ಮೊದಲು ನನ್ನ ಸರ್ಕಾರಿ ನೌಕರಿಗಾಗಿ ಆ ತಾಲ್ಲೂಕಿಗೆ ಹೋಗಿದ್ದೆ. ಆ ಊರು ‘West Bengal’ ಇದ್ದ ಹಾಗೆಂದು ತಿಳಿದಿರಲಿಲ್ಲ. ಅಲ್ಲಿ ಬದುಕಿದವರು ಬೇರೆ ಎಲ್ಲಿಯಾದರೂ ಬದುಕಬಹುದಾಗಿತ್ತು ಎಂದು ತಿಳಿದಿದ್ದು, ಒಂದೆರೆಡು ವರ್ಷಗಳ ನಂತರ!
ತುಂಬಾ ಆಸಕ್ತಿಯಿಂದ ನನ್ನ ಕರ್ತವ್ಯವನ್ನು ಆ ಸರ್ಕಾರಿ ಆಸ್ಪತ್ರೆಯಲ್ಲಿ ಆರಂಭಿಸಿದ್ದೆ. ಹಗಲೂ ರಾತ್ರಿಯೆನ್ನದೆ ಆಸ್ಪತ್ರೆಯಿಂದ ‘ಕರೆ’ ಬಂದ ಕೂಡಲೇ ಹೋಗುತ್ತಿದ್ದೆ. ಮೊದಲು ಪ್ರಾಥಮಿಕ ಆರೋಗ್ಯವಾಗಿದ್ದ ಆರೋಗ್ಯ ಕೇಂದ್ರವು ೫೦ ಹಾಸಿಗೆಗಳ ಜನರಲ್ ಆಸ್ಪತ್ರೆಯಾಗಿತ್ತು. ನನ್ನಂತೆಯೇ ಮತ್ತಿಬ್ಬರೂ ಸ್ಪೆಷಲಿಸ್ಟ್‌ಗಳೂ ನೇಮಕಗೊಂಡಿದ್ದರು. ಮತ್ತೊಬ್ಬ ಮಹಿಳಾ ವೈದ್ಯೆಯೂ ಇದ್ದಳು. ಆಕೆ ಮೊದಲಿನಿಂದಲೂ ಇರುವ ವೈದ್ಯೆಯಾಗಿದ್ದಳು.
ಅಲ್ಲಿ ರೋಗಿಗಳಿಂದ ಹಣ ವಸೂಲಿಯಾಗುತ್ತಿತ್ತು. ಒಬ್ಬರಿಂದಲ್ಲ, ಗೇಟಿನಿಂದ ಹಿಡಿದು ವಾರ್ಡುಗಳಲ್ಲಿ, ಫಾರ್ಮಸಿಯಲ್ಲಿ, ಲ್ಯಾಬೋರೇಟರಿಯಲ್ಲೂ ಸಹಾ ರೋಗಿಗಳು ಹಣತೆರಬೇಕಾಗುತ್ತಿತ್ತು. ಅತ್ಯಂತ ಬಡವರೂ, ಗ್ರಾಮಾಂತರ ಪ್ರದೇಶಗಳಿಂದ ಆಸ್ಪತ್ರೆಗೆ ಬರುವವರೇ ಜಾಸ್ತಿಯಾಗಿದ್ದರು. ಜನರಲ್ ಆಸ್ಪತ್ರೆಯಾಗಿದೆ, ಸೀರಿಯಸ್ ಆಗಿದ್ದರೆ ವಾರ್ಡಿಗೂ ಸೇರಿಸಿಕೊಂಡು ಚಿಕಿತ್ಸೆ ನೀಡುತ್ತಾರೆ. ಹೆರಿಗೆ ಮಾಡಿಸುವ ಡಾಕ್ಟ್ರು ಕೂಡಾ ಬಂದಿದ್ದಾರೆ ಎಂಬುದು ಎಲ್ಲರಿಗೂ ಸಮಾಧಾನ, ಸಂತೋಷ ತರುವ ವಿಷಯವಾಗಿತ್ತು. ಎಲ್ಲದಕ್ಕೂ ದಾವಣಗೆರೆಗೆ ಹೋಗುವುದು ತಪ್ಪಿತು… ತೀರಾ ಅವಶ್ಯಕವಾದರೆ ಇವರೇ ‘ಆ್ಯಂಬುಲೆನ್ಸ್’ನಲ್ಲಿ ದಾವಣಗೆರೆಗೆ ಕಳುಹಿಸುತ್ತಾರೆಂಬ ಸುದ್ದಿಯೂ ಅವರ ನೆಮ್ಮದಿಗೆ ಕಾರಣವಾಗಿತ್ತು. ಹೀಗಾಗಿ ಆಸ್ಪತ್ರೆಗೆ ಬರುವ ರೋಗಿಗಳು ಮಕ್ಕಳ ಗರ್ಭಿಣಿಯರ ಸಂಖ್ಯೆ ಕ್ರಮೇಣವಾಗಿ ಹೆಚ್ಚಾಗತೊಡಗಿತ್ತು.
