ದೀಪದ ಕಂಬ – ೫ (ಜೀವನ ಚಿತ್ರ)

“ಅನಂತ ವಿಜಯ”

ಅಂದಿನಿಂದಲೇ ಅನಂತ ವಿಜಯ ಪ್ರಾರಂಭವಾಯಿತು. ಎಂದು ಅವನು ಚಿ.ಸುಬ್ಬಿಯನ್ನು ವರಿಸಿದನೋ ಅಂದಿನಿಂದಲೇ. ನಮ್ಮಲ್ಲಿ ಆಗ ಮನೆಯಲ್ಲಿ ಬೇರೆ ಹೆಸರು ಇಡುವ ಪದ್ಧತಿ ಇತ್ತು. ಸೊಸೆಗೆ ಎಲ್ಲರೂ ಸೇರಿ “ಲಕ್ಷ್ಮಿ” ಎಂದು ನಾಮಕರಣ ಮಾಡಿದರು. ಅಂದಿನಿಂದ ನಮ್ಮ ಅಮ್ಮ ಅನಂತಲಕ್ಷ್ಮಿಯಾದಳು. ಆ ಅತ್ತೆಯರು, ಅವರ ಸೊಸೆಯಂದಿರು ಎಲ್ಲರೂ ಲಕ್ಷ್ಮಿ ಎಂದೇ ಕರೆಯುತ್ತಿದ್ದರು. ಲಕ್ಷ್ಮಿ ಗರ್ಭಿಣಿಯಾದುದನ್ನು ಕೇಳಿ ಎಲ್ಲರೂ ಹರ್ಷಗೊಂಡರು. ತಂದೆ ಶಿವರಾಮನಿಗೆ ಅಜ್ಜನಾಗುವ ಆಸೆ. ಮೊದಲ ಬಾಣಂತನವನ್ನು ತವರು ಮನೆಯಲ್ಲಿ ಮಾಡುವುದು ಪದ್ಧತಿ. ಆದರೆ ಅಲ್ಲಿ ಅನುಕೂಲವಿರಲಿಲ್ಲ. ಅದರಿಂದ ಅಬ್ಬೆಯ ಅಬ್ಬೆ ಮನೆ, ಸುಬ್ರಹ್ಮಣ್ಯದಲ್ಲಿ ಬಾಳಂತನ ನಡೆಯಿತು. ನಮ್ಮ ದೊಡ್ಡಣ್ಣ ಜನಿಸಿದ್ದು ಅಲ್ಲೇ, ನರಸಿಂಹಭಟ್ಟರ ಮನೆಯಲ್ಲಿ ಶಿವರಾಮ ಅಜ್ಜನಾದ ಮೊಮ್ಮಗ ಶಿವರಾಮನಿಂದಾಗಿ. ಅನಂತನ ಮೊದಲ ಹರ್ಷದ ರವ ಶಿವರಾಮನಿಂದ. ಮೊಮ್ಮಗನಿಗೆ ಒಂದು ಅಂಗಿಯನ್ನು ನಿಂತು ಹೊಲಿಸಿಕೊಂಡು ಬಂದನಂತೆ ಅಜ್ಜ. ಆ ಚಂದದ ಅಂಗಿ ಎಂದೂ ಗಲೀಜಾಗಲೇ ಇಲ್ಲ – ಅಷ್ಟು ಗಿಡ್ಡ ಅದು! ಸೊಸೆಗೆ ನಗು ತಡೆಯಲಾಗಲಿಲ್ಲ. ಆದರೂ ಸುಮ್ಮನಿದ್ದು ಅಜ್ಜಿ ಮನೆಗೆ ಬಂದು ನಗೆಯಾಡಿದಳಂತೆ. ಶಿವರಾಮ ಹರದಾಡುವಾಗ ಎಲ್ಲಾದರೂ ಬಿದ್ದಾನೆಂದು ಅವನ ಕಾಲು ಬಳೆಗೆ ಬಳ್ಳಿ ಕಟ್ಟಿ ಇನ್ನೊಂದು ತುದಿಯನ್ನು ಕಿಟಕಿಗೆ ಕಟ್ಟಿ ತನ್ನ ಕೆಲಸಕ್ಕೆ ತೊಡಗಿಕೊಂಡಿದ್ದಳಂತೆ ನಮ್ಮಮ್ಮ. ಹೊರಗೆಲ್ಲೋ ಹೋಗಿದ್ದ ಅಜ್ಜ ಬಂದು ನೋಡಿದ. ಬ್ರಹ್ಮೇತಿ ಕೋಪ ಬಂತು. ಅಂದು ಮಧ್ಯಾಹ್ನ ಊಟ ಮಾಡದೇ ಛತ್ರದ ಮಂಜುನಾಥನ ಮನೆಯಲ್ಲಿ ಕೂತನಂತೆ. ಅಮ್ಮನಿಗೇ ಅರ್ಥಾವಾಯಿತೋ, ಬೇರೆ ಯಾರಾದರೂ ಹೇಳಿದರೋ – ತಿಳಿಯದು. ಅಲ್ಲಿಗೆ ಹೋಗಿ “ತಪ್ಪಾಯಿತು” ಎಂದು ನಮಸ್ಕಾರ ಮಾಡಿದ ಮೇಲೆ ಮನೆಗೆ ಬಂದು ಮೊಮ್ಮಗನನ್ನು ತೊಡೆ ಮೇಲೆ ಕೂರಿಸಿಕೊಂಡು ಊಟ ಮಾಡಿದನೆಂದು ಅಮ್ಮ ಹೇಳುತ್ತಿದ್ದಳು.

ಇನ್ನೊಮ್ಮೆ ಇವಳು ಅಡಿಗೆ ಮಾಡಿ ಕೊಳ್ಳಿಗೆ ನೀರು ಹಾಕಿ ಮೂಲೆಯಲ್ಲಿಟ್ಟು ನೆರಮನೆಗೆ ಮಾತನಾಡಲು ಹೋಗಿದ್ದಳು – ಮಗನನ್ನು ಕರೆದುಕೊಂಡು. ಮಾವ ಸ್ನಾನ ಮಾಡಿ ಬಂದು ಸಂಧ್ಯಾವಂದನೆ ಮಾಡುತ್ತಿದ್ದಾಗ ಆಚೆಮನೆ ಪಾತತ್ತೆ ಯಾಕೋ ಬಂದಳು. “ದೊಡ್ಡಪ್ಪ, ಬೆಂಕಿ ಸೌದಿ ಉರಿತಾ ಇದ್ದು, ಎಂತಕ್ಕೆ ನಂದಿಸಿದ್ದಿಲ್ಲೆ ಎಂದಾಗ “ಪಾತಿ, ಇವತ್ತು ನಾ ಇದ್ದೆ ನಂದಸ್ತೆ. ನಾ ಇಲ್ಲದಾಗ ಹೀಗೇ ಆದರೆ ಯಾರು ನೀರು ಹಾಕ್ತೊ? ಅವಳೇ ಬರಲಿ” ಎಂದನಂತೆ. ಪಾತತ್ತೆ ನೀರು ಹಾಕಿ ನಂದಿಸಿ ಸುಬ್ಬೀ ಎಂದು ಅಮ್ಮನನ್ನು ಕರೆದು ತೋರಿಸಿದಳಂತೆ . ಅಮ್ಮನಿಗೆ ಛಳಿಜ್ವರ, ಪಾಪ!

ಅಜ್ಜ ತೀರ್ಥಹಳ್ಳಿಗೆ ಹೋದ. ಅನಂತ ಮನೆಗೆ ಬಂದ. ಮುಂದೆ ಕೆಲವೇ ತಿಂಗಳಲ್ಲಿ ಶಿವರಾಮಜ್ಜ ತೀರ್ಥಹಳ್ಳಿಯಲ್ಲೇ ಕೈಲಾಸವಾಸಿ ಆದ. ಅಪರ ಕಾರ್ಯಗಳನ್ನೆಲ್ಲಾ ಮುಗಿಸಿ ಅನಂತ ಬರಲೇ ಇಲ್ಲವಲ್ಲ ಎಂದು ಶ್ರೀ ಶ್ರೀಗಳವರು ಹೇಳಿ ಕಳಿಸಿದರು. ಬಂದ. “ನೀನು ನಿನ್ನಪ್ಪನ ಕೆಲಸ ಮುಂದುವರಿಸು” ಎಂದಾಗ “ತನ್ನಿಂದ ಆಗದು, ಹೆದರಿಕೆ ಆಗುತ್ತದೆ” ಎಂದನಂತೆ. “ಶಿವರಾಮಭಟ್ಟನ ಮಗನಿಗೆ ಎಲ್ಲಿಯ ಹೆದರಿಕೆ? ನಾನಿದ್ದೇನೆ, ಮುಂದುವರಿಸು” ಎಂದು ಅಪ್ಪಣೆ ಕೊಡಿಸಿದರು. ಇದು ನಿಜವಾದ ಅನಂತ ವಿಜಯ.

ತೀರ್ಥಹಳ್ಳಿಯಲ್ಲಿ ಮಾಡಬೇಕಾದ ಕೆಲಸ ಬಹಳ ಇತ್ತು. ಪರರ ಪಾಲಾಗಿದ್ದ ಜಮೀನನ್ನು ಸಾಮ, ದಾನ, ಭೇದ, ದಂಡಗಳಿಂದ ಮಠಕ್ಕೆ ಬರುವಂತೆ ಮಾಡಿದ್ದು ಹರಸಾಹಸ. ಇಷ್ಟರ ಮಧ್ಯ ಊರಿನವರ ಸಹಕಾರವೂ ಇಲ್ಲ. ಆದರೂ ಈ ಕೆಲಸದಲ್ಲಿ ತಂದೆಯವರಿಗೆ ನೆರವಾದವರು ಕೆರೆಮಾರ್ಕಾಂಡೆ ಗಣೇಶಭಟ್ಟರು, ಸೋದರತ್ತೆಯ ಮಗ, ಕಾಯಾ, ವಾಚಾ, ಮನಸಾ ಸಹಾಯ ಮಾಡಿದರಂತೆ. ಇಷ್ಟರಲ್ಲೇ ಎರಡನೇ ಮಗನ ಜನನ. ಕುಲದೇವರ ಹೆಸರು, ಗಜಾನನ. ಮೂರನೆಯದಾಗಿ ಹುಟ್ಟಿದವನಿಗೆ ಮಾವನ ಹೆಸರು, ಮಹಾಬಲೇಶ್ವರ. ವೈಕುಂಠ ಚತುರ್ದಶಿಯ ದಿನ ಹುಟ್ಟಿದವನು ಲಕ್ಷ್ಮೀನಾರಾಯಣನಾದ. ಐದನೆಯ ಮಗನಿಗೆ ಜಯರಾಮ ಎಂಬ ಹೆಸರು. ಅದು ಊರ ಹಿರಿಯರಾದ ಜಯರಾಮ ಉಪಾಧ್ಯರು ಗರುಡಚಯನ ಮಾಡಿದ ವರ್ಷವಂತೆ. ಮುಂದೆ ಈ ಜಯರಾಮನಿಗೆ ಜಯರಾಮ ಉಪಾಧ್ಯರ ಮನೆಯ ಹೆಣ್ಣನ್ನೇ ನಮ್ಮ ತಂದೆ ಮದುವೆ ಮಾಡಿಸಿದರು. ಆರನೆಯ ಮಗೆ ನರಸಿಂಹಮೂರ್ತಿ. ನಾವಿದ್ದ ತೀರ್ಥಹಳ್ಳಿ ಮಠದ ಆದ್ಯದೇವರ ಹೆಸರು.

