ಶಿಕ್ಷಣದ ಭಾಷೆ ಯಾವುದಿರಬೇಕು?

ಶಿಕ್ಷಣದ ಭಾಷೆ ಯಾವುದಿರಬೇಕು?

ಅಧ್ಯಾಯ -೯

ಭಾಷೆಯೊಂದರ ಬೆಳವಣಿಗೆ ಮತ್ತು ವಿಕಾಸ ಮಗುವಿನಲ್ಲಿ ಅದರ ಹುಟ್ಟಿನೊಂದಿಗೇ ಪ್ರಾರಂಭವಾಗುತ್ತದೆ. ಹುಟ್ಟಿದ ಕೂಡಲೇ ಆ ಮಗುವಿನ ಮನೆಯವರಾಡುವ ಭಾಷೆಯ ಮಾತುಗಳು ಅದರ ಕಿವಿಯ ಮೇಲೆ ಬೀಳಲಾರಂಭಿಸುತ್ತವೆ. ಮಗುವಿನ ಮೆದುಳಿನಲ್ಲಿ ಎರಡು ಭಾಗಗಳಿವೆ. ಒಂದು ವರ್ನಿಕೆಯ ಕ್ಷೇತ್ರ, ಮತ್ತೊಂದು ಬ್ರೋಕಾನ ಕ್ಷೇತ್ರ, ವರ್ನಿಯ ಕ್ಷೇತ್ರ ಕಿವಿಯ ಮೇಲೆ ಬಿದ್ದ ಶಬ್ದಗಳನ್ನು ಅರ್ಥಮಾಡಿಕೊಂಡರೆ, ಬ್ರೋಕಾನ ಕ್ಷೇತ್ರ ಮಾತುಗಳನ್ನಾಡುವ ಕೌಶಲಕ್ಕೆ ಕಾರಣವಾಗುತ್ತದೆ. ಮೊದಲ ಐದು ವರ್ಷಗಳಲ್ಲಿ ಮಗು ಭಾಷೆಯನ್ನು ಅರ್ಥಮಾಡಿಕೊಂಡು ಅದನ್ನು ಮಾತುಗಳ ಮೂಲಕ ಬಳಸಲು ಹಂತ ಹಂತವಾಗಿ ಶಕ್ತವಾಗುತ್ತದೆ.

ಹುಟ್ಟಿದ ಮೇಲೆ ಮೊದಲ ಆರು ತಿಂಗಳ ಕಾಲ ಮಗು ಅಳುವಿನ ಮೂಲಕ, ಕೂಗುವುದರ ಮೂಲಕ, ವಿವಿಧ ಆ… ಊ…. ಈ… ಶಬ್ದಗಳ ಮೂಲಕ ಸಂವಹನ ಮಾಡಲು ಪ್ರಯತ್ನಿಸುತ್ತದೆ. ಹಸಿವಾದಾಗ ಅದರ ಅಳುವಿಗೂ, ಶರೀರಕ್ಕೆ ನೋವು ಮತ್ತು ತೊಂದರೆಯಾದಾಗ ಅಳುವಿಗೂ ವ್ಯತ್ಯಾಸವಿರುತ್ತದೆ. ಹಾಲು ಕುಡಿದು, ಹೊಟ್ಟೆ ತುಂಬಿದಾಗ ಮಾಡುವ ಶಬ್ದಕ್ಕೂ, ತಾಯಿಯ ಬಿಸಿಯಪ್ಪುಗೆ – ಪ್ರೀತಿಯನ್ನು ಅನುಭವಿಸಿದಾಗ ಮಾಡುವ ಶಬ್ದಕ್ಕೂ ವ್ಯತ್ಯಾಸವಿರುತ್ತದೆ.

ಆನಂತರ ಮಗು ವಿವಿಧ ರೀತಿಯ ಶಬ್ದಗಳನ್ನು ಮಾಡಲು ಕಲಿಯತೊಡಗುತ್ತದೆ. ಈ ಶಬ್ದಗಳು ಫೋನೀಮ್‍ಗಳನ್ನು ಹೋಲತೊಡಗುತ್ತದೆ. ಪಾ… ಮಾ… ಡಾ.. ಕಾ.. ಬೂ… ಊ.. ಆ.. ಏ.. ಈ.. ಬಳಿಕ ಈ ಶಬ್ದವೇ ಚಿಕ್ಕ ಚಿಕ್ಕ ಪದಗಳಾಗಿ ರೂಪುಗೊಳ್ಳುತ್ತವೆ. ಮನೆಯವರಾಡುವ ಭಾಷೆಯ ಪದಗಳಾಗುತ್ತವೆ. ಅಪ್ಪ, ಅಮ್ಮ, ಅಕ್ಕ, ಅಣ್ಣ, ಕಾಕಾ, ಬೌಬೌ, ಜಿಜ್ಜಿ ಇತ್ಯಾದಿ. ಮಗುವಿನ ಕಿವಿಯ ಮೇಲೆ ಹೆಚ್ಚೆಚ್ಚು ಮಾತುಗಳು ಬೀಳುತ್ತಿದ್ದಂತೆ, ಮಗುವಿನ ಶಬ್ದ ಸಂಪತ್ತು ಬೆಳೆಯತೊಡಗುತ್ತದೆ.

ಮಗುವಿಗೆ ೧೦-೧೩ ತಿಂಗಳಾಗುವ ಅವಧಿಯಲ್ಲಿ ಹೆಚ್ಚಿನ ಮಕ್ಕಳು ಮಾತೃಭಾಷೆಯ ಪದಗಳನ್ನು ಹೋಲುವ ಶಬ್ದಗಳನ್ನು ಉಚ್ಚರಿಸುತ್ತಾರೆ. ಬಹುತೇಕ ಭಾಷೆಗಳಲ್ಲಿ ಮಕ್ಕಳ ಪ್ರಾರಂಭಿಕ ಶಬ್ದಗಳು, ಮ.. ಪ.. ಡಾ.. ಆಗಿದ್ದು, ತಾಯಿಗೆ ಅಮ್ಮಾ, ಮಾ, ಮಮ್, ತಂದೆಗೆ ಅಪ್ಪ, ಪಪ್ಪಾ, ಡ್ಯಾಡ್ ಎಂದಿರುವುದು ಗಮನಾರ್ಹ.