ಈಗ ಹಗಲು-ರಾತ್ರಿಯೆನ್ನದೇ ರೋಗಿಗಳಿಗೆ ಮಕ್ಕಳಿಗೆ, ಗರ್ಭಿಣಿಯರಿಗೆ, ಪ್ರಸವಕ್ಕಾಗಿ ಯಾವುದೇ ವೇಳೆಯಲ್ಲಿ ಬರತೊಡಗಿದ್ದರು. ಹೀಗಾದಾಗ ಪ್ರತಿದಿನಾ ದಾವಣಗೆರೆಗೆ ಹೋಗಿ ಬರುತ್ತಿದ್ದ ನನಗೆ, ರಾತ್ರಿ ಪಾಳಿಗಳಲ್ಲಿನ ಕೆಲಸ, ನಂತರದಲ್ಲಿ ತುರ್ತು ಚಿಕಿತ್ಸೆಗಾಗಿ ಬರುತ್ತಿದ್ದ ಮಹಿಳೆಯರಿಗಾಗಿ ಸ್ಥಳದಲ್ಲಿ ನಾನು ಇರಲೇಬೇಕಾಗಿರುತ್ತಿತ್ತು. ಹೀಗಾಗಿ ಮನೆಯಲ್ಲಿ ಚರ್ಚೆಗೆ, ನಾನು ಕಾರ್ಯ ನಿರ್ವಹಿಸುತ್ತಿದ್ದ ಊರಿನಲ್ಲಿಯೇ, ಒಂದು ಪುಟ್ಟ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದೆ. ನನ್ನ ಚಿಕ್ಕ ತಮ್ಮ ಅಂದರೆ ಸಣ್ಣವ್ವನ ಮಗ ನಮ್ಮ ಮನೆಯಲ್ಲಿಯೇ ಇದ್ದುದರಿಂದ ಸಂಜೆ ಅವ್ವ ಊಟ ಕಳುಹಿಸುತ್ತಿದ್ದಳು. ನಿಧಾನವಾಗಿ ನಾನೇ ಅಡಿಗೆ ಮಾಡಿಕೊಳ್ಳಲು ಪರಿಕರಗಳನ್ನು ತರಿಸಿಕೊಂಡಿದ್ದೆ. ಸಮಯ ಸಿಕ್ಕಾಗ ಏನನ್ನಾದರೂ ಮಾಡಿಕೊಂಡು ಹಸಿವು ನೀಗಿಸಿಕೊಳ್ಳುತ್ತಿದ್ದೆ. ಹೀಗೆ ಸಾಗಿತ್ತು ಜೀವನ ಅನ್ನವುದಕ್ಕಿಂತ ಸಾಗಿಸಿದ್ದೆ ಎಂದರೆ ಸರಿಯಾದೀತು. ಸ್ಥಳೀಯವಾಗಿ ಮನೆ ಮಾಡಿದ್ದುದರಿಂದ ನನ್ನ ಕೆಲಸದ ಒತ್ತಡ ಜಾಸ್ತಿಯಾಯಿತು. ಗರ್ಭಿಣಿಯರು, ಹೆರಿಗೆಗೆ ಬರುವವರು, ತುರ್ತು ಚಿಕಿತ್ಸಾ ಘಟಕದ ಕೆಲಸ, ಪಾಳಿ ಪ್ರಕಾರ ನಡೆಸುವ ಪೋಸ್ಟ್ಮಾರ್ಟ್ಂಗಳಿಂದ ತೀರಾ ಬಳಲತೊಡಗಿದ್ದೆ. ಯಾವಾಗಲೋ ಊಟ, ಯಾವಾಗಲೋ ನಿದ್ದೆ ಮಾಡುತ್ತಿದ್ದೆ. ಆದರೂ ಹಠ ಮನಸ್ಸಿನಿಂದ ಮಾಯವಾಗಿರಲಿಲ್ಲ. ಮನೆಯಿಂದ ಊಟ ಕಳುಹಿಸುವುದು ನಿಂತು ಹೋಗಿತ್ತು. ನಾನೇ ಬೇಡವೆಂದಿದ್ದೆ. ವಾರದ ಮಧ್ಯೆ ಹೇಗಾದರೂ ಸಮಯ ಮಾಡಿಕೊಂಡು ಊರಿಗೆ ಹೋಗಿಬರುತ್ತಿದ್ದೆ. ಎಲ್ಲಾ ವಿಧದ ಮಹಿಳಾ ರೋಗಿಗಳು ನನ್ನ ಬಳಿಯೇ ಚಿಕಿತ್ಸೆಗೆಂದು ಬರುತ್ತಿದ್ದರು. ಇದರಿಂದ ನಾನು ನನ್ನ ಸಹೋದ್ಯೋಗಿಗಳಿಗೆ ದೊಡ್ಡ ತಲೆ ನೋವಾಗತೊಡಗಿದ್ದೆ. ರೋಗಿಗಳು ಕಡಿಮೆಯಾಗಿ ಅವರ ಆದಾಯಕ್ಕೂ ಕಲ್ಲು ಬಿದ್ದಿತ್ತು. ಅದಕ್ಕೆಂದೇ ಒಂದು ದಿನ ಸೂಪರಿಂಟೆಂಡೆಂಟ್ ಛೇಂಬರಿನಲ್ಲಿ ಮೀಟಿಂಗ್ ಇಟ್ಟುಕೊಂಡಿದ್ದರು.
“ನೀವು… ಮಕ್ಕಳನ್ನು ನೋಡಿ ಪರೀಕ್ಷಿಸಿ ಚಿಕಿತ್ಸೆ ಯಾಕ್ ನೀಡ್ತೀರಿ?”
“ಗೈನಾಕಾಲಜಿಯನ್ನು ಕಲಿಯುವಾಗ ಮಕ್ಕಳ ರೋಗ, ಚಿಕಿತ್ಸೆಗಳನ್ನು ಕಲಿತಿರ್ತೀವಿ… ಸರ್…”
“ಇರಬಹುದು… ಆದರೆ ಇಲ್ಲಿ ನಿಮ್ಮ ರೋಗಿಗಳನ್ನು ಮಾತ್ರ ನೋಡಿದ್ರೆ ಸಾಕು. ನಾವ್ಯಾರಾದ್ರೂ… ‘ಲೇಬರ್ ರೂಂ’ಗೆ ಬಂದು ಹೆರಿಗೆ ಮಾಡಿಸ್ತೀವಾ?”
“…..”
“ಜನರಲ್ ಹಾಸ್ಪಿಟಲ್ ಆದ್ಮಲೆ, ಡಾಕ್ಟ್ರುಗಳು ಹೆಚ್ಚಾಗಿದ್ದೀವಿ. ವಿಭಾಗಗಳನ್ನು ಮಾಡಿದ್ದೇವೆ. ಎಲ್ಲಾ ನೀವೇ Monopoly ಮಾಡ್ಕೊಂಡ್ರೆ ಉಳಿದವರು ಆಸ್ಪತ್ರೆಗೆ ಯಾಕ್ ಬರ್ಬೇಕು ಅಂತ ಕೇಳ್ತಾರೆ?”