ನಮ್ಮ ಮನೆಯ ಆಚೆ ಈಚೆ: ಆಚೆ ಮನೆ ಹರಿಹರಜ್ಜನದು. ಅವನಿಗೆ ಒಬ್ಬನೇ ಮಗ. ಹೆಸರು ಗಣಪತಿ. ನಾವು ಕರೆಯುತ್ತಿದ್ದುದು ಭವಾನಿ ಅಣ್ಣ ಎಂದು. ಅವನಿಗೆ ಮೂರು ಜನ ಅಕ್ಕಂದಿರು. ಮಂಕಾಳಿ, ಪಾರ್ವತಿ, ಭವಾನಿ. ಹಾಗಾಗಿ ಅವನು ಭವಾನಿ ಅಣ್ಣನಾದ! ಭವಾನಿ ಅಣ್ಣನಿಗೆ ಮೂರು ಗಂಡುಮಕ್ಕಳು. ಹರಿಹರ, ರಾಮಕೃಷ್ಣ ಮತ್ತು ಮಹಾಬಲೇಶ್ವರ.

ಈಚೆ ಮನೆ ದತ್ತಾತ್ರಯ ಅಜ್ಜ. ಅವನಿಗೆ ಮೂವರು ಗಂಡು ಮಕ್ಕಳು. ಗಣೀಶ, ರಾಮಚಂದ್ರ ಮತ್ತು ನಾರಾಯಣ. ಹೆಣ್ಣು ಮಕ್ಕಳು ಗಂಗಕ್ಕ, ತ್ರಿವೇಣಿ, ನಾಗವೇಣಿ, ಸರಸ್ವತಿ (ಚಚ್ಚಕ್ಕ), ಗೌರಿ. ಇವರ ತಾಯಿ ಅಬ್ಬೆಗೆ ಕಾವೇರತ್ತೆ. ಆಚೆಮನೆ ಅಜ್ಜನ ಹೆಂಡತಿ. ಅನ್ನದೇವಿ (ಅಂದೇವತ್ತೆ). ಈ ಮನೆಯನ್ನು ಮಾರಿ ಅವರು ಚೌಡಗೆರೆಗೆ ಹೋದರು. ಕೊಂಡವರು ಬಗ್ಗೋಣ ರಾಮಭಟ್ಟರು, ಗಣೇಶ ಅಡಿಗಳು.

ಅಪ್ಪಯ್ಯನ ಅತ್ತೆಮನೆ:

೧. ಮಂಕಾಳಮ್ಮನ ಮನೆ. ಊರ ಪ್ರಾರಂಭದಲ್ಲಿದೆ. ಹೆಸರು ಚಚ್ಚಮ್ಮ (ಸರಸ್ವತಿ ಇರಬೇಕು). ನಮ್ಮ ಮನೆಯ ಮದುವೆ, ಮುಂಜಿಗೆ ಅಜ್ಜನ ಶ್ರಾದ್ಧಕ್ಕೆ ನಾವೇ ಹೋಗಿ ಕರೆದುಕೊಂಡು ಬರುತ್ತಿದ್ದೆವು. ನಂತರ ಮುಟ್ಟಿಸುತ್ತಿದ್ದೆವು. ಅವಳಿಗೆ ಮಕ್ಕಳಿರಲಿಲ್ಲ, ಮಾರಿಬೇನೆಗೆ ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಳು, ಎಂಬತ್ತು ವರ್ಷ ಬದುಕಿದ್ದಳು.

೨. ಕೆರೆಮಾರ್ಕಾಂಡೆ: ಮನೆ ರಥಬೀದಿಯಲ್ಲಿದೆ. ಇವಳಿಗೆ ಇಬ್ಬರು ಗಂಡುಮಕ್ಕಳು. ಜಯರಾಮ, ಗಣೇಶ. ಈ ಗಣೇಶಮಾವನೇ ತೀರ್ಥಹಳ್ಳಿಯಲ್ಲಿ ಅಪ್ಪಯ್ಯನಿಗೆ ನೆರವಾದವನು. ಜೈಭಾವ ನಮ್ಮ ಮನೆ ನವರಾತ್ರಿ ಪೂಜೆ ಮಾಡುತ್ತಿದ್ದ. ಅವನ ಮನೆಗೆ ಅಣ್ಣತಮ್ಮಂದಿರ ಬಿದಿಗೆ ಊಟಕ್ಕೆ ನಾವೆಲ್ಲರೂ ಹೋಗುತ್ತಿದ್ದೆವು.

೩. ಶಾಬತ್ತೆ: ಹೊಸಮನೆ ಅಂದರೆ ರಥಬೀದಿಯಲ್ಲಿ ಮನೆ, ಇವಳಿಗೆ ಮೂರು ಗಂಡು ಮಕ್ಕಳು. ಶಿವರಾಮ, ಸದಾಶಿವ, ಕೃಷ್ಣ.

ಕೊಡ್ಲೆಕೆರೆ ವಾಸುದೇವ ಭಟ್ಟರ ಬಗೆಗೂ ನಾನು ಹೇಳಲೇಬೇಕು. ಶಿವರಾಮಜ್ಜ ಮತ್ತು ಇವರು ಶಟ್ಕರು ಅಂತ ಅಲ್ಲ. ದೂರದ ಕಾಶಿಯಲ್ಲಿ ಪೌರೋಹಿತ್ಯ ನಡೆಸಿದ ಸಾಹಸಿ ವಾಸಜ್ಜ. ಯಕ್ಷಗಾನ ಕಲಾಪ್ರೇಮಿ. ಇವರ ಮೂರು ಮಕ್ಕಳಲ್ಲಿ ಹಿರಿಯವ ಗಣಪತಿ ಅಣ್ಣ ಸಾಹಸಿ. ಎರಡನೆಯವ ಸುಬ್ರಾಯ ಶುದ್ಧ ವೈದಿಕ. ಮೂರನೆಯವ ವಿಶ್ವನಾಥ. ಬಹಳ ವರ್ಷ ಮೂವರೂ ಒಟ್ಟಿಗೆ ಪೌರೋಹಿತ್ಯ ಒದಗಿಸಿದರು. ಈಗ ಪಾಲಾಗಿದ್ದಾರೆ. ಆದರೆ ಔದಾರ್ಯ ಪಾಲಾಗಲಿಲ್ಲ.

ನಮ್ಮ ಮನೆಯ ಎದುರಿಗೆ ನಾಗತೀರ್ಥ, ಪಕ್ಕದಲ್ಲಿ ಅಶ್ವತ್ಥ ವೃಕ್ಷವಿರುವ ಅಶ್ವತ್ಥಕಟ್ಟೆ. ಈ ಅಶ್ವತ್ಥಕಟ್ಟೆ ವಿಶೇಷತೆಯನ್ನು ಪಡೆದಿದೆ. ಈ ಅಶ್ವತ್ಥ ವೃಕ್ಷಕ್ಕೆ ಊರಿನ ಪ್ರಸಿದ್ಧ ಅಗ್ನಿಹೋತ್ರ ದೀಕ್ಷಿತರು ,ಜೋಗಳೆಕರರ ಮನೆಯಿಂದ ಉಪನಯನ ಆಗಿದೆಯಂತೆ. ಕೋಟಿತೀರ್ಥಸ್ನಾನ ಮಾಡಿ ಊರಿನವರು ದಿನಾ ಈ ತ್ರಿಮೂರ್ತಿಸ್ವರೂಪ ಅಶ್ವತ್ಥಮರಕ್ಕೆ ನಮಸ್ಕರಿಸಿಯೇ ಮುಂದೆ ಮುಖ್ಯ ದೇವಾಲಯಕ್ಕೆ ಹೋಗುವುದು. “ವೃಕ್ಷ ಮೂಲೇ ಸ್ಥಿತೋ ಬ್ರಹ್ಮ, ವೃಕ್ಷ ಮಧ್ಯೇ ಜನಾರ್ದನ, ವೃಕ್ಷಾಗ್ರೇ ಶಂಕರ ಪ್ರೋಕ್ತಂ, ವೃಕ್ಷರಾಜಾಯ ತೇ ನಮಃ” ಎನ್ನುತ್ತಾ ಪ್ರದಕ್ಷಿಣೆ ಹಾಕಿ ಹೋಗುವವರು ಕೆಲವರು.

ಹಂದೆಮನೆ ಅಮ್ಮ – ನಾವು ಚಿಕ್ಕವರಿದ್ದ ಕಾಲದ ನೆನಪು. ಉದಯಗೀತೆ ಹಾಡುತ್ತಾ ಕೋಟಿತೀರ್ಥ ಸ್ನಾನಕ್ಕೆ ಹೋಗಿ (ವರ್ಷದ ಎಲ್ಲ ದಿನಗಳೂ) ಬರುವಾಗ ಈ ಅಶ್ವತ್ಥಮರದ ಬೇರಿಗೆ ನೀರು ಹಾಕುತ್ತಾ ಮೇಲಣ ಶ್ಲೋಕ ಹೇಳುತ್ತಿದ್ದಳು. ಪನ್ನಿತಾತಿಗೆ ಇದು ಅಲಾರ್ಮ್ ಗಂಟೆ. “ಮಕ್ಕಳೇ, ಏಳಿ, ಹಂದೆಮನೆ ಅಮ್ಮ ಅಶ್ವತ್ಥಕ್ಕೆ ಬಂದಾಯಿತು. ಈ ವಯಸಿನಲ್ಲಿ ಅವಳು ಕೋಟಿತೀರ್ಥಸ್ನಾನ ಮುಗಿಸಿ ಬಂದರೂ ನೀವು ಹಾಸಿಗೆಗೆ ಶರಣು. ಏಳ್ರೋ” ಎಂದು ಏಳುವವರೆಗೂ ಗದರಿಸುತ್ತಿದ್ದಳು.