ಪ್ರಾರಂಭಿಕ ಪದಗಳನ್ನು ಮಗು ಕಲಿತಾದ ಮೇಲೆ, ಮಗುವಿಗೆ ಒಂದೂವರೆ ವರ್ಷವಾಗುತ್ತಿದ್ದಂತೆ, ಐದರಿಂದ ಐವತ್ತು ಪದಗಳನ್ನು ಬಳಸಲು ಪ್ರಾರಂಭಿಸುತ್ತದೆ. ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಪದಗಳ ಅರ್ಥ ಮಗುವಿಗೆ ಗೊತ್ತಿರುತ್ತದೆ. ಕ್ರಿಯಾ ಪದಗಳಿಗಿಂತ, ನಾಮಪದಗಳನ್ನೆ ಮಗು ಬೇಗ ಕಲಿಯುತ್ತದೆ.

ಮಗುವಿಗೆ ಐದು ವರ್ಷ ವಯಸಾಗುವ ವೇಳೆಗೆ ಅದರ ಪದ ಸಂಪತ್ತು ಹತ್ತು ಸಾವಿರಕ್ಕೆ ಏರುತ್ತದೆ. ಎರಡೂವರೆ, ಮೂರು ವರ್ಷ ವಯಸ್ಸಿನ ನಂತರ ಮಗು, ವಾರಕ್ಕೆ ೨೦ ರಷ್ಟು ಹೊಸ ಪದಗಳನ್ನು ಕಲಿಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ‘ಫಾಸ್ಟ್ ಮ್ಯಾಪಿಂಗ್’ ವಿಧಾನದಲ್ಲಿ ಮಗು ಒಂದು ವಸ್ತುವನ್ನು ನೋಡುತ್ತಿದ್ದಂತೆ ಅದರ ಉಪಯೋಗವನ್ನು ಮಾಡುತ್ತಿದ್ದಂತೆ ಆ ವಸ್ತುವಿನ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ. ಚೆಂಡು, ಸೈಕಲ್, ಕಾರ್, ಬಿಸ್ಕತ್, ಚಾಕೋಲೇಟ್, ಐಸ್ ಕ್ರೀಂ, ಬಸ್, ಏರೋಪ್ಲೇನ್ ಹೀಗೆ ಪದ ಸಂಪತ್ತು ವೃದ್ಧಿಸುತ್ತದೆ.

ಈ ಕಲಿಕೆಯ ಹಂತದಲ್ಲಿ ಮಗು ಒಂದು ವಸ್ತುವಿನ ಆಕಾರ, ಬಣ್ಣ ರೂಪವನ್ನು ಕಂಡು, ಆ ವಸ್ತುವಿನ ಹೆಸರನ್ನು ತಿಳಿಯಿತು ಎಂದುಕೊಳ್ಳೋಣ. ಉದಾ: ಚೆಂಡು, ಆಗ ಅದಕ್ಕೆ ಎಲ್ಲ ದುಂಡಗಿರುವ ವಸ್ತುಗಳೆಲ್ಲಾ ಚೆಂಡು ಎಂದೇ ಗುರುತಿಸುವ ಪ್ರವೃತ್ತಿ ಇರುತ್ತದೆ. ಮೂಸಂಬಿಯನ್ನೂ ಚೆಂಡು ಎನ್ನಬಹುದು. ಆಲೂಗಡ್ಡೆಯನ್ನೂ ಚೆಂಡು ಎನ್ನಬಹುದು. ಚಂದ್ರನನ್ನೂ ಚೆಂಡು ಎನ್ನಬಹುದು. ಕ್ರಮೇಣ ಗುಂಡಗಿರುವ ವಸ್ತುಗಳ ವ್ಯತ್ಯಾಸ ಮತ್ತು ಅವುಗಳ ಹೆಸರು ಬೇರೆ ಬೇರೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತದೆ. ವಿವಿಧ ಮಕ್ಕಳ ಭಾಷಾ – ಪದಗಳ ಕಲಿಕೆಯ ವೇಗದಲ್ಲಿ ಸಹಜವಾದ ವ್ಯತ್ಯಾಸ ಇರುತ್ತದೆ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಬೇಗ ಮಾತನಾಡುವುದನ್ನು, ತಮ್ಮ ಪದ ಸಂಪತ್ತನ್ನು ಶೀಘ್ರಗತಿಯಲ್ಲಿ ಹೆಚ್ಚಿಸಿಕೊಳ್ಳುವುದು ಕಂಡುಬಂದಿದೆ.

ಭಾಷೆಯ ಬೆಳವಣಿಗೆ

೧ ರಿಂದ ೫ ತಿಂಗಳು
ಆ.. ಊ… ಶಬ್ದ ಮಾಡುವುದು, ನಗುವುದು, ಅಳುವುದು, ಶಬ್ದ ಮಾಡುತ್ತಾ ಆಡುವುದು, ಭಾಷಾ ಶಬ್ದಗಳಿಂದ ಇತರ ಸದ್ದನ್ನು ಗುರುತಿಸುತ್ತದೆ.

೬ ರಿಂದ ೧೦ ತಿಂಗಳು
ಬೇರೆಯವರ ಮಾತು ಸಂಭಾಷಣೆಗೆ ಪ್ರತಿಕ್ರಿಯೆಯಾಗಿ ಶಬ್ದ ಮಾಡುತ್ತದೆ.

