ಕಾಡುತಾವ ನೆನಪುಗಳು – ೨೭

ಕಾಡುತಾವ ನೆನಪುಗಳು – ೨೭

ಆ ಮಧ್ಯೆ ಹೃದಯಾಘಾತವೂ ಆಗಿತ್ತು. Angioplasty ಶಸ್ತ್ರಕ್ರಿಯೆಯನ್ನು ಮಾಡಿಸಿಕೊಂಡೆ. ಯಾರಿಗೂ ತಿಳಿಸಿರಲಿಲ್ಲ. ಒಬ್ಬಳೇ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದೆ. ನರ್ಸ್‌ಗಳ ಸ್ನೇಹ, ಆಯಾಗಳ ವೈದ್ಯ ಸ್ನೇಹದಿಂದ ಶಸ್ತ್ರಕ್ರಿಯೆಯನ್ನು ಮಾಡಿಸಿಕೊಂಡು ಬಂದಿದ್ದೆ. ಕೈಯಲ್ಲಿ ಹಣವಿದ್ದರೆ ಮಾತ್ರ ಬಂಧು-ಬಳಗ ಎಲ್ಲವೂ ಎಂಬುದು ತಿಳಿದಿತ್ತು. ಅದೂ ತಡವಾಗಿ. ಆದರೂ ನನ್ನ ಮನಸ್ಸು ನನ್ನನ್ನು ಕೇಳದೆ ಅವ್ವನ ಬಗ್ಗೆ, ತಂಗಿ, ಅವಳ ಮಕ್ಕಳು… ಹೀಗೆ ಎಲ್ಲರ ಬಗ್ಗೆಯೂ ಮಿಡಿಯುತ್ತಿತ್ತು. ಅವರೊಂದಿಗೆ ಆಡಿದ, ಕಾಡಿದ ದಿನಗಳು ನೆನಪಾಗದೇ ಇರುತ್ತಿರಲಿಲ್ಲ… ಆಗೆಲ್ಲಾ ಕಣ್ಣುಗಳು ಒದ್ದೆಯಾಗುತ್ತಿದ್ದವು. ವಿಚ್ಚೇದನದ ತೀರ್ಪು ಹೊರಬೀಳಲು ವರ್ಷಕಾಲ ಕಾಯಬೇಕಾಗಿತ್ತು. ಅಂತಿಮವಾಗಿ ರಾಜೀ ಮಾಡಿಸಲು ಯತ್ನಿಸಿದಾಗ ‘ಅವನು’ ಸಂಧಾನಕ್ಕೆ ತಯಾರಾಗಿದ್ದ. ಆದರೆ ನಾನು ತಯಾರಾಗಿರಲಿಲ್ಲ. ಕಾನೂನುಬದ್ಧವಾಗಿ, ನಾನಾಗಿಯೇ ಕುತ್ತಿಗೆಗೆ ಕಟ್ಟಿಕೊಂಡಿದ್ದ ಉರುಳನ್ನು ಕಿತ್ತು ಹಾಕಲಾಗಿತ್ತು. ಅವ್ವನಿಗೆ ಫೋನು ಮಾಡಲು ಯತ್ನಿಸಿದ್ದೆ. ಲ್ಯಾಂಡ್ ಫೋನು ತೆಗೆಯಲಾಗಿತ್ತು. ಅವ್ವನ ಮೊಬೈಲ್ ನಂಬರು ಮಾತಿಗೆ ಸಿಗುತ್ತಿರಲಿಲ್ಲ. ಆದರೂ ಮನಸ್ಸು ತಡೆಯದೆ ಅವ್ವನನ್ನು ನೋಡಲು ದಾವಣಗೆರೆಗೆ ಹೋಗಿದ್ದೆ. ಮನಸ್ಸು ತಡೆಯದೆ ಅವ್ವನನ್ನು ನೋಡಲು ದಾವಣಗೆರೆಗೆ ಹೋಗಿದ್ದೆ.

ನನಗೆ ‘ಶಾಕ್…’ ಕಾದಿತ್ತು.

