವ ನೆನಪುಗಳು – ೯

ಚಿನ್ನೂ,

ನೀನು ನನಗೆ ಯಾವಾಗಲೂ ಏನು ಕೇಳುತ್ತಿದ್ದೆ. ನೆನಪಿದೆಯಾ? ನನಗೆ ಯಾರ ಮೇಲೂ ‘Crush’, ‘Love’ ಆಗಿರಲಿಲ್ಲವಾ ಎಂದು. ಕಡಿಮೆ ಅನ್ನೋದಕ್ಕಿಂತ ಇಲ್ಲವೆನ್ನಬಹುದು. ಅಲ್ಲಿ ನಾವು ಹೆಣ್ಣು ಗಂಡೂ ಎಂಬ ಭೇದವಿಲ್ಲದೇ ದೇಹದ ಅಂಗಾಂಗಗಳ ಬಗ್ಗೆ, ರೋಗಗಳ ಬಗ್ಗೆ ಒಟ್ಟಾಗಿಯೇ ಕುಳಿತು ಓದಬೇಕಿತ್ತು ಚರ್ಚಿಸಬೇಕಿತ್ತು. ಆತಂಕ, ಆಸಕ್ತಿ, ಸ್ಪರ್ಧಾ ಮನೋಭಾವವಿರುತ್ತಿತ್ತು. ಅಂತಹ ‘ಸ್ಪಂದನ’ಗಳಿಗೆ ಜಾಗವಿರುತ್ತಿರಲಿಲ್ಲ. ಒಟ್ಟಿಗೇ ಓದುತ್ತಿದ್ದೆವು, ಹಗಲು-ರಾತ್ರಿಯೆನ್ನದೆ ಆಸ್ಪತ್ರೆ, ವಾರ್ಡುಗಳೂಂತ ಓಡಾಡುತ್ತಿದ್ದೆವು, ಚರ್ಚಿಸುತ್ತಿದ್ದೆವು. ಊಹೂಂ… ಸಹಪಾಠಿಗಳೊಂದಿಗೆ ಸ್ಪರ್ಧಾ ಮನೋಭಾವ ಬಿಟ್ಟರೆ ಯಾವ ಭಾವನೆಗಳೂ ಬಂದಿರಲಿಲ್ಲ. ಗಂಭೀರವಾಗಿರುತ್ತಿದ್ದೆ. ಒನಪು, ವಯ್ಯಾರಗಳು, ಬರುತ್ತಿರಲಿಲ್ಲ. ಸುಂದರವಾಗಿ, ಆಕರ್ಷವಾಗಿ ಕಾಣುವಂತೆ ಎಂದು ಅಲಂಕಾರ ಮಾಡಿಕೊಳ್ಳುತ್ತಿರಲಿಲ್ಲ. ಅಷ್ಟಕ್ಕೂ ಈ ಕಪ್ಪು ಬಣ್ಣದ ನನ್ನನ್ನು ಯಾರಾದರೂ ಇಷ್ಟ ಪಡುವವರು ಇರಲು ಸಾಧ್ಯವೇ ಇರಲಿಲ್ಲ. ಈ ಕೀಳರಿಮೆಯ ಭಾವ ನನ್ನೊಳಗೇ ಇದ್ದು ಆ ಸಾಹಸಕ್ಕೆ ಹೋಗಿರಲಿಲ್ಲವೋ… ಏನೋ…?

ಅಷ್ಟಕ್ಕೂ ನಾನು ಕತೆಗಾರ್ತಿ, ಒಳ್ಳೆಯ ಹಾಡುಗಾರ್ತಿ ಎಂದು ಗುರುತಿಸಿಕೊಂಡಿದ್ದೆನಲ್ಲ, ನನ್ನನ್ನು ಗಂಭೀರ ಯುವತಿಯೆಂದೇ ಪರಿಗಣಿಸಿದ್ದರು. ಹೆಚ್ಚೆಂದರೆ ಬ್ಯಾಚ್‌ಮೇಟ್ಸ್ ಜೊತೆ ಮಾತನಾಡುತ್ತಿದ್ದೆ, ಮಾತು ಕಡಿಮೆ ಮಾಡಿದ್ದೆ. So, No… ಹರಟೆ… ಹಾಸ್ಯ…