ಅಶ್ವತ್ಥಮರಕ್ಕೆ ಹೊಂದಿ ನಾಗೇಶ್ವರ ದೇವಸ್ಥಾನ.ಸಂತಾನ ಪ್ರಾಪ್ತಿಗಾಗಿ ಇಲ್ಲಿ ಸರ್ಪಸಂಸ್ಕಾರ, ನಾಗಪ್ರತಿಷ್ಠೆ ಮಾಡುತ್ತಾರೆ. ಶ್ರಾವಣಶುದ್ಧ ಪಂಚಮಿ ನಾಗರಪಂಚಮಿಗೆ ಸಾವಿರಾರು ಜನರಿಂದ ಪೂಜೆ. ಸಂಜೆಗೆ ಸರ್ವಾಲಂಕಾರ ಪೂಜೆ, ಮಹಾಮಂಗಳಾರತಿ. ಈ ಮಂಗಳಾರತಿಗೆ ಊರ ಮುಖ್ಯ ದೇವಸ್ಥಾನ (ಮಹಾಬಲೇಶ್ವರ)ದಿಂದ ಓಲಗ ಬರುತ್ತದೆ. ನಮಗೆಲ್ಲಾ ಹೆಮ್ಮೆ. ಮಳೆಗಾಲದ ನಿಮಿತ್ತ ನಿಂತ ಉತ್ಸವಗಳು ನಮ್ಮ ಕೇರಿಗೆ ಮೊದಲು ಬಂದು ಓಲಗದ ನಾದಗೈದು ಆ ಇಡೀ ವರ್ಷದ ಉತ್ಸವಗಳ ವಾಲಗಕ್ಕೆ ನಾಂದಿ. ಜೈ ನಾಗೇಶ್ವರ.

ಈ ದೇವಸ್ಥಾನಕ್ಕೆ ತಾಗಿ ಇರುವುದೇ ವೇದೇಶ್ವರ. ಅದಕ್ಕೆ ತಾಗಿ ಊರಿನ ಉಪಾಧಿವಂತರಲ್ಲಿ ಒಬ್ಬರಾದ ಉಪಾಧ್ಯಾಯರ ಮನೆ. (ದೀಕ್ಷಿತರೂ ಹೌದು). ಇದಕ್ಕೆ ತಾಗಿ ಗೋಕರ್ಣದ ಪಾಳೆಯಗಾರ ಉಪಾಧಿವಂತ ಗೋಪಿ ಮನೆ. ಐತಿಹಾಸಿಕವಾಗಿ, ಸಾಮಾಜಿಕವಾಗಿ ಪ್ರಸಿದ್ಧ ಮನೆತನ. ನಂತರ ಇನ್ನೊಬ್ಬ ಉಪಾಧಿವಂತರು ಅಡಿಗಳ ಮನೆ. ದೊಡ್ಡ ಕುಟುಂಬ. ವಿದ್ಯಾವಂತರ, ವೇದವಿದ್ವಾಂಸರ ಮನೆ. ನಂತರ ಶ್ರೀ ಜೋಗಳೇಕರ ದೀಕ್ಷಿತರ ಮನೆ. ಇವರು ಮಹಾರಾಷ್ಟ್ರದವರು. ಇಲ್ಲಿಗೆ ಬಂದು ಮೂರುನೂರು, ನಾಲ್ಕುನೂರು ವರ್ಷಗಳಾಗಿರಬೇಕು. ಸಮುದ್ರಕ್ಕೆ ಹೊಂದಿ ಇವರ ಜಮೀನು ಉಂಟು. ಊರ ಮಧ್ಯದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನ ಉಂಟು. ಆಚೆಮನೆ ಶಾಂತಕ್ಕ (ಶಾಂತನಮನೆ) ಶನಿವಾರ ದೇವರು ಎನ್ನುತ್ತಾಳೆ. ಅವಳ ಗಂಡನ ಹೆಸರು ವೆಂಕಟರಮಣ. ಅಲ್ಲಿಂದ ಎಡಕ್ಕೆ ತಿರುಗಿ ಹೋದರೆ ಈಶ್ವರ ದೇವಸ್ಥಾನದ ಮುಖ್ಯ ಅರ್ಚಕರಲ್ಲಿ ಒಬ್ಬರಾದ ಹಿರೇಭಟ್ಟರ ಮನೆ. ಅಲ್ಲಿಂದ ಮುಂದೆ ಕೋಟಿತೀರ್ಥ, ಕೋಟಿತೀರ್ಥಕ್ಕೆ ಸುತ್ತು ಹಾಕುತ್ತಾ ಹೋದರೆ ಎಡಗಡೆ ಎತ್ತರದಲ್ಲಿ ಕೆಕ್ಕಾರಮಠ ಉಂಟು. ಇದರ ಮೂಲ ಮಠ ಇಲ್ಲಿಂದ ಎರಡು ಮೂರು ಮೈಲಿ ದೂರ ಅಶೋಕೆ (ಅಶೋಕಾವನ)ಯಲ್ಲಿದೆ. ಪ್ರಕೃತ ಗುರುಗಳು ಶ್ರೀ ರಾಘವೇಶ್ವರ ಭಾರತಿಗಳು ಲಕ್ಷಾಂತರ ರೂ ಸಾರ್ಥಕ ಪಡಿಸಿ ಆಕರ್ಷಣೀಯ ಮೂಲ ಮಠವನ್ನಾಗಿ ಮಾಡುವ ಮಹಾಸಂಕಲ್ಪ ಮಾಡಿದ್ದಾರೆ. ಪುನಃ ಕೋಟಿತೀರ್ಥಕ್ಕೆ ಬಂದರೆ ಕೂರ್ಸೆಮನೆ ಸಿಗುತ್ತದೆ. ಇವರೂ ಪ್ರಥಮ ಉಪಾಧಿವಂತರಲ್ಲಿ ಒಬ್ಬರು. ಹಾಗೇ ಮುಂದೆ ಹೋದರೆ ನಮ್ಮ ಕುಲದೇವತೆ ಶ್ರೀ ಪಟ್ಟವಿನಾಯಕ (ಬಟ್ಟೆ ಗಣಪತಿ) ದೇವಾಲಯ. ಮುಂದೆ ಕೃಷ್ಣಾಪುರ ಹೊನ್ನಳ್ಳಿ ಮಠ, ಕಾಲಭೈರವ, ಸೀದಾ ಹೋದರೆ ಮೊದಲು ಹೊರಟ ನಾಗೇಶ್ವರ ದೇವಸ್ಥಾನ. ಅಂದ ಹಾಗೆ ವೆಂಕಟರಮಣ ದೇವರ ಪೂಜಾರರೂ ಮಹಾರಾಷ್ಟ್ರದ ಬ್ರಾಹ್ಮಣರು. “ದೃಷ್ಟ್ವ ವಾ ದಿವ್ಯಲಿಂಗಂಚ……..”

******

ಸುಪ್ರಸಿದ್ಧಕವಿ ಎಕ್ಕುಂಡಿಯವರು ಕ.ವಿ.ವಿ.ವ್ಯಾಸಂಗ ವಿಸ್ತರಣಾ ಮಾಲಿಕೆಯಲ್ಲಿ ಉಪನ್ಯಾಸಕರಾಗಿ ಬಂದು ತಮ್ಮನ್ನು ಪರಿಚಯಿಸಿಕೊಂಡರು. ಎರಡನೇ ಸಲ ನಮ್ಮ ಗ್ಯಾದರಿಂಗ್‌ಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಗ್ಯಾದರಿಂಗನ್ನು ಉದ್ದೇಶಿಸಿ ಜನರನ್ನು ತಮ್ಮ ಕಡೆ ಆಕರ್ಷಿಸಿಕೊಂಡ ರೀತಿ ನೂತನ, ಯಾಣದ ಕಲ್ಲಿನ ಸೌಂದರ್ಯ, ಹಿರೇಗುತ್ತಿಯ ಬೆಲ್ಲದ ಮಾಧುರ್ಯ ಎನ್ನುತ್ತಿದ್ದಂತೆ ಕಿವಿಗಡಚಿಕ್ಕುವಂತೆ ಚಪ್ಪಾಳೆ ಪ್ರೇಕ್ಷಕರಿಂದ. ಅವರನ್ನು ಪರಿಚಯಿಸುತ್ತಾ ನಮ್ಮ ಶಾಲೆಯ ಎಚ್.ಎಲ್.ನಾಯಕ ಮಾಸ್ತರರು “ಶ್ರೀ ಎಕ್ಕುಂಡಿ ಮಾಸ್ತರರು ಹೊಸದಾಗಿ ಬಂದಾಗ ನಾವೆಲ್ಲಾ ಅವರ ಶಿಷ್ಯರು. ಅಲ್ಲಿ ಬಂಕೇಶ್ವರ ಕೆರೆಗೆ ಬಿಡುವಿನಲ್ಲಿ ಸ್ನಾನಕ್ಕೆ ಹೋಗುತ್ತಿದ್ದರು. ನಮಗೆಲ್ಲಾ ಮುಳುಗುವುದು, ಈಜುವುದು ಹೇಳಿಕೊಡುತ್ತಿದ್ದರು.”ಎಂದು ನೆನಪಿಸಿಕೊಂಡರು.ಎಕ್ಕುಂಡಿ ಮಾಸ್ತರರು ತಮ್ಮ ಮಾತುಗಳಲ್ಲಿ ಹೇಳಿದರು:”ಮುಳುಗಿದವರನ್ನೆಲ್ಲಾ ಮೇಲಕ್ಕೆತ್ತಿಯೇ ಹಿಂತಿರುಗುತ್ತಿದ್ದೆ”.ಅಗ ಪುನಃ ಚಪ್ಪಾಳೆ. ಅವರ “ಮೂಡಲದೀಪವನುರಿಸುವ ಕೈಯಿಗೆ ಶರಣೆಂಬೆವು ನಾವು”- ಕವಿ ಮುಖದಿಂದಲೇ ಕವಿವಾಣಿಯನ್ನು ಕೇಳಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಮಧ್ಯಾಹ್ನ ವಿರಾಮ ಮಾಡಿಕೊಂಡು ಮೊರಬದ ಲಕ್ಷ್ಮೀನಾರಾಯಣ ದೇವಾಲಯಕ್ಕೆ ಹೋಗಿ ಬಂದೆವು. ಅವರು ಅದರ ಐತಿಹ್ಯವನ್ನು ಸಮೀಪದಲ್ಲಿದ್ದ ನಮಗೆ ಹೇಳಿದಾಗ ನಾವು ಸಣ್ಣವರಾದೆವು. ರಾತ್ರಿ ಮನರಂಜನಾ ಕಾರ್ಯಕ್ರಮಕ್ಕೂ ತುಂಬ ಹೊತ್ತು ಇದ್ದರು. ಹಿರೇಗುತ್ತಿಯ ಜನರಿಗೆ ಒಂದು ಕಾಲದಲ್ಲಿ ಸಮೀಪದ ಮಾಧ್ಯಮಿಕ ಶಾಲೆ ಗೋಕರ್ಣದ ಬಿ‌ಎಚ್ ಎಸ್, ಬಂಕಿಕೊಡ್ಲದ ಎ ಎಚ್ ಎಸ್, ಆದರೂ ಬಹುತೇಕ ವಿದ್ಯಾರ್ಥಿಗಳು ಬಂಕಿಕೊಡ್ಲಿಗೇ ಹೋಗುತ್ತಿದ್ದರು. ಅದಕ್ಕೆ ಕಾರಣ ಕನ್ನಡ ಇಬ್ಬರು ಸುಪ್ರಸಿದ್ಧ ಸಾಹಿತಿಗಳು ಆಗ ಅಲ್ಲಿ ಶಿಕ್ಷಕರಾಗಿದ್ದರು. ಒಬ್ಬರು ಶ್ರೀ ಗೌರೀಶ ಕಾಯ್ಕಿಣಿ, ಇನ್ನೊಬ್ಬರು ಶ್ರೀ ಸು.ರಂ. ಎಕ್ಕುಂಡಿ. ಹೀಗಾಗಿ ಶ್ರೀ ಎಕ್ಕುಂಡಿ ಮಾಸ್ತರರಿಗೆ ಶಿಷ್ಯರ ಮನೆಗಳಲ್ಲಿ ಸತ್ಕಾರವೋ ಸತ್ಕಾರ. ಎಲ್ಲಿ ನೋಡಿದರೂ ಅವರ ಶಿಷ್ಯರೇ ಕಾಣುತ್ತಿದ್ದರು. ಮಾರನೇ ದಿನ ೯ – ೧೦ ಗಂಟೆವರೆಗೂ ಇದ್ದು ನಂತರ ಬಂಕಿಕೊಡ್ಲಿಗೆ ಮರು ಪ್ರಯಾಣ ಮಾಡಿದರು. ಶ್ರೀಮತಿ ಎಕ್ಕುಂಡಿಯವರೂ ಆಗಮಿಸಿದ್ದರು.