೧೦ ರಿಂದ ೧೨ ತಿಂಗಳು
ಮೊದಲ ಪದಗಳು ಕ್ರಿಯಾಪದಗಳಿಗಿಂತ ವಸ್ತು ಸೂಚಕ ಪದಗಳನ್ನು ಮೊದಲು ಕಲಿಯುತ್ತದೆ.

೧೨ ರಿಂದ ೧೮ ತಿಂಗಳು
ಒಂದು ಪದದ ವಾಕ್ಯ, ಉದಾಹರಣೆಗೆ: ಬೇಕು, ಬಾ, ಹೊಸ ಹೊಸ ಪದಗಳನ್ನು ಕಲಿಯುತ್ತದೆ.

೨ ವರ್ಷ
೨ ಪದಗಳ ವಾಕ್ಯ: ನನಗೆ ಬೇಡ. ನಾನೂ ಬರ್‍ತೀನಿ. ಕ್ರಿಯಾಪದಗಳನ್ನು ಸರ್ವನಾಮಗಳನ್ನು ಬಳಸುತ್ತದೆ.

೨.೫ ವರ್ಷ
ಮೂರು ಪದಗಳ ವಾಕ್ಯಗಳ ರಚನೆ.

೩ ವರ್ಷ
ಸಂಪೂರ್ಣ ವಾಕ್ಯಗಳನ್ನು ರಚಿಸುತ್ತದೆ. ಸರಳವಾಗಿ ಕಥೆ ಹೇಳುತ್ತದೆ. ಬಹುವಚನವನ್ನು ಉಪಯೋಗಿಸುತ್ತದೆ.

೩.೫ ವರ್ಷ
ವಿಷಯ/ಘಟನೆಗಳನ್ನು ಪದಗಳ ಮೂಲಕ ಹೇಳಬಲ್ಲದು, ವ್ಯಾಕರಣವನ್ನು ಗಮನಿಸುತ್ತದೆ.

೪ ವರ್ಷ
ಕಲ್ಪನೆ ಮಾಡಿ ಕಥೆ ಹೇಳುತ್ತದೆ. ಇದು ಪದಗಳ ವಾಕ್ಯವನ್ನು ರಚಿಸುತ್ತದೆ.

೫ ವರ್ಷ
ಸಂಕೀರ್ಣ ವಾಕ್ಯಗಳನ್ನು, ಸಂಕೀರ್ಣವಾದ ಕಥೆಗಳನ್ನು ಹೇಳಬಲ್ಲದು.

೬ ವರ್ಷ
ತಾಯಿಯ ಭಾಷೆಯ ಜೊತೆಗೆ, ಬೇರ ಭಾಷೆಗಳ ಪದಗಳನ್ನು ಕಲಿಯಬಲ್ಲದು.

ಭಾಷಾ ಕಲಿಕೆಯಲ್ಲಿ ಒಂದು ಮಗು ನಿಧಾನವಾಗಿ ಪ್ರಾರಂಭ ಮಾಡಿದರೂ, ಆ ನಂತರ ವೇಗವನ್ನು ಹೆಚ್ಚಿಸಿಕೊಳ್ಳುತ್ತದೆ.

ವಾಕ್ಯ ರಚನೆ ಮಾಡಲು ಇನ್ನೂ ಸಾಮರ್ಥ್ಯವಿಲ್ಲದ ಮಕ್ಕಳು ಒಂದೇ ಪದವನ್ನು ಹೇಳಿ, ವಾಕ್ಯದ ಅರ್ಥವನ್ನು ವ್ಯಕ್ತಪಡಿಸುತ್ತಾರೆ. ಉದಾ: ಒಂದು ವಸ್ತುವನ್ನು ನೋಡಿ ‘ಬೇಕು’ ಎಂದು, ಒಂದು ಪದ ಹೇಳಿ, ‘ಆ ವಸ್ತುವನ್ನು ನನಗೆ ಕೊಡಿ’ ಎಂದು ಸಂವಹನ ಮಾಡುತ್ತದೆ. ‘ಪೀಪೀ’ ಎಂದಷ್ಟೇ ಹೇಳಿ, ‘ಪೀಪಿಯನ್ನು ನನ್ನ ಕೈಗೆ ಕೊಡಿ’ ಎಂದು ಬೇಡಿಕೆ ವ್ಯಕ್ತಪಡಿಸುತ್ತದೆ.

ಪದಗಳ ಜೋಡಣೆ
೧೮ನೇ ತಿಂಗಳಿನಿಂದ ೨೪ ತಿಂಗಳ ಅವಧಿಯಲ್ಲಿ ಮಗು ಪದಗಳನ್ನು ಜೋಡಿಸುವುದನ್ನು ಕಲಿಯುತ್ತದೆ. ಆದರೆ ಈ ಜೋಡಣೆ ಬಹಳ ಸರಳವಾಗಿರುತ್ತದೆ. ವಿಭಕ್ತಿ ಪ್ರತ್ಯಯಗಳೇ ಇರುವುದಿಲ್ಲ. ಬೀರು, ಬೊಂಬೆ ಎಂದರೆ, ‘ಬೀರುವಿನಲ್ಲಿರುವ ಬೊಂಬೆಯನ್ನು ತೆಗೆದು ನನಗೆ ಕೊಡಿ’ ಎಂದು ಅರ್ಥ. ನಾಯಿ-ಬೀದಿ ಎಂದರೆ ಬೀದಿಯಲ್ಲಿ ನಾಯಿ ಓಡಾಡುತ್ತಿದೆ ಎಂದಾಗಬಹುದು. ಹಾಗೆಯೇ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಇವೆಲ್ಲಾ ಗೊತ್ತಾಗುವುದು. ಅಕ್ಕ ಹೋಯಿತು. ನಾಯಿ ಬಂದ ಇಂತಹ ಪ್ರಯೋಗಗಳಾಗಬಹುದು.