ನನ್ನ ತಂಗಿ ತನ್ನ ಕುಟುಂಬ ಸಮೇತ ಬೇರೆ ಕಡೆ ಬಾಡಿಗೆ ಮನೆಗೆ ಹೋಗಿದ್ದಳು. ಅವರಿದ್ದ ಮೇಲಿನ ಮನೆಯನ್ನು ಬೇರೆಯವರಿಗೆ ಬಾಡಿಗೆಗೆ ಕೊಟ್ಟು ಹೋಗಿದ್ದರು. ಕೆಳಗಿನ ಮನೆಯಲ್ಲಿ ಅವ್ವನನ್ನು ಒಂಟಿಯಾಗಿರಲು ಬಿಟ್ಟು ಹೋಗಿದ್ದರು. ಈ ವಯಸ್ಸಿನಲ್ಲಿ ಅದೂ ಎಪ್ಪತ್ತರ ವಯಸ್ಸಿನಲ್ಲಿ. ಅವ್ವ ಬೇಕೆನಿಸಿದವರೆ ಅಡಿಗೆ ತಾನೇ ಮಾಡಿಕೊಂಡು ತಿಂಡಿ ಮಾಡಿಕೊಳ್ಳುತ್ತಿರಲಿಲ್ಲ. ಅದರಲ್ಲೂ ಅವ್ವನಿಗೆ ಡಯಾಬಿಟೀಸ್ ಕಾಯಿಲೆ ಬೇರೆ, ಅವ್ವ ಸೊರಗಿ ಹೋಗಿದ್ದಳು. ದೈಹಿಕವಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು.

ಅವ್ವನನ್ನು ತಬ್ಬಿಕೊಂಡು ಅತ್ತುಬಿಟ್ಟೆ. ಆದರೂ ಅವ್ವ ತನ್ನ ಮಗಳನ್ನು ಬಿಟ್ಟುಕೊಡಲಿಲ್ಲ.

“ಮಗನಿಗೆ ಮದ್ವೆಯಾಯ್ತು. ಸಂಸಾರವೂ ದೊಡ್ಡದಾಯ್ತು ಬರೋರು ಹೋಗೋರು ಜಾಸ್ತಿಯಾಗಿದ್ದರು. ನನ್ನ ಕಾಟ ಬೇರೆ, ಎಲ್ಲಿಯಾದರೂ ಇರಲಿ ಅವಳು ನೆಮ್ಮದಿಯಿಂದ ಇದ್ದರೆ ಸಾಕು. ನಾನು ಹೋಗಲಿಲ್ಲ. ಅವರು ಕರೆಯಲೂ ಇಲ್ಲ…” ಎಂದು ಹೇಳಿದ್ದಳು.

ಅದು ಸುಳ್ಳೆಂದು ನನಗೆ ಗೊತ್ತಾಗಿತ್ತು. ವಯಸ್ಸಾದವರನ್ನು ಕಟ್ಟಿಕೊಂಡು ಇರಲು ಅವರಿಗೆ ಇಷ್ಟವಿರಲಿಲ್ಲ. ಅವ್ವ ಖಿನ್ನಳಾಗಿದ್ದಳು. ಅವಳ ದೊಡ್ಡ ಕಣ್ಣುಗಳಲ್ಲಿ ಮೊದಲಿನ ಚೈತನ್ಯದ ಬೆಳಕು ಮಾಯವಾಗಿತ್ತು. ತಿರಸ್ಕಾರದ ನೋವು ಅವಳನ್ನು ಸುತ್ತಿಕೊಂಡಿತ್ತು. ನನ್ನ ಕರುಳಲ್ಲಿ ಕತ್ತರಿಯಾಡಿಸಿದಂತಾಗಿತ್ತು. ಅವ್ವನಿಗೆ ತಿಂಡಿ ಊಟದ ಮೇಲೆ ಆಸಕ್ತಿಯೇ ಇರಲಿಲ್ಲ.

“ವಯಸ್ಸಾದ ಮೇಲೆ ಬದುಕಿರಬಾರದು. ಯಾರಿಗೂ ಬೇಡವಾಗುವಷ್ಟರಲ್ಲಿಯೇ ಸತ್ತು ಹೋಗಿಬಿಡಬೇಕು…” ಅವ್ವನ ನೋವಿನ ಮಾತು ನನಗೆ ಎಲ್ಲವನ್ನೂ ಹೇಳಿತ್ತು.

“ಈಗಾಲಾದ್ರೂ ನಂಜೊತೆ ಬಂದುಬಿಡು. ಒಬ್ಬಳೇ ಇಲ್ಲಿದ್ದು ಏನು ಮಾಡ್ತೀಯಾ?” ಕೈಹಿಡಿದು ದುಃಖದಿಂದ ಕೇಳಿದ್ದೆ.