ಶ್ರೀ ಆರ್.ಎಸ್.ಭಾಗವತ: ಭಾಗವತರದು ಕುಮಟಾದ ಸುಪ್ರಸಿದ್ಧ ಮನೆತನ. ಅವರು ಉತ್ತಮ ಸಾಮಾಜಿಕ ಕಾರ್ಯಕರ್ತರು ಮತ್ತು ಪ್ರಸಿದ್ಧ ವಕೀಲರು. ಅವರ ಅಣ್ಣ, ತಮ್ಮ, ದೊಡ್ಡಪ್ಪ ಎಲ್ಲರೂ ವಕೀಲರೇ. ಪ್ರಕೃತ ಪ್ರಸಂಗ ಬೇರೆಯೇ. ನಮ್ಮ ಗ್ಯಾದರಿಂಗ್‌ನ ಮುನ್ನಾದಿನ ಅವರಿಗೆ ಧರ್ಮಸ್ಥಳಕ್ಕೆ ಹೋಗಲೇಬೇಕಾದ ಧರ್ಮಸಂಕಟ ಒದಗಿತು. ನಮ್ಮ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಭಾಗವತರಾದ ಶ್ರೀ ಕಡತೋಕಾ ಮಂಜುನಾಥ ಭಾಗವತರಿಗೆ ಸಂಬಂಧಪಟ್ಟ ಒಂದು ಕಾರ್ಯಕ್ಕಾಗಿ ಶ್ರೀ ಭಾಗವತರು ಧರ್ಮಸ್ಥಳಕ್ಕೆ ಧಾವಿಸಬೇಕಾಯಿತು. ಹೋಗುವಾಗ ನಮ್ಮ ಕಾರ್ಯಕ್ರಮದೊಳಗೇ ಬಂದು ಮುಟ್ಟುತ್ತೇನೆ ಎಂಬ ಕಲ್ಪನೆ ಅವರದು. ಆದರೆ ಅದು ಸಾಧ್ಯವಾಗಲಿಲ್ಲ. ಸಾಯಂಕಾಲ ನಾಲ್ಕಕ್ಕೆ ಪರಮಾಶ್ಚರ್ಯ ಕಾದಿತ್ತು. ಭಾಗವತರ ಚಿಕ್ಕಪ್ಪ ಶ್ರೀ.ಚಿ.ಎಸ್.ಭಾಗವತರು ಜೀಪಿನಲ್ಲಿ ಆಗಮಿಸಿದರು. “ನಮ್ಮ ರಾಮಚಂದ್ರನ ಬದಲಾಗಿ ನಾನೇ ಬಂದಿದ್ದೇನೆ” ಎಂದು ಸರಳವಾಗಿ ಬಂದರು. “ಕಾರ್ಯಕ್ರಮ ಮುಂದುವರಿಯಲಿ” ಎಂದರು. ಹೆಡ್‌ಮಾಸ್ಟರ್ ಆದ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ಅಧ್ಯಕ್ಷರು ಯಾರೆಂದು ಯೋಚಿಸುತ್ತ ಬಟ್ಟೆ ಗಣಪತಿಗೆ (ಕುಲದೇವರು) ಪ್ರಾರ್ಥಿಸುತ್ತಿದ್ದೆ. ಗಣಪತಿಯೇ ( ಭಾಗವತ) ಅಧ್ಯಕ್ಷನಾಗಿ ಬಂದ! ಕಾರ್ಯಕ್ರಮ ಬಹು ಸುಂದರವಾಗಿ ಮುಗಿಯಿತು. ಒಬ್ಬ ಮುನ್ಸೀಫ್ ಹೀಗೆ ಇಷ್ಟು ಸರಳತೆಯಿಂದ ನಡೆದುಕೊಂಡರೆಂಬುದು, ಕಾರ್ಯಕ್ರಮ ಸಾರ್ಥಕವಾಯಿತೆಂಬುದು ನಮ್ಮ ಶಾಲೆಯ ಸೌಭಾಗ್ಯ. ಪ್ರೊ.ಜಿನದೇವ ನಾಯಕ, ಪ್ರಿ.ಎನ್.ಆರ್.ನಾಯಕ, ಡಾ.ಕೆ.ಜಿ.ಶಾಸ್ತ್ರಿ, ಪ್ರೊ.ಶರ್ಮಾ, ಶ್ರೀ ಎಸ್.ಎಚ್.ನಾಯಕ, ಪ್ರಿ.ಪ್ರೊ.ಸಭಾಹಿತ, ದಾಂಡೇಲಿ, ಪ್ರಿ.ಕೆ.ಜಿ.ನಾಯಕ, ಧಾರವಾಡ, ಕ.ವಿ.ವಿ. ಪ್ರಸಾರಾಂಗದ ಶ್ರೀ ನಾಯಕ, ಅಂಕೋಲಾದ ಪ್ರಸಿದ್ಧ ವಕೀಲ ಶ್ರೀ ಡಿ.ಎಸ್.ನಾಯಕ, ಡಾ.ಎಲ್.ಆರ್.ಹೆಗಡೆ ನೆನಪಿಗೆ ಬರುತ್ತಿರುವ ಇನ್ನು ಕೆಲ ಮುಖ್ಯ ಅತಿಥಿ ಮಹೋದಯರು.

ವಡ್ಡರ್ಸೆ ರಘುರಾಮ ಶೆಟ್ಟರು ’ಮುಂಗಾರು’ ಪತ್ರಿಕೆಯ ಪ್ರಧಾನ ಸಂಪಾದಕರು. ನಮ್ಮ ಹೈಸ್ಕೂಲಿನ ಹಿಂದಿನ ವಿದ್ಯಾರ್ಥಿ ಗಂಗಾಧರನ ಜೊತೆ ಬಂದರು. ಇದರಲ್ಲಿ ಗಂಗಾಧರನ ಪಾತ್ರ ಹಿರಿದು. ಶಾಲೆಯಲ್ಲಿ ಮಕ್ಕಳ ಶಿಸ್ತು ನೋಡಿ ಸಂತೋಷಪಟ್ಟರು. ನಮ್ಮ ವಿದ್ಯಾರ್ಥಿಗಳ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಹಿಂದುಳಿದವರೇ ಹೆಚ್ಚಿರುವ ಈ ಊರಿನಲ್ಲಿ ಶಾಲೆ ನಡೆಸುವ ಶಿಕ್ಷಣ ಸಂಸ್ಥೆಯನ್ನು ಶ್ಲಾಘಿಸಿದರು. ಹೊರಡುವಾಗ ಅವರಿಗೆ ಹಸ್ತಲಾಘವ ನೀಡುತ್ತಾ “ನಮ್ಮ ಹುಡುಗ ಗಂಗಾಧರನನ್ನು ನಿಮಗೆ ಒಪ್ಪಿಸಿದ್ದೇವೆ, ಈ ಪತ್ರಿಕಾರಂಗದಲ್ಲಿ ಪ್ರಸಿದ್ಧನಾಗುವಂತೆ ಮಾರ್ಗದರ್ಶನ ಬಯಸುತ್ತೇವೆ” ಎಂದೆ. ಶೆಟ್ಟರು ’ಹಾಂ’ ಎಂದರು. ನೋಡನೋಡುತ್ತ ಹಿರೇಗುತ್ತಿಯ ಗಂಗಾಧರ, ಗಂಗಾಧರ ಹಿರೇಗುತ್ತಿ ಆದ.