ಭಾಷೆಯ ಸುಧಾರಣೆ ಮತ್ತು ವಿವಿಧ ರೀತಿಯ ಪ್ರಯೋಗ ಮಗು ನಾಲ್ಕರಿಂದ ಐದು ವರ್ಷವಾಗಿದ್ದಾಗ ಮತ್ತು ಅನಂತರ ನಡೆಯುತ್ತಲೇ ಇರುತ್ತದೆ. ಮನೆಯವರ ಭಾಷಾ ಸಾಮರ್ಥ್ಯ, ಅವರು ಭಾಷೆಯನ್ನು ಬಳಸುವ / ಉಚ್ಚರಿಸುವ ರೀತಿಯ ಜೊತೆಗೆ, ನೆರೆಹೊರೆಯವರು, ಮನೆಗೆ ಬಂದ ಬಂಧು-ಮಿತ್ರರು, ಮನೆಯಲ್ಲಿ ಕೆಲಸ ಮಾಡುವವರು, ಸಹ ವಯಸ್ಕರು, ಟಿ.ವಿ. ಸಿನಿಮಾದಲ್ಲಿ ಇರುವವರು, ಎಲ್ಲರೂ ಮಗುವಿನ ಭಾಷಾ ಪ್ರಯೋಗವನ್ನು ರೂಪಿಸಬಲ್ಲರು, ಬದಲಿಸಬಲ್ಲರು. ಹಲವು ಭಾಷೆಗಳನ್ನಾಡುವ ಮನೆ / ಪ್ರದೇಶಗಳಲ್ಲಿ ಬೆಳೆಯುವ ಮಕ್ಕಳು ವಿವಿಧ ಭಾಷೆಯ ಪದಗಳನ್ನು ಕಲಿತು, ಒಟ್ಟಿಗೇ ಬಳಸಬಹುದು. ಪಾಕೆಟ್ ಮನಿ ಈಪದ್ದೇ ಬೇಕು, ಪಕ್ಕದ ಮನೆಗೆ ಚೋರ್ ನುಗ್ಗಿದ್ನಂತೆ. ತುಂಬಾ ಜ್ಯೂಯೆಲ್ಸ್ ಪೋಯಿಂದಂಟ!

ಭಾವನೆಗಳು ಮತ್ತು ಭಾಷೆ:
ಕೃಷ್ಣದೇವರಾಯನ ಆಸ್ಥಾನ. ಒಂದು ದಿನ ಒಬ್ಬ ವಿದ್ವಾಂಸ ಬಂದು ಸಂಸ್ಕೃತ, ಪಾಲಿ, ಪ್ರಾಕೃತ, ಕನ್ನಡ, ತೆಲುಗು, ತಮಿಳು, ಬಂಗಾಳಿ ಹೀಗೆ ಹಲವಾರು ಭಾಷೆಗಳಲ್ಲಿ ತನ್ನ ಪ್ರೌಢಿಮೆ ತೋರಿಸಿ, ಒಂದು ಸವಾಲೆಸೆದ. ‘ಇಷ್ಟೊಂದು ಭಾಷೆಗಳನ್ನಾಡುವ ನನ್ನ ಮಾತೃಭಾಷೆ ಯಾವುದೆಂದು ಯಾರಾದರೂ ಹೇಳಿದರೆ, ನನ್ನ ಬಿರುದು ಬಾವಲಿಗಳನ್ನೆಲ್ಲಾ ಅವರಿಗೆ ಕೊಡುತ್ತೇನೆ. ಹೇಳಲಾಗದಿದ್ದರೆ ನಿಮ್ಮ ಆಸ್ಥಾನದ ವಿದ್ವನ್ಮಣಿಗಳೆಲ್ಲ ನನಗೆ ಸೋತು ಶರಣಾಗಬೇಕು’ ಎಂದ! ಬಹುತೇಕ ವಿದ್ವಾಂಸರು ಇದು ತಮ್ಮಿಂದಾಗದು ಎಂದರು. ಆಗ ತೆನಾಲಿ ರಾಮಕೃಷ್ಣ ಎದ್ದು ವಿದ್ವಾಂಸರೇ ಇದು ಬಹಳ ಸುಲಭ’ ಎಂದು ಆತನಲ್ಲಿಗೆ ಹೋಗಿ ಆತನ ತೊಡೆಗೆ ಬಲವಾದ ಒಳಶುಂಠಿ ಕೊಟ್ಟ, ನೋವನ್ನು ತಾಳಲಾಗದೇ ಅ ವಿದ್ವಾಂಸ ‘ಅಯ್ಯೋ ಅಮ್ಮ ತಾಳಲಾರೆ’ ಎಂದು ಕಿರುಚಿದ. ‘ನಿಮ್ಮ ಮಾತೃಭಾಷೆ ಕನ್ನಡ ಅಲ್ಲವೇ ವಿದ್ವಾಂಸರೇ’ ಎಂದು ರಾಮಕೃಷ್ಣ ನಕ್ಕಾಗ, ವಿದ್ವಾಂಸ ಹೌದೆಂದು ಒಪ್ಪಿಕೊಂಡ!

ಭಾವನೆಗಳು, ಅನುಭವವನ್ನು ಹೇಳಿಕೊಳ್ಳಲು ಪರಿಣಾಮಕಾರಿಯಾಗಿ ವಿವರಿಸಲು ತಾಯ್ನುಡಿಯೇ ಬೇಕು. ನೋವು ಸಂಕಟವಾದಾಗ, ಅಸಹಾಯಕತೆ ನಮ್ಮನ್ನು ಆವರಿಸಿದಾಗ, ತಾಯ್ನುಡಿಯಲ್ಲಿ ಅದನ್ನು ಸಮರ್ಥವಾಗಿ ವ್ಯಕ್ತಪಡಿಸುತ್ತೇವೆ.