“ಅಲ್ಲಿಗೆ ಬಂದು ಏನ್ಮಾಡ್ಲಿ? ಇನ್ನೆಷ್ಟು ವರ್ಷ ಬದುಕಿರ್ತೀನಿ? ಈ ಗೂಡು ನನ್ನದೇಂತ ಧೈರ್ಯವಿದೆ. ಗಂಜೀನೋ… ನೀರೋ… ಕುಡಿದು ಬದುಕಿದ್ರಾಯ್ತು…”

“ಅವನು ಈಗ ನನ್ನ ಜೊತೆಯಿಲ್ಲ. ಡೈವೋರ್ಸ್ ಕೊಟ್ಟುಬಿಟ್ಟೆ. ಅವನ ಕಾಟವಿಲ್ಲ. ನಾನೂ ಅಲ್ಲಿ ಒಬ್ಬಳೇ ಇದ್ದೀನಿ…” ಎಂದಿದ್ದೆ.

ಅವ್ವ ಒಪ್ಪಿಕೊಳ್ಳಲಿಲ್ಲ.

ಅಡಿಗೆ ಮನೆಗೆ ಹೋಗಿ ನೋಡಿದ್ದೆ. ಡಬ್ಬಗಳು ಖಾಲಿಯಾಗಿದ್ದವು. ಆ ಕೂಡಲೇ ಕಿರಾಣಿ ಅಂಗಡಿಗೆ ಹೋಗಿ ತಿಂಗಳಿಗೂ ಜಾಸ್ತಿಯಾಗುವಷ್ಟು ರೇಷನ್ ತಂದು ತುಂಬಿಸಿದ್ದೆ. ಅವ್ವನಿಗೆ ಬೇಕಾಗಿದ್ದ ಮಾತ್ರೆಗಳನ್ನೂ ಮೂರು ತಿಂಗಳಿಗಾಗುವಷ್ಟು ತಂದಿಟ್ಟೆ. ನನ್ನ ಚಿಕ್ಕಮ್ಮನ ಮಗ, ನನ್ನ ತಮ್ಮನನ್ನು ಕರೆದು ಹೋಟೆಲಿನ ಖಾನಾವಳಿಯ ಊಟದ ವ್ಯವಸ್ಥೆಗೆ ಹೇಳಿದ್ದೆ.

“ಖಾನಾವಳಿ ಯಾಕಕ್ಕ? ನನ್ನ ಮನೆಯಿಂದಲೇ ಎಲ್ಲಾ ತಂದುಕೊಡ್ತೀನಿ. ನಿನಗೆ ಹೇಳದೆ ತಂದುಕೊಟ್ಟರೆ ತಪ್ಪಾದೀತೇನೋ ಅಂತ ಸುಮ್ಮನಿದ್ದೆ. ಅಷ್ಟಕ್ಕೂ ಅವ್ವ ಏನೂ ಹೇಳುತ್ತಿರಲಿಲ್ಲ. ನಮ್ಮನ್ನೂ ಅವ್ವ ಸಾಕಿಲ್ವಾ? ಬೆಳೆಸಿಲ್ವಾ…” ಎಂದಿದ್ದ. ಅವನೊಬ್ಬನೇ ನಿಯತ್ತು ಅಂತಃಕರಣವಿರುವವನು ಎಂದು ನನಗೆ ಗೊತ್ತಿತ್ತು. ಆದರೂ ಖಾನಾವಳಿ ಊಟ, ತಿಂಡಿಗೆ ತಿಂಗಳು ತಿಂಗಳು ಅವನಿಗೆ ಕಳುಹಿಸುವ ಮನಸ್ಸು ಮಾಡಿದ್ದೆ. ಅವನು ನಿರಾಕರಿಸಿದ್ದ. ಆದರೂ ನಾನು ಒಪ್ಪಿಸಿದ್ದೆ. ಒಂದೆರಡು ದಿನಗಳಿದ್ದೇನೋ ವ್ಯವಸ್ಥೆ ಮಾಡಿದ್ದೆ. ಆದರೂ ಪಶ್ಚಾತ್ತಾಪ… ದುಃಖ, ನೋವು ನನ್ನನ್ನು ಕಾಡತೊಡಗಿತ್ತು.