ನಮ್ಮ ಶಾಲೆಯ ಕ್ರೀಡಾಕೂಟಕ್ಕೆ ಗೋಕರ್ಣದ ಸಂಸ್ಕೃತ ಕಾಲೇಜಿನ ಪ್ರಿನ್ಸಿಪಾಲ್, ಜ್ಯೋತಿರ್ವಿದ್ವಾನ್ ಪ್ರೊ.ರಾಮಕೃಷ್ಣ ಬೈಲಕೇರಿ ಬಂದಿದ್ದರು. ಬಹು ಆಕರ್ಷಣೀಯ ಭಾಷಣ ಮಾಡಿದರು. ಪಾರ್ವತಿ ಈಶ್ವರನನ್ನು ಮೆಚ್ಚಿಸಲು ತಪಸ್ಸು ಮಾಡುವಾಗ ಈಶ್ವರನೇ ಒಬ್ಬ ಋಷಿಯ ವೇಷದಲ್ಲಿ ಬಂದು “ಶರೀರ ಮಾಧ್ಯಂ ಖಲು ಧರ್ಮಸಾಧನಂ” – ಧರ್ಮಸಾಧನೆಗೆ ನೀನು ಮಾಡುತ್ತಿರುವ ಕಠೋರ ತಪಸ್ಸು ಯೋಗ್ಯವಾದುದಲ್ಲ, ಅದರಿಂದ ಆರೋಗ್ಯ ಕೆಡುತ್ತದೆ. ಆರೋಗ್ಯವಂತ ಶರೀರದಲ್ಲಿ ಉತ್ತಮ ಮನಸಿರುತ್ತದೆ ಎನ್ನುತ್ತಾನೆ. ಹಾಗೆ ವಿದ್ಯಾರ್ಜನೆಯೇ ನಿಮ್ಮ ಧರ್ಮವಾಗಿರುವಾಗ ಆರೋಗ್ಯವಂತ ಶರೀರ ಬೇಕು, ಅದಕ್ಕೆ ನೀವು ಪಾಠ ಮಾತ್ರವಲ್ಲದೆ ಆಟ, ವ್ಯಾಯಾಮ ಕೂಡ ಮಾಡಬೇಕು ಎಂದು ಕ್ರೀಡೋತ್ಸವಕ್ಕೆ ತಕ್ಕಂತೆ ಒಪ್ಪುವಂತೆ ಮಾತನಾಡಿದರು. ಇನ್ನೊಮ್ಮೆ ಮಾದನಗೇರಿಯ ವಿಜಯಾ ಬ್ಯಾಂಕಿನ ಮ್ಯಾನೇಜರ್ ಆಗಿದ್ದ ಶ್ರೀ ಜಿ.ಡಿ.ಕಾರಂತರು ಬಂದು ಸಂದರ್ಭಕ್ಕೆ ಸರಿಯಾಗಿ ನಾಲ್ಕು ಮಾತನಾಡಿದರು. ಉಪಯುಕ್ತ ಉಪದೇಶ ಮಾಡಿದರು.

ಕುಮಟಾದ ಡಾ.ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಮಕ್ಕಳು (ಶಿಕ್ಷಕ ವಿದ್ಯಾರ್ಥಿಗಳು) ತರಬೇತಿ ಪಾಠಕ್ಕೆ ಹಿರೇಗುತ್ತಿ ಶಾಲೆಗೆ ಬಂದುದಿದೆ. ಅದು ನಮ್ಮ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಯಿತು. ಒಂದೆರಡು ಸಲ ಪ್ರಿ.ಆರ್.ಎಂ.ನಾಯಕರೂ ಬಂದಿದ್ದರು. ಕೊನೆಯ ದಿನ ಶಿಕ್ಷಣದ ಬಗೆಗೆ ಬಹು ಮುಖ್ಯವಾದ ಮಾತುಗಳನ್ನು ಹೇಳಿದರು. ಪ್ರಾಸಂಗಿಕವಾಗಿ ನಮ್ಮ ಶಾಲೆಯನ್ನು, ನಮ್ಮನ್ನು ಮೆಚ್ಚಿ ಪ್ರೋತ್ಸಾಹಕ ಮಾತುಗಳನ್ನಾಡಿದರು. ಶಿಕ್ಷಕ ವಿದ್ಯಾರ್ಥಿಗಳು ಶಾಲೆಗೆ ನೆನಪಿನ ಕಾಣಿಕೆ ಕೊಡುತ್ತಿದ್ದರು. ನಮ್ಮ ಶಾಲೆಯಲ್ಲೇ ಪಾಠಕೊಟ್ಟು ಶ್ರೀ ಎಚ್.ಎಲ್.ನಾಯಕರೂ ಸಹ ಬಿ.ಎಡ್.ಆದುದು ಅವರ ಸಾಹಸದ ಪ್ರಾಮಾಣಿಕ ಸಾಕ್ಷಿ. ಕೇವಲ ಎಸ್.ಎಸ್.ಎಲ್.ಸಿ ಆದ ಶ್ರೀ ಎಚ್.ಎಲ್. ನಾಯಕರು ಬಿ.ಎ., ಬಿ.ಇ.ಡಿ ಮಾಡಿದರು. ಮುಂದೆ ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು.

*****************

ಗೋಕರ್ಣದ ವಿದ್ವಾಂಸರು:

ಇಲ್ಲಿಯ ಬಹುತೇಕ ಎಲ್ಲ ಮನೆಗಳೂ ವಿದ್ವತ್ತಿಗೆ ಪ್ರಸಿದ್ಧವಾದವು. ಭಡ್ತಿ ಮನೆತನದ ದೇವರು ಭಟ್ಟರು ಸಾತ್ತ್ವಿಕ ಸಂಸ್ಕೃತ ಪಂಡಿತರು. ಸರ್ಕಾರದಿಂದ ಬರುವ ಅಲ್ಪ ಪಗಾರಿನಲ್ಲಿ ದೀರ್ಘ ಕಾಲ ಶ್ರದ್ಧೆಯಿಂದ ಸಂಸ್ಕೃತ ಶಾಲೆ ನಡೆಸಿದವರು. ವಿದ್ಯಾರ್ಥಿಗಳ ಕೊರತೆ ಇತ್ತು. ಇನ್ಸಪೆಕ್ಟರ್ ಬರುವಾಗಲಾದರೂ ಸಂಖ್ಯೆ ಇರಬೇಕು. ಇದು ಮೋಸವಲ್ಲ. ಸಂಸ್ಕೃತ ಓದುವವರಿಗಾದರೂ ಶಾಲೆ ಬೇಕಲ್ಲ.ಇದಕ್ಕೆ ಸಂಬಂಧಿಸಿದ ಒಂದು ತಮಾಷೆ. ಒಮ್ಮೆ ಇನ್ಸಪೆಕ್ಟರ್ ಬರುವಾಗ ಒಬ್ಬರು ಭಟ್ಟರು ಸಿಕ್ಕರು. ಅವರಿಗೆ ಸಂಸ್ಕೃತ ಬರುವುದೇ ಇಲ್ಲ. ಆದರೂ ಶಾಲು ಹೊದೆದು ಕುಳಿತರು.ಗಂಟಲ ಕೆರೆತ,ಪಾಪ.ಅಳುಕೂ ಇದ್ದೀತು.ಇವರ ಕಷ್ಟ ಗಮನಿಸಿ ಇನ್ಸಪೆಕ್ಟರರು ’ಕಫ ಆಗ್ಯದೇನು?’ ಎಂದರು.ಇವರು ತಡ ಮಾಡಲಿಲ್ಲ. ಸಟಕ್ಕನೆ ಎದ್ದು ಕಫಃ, ಕಫೌ, ಕಫಾನಿ, ಕಫಸ್ಯ, ಕಫಯೋ, ಕಫಾಯಾಃ..ಮುಂತಾಗಿ ಶುರು ಮಾಡಿಬಿಟ್ಟರು. ಇನ್ಸಪೆಕ್ಟರಿಗೆ ಯಾಕಾದರೂ ಕೇಳಿದೆನೋ, ಅನ್ನಿಸಿತು. ಭಟ್ಟರು ’ರಾಮ’, ’ಹರಿ’ ಮುಂತಾದ ಶಬ್ದಗಳ ವಿಭಕ್ತಿ ಪ್ರತ್ಯಯಗಳನ್ನು ಹೇಳುವ ಕ್ರಮದಲ್ಲೇ ’ಕಫ’ ಆಗಿದೆಯೇ ಎಂದು ತಪಾಸಕರು ಕೇಳಿದರೆಂದು ಭಾವಿಸಿದರು! ಈ ಕಲ್ಪಿತ ಹಾಸ್ಯ ಪ್ರಕರಣ ಗೋಕರ್ಣದ ಆ ದಿನಗಳ ಅಭಿಜಾತ ವಿನೋದದ ಉದಾಹರಣೆ. ಮೇಧಾ ದಕ್ಷಿಣಾಮೂರ್ತಿ ಸಂಸ್ಕೃತ ಪಾಠಶಾಲೆಯಲ್ಲಿ ಓದಿ ಅನೇಕ ವಿದ್ವಾಂಸರು ನಾಡಿನಾದ್ಯಂತ ಹೆಸರು ಗಳಿಸಿದ್ದಾರೆ.

ದೈವರಾತ ಶರ್ಮಾ: ಇವರೂ ಭಡ್ತಿ ಮನೆತನದವರು. ವೇದ ದ್ರಷ್ಟಾರರು. ಮಹರ್ಷಿ ದೈವರಾತರಾದರು. ಡಾ.ರಾಜೇಂದ್ರಪ್ರಸಾದರು, ರಾಷ್ಟ್ರಧ್ಯಕ್ಷರು ಇವರನ್ನು ತುಂಬ ಗೌರವದಿಂದ ಕಾಣುತ್ತಿದ್ದರು. ದೈವರಾತರ ಆಹ್ವಾನದಂತೆ ಗೋಕರ್ಣಕ್ಕೆ ಅವರ ಆಶ್ರಮಕ್ಕೆ ಬಂದು, ನೋಡಿ ಸಂತೋಷಪಟ್ಟರು. ಈ ಮನೆತನದಲ್ಲಿ ನಾರಾಯಣ ಶಾಸ್ತ್ರಿಗಳು, ಡಾ.ಭಡ್ತಿ ಇವರೆಲ್ಲಾ ಮಾನ್ಯರು.

ವಿದ್ವಾನ್ ಸಾಂಬಭಟ್ಟರು: ಉಡುಪಿಯಲ್ಲಿ ತರ್ಕ ಓದಿ ಪಾರಂಗತರಾದವರು. ಹಾಸ್ಯಪ್ರಿಯರು. ಪರಸ್ಥಳದಿಂದ ಬಂದ ತರ್ಕವಿದ್ವಾಂಸರನ್ನು ತರ್ಕದಲ್ಲಿ ಸೋಲಿಸಿದ ಖ್ಯಾತಿ ಉಂಟು. ವೇದಶಾಸ್ತ್ರವನ್ನು ಬಲ್ಲವರು. ವೈದಿಕರೂ ಹೌದು, ಲೌಕಿಕರೂ ಹೌದು. ಅವರ ಎರಡು ಹಾಸ್ಯಕಥೆಗಳನ್ನು ನೆನಪಿಸಿಕೊಳ್ಳಬಹುದು.