“ನಾನೇನು ಯಾರನ್ನೂ ಹೋಗಿ ಕರೆಯೋಲ್ಲ ಸರ್”.
“ನೀವು ಹಣ ತಗೊಳ್ಳೋಲ್ಲಾಂತ ಸುದ್ದಿ ಹರಡಿ ಹೀಗೆ ನಿಮ್ಮ ಹತ್ರಾನೇ ಬಾರ್ತಾಯಿದ್ದಾರೆ…”
“ಅದಕ್ಕೆ ನಾನೇನು ಮಾಡ್ಲಿ?” ನನ್ನ ಪ್ರಶ್ನೆ.
“ಅಗತ್ಯ ಬಿದ್ದಾಗ ನೀವು ಹಣ ತೊಗೊಂಡ್ರೆ ಏನಾಗುತ್ತೆ?”
“ಏನಂದ್ರಿ?” ನನಗೆ ದಿಗ್ಭ್ರಮೆ!
“ಹೌದು… ನಮಗೆ Supply ಆಗುವ Medicines ತಿಂಗಳ ಪೂರ್ತಿ ಸಾಕಾಗೊಲ್ಲ. ಕೇಳಿದ್ದರ ಅರ್ಧದಷ್ಟು ಕೊಡ್ತಾರೆ. ಆ ಡ್ರಗ್ಸ್ ಹದಿನೈದು ದಿನಗಳಿಗೂ ಸಾಕೋಗೋಲ್ಲ. ಉಳಿದ ಅರ್ಧ ತಿಂಗಳಿಗೆ ನಮ್ಮ ಹಣದಿಂದಲೇ ಕೊಂಡ್ಕೊಂಡು ಬರ್ತೀವಿ. ಆಗ ನಾವು ತಗೊಂಡ್ರೇನು ತಪ್ಪು?”-ತಾವೇ ಸರಿ ಎನ್ನುವಂತೆ ಹೇಳುತ್ತಿದ್ದರು.
ಉಳಿದವರು ಮಾತಿಲ್ಲದೇ ನೋಡುತ್ತಿದ್ದರು. ಎಲ್ಲರ ‘ದೂರು’ ಅದೇ ಆಗಿದ್ದಿರಬೇಕು ಎಂದುಕೊಂಡೆ ಅವರ Meeting ನ ಅರ್ಥ ನನಗೆ ಆಗಿತ್ತು.
“ಅಂದ್ರೆ ನಾನು ನಿಮ್ಮ ಹಾಗೇನೇ ಮಾಡ್ಬೇಕೂಂತಾನಾ?”
“Medical Representatives ಕೊಟ್ಟಿರೋ ಸ್ಯಾಂಪಲ್ಸ್ ಪೇಶಂಟ್ಸ್ಗೆ ಕೊಡ್ತೀನಿ. ಇಲ್ಲಾಂದ್ರೆ ಬರೆದು ಕೊಡ್ತೀನಿ. ಅವ್ರು ತಗೋತಾರೆ…”
“ನಾವ್ ಬರ್ದು ಕೊಟ್ರೆ ಕೊಂಡ್ಕೊಳ್ಳೋದೆ ಇಲ್ಲ ನೀವೆ ಸೂಜಿ ಮಾಡ್ರಿ” ಅಂತಾರೆ. ಅದಕ್ಕೇ ನಾವು ಖರೀದಿ ಮಾಡ್ಕೊಂಡ್ ತರ್ತೀವಿ. ಇವರೆಲ್ಲರ ಹಣೆ ಬರಹಾನೂ ಅಷ್ಟೇ….
ನನಗೆ ಈಗ ಎಲ್ಲರ ಸಂಕಷ್ಟ, ದೂರು ಅರ್ಥವಾಗತೊಡಗಿತ್ತು.
“ಸರ್… ನನ್ನ ಹತ್ತಿರ ಬರೋ ರೋಗಿಗಳನ್ನು ನಾನಾಗಿಯೇ ಕರೆಯುವುದಿಲ್ಲ. ಇನ್ನು ಮೇಲೆ ಆಯಾ ರೋಗಗಳಿಗೆ ಸಂಬಂಧಪಟ್ಟವರ ಬಳಿ ಕಳುಹಿಸುತ್ತೇನೆ. ಅಷ್ಟಕ್ಕೂ ಅವರು ಹೋಗದಿದ್ದರೆ ನಾನೇನೂ ಮಾಡೋಕಾಗೋಲ್ಲ. ಬರೋ ರೋಗಿಗಳನ್ನು ಮನುಷ್ಯರು ಅನ್ನೋ ರೀತಿಯಲ್ಲಿ ಮಾತನಾಡಿಸ್ಬೇಕು. ನಮ್ಮತ್ರ ಕಾಯಿಲೇಂತ ಬರೋರು ಡಾಕ್ಟರುಗಳಲ್ಲ. ಆಸ್ಪತ್ರೆಯ ಕೆಲಸದಲ್ಲಿ ನನ್ನದೇನಾದ್ರೂ ತಪ್ಪಿದ್ದರೆ” Memo ಕೊಡಿ. ಉತ್ತರಿಸುತ್ತೇನೆ. ತೀರಾ Personal ಆಗಿದ್ರೆ… ನಾನು ಏನೂ ಮಾತನಾಡೋದಿಲ್ಲ. ಕ್ಷಮಿಸಿ… ನಾನು ಹೋಗ್ತಿನಿ…” ಎಂದು ಗಂಭೀರವಾಗಿ ಹೇಳಿದವಳೇ ಅಲ್ಲಿಂದ ಎದ್ದು ಬಂದಿದ್ದೆ.
