ಮೂಲ: ವಿಲಿಯಂ ಬಟ್ಲರ್ ಏಟ್ಸ್
‘ಹೆಣ್ಣುಗಳ ವ್ಯಾಮೋಹ ಇದೆಯೆಂತಲೇ ನನಗೆ
ಮಲೆಗಳಲ್ಲೂ ಇಂಥ ಮೋಹ’
ದೈವ ಕಳಿಸಿದ ಜಾಗದಲ್ಲಿ ಅಲೆಯುವ ಒರಟು
ಮುದುಕ ನುಡಿದನು ಹೀಗೆ ಮನವ.
“ಸಾಯಲಾರೆನೆ ನಾನು ಮನೆಯ ಚಾಪೆಯ ಮೇಲೆ
ಮುಚ್ಚು ಕಣ್ಣನು ನಿನ್ನ ಕೈಯಿಂದಲೇ,
ಆಕಾಶದಲ್ಲಿರುವ ಆ ಮುದುಕನಿಂದ ನಾ
ಇಷ್ಟನ್ನೆ ಕೇಳುವುದು ನಲ್ಲೆ’
– ಬೆಳಗಾಯ್ತು, ಮುಂಬತ್ತಿ ಮುಗಿಯಿತು.
‘ಏನು ಹಿತವೇ ಚಿನ್ನ ನಿನ್ನ ಮಾತುಗಳೆಲ್ಲ
ಉಳಿದಿದ್ದ ಕೊಡದೆ ಇರಬೇಡೇ;
ಹತ್ತ ಮುದುಕನ ರಕ್ತ ಯಾವಾಗ ಆರೀತೊ
ತಿಳಿಯಬಲ್ಲವರಾರು ಹೇಳೆ?
ಭಾರಿ ಪ್ರೀತಿಸುವಂಥ ಯಾವ ಯುವಕಗೂ ಇರದ
ಬೇರೇನೊ ಇದೆ ನನ್ನ ಒಳಗೆ
ಬಹಳವೆಂದರೆ ಆತ ಸೋಕಬಲ್ಲನು, ನಾನೊ
ಮಾತಿನಲೆ ಹೃದಯವನ್ನಿರಿವೆ?
-ಬೆಳಗಾಯ್ತು, ಮುಂಬತ್ತಿ ಮುಗಿಯಿತು.
ಬಗಲಲ್ಲಿ ದಪ್ಪದೊಣ್ಣೆಯ ಊರಿ ನಿಂತಿದ್ದ
ಧೂರ್‍ತ ಮುದುಕನಿಗಾಕೆ ನುಡಿದಳು:
‘ಪ್ರೇಮವನು ಕೊಡುವುದೋ, ಇಲ್ಲ ಹೋಗೆನ್ನುವುದೊ
ನನ್ನದಾಗಿಲ್ಲ ನಾ ಆಳು.
ಮುಗಿಲಮನೆ ಮುದುಕನಿಗೆ, ನಿನಗಿಂತ ಹಿರಿಯನಿಗೆ
ಕೊಟ್ಟು ಬಿಟ್ಟೆನೊ ಎಲ್ಲವನ್ನ
ಅವನ ಜಪಮಣಿ ಹಿಡಿದ ಬೆರಳಿಗಿಲ್ಲವೊ
ಬಿಡುವು ಮುಚ್ಚಲಾರವು ಅವು ಕಣ್ಣ’.
– ಬೆಳಗಾಯ್ತು ಮುಂಬತ್ತಿ ಮುಗಿಯಿತು.