ಒಮ್ಮೆ ಅಂಕೋಲೆಗೆ ಹೋದವರು ಸಿನಿಮಾ ನೋಡಲು ಹೋದರಂತೆ. ಪಕ್ಕದಲ್ಲಿ ಒಬ್ಬ ಸಾಚಾ ವ್ಯಕ್ತಿ ಕೂತಿದ್ದ. ಇವರು ಅವನೊಡನೆ ಹರಟಲು ಶುರುಮಾಡಿದರು. ಸಾಂಬಭಟ್ಟರು ಕೇಳಿದರು. “ಸ್ವಾಮಿ, ಈ ಥಿಯೇಟರಿನ ಯಜಮಾನರು ನಿಮಗೆ ಗೊತ್ತಿದೆಯೇ?”, “ಹೌದು. ಗೊತ್ತಿದೆ, ಏನು ವಿಷಯ?” “ಮತ್ತೆ ಯಾಕೂ ಇಲ್ಲ. ಈ ಟಿಕೇಟಿನ ಹಣ ವಾಪಸು ಸಿಗುವಂತೆ ಮಾಡಿ.” “ಅರೇ ಯಾಕೆ?” “ಎಷ್ಟು ಹೊತ್ತಾಯಿತು! ಇನ್ನೂ ಹಾರ್ಮೋನಿಯಂ ಇಲ್ಲ. ತಬಲಾ ಇಲ್ಲ. ಅವರೆಲ್ಲಾ ಬಂದು ಕಾರ್ಯಕ್ರಮ ಶುರುವಾಗಲು ಇನ್ನೂ ಒಂದು ತಾಸಾದರೂ ಬೇಕು. ಅಷ್ಟು ಹೊತ್ತು ಕಾಯಲಾರೆ” ಎಂದು ಸಾಂಬಭಟ್ಟರು ಹೇಳಿದರು. ಆ ವ್ಯಕ್ತಿಗೆ ನಗು ಬಂತು. “ಭಟ್ಟರೆ, ನಿಮಗೆ ಸಿನಿಮಾ ಅಂದರೆ ಏನು ಅಂತಲೇ ಗೊತ್ತಿಲ್ಲ. ಅದೆಲ್ಲಾ ಇಲ್ಲಿ ಬೇಕಾಗುವುದಿಲ್ಲ.” ಸಾಂಬಭಟ್ಟರು ಇನ್ನಷ್ಟು ಅಸಮಾಧಾನ ವ್ಯಕ್ತಪಡಿಸಿದರು: “ಅರೇ, ಸಂಗೀತ ಇಲ್ಲವೋ! ಹಾಗಾದರೆ ನಾನು ನಿಲ್ಲಲಾರೆ. ನಮ್ಮೂರಲ್ಲಿ ಚಿಕ್ಕಮಕ್ಕಳ ನಾಟಕಕ್ಕೂ ಸಂಗೀತ, ಹಿಮ್ಮೇಳ ಎಲ್ಲಾ ಇರುತ್ತದೆ. ನೀವು ದುಡ್ಡೊಂದನ್ನು ಕೊಡಿಸಿ. ನಾನು ಹೊರಟೆ”. ಆಗ ಆತ ಇವರು ಹಳ್ಳಿಯ ಗಮಾರ, ಏನೂ ತಿಳಿಯದವರು ಎಂದು ತೀರ್ಮಾಸಿಸಿಕೊಂಡ. ಸಮಾಧಾನದ ಮಾತು ಹೇಳಿದ: “ಭಟ್ಟರೆ, ಈಗ ಲೈಟು ತೆಗೀತಾರೆ. ಕಡೆಗೆ ನೋಡಿ ನೀವು, ಹೆಂಗಿರ್ತದೆ!”. ಸಾಂಬಭಟ್ಟರು ಕೌತುಕ ವ್ಯಕ್ತಪಡಿಸಿದರು: “ಲೈಟ್ ತೆಗೆದ ಮೇಲೆ ನೋಡುವುದು ಏನನ್ನು? ಕತ್ತಲೆಯಲ್ಲಿ ನನಗಂತೂ ಏನೂ ಕಾಣಿಸುವುದಿಲ್ಲ. ನಿಮ್ಮದು ಬೆಕ್ಕಿನ ಕಣ್ಣೋ ಹೇಗೆ?”. ಅಷ್ಟರಲ್ಲೇ ಸಿನಿಮಾ ಶುರುವಾಯಿತು. ಮುಗಿದ ಮೇಲೆ ಸಾಂಬಭಟ್ಟರು ಹೇಳಿದರು: “ನೀವು ಹೇಳಿದ್ದು ಹೌದು. ಬಹಳ ಚೆನ್ನಾಗಿತ್ತು. ಸಂಗೀತವೂ ಇತ್ತು. ಭೇಷ್”. ಅಂತೂ ಆ ವ್ಯಕ್ತಿ ಎದುರು ದಡ್ಡನಂತೆ ತೋರಿಸಿಕೊಂಡು, ಸಾಕಷ್ಟು ಗೋಳು ಹೊಯ್ದುಕೊಂಡು ಅವನು ಕೊಟ್ಟ ಶೇಂಗಾವನ್ನೂ ತಿಂದು ಕೊನೆ ಬಸ್ಸಿನಲ್ಲಿ ಗೋಕರ್ಣಕ್ಕೆ ಹೊರಟರು.

ಇವರ ಇನ್ನೊಂದು ಕಥೆ ಕುಂತಿ ಪ್ರತಿಮೆಯದು. ನಮ್ಮೂರ ಕ್ಷೌರದಂಗಡಿಯ ಹಿಂದೆ ಒಂದು ಹೆಣ್ಣು ಮೂರ್ತಿ ಇದೆ. ಅದೇನೆಂದು ತಿಳಿಯದು. ಸಾಂಬಭಟ್ಟರು ಒಂದು ದಿನ ಅದು ಕುಂತಿಯ ಪ್ರತಿಮೆ ಎಂದರು. ಉಗ್ರು ನಾರಾಯಣ ಭಟ್ಟರಿಗೆ ಇವರ ತಮಾಷೆ ಗೊತ್ತು. “ಸುಮ್ಮಂಗಿರಿ. ಅದು ಯಾವುದೋ ಮೂರ್ತಿ. ಮಹಾಭಾರತದಲ್ಲಿ ಎಲ್ಲೂ ಕುಂತೀದೇವಿಯ ವಿಗ್ರಹವಿಲ್ಲ”. ಸಾಂಬಭಟ್ಟರೇನೂ ಬೇಸರ ಮಾಡಿಕೊಳ್ಳಲಿಲ್ಲ. ’ನಾರಾಯಣಾ, ನಾ ಹೇಳುದು ಸ್ವಲ್ಪ ಕೇಳು’ ಎಂದು ಕಥೆ ಶುರು ಮಾಡಿದರು. “ಪಾಂಡವರು ದಕ್ಷಿಣಕ್ಕೆ ಬಂದಾಗ ಕುಂತಿದೇವಿ ತಾನು ಗೋಕರ್ಣಕ್ಷೇತ್ರಕ್ಕೆ ಹೋಗಿ ಬರಬೇಕು, ವ್ಯವಸ್ಥೆ ಮಾಡು ಎಂದಳು, ಧರ್ಮರಾಯನ ಹತ್ತಿರ. ಸರಿ, ಧರ್ಮರಾಯ ಭೀಮನಿಗೆ ಆಜ್ಞೆ ಮಾಡಿದ. ತಾಯಿಯನ್ನು ಕರೆದುಕೊಂಡು ಭೀಮಸೇನ ಗೋಕರ್ಣಕ್ಕೆ ಬಂದ. ಕೋಟಿತೀರ್ಥ ಸ್ನಾನ ಮಾಡಿ ದೇವಸ್ಥಾನಕ್ಕೆ ಹೊರಟರು. ಮೊದಲು ಗಣಪತಿ, ನಂತರ ಮಹಾಬಲೇಶ್ವರಕ್ಕೆ ಬಂದರು. ಬಾಗಿಲು ಕಾಯುವ ಮಂಜುನಾಥ “ಅಮ್ಮಾ, ನೀವು ಪೂಜೆ ಮಾಡುವಂತಿಲ್ಲ. ಸಕೇಶಿಯರು ಈಶ್ವರನನ್ನು ಮುಟ್ಟುವಂತಿಲ್ಲ” ಎಂದ. “ಅಪ್ಪಾ, ನಾವು ಕ್ಷತ್ರಿಯರು. ನಮ್ಮಲ್ಲಿ ವಿಧವೆಯರಿಗೆ ಮುಂಡನ ಇಲ್ಲ” ಎಂದು ಭೀಮಸೇನ ಗರ್ಜಿಸಿ ಗದೆ ಕಡೆ ನೋಡಿದ. “ಇಲ್ನೋಡಿ, ನಿಮ್ಮ ಸಿಟ್ಟು ಇಲ್ಲಿ ನಡೆಯುವುದಿಲ್ಲ. ಒಳಗೆ ಮಹಾರುದ್ರ ಇದ್ದಾನೆ. ಇನ್ನು ನಿಮ್ಮ ಗದೆ ನಮ್ಮೂರ ತಿಪ್ಪಾಚಾರಿ ವಾರಕ್ಕೊಂದು ಮಾಡುತ್ತಾನೆ” ಎಂದ. ಸರಿ, ಇನ್ನೇನೂ ಉಪಾಯವಿಲ್ಲ ಎಂದು ಭೀಮ ತಾಯಿಯನ್ನು ಕರೆದುಕೊಂಡು ಕ್ಷೌರಿಕನ ಹತ್ತಿರ ಹೋಗಿ ಕೇಶಮುಂಡನ ಮಾಡು ಎಂದ. “ಏನೆಂದಿರಿ, ಇವರ ಕೇಶ ಮುಂಡನ ಮಾಡುವುದೇ? ಅದು ಧರ್ಮಶಾಸ್ತ್ರಕ್ಕೆ ವಿರುದ್ಧ”. ಭೀಮಸೇನ ’ಏಕೆ?’ ಎಂದು ಕೂಗಾಡಿದ. “ನೋಡಿ, ನೀವು ಭೀಮಸೇನರೇ ಹೇಳಿದಿರಿ, ಇವರು ಮಹಾತಾಯಿ ಕುಂತಿ. ಇವರಿಗೆ ಪಾಂಡು ಮಹಾರಾಜರು ಗಂಡ. ಅವರೀಗ ಇಲ್ಲ. ಆದರೆ ಉಳಿದವರು? ವಾಯುದೇವರು, ಅಗ್ನಿದೇವರು, ಯಮದೇವರು ಇವರೆಲ್ಲಾ ಇದ್ದಾರೆ. ಹಾಗಿರುವಾಗ ಇವರಿಗೆ ವೈಧವ್ಯ ಇಲ್ಲ. ಮುಂಡನ ಮಾಡಲಾರೆ. ಧರ್ಮಸೂಕ್ಷ್ಮ ಬಹು ದೊಡ್ಡದು ಭೀಮಪ್ಪನವರೇ” ಎಂದ. “ಹಾಗಾದರೆ ಧರ್ಮರಾಜನನ್ನೇ ಕೇಳಿ ಬರುತ್ತೇನೆ” ಎಂದು ಭೀಮಸೇನ ಹೊರಟ. “ಅಮ್ಮಾ, ನೀನು ಇಲ್ಲೇ ಇರು, ನಾನು ಅರಣ್ಯಕ್ಕೆ ಹೋಗಿ ಅಣ್ಣನನ್ನು ಕೇಳಿ ಬರುತ್ತೇನೆ” ಎಂದು ಗಡಿಬಿಡಿಯಲ್ಲಿ ನಡೆದ. ಎಷ್ಟು ವರ್ಷಗಳಾದರೂ ಭೀಮ ಬರಲೇ ಇಲ್ಲ. ಕುಂತಿ ನಿಂತೇ ಇದ್ದಾಳೆ” ಕಥೆ ಮುಗಿವ ಹೊತ್ತಿಗೆ ಸಾಂಬಭಟ್ಟರ ಕ್ಷೌರವೂ ಮುಗಿದಿತ್ತು.