ಅದು ಅವರಿಗೆ ಅವಮಾನವೆನ್ನಿಸಿತು. ನನಗೆ ತಲೆನೋವು ಆರಂಭವಾಗಿತ್ತು.
“ಎಷ್ಟು Silly ಯಾಗಿ ಮಾತಾಡ್ತಾರೆ”-ಎಂದುಕೊಂಡು ಒಂದು ಕಪ್ ಕಾಫಿ ತರಿಸಿಕೊಂಡು ಕುಡಿದು ನಂತರ ತಲೆನೋವು ಸ್ವಲ್ಪ ಕಡಿಮೆಯಾದಂತೆನಿಸಿತ್ತು.
ಆದರೆ ಈ ವಿಷಯ ಇಷ್ಟಕ್ಕೆ ಮುಗಿದಿರಲಿಲ್ಲ! ಮೆಲ್ಲಗೆ ಕಿರುಕಳ ಆರಂಭಿಸಿದ್ದರು. ನಾನು ತಪ್ಪು ಮಾಡುವುದನ್ನೇ ಕಾಯುತ್ತಿದ್ದರು. ಬೆಳಿಗ್ಗೆ ಹನ್ನೊಂದು ಗಂಟೆಗೆ ಎಲ್ಲರೂ ‘ಟೀ’ ಕುಡಿಯುವ ನೆಪದಲ್ಲಿ ಸೇರುತ್ತಿದ್ದೆವು. ‘ಟೀ’ಯನ್ನು ನನ್ನ ರೂಮಿಗೇ ಕಳುಹಿಸತೊಡಗಿದ್ದರು. ಆಶ್ಚರ್ಯದಿಂದ ಯಾಕೆಂದು ಜವಾನನ್ನು ಕೇಳಿದ್ದಕ್ಕೆ ‘ನೀವು ಅಲ್ಲಿಗೆ ಬಂದರೆ ನಿಮ್ಮ ಪೇಶಂಟ್ಸ್ ಬಂದುಬಿಡ್ತಾರೇಂತ ಇಲ್ಲಿಗೇ ಕೊಟ್ಟು ಬಾ ಅಂತಂದ್ರು…’ ಎಂದ ಜವಾನ. ನಾನು ಮರು ಮಾತಾಡಿರಲಿಲ್ಲ.
ಗ್ರಾಮಾಂತರದ ಪ್ರದೇಶಗಳಲ್ಲಾಗಲೀ, ತಾಲ್ಲೂಕು ಆಸ್ಪತ್ರೆಗಳಾಗಲೀ ಸೌಲಭ್ಯ ಹಾಗೂ ಭದ್ರತೆಯ ಕೊರತೆಯಿರುತ್ತದೆ. ಅದು ಅರ್ಥವಾಗಲು ಹಲವು ತಿಂಗಳುಗಳೇ ಬೇಕಾಗುತ್ತವೆ. ಅದರ ಮೇಲೆ ರಾಜಕೀಯ ಸಣ್ಣ ಪುಢಾರಿಗಳ ಕಾಟವೂ ಇರುತ್ತದೆ. ಅವುಗಳೆಲ್ಲವೂ ನನ್ನ ಧೈರ್ಯಸ್ಥೆರ್ಯವನ್ನು ಕುಂದಿಸತೊಡಗಿದ್ದವು. ಯಾಕೆ ಈ ಕಿರುಕುಳಗಳು ಆರಂಭವಾದವೆಂದು ನಿನಗೆ ಬೇರೆ ಹೇಳಬೇಕಾಗಿಲ್ಲ ಮಗಳೇ. ನನಗದು ನಿಧಾನವಾಗಿ ಅರ್ಥವಾಯಿತು.
ನಾನೇನಾದರೂ ಮೆಡಿಸಿನ್ಸ್ ಬರೆದು ಕೇಳಿದರೆ ‘No Stock’ ಎಂದು ಹಿಂದಕ್ಕೆ ಆ ಪುಸ್ತಕವನ್ನು ತಿರುಗಿ ಕಳುಹಿಸುತ್ತಿದ್ದರು. ಆಶ್ಚರ್ಯವೆಂದರೆ ನನ್ನಲ್ಲಿಗೆ ಬರುವ ರೋಗಿಗಳು ಮೆಡಿಕಲ್ ಷಾಪ್ಸ್ಗಳು ದೂರವಾದರೂ ಹೋಗಿ ಕೊಂಡುಕೊಂಡು ಬರುತ್ತಿದ್ದರು. ಕೆಲವರು ನೇರವಾಗಿ ಮೆಡಿಕಲ್ ಸೂಪರಿಂಟೆಂಡ್‌ರವರನ್ನೇ ಹೋಗಿ ಕೇಳಿ ಬಾಯಿ ಜೋರು ಮಾಡಿ ತರುತ್ತಿದ್ದರು. ಅದಕ್ಕೆಲ್ಲಾ ನಾನೇ ಪ್ರೋತ್ಸಾಹಿಸುತ್ತೇನೆಂದು ‘ಚುಚ್ಚು’ ಮಾತುಗಳನ್ನು ಆಡಿದ್ದರು. ನಾನು ಎಲ್ಲದಕ್ಕೂ ಮೌನವಾಗಿದ್ದುಬಿಡುತ್ತಿದ್ದೆ. ಜಗಳ ಎನ್ನುವುದು ಒಂದು ತರಹದ ಕೋಲಾಟವಿದ್ದಂತೆ. ಯಾರೂ ಸೋಲುವುದಿಲ್ಲ.