ಭಾವನೆ-ಅನಿಸಿಕೆ-ಅನುಭವಗಳನ್ನು ಭಾಷಾ ಮೂಲಕ ವ್ಯಕ್ತಪಡಿಸುವುದು ಒಂದು ಕಲೆ-ಕೌಶಲ. ಹೀಗಾಗಿ ಅನೇಕರು ಅತಿ ಸಂತೋಷ-ಅತಿ ದುಃಖವಾದಾಗ, ದೊಡ್ಡ ನಷ್ಟ ಉಂಟಾದಾಗ ಅದನ್ನು ಬಣ್ಣಿಸಲು ಮಾತುಗಳು ಸಾಲವು ಎನ್ನುತ್ತಾರೆ. ಭಾಷೆಗೆ ಅತೀತವಾದದ್ದು ಎಂದು ಹೇಳುತ್ತಾರೆ. ಮಾತೃಭಾಷೆಯನ್ನೂ ಸರಿಯಾಗಿ ಕಲಿಯದೇ, ಹೊರಗಿನ ಭಾಷೆಯಾದ ಇಂಗ್ಲೀಷನ್ನು ಸರಿಯಾಗಿ ಕಲಿಯದೇ ಇರುವವರಿಗೆ ಭಾಷೆಯ ಮೂಲಕ ತಮ್ಮ ಭಾವನೆ, ಅನುಭವಗಳನ್ನು ಹೇಳಿಕೊಳ್ಳುವುದು ಕಷ್ಟವಾಗುತ್ತದೆ, ಹಿಂಸೆಯಾಗುತ್ತದೆ. ಆದ್ದರಿಂದ ಪ್ರತಿಯೊಂದು ಮಗುವಿಗೆ ತಾಯ್ನುಡಿಯನ್ನು ಪರಿಣಾಮಕಾರಿಯಾಗಿ ಬಳಸಲು ತರಬೇತಿ ಶಿಕ್ಷಣ ದೊರೆಯಬೇಕು. ಭಾಷೆಯನ್ನು ನಿರ್ಲಕ್ಷ್ಯ ಮಾಡಿ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ತಾಯ್ನುಡಿಯೇ ನಮ್ಮ ಶಕ್ತಿ ನಮ್ಮ ನೆಮ್ಮದಿಯ ಮೂಲ ಎಂಬುದನ್ನು ಎಲ್ಲರೂ ತಿಳಿಯಬೇಕು.

ನಮ್ಮ ದೇಶದಲ್ಲಿ ಈಗ ಶಿಕ್ಷಣ ಮಾಧ್ಯಮದ ಬಗ್ಗೆ ಸಾಕಷ್ಟು ವಾದ ವಿವಾದ, ಗೊಂದಲ ಎದ್ದಿದೆ. ಮಾತೃಭಾಷೆಯಲ್ಲೇ ಶಿಕ್ಷಣ ಅತ್ಯುತ್ತಮ ಎಂದು ಮನಃಶಾಸ್ತ್ರಜ್ಞರು, ಶಿಕ್ಷಣ ತಜ್ಞರು, ಸಮಾಜ ವಿಜ್ಞಾನಿಗಳು ಸ್ಪಷ್ಟವಾಗಿ ಸಾರಿದ್ದರೂ, ‘ಇಂಗ್ಲೀಷ್ ಮಾಧ್ಯಮದ ಮೂಲಕ ಶಿಕ್ಷಣ ನೀಡುವುದರಿಂದ, ನಮ್ಮ ಮಕ್ಕಳು ಹೆಚ್ಚು ಬುದ್ಧಿವಂತರಾಗುತ್ತಾರೆ. ಶಿಕ್ಷಣದಲ್ಲಿ ವೇಗವಾಗಿ ಹಾಗೂ ಹೆಚ್ಚು ಅಂಕ ತೆಗೆದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಿಂಚುತ್ತಾರೆ’ ಎಂದು ಬಹುತೇಕ ತಂದೆ-ತಾಯಿಗಳು ನಂಬಿದ್ದಾರೆ. ಪ್ರೀ-ನರ್ಸರಿಯಿಂದ ಹಿಡಿದು, ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ಇಂಗ್ಲೀಷ್ ಮಾಧ್ಯಮದ ಮೂಲಕ ಶಿಕ್ಷಣ ಕೊಡುವ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಇಷ್ಟಪಡುತ್ತಾರೆ. ಕಂಪ್ಯೂಟರ್-ಐಟಿ ಬಿಟಿಗಳು ಬಂದಾದ ಮೇಲೆ ಇಂಗ್ಲೀಷ್ ಸಾರ್ವಭೌಮ ಭಾಷೆಯಾಗಿ, ಪ್ರಪಂಚದಾದ್ಯಂತ ಸಂಪರ್ಕ ಭಾಷೆಯಾಗಿ ಮಾನ್ಯತೆ ಪಡೆದುಕೊಂಡುಬಿಟ್ಟಿದೆ.