ವಿಘ್ನೇಶ್ವರ ಉಪಾಧ್ಯಾಯರು (ದೀಕ್ಷಿತರು): ಇವರ ಬಗೆಗೆ ಹೇಳುವಾಗ ತುಂಬಾ ಹುಶಾರಾಗಿರಬೇಕು. ನನ್ನ ಬಾಲ್ಯ ಸ್ನೇಹಿತರು. ತುಂಬಾ ದೋಸ್ತರು. ಅವರ ವಿದ್ವತ್ತಿನ ಬಗೆಗೆ ಹೇಳುವಾಗ ಹೆಚ್ಚು ಹೇಳಿದರೆ ಕುಸ್ತಿಗೆ ಬಂದಾರು, ಕಡಿಮೆ ಹೇಳಿದರೆ ಮಿತ್ರದ್ರೋಹವಾದೀತು. ಹಿರೇಭಟ್ಟರು, ಅಡಿಗಳು, ಬಿಜ್ಜೂರ ಪಾಳ್ಯ ಉಪಾಧ್ಯಾಯರು, ಶೇಷ ವಿದ್ವಾನ್ ಮಹಾಜನವರ್ಗ ಗೋಕರ್ಣದ ಹೃದಯ.ನಮ್ಮ ಮಠದಿಂದ ರಾಯಸ ಬರುವಾಗ ಈ ಮೇಲಣ ನಾಲ್ವರಿಗೂ ಆದ್ಯತೆ. ಈ ಮನೆತನದವರು ಅಗ್ನಿಹೋತ್ರ ನಡೆಸಿಕೊಂಡು ಬಂದಿದ್ದಾರೆ. ಹೀಗಾಗಿಯೇ ನನ್ನ ಸ್ನೇಹಿತರು ದೀಕ್ಷಿತರೂ ಹೌದು. ತಂದೆ ದಾಮೋದರ ದೀಕ್ಷಿತರು. ಅವರ ಇಬ್ಬರು ಮಕ್ಕಳಲ್ಲಿ ವಿಘ್ನೇಶ್ವರ ಹಿರಿಯರು. ಸಾಂಬದೀಕ್ಷಿತರು ಎರಡನೆಯವರು. ವೇದವಿದ್ವಾಂಸರಾಗಿ ಇಬ್ಬರೂ ಪ್ರಖ್ಯಾತರು.

ನನ್ನ ಸ್ನೇಹಿತ ದೀಕ್ಷಿತರು ಧರ್ಮಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದವರು. ರಾಮಚಂದ್ರಾಪುರ ಮಠ, ಸ್ವರ್ಣವಲ್ಲಿ ಮಠ, ಕಾಂಚಿ ಮಠಗಳಿಂದ, ಪೂನಾ, ಸಾಂಗ್ಲಿ ಮೊದಲಾದೆಡೆಗಳಿಂದ ಮನ್ನಣೆ ಪಡೆದವರು. ದಿನವೂ ಸಾಯಂಕಾಲ ನಮ್ಮ ದೀಕ್ಷಿತರು, ವೆಂಕಟರಮಣ ಶಾಸ್ತ್ರಿಗಳು, ಗುಣಿ ಶಾಸ್ತ್ರಿಗಳು, ಸಾಂಬಭಟ್ಟರು ಫೋಟೋ ಅಂಗಡಿ ಹತ್ತಿರ ನಿಂತು, ಕುಳಿತು ಯಜ್ಞಯಾಗಾದಿಗಳ ಬಗೆಗೆ ಸಂದೇಹ ನಿವಾರಣೆ,ಇನ್ನಾವುದೋ ಧಾರ್ಮಿಕ ವಿಷಯ ಕುರಿತು ಚರ್ಚೆ ಮಾಡುತ್ತಿದ್ದರು. ನಮ್ಮ ದೀಕ್ಷಿತರು ಯಾವ ವಿಷಯದಲ್ಲೇ ಆಗಲಿ ಖಂಡಿತಮತ ಉಳ್ಳವರು. ಒಮ್ಮೆ ವೆಂಕಟರಮಣ ಶಾಸ್ತ್ರಿಗಳು -ದೀಕ್ಷಿತರಿಗಿಂತ ವಯಸ್ಸಿನಲ್ಲಿ ಹಿರಿಯರು. ವಿದ್ವತ್ತಿನಲ್ಲಿ ದೀಕ್ಷಿತರು ಅವರಿಗೆ ಸಮಾನರೇ – ಇವರ ವಿಷಯ ಮಂಡನೆಗೆ ಮನಸೋತು “ವಿಘ್ನೇಶ್ವರನಿಗೆ ನಮಃ” ಎಂದರು. ಆಗ ದೀಕ್ಷಿತರಿರಲಿಲ್ಲ. ಅಲ್ಲಿದ್ದವರಲ್ಲೊಬ್ಬರು ಕೇಳಿದರು: “ಯಾಕೆ ಹಾಗೆಂದಿರಿ? ನೀವು ಹಿರಿಯರು, ಜ್ಞಾನವಂತರು”. “ಛೇ ಛೇ ವಿದ್ವತ್ತಿಗೆ ಪೂಜ್ಯತೆ. ನ ತು ಲಿಂಗಂ ನ ತು ವಯಃ” ಎಂದರು. ’ಗುಣಕ್ಕೆ ಗಣ್ಯತೆ’ ಎಂದರು. ಯಾರಿಗಾದರೂ ಧರ್ಮಾಚರಣೆ ನಿಮಿತ್ತ ಸಂಶಯ ಬಂದರೆ ಶ್ರೀ ದೀಕ್ಷಿತರೇ ಪರಿಹಾರ ಸೂಚಿಸುತ್ತಿದ್ದರು. ’ಧರ್ಮಸಿಂಧು’ ಪುಸ್ತಕದ ಪುಟಪುಟವೂ ಪಟಪಟ ಹಾರುತ್ತಿದ್ದವು. ಕೆಲವು ವ್ಯವಹಾರಗಳ ಬಗೆಗೆ ಊರ ಕೆಲವರಿಗೂ, ದೀಕ್ಷಿತರಿಗೂ ಭಿನ್ನಾಭಿಪ್ರಾಯಗಳಿದ್ದವು. ದಿನವೂ ಕೋರ್ಟ್ ವ್ಯವಹಾರ ಇದ್ದಿದ್ದೇ. ಅಲ್ಲೂ ವಕೀಲರು ದೀಕ್ಷಿತರ ಕಾಯಿದೆ ಜ್ಞಾನವನ್ನು ಮೆಚ್ಚಿದ್ದರು.

ವೆಂಕಟರಮಣ ಪಂಡಿತರು ಬಗ್ಗೋಣ ಪಂಚಾಂಗದ ತಯಾರಕರು. ಜ್ಯೋತಿಷ್ಯ ವಿಚಾರದಲ್ಲಿ ಎತ್ತಿದ ಕೈ. ದೃಕ್ ಪಂಚಾಂಗ ಪ್ರವರ್ತಕರು. ದಿನಾ ಹಲವಾರು ಜಾತಕಗಳ ಮೇಳಾಮೇಳಿ ನೋಡುತ್ತಿದ್ದರು. ಮುಂಬಯಿಯಂಥ ದೂರದ ಊರುಗಳಿಂದಲೂ ಕೆಲವರು ಜಾತಕ ಪರಿಶೀಲನೆಗೆ ಇವರ ಬಳಿ ಬರುತ್ತಿದ್ದರು. ಊರವರಿಗೆ ಇವರು ಅಣ್ಣು ಪಂಡಿತರು. ಇವರು “ಅಕ್ಕು” ಎಂದರೆ ಯಾರದೂ ಮರುಮಾತಿಲ್ಲ. ವಾಕ್ ಸಿದ್ಧಿ ಅಂತಹುದು.ಇವರು ಸಂಸ್ಕೃತ ಕವಿಗಳೂ ಹೌದು. ಇವರ ಹಿರಿಯ ಮಗ ವಿಘ್ನೇಶ್ವರ ಪಂಡಿತರು ಕವಿ,ನಾಟಕ ಕರ್ತೃ. ಕನ್ನಡ, ಸಂಸ್ಕೃತ ಎರಡರಲ್ಲೂ ಕವಿಗಳು. “ಕಚ ದೇವಯಾನಿ” ಇವರ ಪ್ರಸಿದ್ಧ ಗೀತನಾಟಕ. ಅಣ್ಣು ಪಂಡಿತರ ಎರಡನೇ ಮಗ ರಾಮಾ ಪಂಡಿತರು. ರಾಮಪ್ಪಿ ಪಂಡಿತರು ಎಂದು ಊರಲ್ಲಿ ಗೌರವ, ಪ್ರೀತಿಯಿಂದ ಕರೆಯುತ್ತಿದ್ದರು. ಜಾತಕ ಪರಿಶೀಲನೆಯಲ್ಲಿ ತಂದೆಗೆ ಸರಿಸಮಾನರು.ಶ್ರೀ ಅಣ್ಣು ಪಂಡಿತರ “ಶ್ರೀ ಮಹಾಬಲೇಶದೇವ ಸಾರ್ವಭೌಮತೇ” ಭಕ್ತಿಗೀತಗಳಲ್ಲೆಲ್ಲ ಅತಿ ಶ್ರೇಷ್ಠವಾದುದು. ಅವರು ಜ್ಯೋತಿಷ್ಯ ಶಾಸ್ತ್ರದ ಕುರಿತು ಪುಸ್ತಕಗಳನ್ನೂ ಬರೆದಿದ್ದಾರೆ.

ವಿದ್ವಾನ್ ಕೊಡ್ಲೆಕೆರೆ ರಾಮಚಂದ್ರಭಟ್ಟರು ತೂಬನಗಿಂಡಿ: ಕೋಟಿತೀರ್ಥದ ನೀರು ಸಮುದ್ರಕ್ಕೆ ಹೋಗುವ ತೂಬಿನ ಹತ್ತಿರವಿರುವುದರಿಂದ ಈ ಮನೆಗೆ ತೂಬಿನಗಂಡಿ ಎಂದು ಹೆಸರು. ಅವರಿಗೆ ಪೇದ ಪಠಣದಲ್ಲಿ ಚಿನ್ನದ ಕಡಗ ಬಂದಿದೆ. ಇನ್ನೂ ಹಲವಾರು ಪ್ರಶಸ್ತಿಪತ್ರಗಳು ಸಂದಿವೆ.