ಒಂದು ದಿನ ಹೆರಿಗೆಗೆ ಪಕ್ಕದ ಹಳ್ಳಿಯಿಂದ ಮಹಿಳೆಯೊಬ್ಬಳು ಬಂದಿದ್ದಳು. ಇನ್ನೂ ಸಮಯವಿದ್ದುದರಿಂದ ನಾನು ಹೊಟ್ಟೆ ತುಂಬಿಸಿಕೊಳ್ಳಲು ಮನೆಗೆ ಬಂದಿದ್ದೆ. ಆಗೆಲ್ಲಾ ಮೊಬೈಲ್ ಫೋನುಗಳಿರಲಿಲ್ಲ. `Land Line Phone’ ಮೆಡಿಕಲ್ ಸೂಪರಿಂಟೆಂಡೆಂಟ್ ರೂಮಿನಲ್ಲಿರುತ್ತದೆ. ತುರ್ತಾಗಿ ಬೇಕೆನ್ನಿಸಿದಾಗ ಮಾತ್ರ ಬಳಸುವಂತಿತ್ತು. ಅವರ ರೂಮಿನ ಬಾಗಿಲಿನ ಬೀಗದ ಕೈಯ್ಯನ್ನು ಲೇಬರ್ ರೂಮು ಇಲ್ಲವೇ ತುರ್ತು ಚಿಕಿತ್ಸಾ ಘಟಕ ರೂಮಿನಲ್ಲಿಟ್ಟು ಹೋಗುತ್ತಿದ್ದರು. ಅಂದು ನನ್ನ ದುರಾದೃಷ್ಟಕ್ಕಾಗಿ ಇಟ್ಟು ಹೋಗಿರಲಿಲ್ಲ. ನಾನು ಮನೆಯಿಂದ ಆಸ್ಪತ್ರೆಗೆ ಬಂದಾಗ ಹೆರಿಗೆಯ ಕೊಠಡಿಯ ಮುಂದೆ ಗಲಾಟೆ ಪ್ರಾರಂಭವಾಗಿತ್ತು. ನನಗೆ ಗಾಬರಿಯಾಗಿತ್ತು. ಆಟೋದಿಂದ ಇಳಿದವಳೇ ಅಲ್ಲಿಗೆ ಧಾವಿಸಿದ್ದೆ. ಪ್ರಸವಕ್ಕಾಗಿ ಬಂದಿದ್ದ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಹೆಚ್ಚಾಗಿತ್ತು. ಜೋರಾಗಿ ಕಿರುಚುತ್ತಿದ್ದಳು. ಹೆರಿಗೆಯ ವಾರ್ಡಿನಿಂದ ಹೊರಗೆ ಬಂದು ಬಾಗಿಲ ಬಳಿ ಹೊರಳಾಡುತ್ತಿದ್ದಳು. ಆಕೆಯ ಮನೆಯ ಹೆಂಗಸರು ಸಾಂತ್ವನಗೊಳಿಸುತ್ತಿದ್ದರು. ಪುರುಷರೂ ಸುತ್ತುವರೆದಿದ್ದರು.
“ಸಿಸ್ಟರ್… ಪೇಶಂಟ್‌ನ್ನು ಯಾಕೆ ಹೊರಗೆ ಕಳುಹಿಸಿದ್ದೀರಿ. ಮೊದ್ಲು ಒಳಗೆ ಕರ್ಕೊಂಡ್ ಬನ್ನಿ. ಮೊದಲು ಎಲ್ಲರನ್ನು ಗೇಟಿನಿಂದ ಹೊರಗೆ ಕಳುಹಿಸಿ…” ಎಂದು ದೊಡ್ಡ ಸ್ವರದಲ್ಲಿ ಹೇಳುತ್ತಾ ಒಳಗೆ ಹೋಗಿದ್ದೆ. ಹೆರಿಗೆಗಿನ್ನೂ ಸಮಯವಿತ್ತು. ಸ್ವಲ್ಪ ಸಮಾಧಾನವಾಗಿತ್ತು. ಸದ್ಯ…! ನಾನಿಲ್ಲದ ವೇಳೆಯಲ್ಲಿ ಹೆರಿಗೆಯಾಗಿರಲಿಲ್ಲ…!
ಮಹಿಳೆಯನ್ನು ಪರೀಕ್ಷಿಸಿ,
“ಯಾಕಮ್ಮಾ ಇಷ್ಟು ಗಲಾಟೆ ಮಾಡ್ತೀಯಾ? ದೊಡ್ಡ ನೋವುಗಳಿನ್ನೂ ಆರಂಭವಾಗಿಲ್ಲ… ಸುಧಾರಿಸ್ಕೋಬೇಕು…” ಎಂದೆ. ಆ ಮಹಿಳೆ ನೋವಿನಿಂದ,
“ಆದ್ರೆ… ನೋವು ತಡೆಯೋಕಾಗ್ತಾ ಇಲ್ಲ. ಬೇಗ ಹೆರಿಗೆ ಮಾಡಿಸಿಬಿಡಿ… ಇಲ್ಲದಿದ್ರೆ ಆಪರೇಷನ್ನು ಮಾಡಿ” ಎಂದಳು.
“ಧೈರ್ಯವಾಗಿರಿ ಏನೂ ಆಗೋಲ್ಲ. ಇನ್ನು ಸ್ವಲ್ಪ ಹೊತ್ತು ಅಷ್ಟೇ… ನಾರ್ಮಲ್ ಡೆಲಿವರಿ ಆಗುತ್ತೆ…” ಎಂದು ಸಾಂತ್ವನ ಹೇಳಿ,
“ಸಿಸ್ಟರ್ ಡ್ರಿಪ್ ಸ್ಟಾರ್ಟ್ ಮಾಡಿ. ನಾನು ನನ್ನ ರೂಮಿನಲ್ಲೇ ಇದ್ದೀನಿ…” ಎನ್ನುತ್ತಾ ಅವರಿಗೆ ಸೂಚನೆ ನೀಡಿ ಹೊರಗೆ ಬಂದಿದ್ದೆ.
ಆಗಲೇ ಅಲ್ಲಿಗೆ ರಾಜಕೀಯ ಸಣ್ಣ ಪುಢಾರಿಯೊಬ್ಬರು ಬಂದಿದ್ದರು! ನಾನವರ ನೋಡದೇ ನನ್ನ ರೂಮಿನತ್ತ ನಡೆದೆ.