‘ನಿನ್ನ ದಾರಿಯ ಹಿಡಿದು ಹೋಗೆ ಹಾಗೇ ಹೆಣ್ಣೆ
ನನ್ನ ಗುರಿಯೇ ಬೇರೆ ಇದೆಯೆ,
ಕಡಲ ದಂಡೆಯ ಮೇಲೆ ಕತ್ತಲಿನರ್‍ಥ ತಿಳಿದು
ಸುಳಿವ ಹುಡುಗಿಯರ ಗುಂಪಿದೆಯ,
ಮೀನುಗಾರರ ಕೂಡ ಪೋಲಿಮಾತಿನ ಲಲ್ಲೆ
ಬೆಸ್ತ ಚಿಣ್ಣರಿಗಾಗಿ ಕುಣಿತ,
ಕತ್ತಲಿಳಿಯಿತೊ ಕಡಲಮೇಲೆ ಹೆಣ್ಣುಗಳಿಗೆ
ಹಾಸಿಗೆಯ ಅರಳಿಸುವ ತವಕ,’
– ಬೆಳಗಾಯ್ತು ಮುಂಬಡ್ತಿ ಮುಗಿಯಿತು.
‘ಒಡ್ಡು ಮಾತಿನ ಮುದುಕ ನಾನು ಹಗಲಲ್ಲಷ್ಟೆ
ಕತ್ತಲಾಯಿತೊ ಗಟ್ಟಿಯುವಕ,
ಬೆಕ್ಕ ನಗಿಸಲು ಬಲ್ಲೆ, ಗುಟ್ಟ ಕೂಗಿಸಬಲ್ಲೆ
ಜಾಣನುಡಿಯಲಿ ತೆಗೆದು ಚಿಲಕ.
ಮೊಡವೆ ಮೂಡಿದ ಮುಖದ ಎಳೆಯ ನುಡಿಸುವನೇನೆ
ನೆಣದೊಳಗೆ ಹುದುಗಿರುವ ಹಾಡ?
ಬದಿಗೆ ಮಲಗಿದ್ದ ಮಾತ್ರಕ್ಕೆ ದಕ್ಕೀತೇನು
ಕಾಲಪಾತಾಳಗಳ ಗೂಢ?’
– ಬೆಳಗಾಯ್ತು ಮುಂಬತ್ತಿ ಮುಗಿಯಿತು.
‘ಹುಟ್ಟುಹಾಕಲು ಮುಂದೆ ಬಾಗಿರುವ ಅಂಬಿಗನೊ,
ಮಗ್ಗದಲಿ ಬಗ್ಗಿರುವ ನೇಯ್ಗೆಯವನೊ,
ಎದೆಸೆಟಿಸಿ ಕೂತ ಅಶ್ವಾರೋಹಿಯೋ ಅಥವ
ಬಸಿರಿನಲಿ ಮುದುಡಿ ಮಲಗಿರುವ ಶಿಶುವೊ,
ಮೇಲಕೊಯ್ಯುವ ದಾರಿ ಹಿಡಿದವರೆ ಆಗಿರಲಿ
ಕೆಳನೆಲೆಯಲುಳಿದಂಥ ತೃಪ್ತರಿರಲಿ,
ನೋವಿನಲೆ ಬಾಳುವರು ಎಲ್ಲ ಮಾನವರೂ
ನನ್ನಂಥ ಕೆಲವರೇ ಇದ ಬಲ್ಲರು.’
– ಬೆಳಗಾಯ್ತು, ಮುಂಬತ್ತಿ ಮುಗಿಯಿತು.
‘ಬಲ್ಲ ಜನ ಯಾರೂ ಅಲ್ಲಗಳೆಯುವುದಿಲ್ಲ
ಮುಗಿಲಿನೊಳಗಿರುವ ಆ ಮುದುಕ
ಮಿಂಚಿನ ಧಾರೆ ಕಳಿಸಿ ಯಾತನೆಯ ಹರಿಸುವನು
ಎಂಬ ನಂಬಿಕೆಯ ಹಳೆಮಾತ.
ಆದರೂ ನಾ ಮಾತ್ರ ಬಲು ಒರಟು ಮುದುಕನೇ,
ನನಗಿರಲಿ ಎರಡನೆಯ ದಾರಿ,
ಹೆಣ್ಣಿನೆದೆ ಮೇಲೊರಗಿ ಮಲಗುವೆನು ಹಾಯಾಗಿ
ಯಾತನೆಯ ಮರವೆಯಲಿ ಹೂಳಿ.’
– ಬೆಳಗಾಯ್ತು, ಮುಂಬತ್ತಿ ಮುಗಿಯಿತು.
*****