ಜನಾರೋಗ್ಯ:
ವೈದ್ಯಕೀಯದಲ್ಲಿ ಹೆಸರಾಂತ ವೈದ್ಯರು ಆಗಿದ್ದಾರೆ. ವೈದ್ಯಖಾತೆ ಸುಬ್ಬಣ್ಣ ಭಟ್ಟರು ದೊಡ್ಡ ಕಡಾಯಿಗಳಲ್ಲಿ ಆಯುರ್ವೇದ ಔಷಧ ತಯಾರಿಸುತ್ತಿದ್ದರಂತೆ. ಇವರ ವಿನಾ ಕೂರ್ಸೆ ವೆಂಕಟರಮಣ ವೈದ್ಯರು, ಗಣೇಶ ವೈದ್ಯರು, ಉಗ್ರು ಗಜಾನನ ಮಾಸ್ತರು, ಡಾ.ಜಠಾರ……ಜಠಾರರದು ಅಶೋಕೆಯಲ್ಲಿ ವೈದ್ಯಕೀಯವನ ಇರಬೇಕು. ಅಶೋಕೆಯಲ್ಲಿ ಹರ ಸಾಹಸದಿಂದ ದೊಡ್ಡ ಪ್ರಮಾಣದಲ್ಲಿ ಬೆಳೆಸುತ್ತಿರುವ ವೈದ್ಯಕೀಯವನ ಮಹರ್ಷಿ ದೈವರಾತರ ಮಗ ಶ್ರೀ ವೇದಶ್ರಮ ಶರ್ಮ ಇವರದು.

ಜ್ಯೋತಿಷಿಗಳು:
ಶೃಂಗೇರಿ ಮಠದ ಎಲ್ಲ ಶಾಸ್ತ್ರಿಗಳೂ ಜ್ಯೋತಿಷಿಗಳೇ. ಮಹಾಬಲ ಶಾಸ್ತ್ರಿಗಳು, ರಾಜಾರಾಮ ಶಾಸ್ತ್ರಿಗಳು, ನರಸಿಂಹ ಶಾಸ್ತ್ರಿಗಳು, ಕುಪ್ಪಾ ಶಾಸ್ತ್ರಿಗಳು – ಅವರ ಹೆಸರು ಸೂರ್ಯನಾರಾಯಣ ಶಾಸ್ತ್ರಿಗಳು. ಒಬ್ಬರಿಗಿಂತ ಒಬ್ಬರು ಪ್ರಸಿದ್ಧರು. ಇವರಿಗೆಲ್ಲಾ ಜ್ಯೋತಿಷ್ಯ ಆರ್ಷೇಯ. ಅಲ್ಲೇ ಪಕ್ಕದಲ್ಲಿ ಗಜಾನನ ಸಭಾಹಿತರು, ಅವರ ಮಕ್ಕಳು ಗಣಪತಿ ಸಭಾಹಿತ, ನಿವೃತ್ತ ಶಿಕ್ಷಕರು. ಭಡ್ತಿ ಭಟ್ಟರು, ಬೈಲಕೇರಿ ಕೃಷ್ಣ ಭಟ್ಟರು, ಇವರ ತಂದೆ ಪರಮೇಶ್ವರ ಭಟ್ಟರು ಬೈಲಕೇರಿ (ಭಾವಯ್ಯ), ಹಾಗೇ ಮುಂದೆ ಬಂದರೆ ಸುಬ್ರಹ್ಮಣ್ಯ ಶರ್ಮಾ ಬರವಣಿ (ನಿವೃತ್ತ ಪ್ರೌಢಶಾಲಾ ಅಧ್ಯಾಪಕರು), ಶಂಕರಲಿಂಗ ಬಂಗಾರು ಭಟ್ಟರು, ವಿಘ್ನೇಶ್ವರ ಶಾಂತಾರಾಮ ಉಪಾಧ್ಯರು ಇವರೆಲ್ಲಾ ಪ್ರಸಿದ್ಧ, ಸುಪ್ರಸಿದ್ಧ ಜ್ಯೋತಿಷಿಗಳು. ಶ್ರೀ ಅಣ್ಣು ಪಂಡಿತರ ಮೊಮ್ಮಗ, ಮೊಮ್ಮಗಳು- ಇಬ್ಬರೂ ಜ್ಯೋತಿಷಿಗಳೇ. ಶ್ರೀ ಶಿವರಾಮ ಹಿರೇಭಟ್ಟರ ಹೆಸರು ತಪ್ಪಿದ್ದಕ್ಕೆ ಕ್ಷಮೆ ಇರಲಿ. ಸುಪ್ರಸಿದ್ಧ ಜ್ಯೋತಿಷ್ಯರು.

ಯಕ್ಷಗಾನ ಕಲಾವಿದರು:
ಶ್ರೀ ಚಿತ್ರಿಗೆ ಜಿ.ಎಂ.,ಸಿದ್ದೇಶ್ವರ ನಾರಾಯಣ ಮಾಸ್ತರರು, ಮಕ್ಕಳು, ಕೊಡ್ಲೆಕೆರೆ ಗಜಾನನ ಭಟ್ಟರು, ಲಕ್ಷ್ಮೀನಾರಾಯಣ ಧಾರೇಶ್ವರ, ಮಹಾಬಲ ಶಿವೋಡಿ, ಮೂಲೆ ಮಹಾದೇವ ಅಡಿಗಳು, ಅಗಸೆ ಪಂಡಿತರ ಮನೆಯ ಕೂರ್ಸೆ ಭಟ್ಟರು, ಶ್ರೀ ಶಂಕರ ಪಂಡಿತ ಭಾಗವತರು, ಶ್ರೀ ರಾಮದಾಸ ಪಂಡಿತರು, ಹಾವಗೋಡಿ ಗಣೇಶ ಭಟ್ಟರು, ಅವರ ಮಕ್ಕಳು. ಸುಬ್ರಾಯ ಹಾವಗೋಡಿ ಮತ್ತು ಅನಂತ ಹಾವಗೋಡಿ. ಮಹಾಬಲಮೂರ್ತಿ ಕೊಡ್ಲೆಕೆರೆ ವಿದೇಶಕ್ಕೂ ಹೋಗಿ ಯಕ್ಷಗಾನದ ಕಂಪು ಪಸರಿಸಿದರು. ವಿದ್ಯಾರ್ಥಿದೆಸೆಯಿಂದಲೂ ಯಕ್ಷಗಾನ ಕಲಾವಿದ. ತಂದೆಯಿಂದ ಈ ಕಲೆ ಆರ್ಷೇಯವಾಗಿ ಮಗನಿಗೆ ಒಲಿದು ಬಂದಿದೆ. ಚಿತ್ರಿಗೆ ದತ್ತ ಮಾಸ್ತರರ ಮಗೆ ಇನ್ನೊಬ್ಬ ಹೆಸರಾದ ಕಲಾವಿದ. ಶಿವಾನಂದ ಭಂಡಾರಿ ಮಹಾನ್ ಕಲಾವಿದನಾಗುವ ಎಲ್ಲ ಲಕ್ಷಣಗಳನ್ನೂ ಹೊಂದಿದವರಾಗಿದ್ದರು. ಹಾವಗೋಡಿ ಅನಂತ, ಶಿವಾನಂದರ ಜೋಡಿ ಪ್ರಸಿದ್ಧವಾಗಿತ್ತು. ಆದರೆ ಶಿವಾನಂದ ಎಳೆವಯಸಿನಲ್ಲೇ ಅಗಲಿದ. ಓಣಿ ಜಂಭೆ ಭಟ್ಟರು. ಗೋಕರ್ಣದ ಯಕ್ಷಗಾನ ಕಲಾವಿದರಲ್ಲಿ ಈ ದಂಪತಿಗಳ ಸ್ಮರಣೆ ಮಾಡಲೇಬೇಕು: ನನ್ನ ದೊಡ್ಡಣ್ಣ ಮತ್ತು ದೊಡ್ಡತ್ತಿಗೆ: ಶಿವರಾಮ ಮತ್ತು ಲಕ್ಷ್ಮಿ (ಮಹಾಲಕ್ಷ್ಮಿ) ಕೊಡ್ಲೆಕೆರೆ. ಯಕ್ಷಗಾನದಲ್ಲಿ ಸ್ತ್ರೀ ಪಾತ್ರವನ್ನು ಪುರುಷರೇ ಮಾಡುವುದು ರಿವಾಜು. ಈ ದಂಪತಿಗಳು ಆ ರಿವಾಜು ಮುರಿದರು. ಶ್ರೀಮತಿ ಲಕ್ಷ್ಮಿ ಸತ್ಯಭಾಮೆಯ ಪಾತ್ರವಹಿಸಿ ಪ್ರೇಕ್ಷಕರ ಮನಗೆದ್ದರು. ಕೃಷ್ಣನ ಪಾತ್ರ ಶಿವರಾಮಣ್ಣನದು. ಹೀಗೆ ಇವರೊಂದು ದಾಖಲೆ ಮಾಡಿದರೆನ್ನಬೇಕು.

ಕ್ಷೇತ್ರಾಧೀಶ್ವರ ಮಹಾಬಲೇಶ್ವರ ಸಾರ್ವಭೌಮನಲ್ಲಿ ಹಾಡುವ (ಮಂಗಳಾರತಿ ಹಾಡು, ಭಕ್ತಿಗೀತೆ) ಅನೇಕ ಹಾಡುಗಳು ಅರ್ಥಗರ್ಭಿತವಾಗಿವೆ. ಕೆಲವು ಮರಾಠಿಯಲ್ಲೂ ಇವೆ.

೧. ಜೈ ಶಿವ ಓಂಕಾರ, ಸ್ವಾಮಿ, ಭಜ ಶಿವ ಓಂಕಾರ
ಬ್ರಹ್ಮ ವಿಷ್ಣು ಸದಾಶಿವ ಅರ್ಧಾಂಗಿಯ ಗೌರ……

೨. ಶ್ರೀಮಹಾಬಲೇಶದೇವ ಸಾರ್ವಭೌಮತೇ

೩. ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ

******

ಮುಂದುವರೆಯುವುದು….

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಟೋಪಿವಾಲ ಮತ್ತು ಇಲಿಗಳು
Next post ತಾಳಲಾರೆ ತಗಣಿಕಾಟವಾ

ಸಣ್ಣ ಕತೆ

 • ಮಂಜುಳ ಗಾನ

  ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

 • ಗಂಗೆ ಅಳೆದ ಗಂಗಮ್ಮ

  ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

 • ಅಜ್ಜಿಯ ಪ್ರೇಮ

  ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

cheap jordans|wholesale air max|wholesale jordans|wholesale jewelry|wholesale jerseys