ಬೀಜ ಬಿತ್ತಿದ ಅಮ್ಮನ ಹಿತ್ತಲಲಿ
ಹಕ್ಕಿ ಪಕ್ಷಿಗಳ ಇನಿದನಿ ಚಿಮ್ಮಿ
ಅರಳಿ ಘಮ್ಮೆಂದು ಸೂಸಿ ನೆಲತುಂಬ
ಹರಡಿ ಹಾಸಿದ ಪಾರಿಜಾತ ಹೂರಾಶಿ.
ಅಲ್ಲೇ ಬಟ್ಟೆ ಒಗೆಯುವ ಕಲ್ಲಮೇಲೆ
ಮೂಡಿವೆ ಅವಳ ಕೈ ಬೆರಳ ಬಳೆಗಳ
ಚಿಕ್ಕೀ ನಾದ ರೇಖೆಗಳು ಚಿತ್ತ ಪಟ
ಪಾತರಗಿತ್ತಿಗಳ ಹಾರಾಟ ಎದೆಯೊಳಕೆ ಇಳಿದ ರಸಕಾವ್ಯ.
ಇಲ್ಲಿಯೇ ಇದ್ದ ತುಳಸಿ ಕಟ್ಟೆಯ
ಬಳಿ ಉರಿದ ನಂದಾದೀಪ ಅವಳ
ಕಣ್ಣಕಾಂತಿ ಚಿಗುರಿ ಹರಡಿದ ಬೆಳದಿಂಗಳು
ಮನದ ಮರದ ತುಂಬೆಲ್ಲ ಟೊಂಗೆ
ಟೊಂಗೆಗೆ ಮಿಂಚು ಹುಳುಗಳ ಮಿಣಿಮಿಣಿ ಭಾವ.
ಈ ಬಾವಿಕಟ್ಟೆಯ ತುಂಬಾ
ಅವಳ ಅನಂತ ಆಕಾಶ ಥಳಥಳ
ಹೊಳೆದ ಸೂರ್ಯ ಪ್ರೀತಿ ಮೊಗೆದು
ಹಬ್ಬಿ ಹದವಾಗಿ ಮುದವಾಗಿ ಅರಳಿದ
ಸಂಪಿಗೆ ಸೂಸಿತು ಸೀರೆಯ ಸರಭರ ಸಖೀ ಗೀತೆ.
ಹಿಮಗಿರಿಯ ಗಂಗೆ ಹರಿದ ಸೋಪಾನ
ಬಯಲು ಬೆಟ್ಟ ನದಿ ಕಾಡ ತುಂಬ
ಅರಿವು ಭಕ್ತಿ ಪ್ರೀತಿಗೆ ಒಲಿದ ಅವಳ
ಪ್ರೇಮ ಕಾವ್ಯ ಸಾಕಾರ ಹನಿ ಹನಿ
ಉಣಿಸಿದ ಬದುಕು ತಂಪು ಹೊಸ ಕಾವ್ಯ
*****