ಊರಿಗೆ ಹೊರಟು ಬರುವಾಗ ಅವ್ವನ ತೊಡೆಯ ಮೇಲೆ ಮುಖವಿಟ್ಟು ಅತ್ತಿದ್ದೆ. ಪಶ್ಚಾತ್ತಾಪದ ಅಳು. ಅವ್ವನಿಗೆ ನಿರಾಶೆ ಮಾಡಿದ್ದರ ಅಳು… ಅವ್ವನ ಕನಸುಗಳನ್ನು ಕೊಚ್ಚಿ ಹಾಕಿದ್ದ ಅಳು…

ನಮ್ಮ ಭವಿಷ್ಯಕ್ಕಾಗಿ ತನ್ನ ಬದುಕನ್ನು ತೇಯ್ದು ಒಣಗಿ ಹೋಗಿದ್ದ ಅವ್ವನನ್ನು ಕಂಡಾಗ ಆದ ನೋವು ನನ್ನನ್ನು ತತ್ತರಿಸುವಂತೆ ಮಾಡಿತ್ತು. ಅವ್ವನ ಈ ಸ್ಥಿತಿಗೆ ನಾನೇ ಕಾರಣವಾಗಿಬಿಟ್ಟಿದ್ದೆನಾ? ತನ್ನ ಎರಡನೆಯ ಮಗಳಿನ, ಅವಳ ಮಕ್ಕಳ ಮೇಲಿನ ಮಮಕಾರ ವ್ಯಾಮೋಹಕ್ಕಾಗಿ ಅವ್ವ ತೆತ್ತ ಬೆಲೆ ಅಪಾರವಾಗಿತ್ತು. ಆದರೆ ಬಾಯಿಬಿಟ್ಟು ಹೇಳಿಕೊಳ್ಳುವ ಹಾಗಿರಲಿಲ್ಲ. ಅವರ ನಿರಾಕರಣದ ನೋವು ತಿರಸ್ಕಾರದಂತೆ ಅವಳ ಕಣ್ಣುಗಳಲ್ಲಿ ಶೂನ್ಯತೆಯನ್ನು ತಂದಿತ್ತು.

ಅವಳೇಕೆ ಹಾಗೆ ಮಾಡಿದಳು? ಅವ್ವನ ಮೇಲೂ ಅವಳಿಗೆ ಅಷ್ಟೇ ಪ್ರೀತಿಯಿದೆಯೆಂದುಕೊಂಡಿದ್ದ ನನಗೆ ಆಘಾತವಾಗಿತ್ತು. ಅವಳು ತನ್ನ ಸಂಸಾರ, ಗಂಡ, ಮನೆ, ಮಕ್ಕಳು ಎಂಬುದಕ್ಕೇ ಸೀಮಿತವಾಗಿದ್ದಳೆ? ಅದೂ ಈ ವಯಸ್ಸಿನಲ್ಲಿ ಅವ್ವನನ್ನು ಒಂಟಿಯಾಗಿರಲು ಬಿಟ್ಟು ಹೋಗಲು ಹೇಗೆ ಮನಸ್ಸಾಯಿತು? ಅವ್ವನ ವರ್ತನೆ ಅವಳಿಗೆ ದಬ್ಬಾಳಿಕೆ ಎಂದೆನ್ನಿಸಿತ್ತೆ? ಆಕೆಯ ಗಂಡನೇನಾದರೂ ಕಾರಣವಾಗಿರಬಹುದೇ? “ಕೊಟ್ಟ ಹೆಣ್ಣು ಕುಲಕ್ಕೆ ಹೊರಗು…” ಎಂದು ಆಗಾಗ್ಗೆ ಹೇಳುತ್ತಿದ್ದ ಅವಳು ತನ್ನದೇ ಕುಟುಂಬದ ಒಳ್ಳೆಯದಕ್ಕಾಗಿ, ಹಾಗೆ ಮಾಡಿದಳಾ? ಆದರೂ ಹೀಗೆ ಮಾಡಬಾರದಿತ್ತು ಎಂದೆನ್ನಿಸಿತ್ತು.

ಅವಳ ಪ್ರಕಾರ ಅವಳಿಗದು ಸರಿಯೆನ್ನಿಸಿದ್ದರೆ ನಾನ್ಯಾಕೆ ತಪ್ಪು ಹುಡುಕಲಿ? ಆದರೆ ತಿರಸ್ಕಾರದ ನೋವು ಅಪಮಾನ ಗಾಢವಾಗಿರುತ್ತದೆ. ನಿರಾಕರಣದ ನೋವು ಏನೆಂದು ನನಗಲ್ಲದೆ ಮತ್ತಾರಿಗೆ ಅರಿವಾಗಲು ಸಾಧ್ಯ?