ಚಿನ್ನೂ, ನಾನು ಮೌನವಾಗಿ ಇಬ್ಬರು ಸಿನಿಮಾ ನಟರನ್ನು ಆರಾಧಿಸುತ್ತಿದ್ದೆ. ಕಬೋರ್ಡ್‌ ಒಳಗಿನ ಭಾಗದಲ್ಲಿ ಪತ್ರಿಕೆಯಲ್ಲಿ ಬಂದಿದ್ದ ಚಿತ್ರವನ್ನು ಕತ್ತರಿಸಿಟ್ಟುಕೊಂಡಿದ್ದನ್ನು ಅಂಟಿಸಿಕೊಂಡಿದ್ದೆ. ಹಾಸ್ಟೆಲಿನ ಕೆಲವು ಹುಡುಗಿಯರು ತಮ್ಮ ಮೆಚ್ಚಿನ ನಟರ ಚಿತ್ರಗಳನ್ನು ಹಾಗೆ ಅಂಟಿಸಿಕೊಂಡಿದ್ದನ್ನು ನೋಡಿದ್ದೆ. ಅವರು ಬಹಿರಂಗವಾಗಿಯೇ ಕಾಣುವಂತಿಟ್ಟುಕೊಂಡಿದ್ದರು. ಆದರೆ ನಾನು ಮಾತ್ರ ಗುಪ್ತವಾಗಿಯೇ ಇಟ್ಟುಕೊಂಡಿದ್ದೆ. ಯಾರಾದರೂ ನೋಡಿ ನಕ್ಕು ಬಿಟ್ಟರೆ? ಎನ್ನುವ ಆತಂಕ. ಆ ಚಿತ್ರಗಳು, ಆ ನಟರು ಯಾರೂಂತ ಹೇಳಲೇ ಇಲ್ಲ ಅಲ್ಲವಾ? ಅಂದು ಗಂಭೀರ ಪಾತ್ರಗಳಿಗೆ ಖ್ಯಾತಿಯಾಗಿದ್ದ, ಕಣ್ಣುಗಳಲ್ಲಿ ಪ್ರೀತಿ ಚಿಮ್ಮುಸುವ ನಟ ಸುರೇಶ್ ಹೆಬ್ಳಿಕ‌ರ್ ಮತ್ತೊಬ್ಬರು, ಸುಂದರ ಆಕರ್ಷಕ ನಿಲುವು ಸ್ಟೈಲ್‌ನಲ್ಲೇ ಹುಡುಗಿಯರನ್ನು ಬಲೆಗೆ ಹಾಕಿಕೊಳ್ಳುವಂತಿದ್ದ ವಿಷ್ಣುವರ್ಧನ್!

ಗಾಬರಿಯಾಯ್ತೇನೆ? ನಗು ಬಂತಾ? ಇರಲಿ ಬಿಡು, ಇದ್ದದ್ದನ್ನು ಇದ್ದ ಹಾಗೆ ಬರೀತಿದ್ದೀನಿ. ಕನಸುಗಳು ರಾಶಿ ರಾಶಿ… ಒಂದೊಂದು ಸಿನಿಮಾಗಳಂತೆ… ಆದರೆ ಅವುಗಳು ಬಿಡುಗಡೆಯಾಗುವಂತಹ ಸಿನಿಮಾಗಳಾಗಿರಲಿಲ್ಲ. ಕನಸುಗಳು… ಬರೀ, ಕನಸುಗಳು… ನನಸಾಗದ ಆ ಕನಸುಗಳು ಇಂದು ನೆನಪಾಗಿ ಕಾಡುತ್ತಿವೆ. ಒಳಗೊಳಗೇ ನನ್ನ ಬಗ್ಗೆ ನನಗೆ ನಾಚಿಕೆ, ನಗು ಬರುತ್ತೆ.