“ಏನ್ರಿ ಡಾಕ್ಷೇ…? ನನ್ನನ್ನೂ ನೋಡಿದ್ರೂ ನೋಡದ ಹಾಗೇನೇ ಹೋಗ್ತಾಯಿದ್ದೀರಲ್ಲಾ?” ಆತನ ಗಡಸು ಸ್ವರ ಕೇಳಿ ನಿಂತಿದ್ದೆ.
“ಹೆರಿಗೆ ಕೇಸ್ ಬಿಟ್ಟು ಮನೆಗೆ ಹೋಗಿದ್ದೀರಲ್ಲ. ಇದು ಸರೀನಾ?” ನನ್ನನ್ನೇ ದಿಟ್ಟಿಸಿ ನೋಡುತ್ತಾ ಕೇಳಿದ್ದರು. ಆತನತ್ತ ನಿರ್ವಿಕಾರಳಾಗಿ ನೋಡಿದೆ.
“ಹೆರಿಗೆ ಯಾವಾಗ ಆಗುತ್ತೆ?”
“ಇನ್ನೂ ಟೈಂ ಇದೆ…” ನಾನೆಂದಿದ್ದೆ.
“ಬೇಗ ಮಾಡಿಸಿ. ಇಲ್ಲವಾದ್ರೆ ನಾವು ಬೇರೆ ಕಡೆ ಕರ್ಕೋಂಡು ಹೋಗ್ತಿವಿ”.
“ಅದರಗತ್ಯವಿಲ್ಲ” ಎಂದೆ.
“ಟೈಂ ಕರೆಕ್ಟಾಗಿ ಹೇಳಿ…” ಎಂದಾತನ ಮಾತಿಗೆ ಕೋಪ ಉಕ್ಕಿ ಬಂದರೂ ಕಷ್ಟಪಟ್ಟು ತಡೆದುಕೊಂಡು,
“ಆಕೆಯನ್ನು ಅವಲಂಬಿಸಿದೆ ಇಲ್ಲಿ. ನೋವು ತಡೆಯುವ ಸ್ಥಿತಿಯಲ್ಲಿ ಅವರಿಲ್ಲ. ಸಹಜವಾಗಿಯೇ ನಾರ್ಮಲ್ ಡೆಲಿವರಿ ಆಗುತ್ತೆ…” ಎಂದು ಹೇಳಿದ್ದೆ.
“ಆದಷ್ಟೂ ಬೇಗ ಮಾಡಿಸಿ…” ಎಂದ ಅಧಿಕಾರದ ಸ್ವರದಲ್ಲಿ ನನ್ನ ಕೋಪದ ಕಟ್ಟೆಯೊಡೆದಿತ್ತು. ಜನರೂ ಅವನ ಹತ್ತಿರ ನಿಂತಿದ್ದರು. ಆತನಿಗೆ ಅವಮಾನ ಮಾಡಬಾರದೆಂದು ಬಹಳಷ್ಟು ಕೋಪವನ್ನು ತಡೆಯುತ್ತಾ ನಿಂತಿದ್ದೆ.
“ಮೊದ್ಲು ಹೆರಿಗೆ ಮಾಡ್ಸಿ…”
“ಹಾಗೆ ಆಗೋದಿಲ್ಲ… ಸಮಯ ಬೇಕಾಗುತ್ತೆ…” ದೊಡ್ಡ ಗಲಾಟೆಯಾಗ ಬಾರದು. ಈಗಾಗಲೇ ರಾತ್ರಿ ಏಳು ಗಂಟೆಯಾಗ್ತಾಯಿದೆ. ಆಸ್ಪತ್ರೆಯು ಕೂಡಾ ಊರ ಹೊರಗಿದೆ. ಈ ಆಸ್ಪತ್ರೆಯಲ್ಲಿ ಯಾವ ಭದ್ರತೆಯೂ ಇಲ್ಲ. ಟೆಲಿಫೋನ್ ಮಾತ್ರ ಇದೆ. ತಾಳ್ಮೆ ತಂದುಕೊಂಡು ಸಂಯಮದಿಂದ ಹೇಳಿದೆ.
“ನಾನು ಯಾರೂಂತ ಗೊತ್ತೇನ್ರಿ ಡಾಕಟ್ರೇ?” ಆತನ ಅಹಂಕಾರ ಮೇರೆ ಮೀರತೊಡಗಿತ್ತು.
“…..”
“ನೀವು ಗೌರಮೆಂಟ್ ಸರ್ವೆಂಟು ಅನ್ನೋದನ್ನು ಮರೀಬೇಡಿ…”
“ನೆನಪಿದೆ. ಆದರೆ ನಾನು ನಿಮ್ಮ ಸರ್ವೆಂಟಲ್ಲ… ನಿಮಗದು ನೆನಪಿರಲಿ…” ಆತನ ಮುಖಕ್ಕೆ ರಾಚುವಂತೆ ಹೇಳಿದೆ.
“ನಾನೇ ಅಂದ್ರೆ ನಾವೇರಿ ಸರ್ಕಾರ… ಗೆದ್ದೋರೆ ಸರ್ಕಾರ ನಡೆಸೋದು ಅದು ಗೊತ್ತು ತಾನೆ?”
“ಇಲ್ಲಿಂದ ನೀವು ಹೋಗದೇ ಇದ್ರೆ ನಿಮ್ಮ ಪರಿಸ್ಥಿತಿ ಚೆನ್ನಾಗಿರೋಲ್ಲ. ರಾಜಕೀಯ ಕಲಿಸೋದು ಬೇಡಾ. ಆಸ್ಪತ್ರೆಗಳಿಗೆ ಬೇಕಾಗಿಯೂ ಇಲ್ಲ…” ಸಿಟ್ಟಿನಿಂದ ಹೇಳಬೇಕಾಗಿತ್ತು.