ಪ್ರತಿಯೊಬ್ಬ ತಂದೆ-ತಾಯಿ, ತಮ್ಮ ಮಗ/ಮಗಳು ಎಂಜಿನಿಯರ್ ಆಗಬೇಕು, ಡಾಕ್ಟರಾಗಬೇಕು. ಐ‌ಎ‌ಎಸ್ ಅಧಿಕಾರಿ ಆಗಬೇಕು, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯ, ಜಪಾನ್‌ಗಳಿಗೆ ಹೋಗಿ ಕೋಟಿ ಕೋಟಿ ರೂಪಾಯಿಗಳನ್ನು ಸಂಪಾದಿಸಬೇಕು ಎಂದು ಆಸೆ ಪಡುತ್ತಾರೆ. ಈ ಕನಸು ನನಸಾಗಬೇಕಾದರೆ, ಇಂಗ್ಲೀಷ್ ಭಾಷೆಯಲ್ಲಿ ತಮ್ಮ ಮಗ-ಮಗಳು ಪ್ರಾವಿಣ್ಯತೆಯನ್ನು ಪಡೆಯಬೇಕು ಎಂದು ನಿರ್ಧರಿಸುತ್ತಾರೆ. ನಗರ ಪ್ರದೇಶಗಳ ಜನ ತಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಗಳಿಗೆ ಸೇರಿಸಿ, ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸಿ, ತಮ್ಮ ಮಕ್ಕಳನ್ನು ಮುಂದೆ ತರುತ್ತಾರೆ. ಆದ್ದರಿಂದ ನಾವೂ ಅವರನ್ನು ಅನುಸರಿಸೋಣ ಎಂದು ಹಳ್ಳಿ-ಸಣ್ಣ ಊರುಗಳ ಜನರೂ ಇಂಗ್ಲೀಷ್ ಮಾಧ್ಯಮದ ಶಾಲೆಗಳನ್ನು ತೆರೆಯಲು ಖಾಸಗಿಯವರಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಕನ್ನಡ ಮಾಧ್ಯಮದ ಶಾಲೆಗಳಿಗೆ ಹೋಗುವವರು ಬಡವರ ಮಕ್ಕಳು, ನಿರ್ಗತಿಕರ ಮಕ್ಕಳು, ಕೆಳವರ್ಗದವರ ಮಕ್ಕಳು. ಏಕೆಂದರೆ ಅವರಿಗೆ ಖಾಸಗಿ ಶಾಲೆಗಳಿಗೆ ಹೋಗಲು ಹಣವಿಲ್ಲ. ಆದ್ದರಿಂದ ಸರಕಾರಿ ಕನ್ನಡ ಶಾಲೆಗಳಲ್ಲೂ ಒಂದನೇ ತರಗತಿಯಿಂದಲೇ ಇಂಗ್ಲೀಷ್ ಕಲಿಸಿ, ಆ ನಂತರ ಇಂಗ್ಲಿಷ್ ಮಾಧ್ಯಮದಲ್ಲೇ ಶಿಕ್ಷಣ ಕೊಡಿ ಎಂಬ ಕೂಗು ಎದ್ದಿದೆ. ಇದಕ್ಕೆ ವರ್ಗ-ಸಂಘರ್ಷದ ಬಣ್ಣವನ್ನೂ ಹಚ್ಚಲಾಗಿದೆ. ಮುಂದುವರೆದ ವರ್ಗಗಳು ಇಂಗ್ಲಿಷ್ ಮಾಧ್ಯಮ ಮತ್ತು ಇಂಗ್ಲಿಷ್ ಮೇಲಿನ ಪ್ರಭುತ್ವದಿಂದ ದಲಿತ ವರ್ಗಗಳನ್ನು ತುಳಿಯುತ್ತಿದ್ದಾರೆ. ಅವರನ್ನು ಸ್ಪರ್ಧೆಯ ಕಣದಿಂದ ಹೊರಗಿಡುತ್ತಿದ್ದಾರೆ. ದಲಿತರು ಇಂಗ್ಲಿಷ್ ಕಲಿತು ಮುಂದೆ ಇರುವುದನ್ನು ಸಹಿಸುವುದಿಲ್ಲ ಎಂದು ವಾದ ಮಾಡಿ, ಹೋರಾಟಕ್ಕೆ ಜನ ಅಣಿಯಾಗುತ್ತಿದ್ದಾರೆ. ‘ಇಂಗ್ಲೀಷಿಗೆ ಮನ್ನಣೆ ಕೊಟ್ಟರೆ, ಮಣೆ ಹಾಕಿದರೆ, ಮೂರು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಕನ್ನಡ ಭಾಷೆ, ಕನ್ನಡ ಸಂಸ್ಕೃತಿ ಮಣ್ಣು ಪಾಲಾಗುತ್ತದೆ. ತಮ್ಮ ಸಂಸ್ಕೃತಿ, ಭಾಷೆಯನ್ನು ಕಳೆದುಕೊಂಡ ಜನ ಹಾಳಾಗಿ ಹೋಗುತ್ತಾರೆ’ ಎಂದು ಕನ್ನಡ ಭಾಷಾ ಉಳಿವಿಗೆ ಟೊಂಕ ಕಟ್ಟಿರುವವರು, ಹೋರಾಟಕ್ಕೆ ಸಿದ್ಧರಾಗುತ್ತಿದ್ದಾರೆ. ವಾದ ಮಾಡುವವರೆಲ್ಲ ಭಾವೋದ್ವೇಗಕ್ಕೆ ಒಳಗಾಗಿ ತಜ್ಞರಂತೆ ಮಾತಾಡುತ್ತಾರೆ. ವಾಸ್ತವಿಕ ಮಟ್ಟದಲ್ಲಿ ವೈಜ್ಞಾನಿಕ ರೀತಿಯಲ್ಲಿ ಮಾತಾಡುವವರು ಬಹಳ ಕಡಿಮೆ. ಮಗುವಿನಲ್ಲಿ ಭಾಷೆಯ ಬೆಳವಣಿಗೆಯ ವಿಕಾಸವನ್ನು ನೀವು ತಿಳಿದುಕೊಂಡಿರಿ. ಹುಟ್ಟಿದಂದಿನಿಂದ, ಐದು ವರ್ಷಗಳವರೆಗೆ ಮನೆಯವರು ಮಾತಾಡುವ, ತನ್ನ ಕಿವಿಯ ಮೇಲೆ ಬೀಳುವ ಭಾಷೆಯನ್ನು ಮಕ್ಕಳು ಬೇಗ ಕಲಿಯುತ್ತಾರೆ, ಆ ಭಾಷೆಯ ಮೂಲಕ ಸಂವಹನ-ಜ್ಞಾನಾರ್ಜನೆ ಸುಲಭವಾಗುತ್ತದೆ. ತಮ್ಮ ಪದ ಸಂಪತ್ತನ್ನು ವಿಸ್ತರಿಸಲು ಅವರಿಗೆ ಸರಾಗವಾಗುತ್ತದೆ. ಆದ್ದರಿಂದ ಮಗುವಿನ ತಾಯ್ನುಡಿಯಲ್ಲಿ ಶಿಕ್ಷಣ ನೀಡುವುದೇ ಅತ್ಯುತ್ತಮ ಎಂದು ಎಲ್ಲ ಶಿಕ್ಷಣ ತಜ್ಞರು, ಮಾನಸಿಕ ತಜ್ಞರು ಒಕ್ಕೊರಲಿನಿಂದ ಹೇಳಿದ್ದಾರೆ.