ಮೆಡಿಕಲ್ ಕಾಲೇಜಿನ ಅಂತಿಮ ಪರೀಕ್ಷೆಯ ನಂತರ ಒಂದು ವರ್ಷದ Intership ಅಂದರೆ House Surgeon ಆಗಿ ಆಸ್ಪತ್ರೆ ವಾರ್ಡುಗಳಲ್ಲಿ ಕಾರ್ಯ ನಿರ್ವಹಿಸಬೇಕಿತ್ತು. ಎಲ್ಲಾ ವಿಭಾಗಗಳಲ್ಲಿಯೂ ಎರಡೆರಡು ತಿಂಗಳ Posting ಇರುತ್ತಿತ್ತು. ಇಷ್ಟು ವರ್ಷಗಳು ಓದಿದ್ದನ್ನು ಕಾರ್ಯಗತ ಮಾಡಿಕೊಳ್ಳಬೇಕಿತ್ತು. ಅಲ್ಲಿಯೂ ಪ್ರೊಫೆಸರ್ಸ್ಗಳು ಅಸಿಸ್ಟೆಂಟ್ ಪ್ರೊಫೆಸ‌ರ್ಸಗಳು Clinical Class ಎಂದು ಹೇಳಿಕೊಡುತ್ತಿದ್ದರು. ನಾವು ಕಾಯಿಲೆಗಳನ್ನು ರೋಗಿಗಳನ್ನು ಪರೀಕ್ಷಿಸಿ Diagnosis ಹೇಳಿ Treatment ಬಗ್ಗೆಯೂ ಹೇಳಬೇಕಾಗುತ್ತಿತ್ತು. ಓದುವುದಂತೂ ಇರಲಿಲ್ಲ. ವಾರ್ಡಿನಿಂದ ವಾರ್ಡಿಗೆ, Laboratory ಗೆ X-ray Departments ಗಳಿಗೆ ತಿರುಗಬೇಕಿತ್ತು. ಬಿಳಿಕೋಟು, ಅಂದ್ರೆ Apron ಹಾಕಿಕೊಂಡು, ಕೈಯ್ಯಲ್ಲಿ ಸ್ಟೆತಾಸ್ಕೋಪ್ ಹಿಡಿದು ಆಸ್ಪತ್ರೆಯೊಳಗೆ ಓಡಾಡುವಾಗ ಒಂಥರಾ ಖುಷಿ, ರೋಮಾಂಚನವಾಗುತ್ತಿತ್ತು. ಈ Internship ಮುಗಿದ ಮೇಲೆಯೇ ನಮಗೆ ಎಂ.ಬಿ.ಬಿ.ಎಸ್‌. ಡಿಗ್ರಿಯು ಸಿಗುತ್ತಿತ್ತು. ಆಸಕ್ತಿಯಿಂದ ಕಾರ್ಯ ನಿರ್ವಹಿಸುತ್ತಿದ್ದೆವು. ಓದುವ ಒತ್ತಡವಿಲ್ಲ, ಪರೀಕ್ಷೆ ಬರೆಯುವ ಒತ್ತಡವಿರಲಿಲ್ಲ. ಬೇಕೆನ್ನಿಸಿದಾಗ Reference ಮಾಡಲು ಓದಿದ ಪುಸ್ತಕಗಳ ಪುಟಗಳನ್ನು ತಿರುವಿ ಹಾಕುತ್ತಿದ್ದೆವು. ಲೈಬ್ರರಿಗೂ ಹೋಗಬೇಕಾಗುತ್ತಿತ್ತು. ಒಂಥರಾ ಈ ಅವಧಿಯು ಒಂಥರಾ Golden Period ಕಣೆ…

ಆಮೇಲೆ ನನ್ನ ದೇಹವನ್ನು ಭೂತವು ಆಕ್ರಮಿಸಿಕೊಂಡಿತ್ತು. ಅದು ಅಂತಿಂಥಾ ಭೂತವಲ್ಲ. ಪ್ರೀತಿಯ, ಪ್ರೇಮದ ಭೂತ, ನನಗೇನೂ ಆಗುವುದಿಲ್ಲವೆಂದು ಕೊಂಡಿದ್ದೆನಲ್ಲಾ… ಏನೇನೋ ಆಗತೊಡಗಿತ್ತು. ಆರು ತಿಂಗಳು ಆರಾಮವಾಗಿ ಕಳೆದಿದ್ದ ನನಗೆ ಉಳಿದಾರು ತಿಂಗಳು… ಪ್ರೇಮ ರೋಗದಿಂದ ಬಳಲತೊಡಗಿದ್ದೆ. ವಿಚಿತ್ರವೆನ್ನಿಸೋಲ್ವಾ? ಹೂಂ… ಈಗನ್ನಿಸ್ತಾಯಿದೆ.