ನರ್ಸ್‌ಗಳತ್ತ ತಿರುಗಿ,
“ಸಿಸ್ಟರ್… ವಾರ್ಡ್ ಬಾಯ್‌ಗೆ ಹೇಳಿ ಎಲ್ಲರನ್ನೂ ಆಚೆ ಕಳುಹಿಸಿ ಗೇಟ್‌ಗೆ ಬೀಗ ಹಾಕಲು ಹೇಳಿ. ಪೇಶೆಂಟ್ ಕಡೆ ಇಬ್ಬರಿದ್ದರೆ ಸಾಕು. ಉಳಿದವರು ಗೇಟಿನಾಚೆ ಇರಲಿ…” ಎಂದೆ ಕೋಪದಿಂದ.
ಆ ಪುಢಾರಿ ಸಿಟ್ಟಿನಿಂದ ಹುಚ್ಚನಂತಾಗಿದ್ದ. ಕಣ್ಣುಗಳು ಕೆಂಪಾಗಿದ್ದವು, ತುಟಿಗಳು ಅದುರುತ್ತಿದ್ದವು. ಮೂಗಿನ ಹೊಳ್ಳೆ ಅಗಲವಾಗಿದ್ದವು.
“ನೀವ್…” ಎಂದೇನು ಹೇಳಲು ಆರಂಭಿಸಿದ್ದ. ಅಷ್ಟರಲ್ಲಿ ನಾನು, “ನೀವೀಗ ಆಚೆ ಹೋಗದಿದ್ದರೆ, ಪೊಲೀಸ್ ಕಂಪ್ಲೇಂಟ್ ಕೊಡಬೇಕಾಗುತ್ತೆ. ಡ್ಯೂಟಿಯ ಮೇಲಿದ್ದ ವೈದ್ಯೆಯ ಮೇಲೆ ಹಲ್ಲೆಗೆ ಪ್ರಯತ್ನಿಸಿದರೂಂತ ಹೇಳಬೇಕಾಗುತ್ತೆ…”
ಅವನ ಸಿಟ್ಟು ಹೆಚ್ಚಾಗತೊಡಗಿತ್ತು.
“ರಂಗಪ್ಪಾ… ಮೊದ್ಲು ಇವರನ್ನೆಲ್ಲಾ ಹೊರಗೆ ಕಳುಹಿಸಿ… ಬೀಗ ಹಾಕು…” ಎಂದವಳೇ ನನ್ನ ರೂಮಿಗೆ ಹೊರಟಿದ್ದೆ.
“ಈ ಊರು… ಈ ಊರಿನ ಜನ ಹೆಂಗೇಂತ ಈಯಮ್ಮಂಗೆ ಗೊತ್ತಿಲ್ಲಾಂತ ಕಾಣುತ್ತೆ. ಒಳ್ಳೇ ಎಳೆನಿಂಬೆಕಾಯಿ…” ನನ್ನ ಬೆನ್ನ ಹಿಂದೆ ಅವನ ಮಾತುಗಳು ಹಿಂಬಾಲಿಸಿ ಬಂದಿದ್ದವು.
ನಾನು ಸಿಟ್ಟಿನಿಂದ ನಡುಗತೊಡಗಿದ್ದೆ. ಎಂತೆಂಥಾ ಜನ ಬತ್ತಾರೆ. ತಾನು ರಾಜಕಾರಣಿ ಆಪ್ತ ಅಂತ ಹೆದರ್ಸೋಕೆ ಬಂದಿದ್ದಾರೆ. ನಾನು ನನ್ನ ಸೀಮಿತದಲ್ಲಿರುವಾಗ ಯಾರಿಗ್ಯಾಕೆ ಹೆದರಲಿ?”
ಮೇಜಿನ ಮೇಲಿದ್ದ ನೀರಿನ ಬಾಟಲನ್ನು ತೆಗೆದುಕೊಂಡು ಗಟಗಟನೆ ನೀರು ಕುಡಿದು ಹಾಗೆಯೇ ಕುರ್ಚಿಯನ್ನೊರಗಿದೆ. ನಡೆದ ಘಟನೆ ಮತ್ತೊಮ್ಮೆ ನೆನಪು ಮಾಡಿಕೊಂಡೆ. ನನ್ನದೇನೂ ತಪ್ಪು ಕಂಡಿರಲಿಲ್ಲ. ಸ್ವಲ್ಪ ಸಮಾಧಾನ ವಾದಂತೆನ್ನಿಸಿತ್ತು.
ಹೆರಿಗೆ ವಾರ್ಡಿನಿಂದ ಬಂದ ನರ್ಸ್ ಬಂದು ಕರೆದಾಗ ಹೋಗಿ ಹೆರಿಗೆಯನ್ನು ಮಾಡಿಸಿ ಬಂದಿದ್ದಾಯಿತು. ಆಗಲೇ ಒಂಭತ್ತು ಗಂಟೆಯಾಗಿತ್ತು. ತುರ್ತು ಚಿಕಿತ್ಸಾ ಘಟಕದಲ್ಲಿ ನನ್ನ ಸಹೋದ್ಯೋಗಿಯು ಕಾರ್ಯನಿರ್ವಹಿಸುತ್ತಿದ್ದರು. ಹೇಗಿದ್ದರೂ ಆಸ್ಪತ್ರೆಯಲ್ಲೊಬ್ಬ ವೈದ್ಯರಿದ್ದಾರೆಂದು ಒಂದು ಕ್ಷಣ ಮನೆಗೆ ಹೋಗಲೇ ಎಂದೆನ್ನಿಸಿತ್ತು. ಆದರೆ ಹೆರಿಗೆಗಾಗಿ ಯಾವಾಗ ಯಾರು ಬರುತ್ತಾರೆಂದು ತಿಳಿಯುವುದಿಲ್ಲ, ಬೆಳಿಗ್ಗೆಯೇ ಹೋದರಾಯಿತು ಎಂದು ಡ್ಯೂಟಿ ರೂಮಿನಲ್ಲೆ ಮಲಗಿಕೊಂಡೆ ಇಷ್ಟು ದಿನಗಳಿಲ್ಲದ ಇಂತಹ ಘಟನೆ ಈ ದಿನ ಹೇಗೆ ಘಟಿಸಿತ್ತು? ಹೇಗೆ? ಯೋಚಿಸುತ್ತಾ ಮಲಗಿದ ನನಗೆ ನಿದ್ದೆ ಬಂದಿದ್ದು ತಿಳಿಯಲೇ ಇಲ್ಲ.