ದುಃಖದಿಂದ ಭಾರವಾದ ಹೃದಯದೊಂದಿಗೆ ಬೆಂಗಳೂರಿಗೆ ಬಂದಿದ್ದೆ. ಅವ್ವನ ಬಗ್ಗೆ ನನ್ನ ಅಭಿಪ್ರಾಯ, ಸಿಟ್ಟು, ಎಲ್ಲಾ ಮಾಯವಾಗಿತ್ತು. ಅವ್ವ ಒಂಟಿಯಾಗಿದ್ದರೆ ಆಕೆಗೂ ನೆನಪುಗಳು ಕಾಡಬಹುದಲ್ಲವೆ? ಆದರೆ ಆಕೆ ಆ ನೆನಪುಗಳ ಒತ್ತಡಕ್ಕೆ ಮಾನಸಿಕವಾಗಿ ಕುಗ್ಗಿಬಿಡುತ್ತಾಳೆ. ಏನು ಮಾಡಲಿ? ಕರೆದರೆ ಬರುವುದಿಲ್ಲವೆನ್ನುತ್ತಾಳೆ. ನಾನೇ ಅವಳ ಜೊತೆಗೆ ಹೋಗಿ ಇರಬಾರದೇಕೆ? ಈ ಯೋಚನೆ ಬಂದಿದ್ದೆ ತಡ ನನ್ನ ಮನಸ್ಸು ಅವ್ವನನ್ನು ಹೋಗಿ ಸೇರಿಕೊಳ್ಳುವ ಬಯಕೆ ಜಾಸ್ತಿಯಾಗತೊಡಗಿತ್ತು. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ.

ನನಗೆ ಎಲ್ಲವನ್ನೂ ಕೊಟ್ಟ ಸ್ನೇಹಿತರು, ಬದುಕು ಬದಲಾಯಿಸಿದ ಬೆಂಗಳೂರನ್ನು ಬಿಟ್ಟು ಹೋಗುವುದು ಕಷ್ಟವಾಗಿತ್ತು. ಬದುಕನ್ನು ಒಂಟಿಯಾಗಿ ಎದುರಿಸುವನ್ನು ಕಲಿತಿದ್ದೆ. ನನ್ನ ಒರಟುತನ ಮಾಯವಾಗಿತ್ತು. ಬದುಕುಕೊಟ್ಟ ಒಂದೊಂದು ಏಟಿಗೂ ಬದಲಾಗತೊಡಗಿದ್ದೆ. ನನ್ನ ಭಂಡ ಧೈರ್ಯ, ಬಂಡಾಯದ ಮನೋಭಾವ ಮಾಯವಾಗಿತ್ತು. ನಮ್ಮ ಹಣೆ ಬರಹವನ್ನು ನಾವೇ ಬರೆದುಕೊಳ್ಳುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು? ಆಗ ಎಲ್ಲವೂ ಚೆನ್ನಾಗಿರುತ್ತಿತ್ತು. ಕನಸುಗಳೆಲ್ಲಾ ನನಸಾಗುತ್ತಿದ್ದವು. ನೆನಪುಗಳಾಗಿ ಕಾಡುತ್ತಿರಲಿಲ್ಲ ಅಲ್ಲವಾ?