ಅವರು ನನಗಿಂತ ಹಿರಿಯರು, ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದರು, ನನಗೆ ಹೆಚ್ಚು ಆಕರ್ಷವೆನ್ನಿಸುವ ನೀಳಕಾಯದ ಗಂಭೀರ ವ್ಯಕ್ತಿ. ತುಂಬಾ Maturity ಅನ್ನಿಸಿತ್ತು. ಆಗ ನನ್ನ ವಯಸ್ಸಿಗನುಗುಣವಾಗಿ. ಮೆಲು ಮಾತು, ಮೆಲು ನಗು, ಆದರೆ ತೀಕ್ಷ್ಣ ವ್ಯಕ್ತಿ, ವ್ಯಕ್ತಿತ್ವ ಅವರದು ಅದಕ್ಕಿಂತಾ ಹೆಚ್ಚಾಗಿ ಅವರಿಗಿನ್ನೂ ಮದುವೆಯಾಗಿರಲಿಲ್ಲ. Eligible Bachelor!

ನಾನೊಬ್ಬಳೇ ಅಲ್ಲ ಇನ್ನೂ ಅನೇಕ ಹುಡುಗಿಯರು ‘ಫಿದಾ’ ಆಗಿದ್ದರು. ನಾನ್ಯಾಕೆ ಹೀಗೆ ಆಡ್ತಾಯಿದ್ದೀನಿ? ಇದೂ ವಯಸ್ಸಿನ ಮಂಗನಾಟವೆ? ಊಹೂಂ… ಹದಿಹರೆಯ ಅವಧಿ ದಾಟಿದ್ದೆ. ನಾನು ಅವರ ಯೂನಿಟ್ಟಿನಲ್ಲಿಯೇ ಎರಡು ತಿಂಗಳು ಕಾರ್ಯನಿರ್ವಹಿಸಿದ್ದೆ. ಉಳಿದವರೂ ಇದ್ದರೂ, ಉಳಿದವರು ಕಂಡಂತೆ ನನಗೆ ಕಾಣಲಾಗಿರಲಿಲ್ಲ… ಕತೆಗಾರ್ತಿ ಎಂದು ಅಭಿಮಾನ ಮೆಚ್ಚುಗೆಯಿಂದ ಮಾತನಾಡಿಸುತ್ತಿದ್ದರು. ಅದೂ ಯೂನಿಟ್ಟಿನವರು ಎಲ್ಲರೂ ಇರುವಾಗ, ಕಾಫಿಗೆಂದು ಕ್ಯಾಂಟಿನಿಗೆ ಹೋದಾಗ ನಾನೂ ಹೆಚ್ಚು ಮಾತನಾಡುವವಳಾಗಿರಲಿಲ್ಲ. ನನ್ನ ಗುಂಪು ಶೋಭಾಳನ್ನು ಬಿಟ್ಟರೆ ಬೇರೆಯವರ ಜೊತೆ ಸಲಿಗೆ ಕಡಿಮೆ. ಈಗ ನನ್ನದು ತಪ್ಪು ಸರಿಯೆನ್ನಲು ಶೋಭಾ ಇರಲಿಲ್ಲ. ಡಿಗ್ರಿ ಮುಗಿಸಿಹೋಗಿಬಿಟ್ಟಿದ್ದರು. ಇದಿದ್ದು, ನನ್ನ ‘ಮಂಗನಾಟದ ಗುಂಪು’-ಅವರು ಒಂದು ವರ್ಷ ಮುಂದೆ ಹೋಗಿದ್ದರು. ನಾನು Internalship ಬರುವ ವೇಳೆಗೆ ಅವರುಗಳು ಮುಗಿಸಿ ಹೋಗಿದ್ದರು. ಒಂದು ವರ್ಷ ಫೇಲಾಗಿದ್ದೆನಲ್ಲವಾ?