ಮರುದಿನ ಆಸ್ಪತ್ರೆಗೆ ಬಂದಾಗ ರಾತ್ರಿ ಗಲಾಟೆ ಮಾಡಿದ್ದ ಆ ಪುಢಾರಿ ಹಿರಿಯ ವೈದ್ಯಾಧಿಕಾರಿಗಳೊಂದಿಗೆ ಮಾತನಾಡುತ್ತಾ ನಿಂತಿದ್ದು ಕಂಡಿತ್ತು. ಆವಾಕ್ಕಾಗಿ ನೋಡಿದ್ದೆ. ಸಂಶಯವೇ ಇರಲಿಲ್ಲ. ಅದೇ ದಡೂತಿ ದೇಹದ ಪುಢಾರಿ!
ಕಂಡರೂ ಕಾಣದವಳಂತೆ ನನ್ನ ರೂಮಿಗೆ ಹೋಗಿದ್ದೆ. ಎಂದಿನಂತೆ ಕೆಲಸದಲ್ಲಿ ತೊಡಗಿದ್ದೆ. ಅಷ್ಟರಲ್ಲಿ ಸೂಪರಿಂಟೆಂಡೆಂಟ್ ರೂಮಿನಿಂದ ಕರೆ ಬಂದಿತ್ತು. ಹೋಗಲೇ ಬೇಕಾಗಿತ್ತು. ಹೋಗಿದ್ದೆ. ಅಲ್ಲಿ ಹಿರಿಯ ವೈದ್ಯಾಧಿಕಾರಿಗಳು ಮುಖ ದುಮ್ಮಿಸಿಕೊಂಡು ಕುಳಿತುಕೊಂಡಿದ್ದರು.
ನಾನಂದುಕೊಂಡಂತೆ ಹಿಂದಿನ ರಾತ್ರಿ ನಡೆದ ಘಟನೆ ಮತ್ತು ನನ್ನ ಕೋಪದ ಮಾತುಗಳ ಬಗ್ಗೆಯೇ ಬುದ್ದಿ ಹೇಳುವ ಕಾರ್ಯಕ್ರಮ ಅದಾಗಿತ್ತು. ನಾನು ಏನನ್ನು ಹೇಳದೆ ಹೊರಟು ಬಂದಿದ್ದೆ.
ಆಸ್ಪತ್ರೆಯ ಸಿಬ್ಬಂದಿಗಳ ಬಾಯಿಂದ ಬಾಯಿಗೆ ಬಂದು ನನ್ನನ್ನು ತಲುಪಿದ್ದು ಮರುದಿನ ಬೆಳಿಗ್ಗೆ.
“ಆಯಮ್ಮಂಗೆ ಇನ್ನೂ ಬಿಸಿ ಮುಟ್ಟಿಲ್ಲ. ಈಗ ಶುರುವಾಗಿದೆ ಅಸಲಿ ಆಟ. ನೋಡೋಣ ಹೇಗೆ ಏನೂಂತ ಹೇಳ್ತಾರೋ ಊರು ಬಿಟ್ಟೆ ಹೋಗ್ತಾರೋಂತ…” ಇದು ಹಿರಿಯ ವೈದ್ಯಾಧಿಕಾರಿ ಬಾಯಿಂದ ಬಂದ ಮಾತುಗಳಾಗಿದ್ದವು.
ನಾನು ಕೆಲವು ಕ್ಷಣಗಳು ಅಚೇತನಳಂತೆ ಕುಳಿತುಬಿಟ್ಟಿದ್ದೆ. ನನ್ನನ್ನು ಕಂಡಾಗ ಸ್ನೇಹದಿಂದ ಮಾತನಾಡುತ್ತಾ ಎಷ್ಟೋ ಬಾರಿ ತಮ್ಮ ಮನೆಗೂ ಊಟಕ್ಕೆಂದು ಕರೆದಿದ್ದರು. ಅವರ ಹೆಂಡತಿ. ನನ್ನ ಕತೆಗಳು, ಕಾದಂಬರಿಯನ್ನು ಓದಿದ್ದರಿಂದ ನನ್ನ ಅಭಿಮಾನಿ ಎಂದೆಲ್ಲಾ ಹೇಳುತ್ತಿದ್ದವರು ಹೀಗೆ ಮಾತನಾಡಲು ಸಾಧ್ಯವಾದದ್ದಾದರೂ ಹೇಗೆ? ಯಾರನ್ನು ಹೇಗೆ ನಂಬಬೇಕು? ಎಲ್ಲಿ? ಯಾರು? ಹೇಗೆ? ವರ್ತಿಸಬಹುದಾ? ಯಾಕೋ ಒಂದು ಬಾರಿ ಮೈ ನಡುಗಿದಂತಾಗಿತ್ತು. ವೃತ್ತಿಯಲ್ಲಿ ಎಲ್ಲವನ್ನು ಕಾಣಬೇಕೆಂದುಕೊಂಡು ಕನಸು, ದೃಢ ನಿಶ್ಚಯ ಮಾಡಿಕೊಂಡಿದ್ದ ನನ್ನ ಕನಸುಗಳು ನೀರಿನ ಮೇಲೆ ಬರೆದ ಅಕ್ಷರಗಳಂತಾಗಿ ಕದಡಿ ಹೋಗುತ್ತಿವೆ ಎಂದಂತಾಗಿತ್ತು. ಅಧೀರಳನ್ನಾಗಿ ಮಾಡಿತ್ತು.
*****
ಮುಂದುವರೆಯುವುದು