ಯಾವುದೇ ಶಿಕ್ಷಣವನ್ನು ತಾಯ್ನುಡಿಯಲ್ಲಿ ಕೊಡಬೇಕು. ಇದು ಪಾಲಕರ-ಶಿಕ್ಷಕರ-ಸರಕಾರದ ಜವಾಬ್ದಾರಿಯಾಗಬೇಕು. ಪದವಿ/ ಪದವಿಯೋತ್ತರ ಮಟ್ಟದಲ್ಲೂ / ವೃತ್ತಿ ಶಿಕ್ಷಣದಲ್ಲೂ ತಾಯ್ನುಡಿಗೆ ಆದ್ಯತೆ ಇರಬೇಕು. ಅನೇಕ ದೇಶಗಳು (ಜಪಾನ್, ಜರ್ಮನಿ, ರಷ್ಯಾ, ಚೀನಾ ಇತ್ಯಾದಿ) ತಮ್ಮ ತಾಯ್ನುಡಿಯಲ್ಲೇ ಎಲ್ಲ ಹಂತಗಳ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ನೀಡುತ್ತವೆ. ಅಲ್ಲಿ ಇಂಗ್ಲಿಷ್‌ಗೆ ಜಾಗವೆ ಇಲ್ಲ. ಅವರೆಲ್ಲ ಮುಂದುವರಿದಿಲ್ಲವೇ? ಸ್ಪರ್ಧೆಯಲ್ಲಿ ಮುಂದಿಲ್ಲವೇ? ಹೊರಗಡೆ ಹೋಗುವವರು, ತಕ್ಕಮಟ್ಟಿಗೆ ವ್ಯವಹಾರಕ್ಕೆ ಬೇಕಾದ ಇಂಗ್ಲಿಷನ್ನು ಕಲಿಯುತ್ತಾರೆ. ಅಥವಾ ಆ ದೇಶಗಳಿಗೆ ಹೋದ ಮೇಲೆ ಕಲಿಯುತ್ತಾರೆ. ದೇಶದ ಹೊರಗೆ ಹೋಗುವವ ಒಬ್ಬ ವ್ಯಕ್ತಿ ಇರಬಹುದು. ಉಳಿದ ೯೯ ಅಥವಾ ೯೯೯ ಜನ, ಇಂಗ್ಲಿಷ್ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವ ಅಗತ್ಯವೇನಿದೆ?

ಮನಃಶಾಸ್ತ್ರಜ್ಞರು ಮತ್ತು ಶಿಕ್ಷಣ ತಜ್ಞರ ಪ್ರಕಾರ, ದೊಡ್ಡವರಿಗೆ ಹೋಲಿಕೆ ಮಾಡಿದರೆ ಚಿಕ್ಕ ವಯಸ್ಸಿನ ಮಕ್ಕಳು ಒಂದಕ್ಕಿಂತ ಹೆಚ್ಚಿನ ಭಾಷೆಗಳನ್ನು ಬೇಗ ಕಲಿಯಬಲ್ಲರು. ಆದ್ದರಿಂದ ಪ್ರೈಮರಿ ಶಾಲೆಯಲ್ಲಿ ತಾಯ್ನುಡಿಯ ಜೊತೆಗೆ, ಇಂಗ್ಲೀಷನ್ನೋ, ಹಿಂದಿಯನ್ನೋ, ತೆಲುಗು, ತಮಿಳನ್ನೋ ಕಲಿಸಬಹುದು. ಆದರೆ ಆ ಭಾಷೆಯನ್ನು ಮಾಧ್ಯಮವಾಗಿ ಬಳಸಬಾರದು. ವ್ಯವಹಾರಕ್ಕೆ ಬೇಕಾದಷ್ಟು ಭಾಷೆಯನ್ನು ಕಲಿಯಲು ಬಹುತೇಕ ಮಕ್ಕಳಿಗೆ ಕಷ್ಟವಾಗುವುದಿಲ್ಲ. ಆದರೆ ನಿಧಾನ ಕಲಿಕೆಯ ಮಕ್ಕಳು ಹಾಗೂ ಹೊಸ ಭಾಷೆಯನ್ನು ಕಲಿಯಲಾಗದ ಮಕ್ಕಳು ಕಷ್ಟಪಡಬಹುದು. ಅವರ ಸಂಖ್ಯೆ ಶೇ. ೧೦-೧೫ ಇರಬಹುದು.