ಇದೇ ಸಮಯದಲ್ಲಿ ನಾನೊಂದು ಕಾದಂಬರಿಯನ್ನು ಬರೆದು ಮುಗಿಸಿದ್ದೆ. ಎಂ.ಬಿ.ಸಿಂಗ್ ಅವರು, ‘ಸುಧಾ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದ್ದರು. ಹುಡುಗಿಯರ ಹಾಸ್ಟೆಲ್ ಜೀವನ, ಅವರ ಹುಚ್ಚಾಟಗಳ ಬಗ್ಗೆ, ಅನುಭವ ಇದ್ದು ರಿಂಗ್, ಲೀಲಾ ಇಷ್ಟವಾಗಿತ್ತು. ಅದೂ ಒಂದು Plus Point ಆಗಿತ್ತು. ನನ್ನ ಮತ್ತು ‘ಅವರ’ ನಡುವಿನ ಮಾತಿಗೆ. ಅದೂ ಆಸ್ಪತ್ರೆಯಲ್ಲಿದ್ದಾಗ ಮಾತ್ರ ಸಾಥ್’ವಾಗಿತ್ತು ಕಣೆ. ನನಗೆ ‘ಅವರ’ ಪ್ರೇಮ ಜ್ವರ ಬಂದಿರುವುದು. ನನ್ನ ಹೊಸ ಗೆಳತಿಯರಿಗೆ ಅಂದರೆ Room-Mate ಗೆ ಮಾತ್ರ. ಅವರು ಒಂದು ಕೂಗಳತೆಯಲ್ಲಿದ್ದರೂ ನನ್ನ ಹೆಚ್ಚಾಗುವ ಹೃದಯ ಬಡಿತವಾಗಿ ತಿಳಿಯುತ್ತಿತ್ತು. ಅವರು ಇಲ್ಲೇ ಎಲ್ಲೋ ಇದ್ದಾರೆ ಎಂದು ನನಗಿಂತ ಮೊದಲು ನನ್ನ ಮನಸ್ಸು ಹೇಳುತ್ತಿತ್ತು. ಅವರ ಯೂನಿಟ್ಟಿನ Posting ಮುಗಿಸಿದ್ದರೂ ದಿನಕ್ಕೊಂದು ಬಾರಿಯಾದರೂ ಅವರಿರುವ ವಾರ್ಡಿಗೆ ಹೋಗಿ ನೋಡಿ ಬರುತ್ತಿದ್ದೆ. ಇಲ್ಲಾಂದ್ರೆ Attendence ಹಾಕಲು R.M.O., Chamber ಬಳಿ ಎಲ್ಲರೂ ಬೆಳಿಗ್ಗೆ ಅಲ್ಲಿಗೆ ಬರಲೇಬೇಕಾಗುತ್ತಿತ್ತು. ಅವರು ಬರುತ್ತಿದ್ದ ಸಮಯ ನೋಡಿಕೊಂಡೇ ನಾನೂ ಹೋಗುತ್ತಿದ್ದೆ. ಆಗ ನನಗೆ ಅವರಿಂದ ಸಿಗುತ್ತಿದ್ದುದು ಒಂದು ಪರಿಚಯದ ಮುಗುಳ್ನಗೆ ಮಾತ್ರ. ಮಾತನಾಡಿಸುತ್ತಿರಲಿಲ್ಲ. ನನಗೆ ಅಷ್ಟೇ ಸಾಕಾಗುತ್ತಿತ್ತು. ಇಡೀ ದಿನದವರೆಗೂ ಹೀಗೆ ನಡೆಯುತ್ತಿರುವಾಗಲೇ ಆರು ತಿಂಗಳೂ ಮುಗಿಯುತ್ತಾ ಬಂದಿತ್ತು. ನಾನಿನ್ನು ಪ್ರೇಮ ನಿವೇದನೆ ಮಾಡಿಕೊಳ್ಳುವ ಸಾಹಸ ಮಾಡಿರಲಿಲ್ಲ. ಆಗವರ ಜೊತೆ ಕಾರ್ಯನಿರ್ವಹಿಸುತ್ತಿದ್ದ ಸೀನಿಯರ್ ಡಾಕ್ಟರ್ ಹೇಳಿಬಿಟ್ಟಿದ್ದಳು! ಅವರು ಅವಳ ಬಳಿಯೇ ಉತ್ತರ ಹೇಳಿ ಕಳುಹಿಸಿದ್ದರು.

“ಇದೊಂದು ಮಕ್ಕಳಾಟವಲ್ಲ. ಅವರಿನ್ನು ಚಿಕ್ಕವರು. ಕತೆ ಬರೀತಾರೆ ಅಂತ ಇಲ್ಲಿರುವಾಗ ಹೆಚ್ಚೇ ಮಾತನಾಡಿಸಿರಬಹುದು. ಅದಕ್ಕೀರೀತಿ ಅರ್ಥ ಕೊಡುವುದು ತಪ್ಪಂತ ಹೇಳಿಬಿಡಿ. ಒಳ್ಳೆಯ ಡಾಕ್ಟರ್ ಆಗುವ ಛಾತಿಯಿದೆ. ಮುಂದೆ ಓದಲು ಹೇಳಿ. ಹುಚ್ಚಾಟಗಳನ್ನು ಬಿಟ್ಟು ಬಿಡಲು ಹೇಳಿ”-ಇದು ಅವರ ಪ್ರತಿಕ್ರಿಯೆಯಾಗಿತ್ತು.