ಚಿನ್ನೂ, ಬೆಂಗಳೂರು ನನಗೆ ಎಲ್ಲವನ್ನೂ ಕೊಟ್ಟಿತ್ತು. ಒಳ್ಳೆಯ ಗೆಳೆಯ- ಗೆಳತಿಯರು, ಪ್ರಖ್ಯಾತ ಸಾಹಿತಿಗಳ ಬಳಗ, ಅವರೊಡನೆ ಸಂಪರ್ಕ, ಪತ್ರಿಕೆಗಳ ಬಡನಾಟ, ನನ್ನನ್ನು ಬರೆಯುವಂತೆ ಪ್ರೋತ್ಸಾಹಿಸಿತ್ತು. ನನ್ನನ್ನು ಲೇಖಕಿಯನ್ನಾಗಿ ಗುರುತಿಸುವಂತೆ ಮಾಡಿತ್ತು. ನನ್ನ ಓದುವ ಹವ್ಯಾಸ ದ್ವಿಗುಣವಾಗಿತ್ತು. ನನ್ನ ಇಡೀ ದಿನದ ನೋವು ಅವನಿಂದಾಗುತ್ತಿದ್ದ ಅಪಮಾನಗಳನ್ನು ಮರೆಯುವಂತೆ ಮಾಡುತ್ತಿತ್ತು ಓದುವ ಮತ್ತೆ ಮತ್ತೆ ಓದುವ ಆಸೆಯಾಗಿತ್ತು. ಓದಿದ ಪುಸ್ತಕಗಳ, ಕತೆ, ಪಾತ್ರಗಳ ಬಗ್ಗೆ ವಿಶ್ಲೇಷಿಸಿ ತಿಳಿಸುವ ಒಬ್ಬ ಗುರುವಿನ ಅಗತ್ಯವಿದೆಯೆನ್ನಿಸುತ್ತಿತ್ತು. Random ಆಗಿ ಓದುವ ಬದಲು ಕ್ರಮಬದ್ಧವಾಗಿ ಓದಲು ನಾನು ಆಯ್ಕೆ ಮಾಡಿಕೊಂಡಿದ್ದು ಪ್ರತ್ಯೇಕವಾಗಿ ಓದುವ, ಕ್ರಮಬದ್ಧವಾಗಿ ತಿಳಿದುಕೊಳ್ಳುವ ಅಗತ್ಯವಿತ್ತು. ಆಸೆಯೂ ಇತ್ತು. ನಾನಾಗಲೇ ಹೇಳಿದಿದ್ದೆನಲ್ಲ, ಊಹೂಂ ಬರೆದಿದ್ದೆನಲ್ಲಾ? ದೂರ ಸಂಪರ್ಕ ಶಿಕ್ಷಣ, ಮಾನಸ ಗಂಗೋತ್ರಿಯಿಂದ ನಾನು ಕನ್ನಡದ ಡಿಗ್ರಿಯನ್ನು ಪಡೆದುಕೊಂಡಿದ್ದೇಂತ? ಹೌದು ಕನ್ನಡದಲ್ಲಿ ಎಂ.ಎ. ಡಿಗ್ರಿ ಪಡೆದುಕೊಂಡ ನಂತರ, ಡಿಪ್ಲೊಮಾ ಆಂಗ್ಲಭಾಷೆ, ಪತ್ರಿಕೋದ್ಯಮದ ಡಿಪ್ಲೊಮಾ ಡಿಗ್ರಿಗಾಗಿ ಮತ್ತೆ ಓದಲು ಆರಂಭಿಸಿದ್ದೆ. ಹಾಗೆಯೇ ಹಂಪಿ ಯೂನಿವರ್ಸಿಟಿಯಿಂದ ಡಿ.ಲಿಟ್ ಪದವಿಯನ್ನು ಪಡೆದುಕೊಂಡೆ. ‘ಮಕ್ಕಳ ಮಾನಸ ಲೋಕ’ ಎಂಬ ಮನೋವಿಜ್ಞಾನದ ಬಗ್ಗೆ ಪ್ರಬಂಧವನ್ನು ಬರೆದಿದ್ದೆ. ಹೀಗೆ ಹುಚ್ಚಿಯಂತೆ ರಾತ್ರಿಯಿಡೀ ಓದುತ್ತಿದ್ದೆ. ಹಗಲು ಆಸ್ಪತ್ರೆಗೆ ಕರ್ತವ್ಯಕ್ಕೆ ಹೋಗುತ್ತಿದ್ದೆ. ನನ್ನ ಎಷ್ಟೇ ಸಮಸ್ಯೆಗಳಿಗೆ ಸಾಹಿತ್ಯ ಓದುವಾಗ ಪರಿಹಾರ ಕಂಡುಕೊಳ್ಳುತ್ತಿದ್ದೆ. ಹೀಗಾಗಿ ಯಾರ ಬಳಿಯೂ ಏನನ್ನು ಹೇಳಿಕೊಳ್ಳುವಂತಿರಲಿಲ್ಲ. ಹಂಚಿಕೊಳ್ಳುವಂತಿರಲಿಲ್ಲ ಬರೆಯುತ್ತಿದ್ದೆ. ಇದರಿಂದ ಸಾಹಿತಿಯಾಗುವ ಪ್ರಯತ್ನ ಮಾಡಿರಲಿಲ್ಲ. ನನ್ನ ಬೇಗುದಿಯನ್ನು ತಣಿಸಿಕೊಳ್ಳಲೂ ಓದುತ್ತಿರಲಿಲ್ಲ. ನನ್ನ ಸಂಕಟ, ನೋವು, ಅಪಮಾನಗಳನ್ನು ತೊಡೆದುಹಾಕಿಕೊಳ್ಳುವ ಪ್ರಯತ್ನವಾಗಿತ್ತು ಕಣೆ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊಳಲು
Next post ಧೂರ್‍ತ ಒರಟು ಮುದುಕ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…