ಆದ್ದರಿಂದ ಪ್ರಾಥಮಿಕ ಶಾಲೆಗಳಲ್ಲಿ ಅದು ಒಂದನೇ ತರಗತಿ ಇರಲಿ, ಮೂರನೆ ತರಗತಿ ಇರಲಿ, ಇಂಗ್ಲೀಷ್ ಭಾಷೆಯನ್ನು ಐಚ್ಛಿಕವಾಗಿ ಕಲಿಯಲು ಅವಕಾಶ ಮಾಡಿಕೊಡಬೇಕು. ಸರಳವಾದ, ವ್ಯವಹರಿಸಲು ಬೇಕಾದ ಇಂಗ್ಲೀಷ್ ಭಾಷೆ ಸಾಕು, ಇಂಗ್ಲಿಷ್ ಭಾಷಾ ತರಗತಿಗಳಿಗೆ ಎಲ್ಲರಿಗೆ ಮುಕ್ತ ಅವಕಾಶವಿರಬೇಕು. ಪರೀಕ್ಷೆಗಳನ್ನು ನಡೆಸಿ, ವಿವಿಧ ಹಂತದ / ಮಟ್ಟದ ಸರ್ಟಿಫಿಕೇಟ್‌ಗಳನ್ನು ಕೊಡಬಹುದು. ಈ ಪರೀಕ್ಷೆಗಳಿಗೂ, ತರಗತಿಯ ಪರೀಕ್ಷೆಗಳಿಗೂ ಸಂಬಂಧವಿರಬಾರದು. ನಿಧಾನವಾಗಿ ಕಲಿಯುವ ಮಕ್ಕಳಿಗೆ, ಇಂಗ್ಲಿಷ್ ಭಾಷಾ ತರಗತಿಗಳಿಗೆ ತಮಗೆ ಬೇಕೆಂದಷ್ಟು ಕಾಲ ಹೋಗಿ ಕಲಿಯಲು ಮುಕ್ತ ಅವಕಾಶವಿರಬೇಕು. ಹೈಸ್ಕೂಲ್ / ಕಾಲೇಜಿಗೆ ಹೋಗುವ ವೇಳೆಗೆ ಇಂಗ್ಲಿಷ್ ಭಾಷೆಯನ್ನು ಪ್ರೌಢ ಮಟ್ಟದಲ್ಲಿ ಕಲಿಯುವ ಅವಕಾಶಗಳಿರಬೇಕು. ವಿಶ್ವವಿದ್ಯಾಲಯ / ಕಾಲೇಜುಗಳಲ್ಲಿರುವ ಇಂಗ್ಲಿಷ್ ವಿಭಾಗಗಳು ಮುಕ್ತ ತರಗತಿಗಳನ್ನು ಕೋರ್ಸ್‌ಗಳನ್ನು ನಡೆಸಿ, ಇಂಗ್ಲಿಷ್ ಭಾಷೆಯಲ್ಲಿ ಪ್ರೌಢಿಮೆ ಗಳಿಸಬಯಸುವವರಿಗೆ ತರಬೇತಿ / ಮಾರ್ಗದರ್ಶನವನ್ನು ಮಾಡಬೇಕು. ಇಂಗ್ಲಿಷ್ ಭಾಷೆಯಿಂದ ತಮಗೆ ಅನುಕೂಲ, ತಮ್ಮ ಯಶಸ್ಸು ಅದರ ಮೇಲೆ ನಿಂತಿದೆ ಎನ್ನುವವರಿಗೆ ಈ ಅನುಕೂಲ ಲಭ್ಯವಿರಲಿ, ಉಳಿದವರಿಗೆ ತಮ್ಮ ಊರಲ್ಲೇ ತಮ್ಮ ಜಿಲ್ಲೆಯಲ್ಲೇ ಜೀವನ ಮಾಡುವವರಿಗೆ ರಾಜ್ಯ ಭಾಷೆ, ಸ್ಥಳೀಯ ಭಾಷೆಗಳೇ ಸಾಕು.

ನೆನಪಿಡಿ:

* ವಿಷಯವನ್ನು ಅರ್ಥ ಮಾಡಿಕೊಳ್ಳಲು ಜ್ಞಾನಾರ್ಜನೆಗೆ ಮಾತೃಭಾಷೆಯೇ ಉತ್ಕೃಷ್ಟ, ಆದ್ದರಿಂದ ಶಿಕ್ಷಣ ಮಾಧ್ಯಮ ಕನ್ನಡವಾಗಿರಲಿ.

* ಎಲ್ಲ ಹಂತಗಳಲ್ಲಿ ಇಂಗ್ಲಿಷನ್ನು ಅಥವಾ ಮತ್ತೊಂದು ಭಾಷೆಯನ್ನು ವ್ಯವಹಾರಿಕವಾಗಿ ಕಲಿಯಲು, ಸಂವಹನ ವಾಹಕವಾಗಿ ಕಲಿಯಲು ಶಿಕ್ಷಣದ ಎಲ್ಲ ಹಂತಗಳಲ್ಲಿ ಅವಕಾಶ-ಅನುಕೂಲತೆ ಮಾಡಿಕೊಡಿ.

* ಕನ್ನಡವನ್ನು ಎಲ್ಲೆಡೆ ಹೆಚ್ಚಾಗಿ ಬಳಸೋಣ, ಉಳಿಸೋಣ, ಬೆಳೆಸೋಣ, ಕೇವಲ ಭಾವೋದ್ವೇಗದ ಘೋಷಣೆಗಳಿಂದ ಕನ್ನಡ ಉಳಿಯದು. ವ್ಯವಹಾರದ ಭಾಷೆಯಾದಾಗ, ಆಡಳಿತದ ಭಾಷೆಯಾದಾಗ ಕನ್ನಡ ಉಳಿಯುತ್ತದೆ, ಬೆಳೆಯುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದುಃಖ ಸರಿದು
Next post ಹಿತ್ತಲಲ್ಲಿ ಅಮ್ಮ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

cheap jordans|wholesale air max|wholesale jordans|wholesale jewelry|wholesale jerseys