ಚಿನ್ನೂ, ಅವಮಾನ, ನಿರಾಶೆ ದುಃಖದಿಂದ ಜಗತ್ತಿನಿಂದಲೇ ತಿರಸ್ಕೃತಳಾದವಳಂತೆ ಅತ್ತುಬಿಟ್ಟಿದ್ದೆ. ಅದೇ ಭಗ್ನ ಹೃದಯವನ್ನೊತ್ತು, ಡಿಗ್ರಿ ಸರ್ಟಿಫಿಕೇಟನ್ನು ಪಡೆದು ದಾವಣಗೆರೆಗೆ ಬಂದಿದ್ದೆ. ಎಲ್ಲವನ್ನೂ ಕಳೆದುಕೊಂಡವಳಂತೆ ಬಹಳ ದಿನಗಳವರೆಗೂ ಖಿನ್ನಳಾಗಿದ್ದೆ. ಅವ್ವ ಮುಂದೆ ಓದು, ಮೂರು ವರ್ಷ ತಾನೇ ಅದೂ ದಾವಣಗೆರೆಯಲ್ಲಿಯೇ ಸೀಟು ಪಡೆದುಕೊಂಡರಾಯಿತು ಎಂದು ಮತ್ತೆ ಓದುವಂತೆ ಮಾಡಿದ್ದಳು. ನನ್ನ ಮನೋಕೇಶದ ಬಗ್ಗೆ ನನ್ನ ದಿನಚರಿಯನ್ನು ಬರೆಯುತ್ತಿದ್ದ ಪುಸ್ತಕವನ್ನು ಬಿಟ್ಟರೆ ಬೇರೆ ಯಾರಿಗೂ ಗೊತ್ತಿರಲಿಲ್ಲ. ನನ್ನ ಕನಸು ನನಸಾಗಿರಲಿಲ್ಲ. ನೆನಪಾಗಿ ಕಾಡತೊಡಗಿತ್ತು, ನನಗೆ ಯಾವುದೇ ಕಾಮನೆಗಳಿರಲಿಲ್ಲ. ಅವರ ಸಾಂಗತ್ಯ ಇರುವಿಕೆಯಿಂದ ಎಂಥದ್ದೋ ಒಂದು ಭದ್ರತೆಯ ಭಾವನೆಯುಂಟಾಗುತ್ತಿತ್ತು. ಅವರ ಸಮೀಪದಲ್ಲಿ, ಜೊತೆಯಲ್ಲಿಯೇ ಇರಬೇಕು, ಎಂದೆನ್ನಿಸುತ್ತಿತ್ತು. ಅವರ ಅಂತಸ್ತು, ಜಾತಿ ಯಾವುದಕ್ಕೂ ನಾನು ಸರಿಸಮಾನಳಾಗಿರಲಿಲ್ಲ. ಅದೊಂದೇ ತೊಡಕಾಗಿತ್ತೆ? ಎಂದು ಹಲವು ಬಾರಿ ನನ್ನ ಮನಸ್ಸಿಗೇ ಕೇಳಿಕೊಳ್ಳುತ್ತಿದ್ದೆ. ಉತ್ತರ ಸಿಗುತ್ತಿರಲಿಲ್ಲ. ಮುಖಾಮುಖಿಯಾಗಿ ಕೇಳಲು ಆಗ ನನಗೆ ಧೈರ್ಯವಿರಲಿಲ್ಲ. ದಾವಣಗೆರೆಗೆ ಬಂದ ಕೆಲವು ತಿಂಗಳಿನಲ್ಲಿಯೇ ಅವರಿಗೆ ಮದುವೆಯಾದ ವಿಷಯ ತಿಳಿಯಿತು. ತುಂಬಾ ಅತ್ತಿದ್ದೆ. ದಿನಚರಿಯಲ್ಲಿ ಬೇಗುದಿಯನ್ನೆಲ್ಲಾ ತೋಡಿಕೊಂಡಿದ್ದೆ. ಆ ಪುಸ್ತಕ ನನ್ನ ಬಳಿಯಿದೆ. ಮುಂದೆಂದೂ ಮತ್ತೆ ಯಾರನ್ನೂ ನಾನು ಪ್ರೀತಿಸುವ ಮನಸ್ಸು, ಹೃದಯವನ್ನು ಕಳೆದುಕೊಂಡುಬಿಟ್ಟಿದ್ದೆ!
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೋಳಗುಮ್ಮಟ
Next post ಸ್ಕೂಲು ಮಕ್ಕಳ ನಡುವೆ

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…