ಟೋಪಿವಾಲ ಮತ್ತು ಇಲಿಗಳು

ದೃಶ್ಯ – ೧

(ಇಲಿಗಳು ಕುಣಿಯುತ್ತಾ ಬರುತ್ತವೆ)

ಹಾಡು
ಇಲಿ ಇಲಿ ಇಲಿ ಇಲಿ ಇಲಿ ಇಲಿ ಇಲಿ ಇಲಿ
ಎಲ್ಲಿ ನೋಡಿದರು ಇಲಿಯೆ ಇಲಿ
ಕಿಚ್ ಕಿಚ್ ಕಿಚ್ ಕಿಚ್ ಕಿಚ್ ಕಿಚ್ ಕಿಚ್ ಕಿಚ್
ಇಲ್ಲಾ ಕಡೆಗಳಲ್ಲು ಗಲೀ ಬಿಲಿ ||

ಆಹಾ ಅದರ ಬಾಲಕಡ್ದಿ
ಓಹೋ ನೋಡು ಸೇಲೇಗಿಡ್ದಿ
ಅಲ್ಲಿಹ ಬೋಡು ಹೊಟ್ಟೆಡುಮ್ಮ
ಇಲಿ ಓಡುತಿಹ ಮೀಸೆಗುಮ್ಮ || ಇಲಿ ಇಲಿ ||

ಅವನೋ ಕಪ್ಪು, ಇವನೋ ಬಿಳುಪು
ಅವಳಿಗೆ ಜುಟ್ಟು ಮಲ್ಲಿಗೆ ಕಟ್ಟು
ಸಿಕ್ಕೆದ್ದೆಲ್ಲಾ ಮುಕ್ಕಿದವಲ್ಲ
ಕಟಕಟಕಟಕಟ ಕಡಿಯುತ ಹಲ್ಲ ||ಇಲಿ ಇಲಿ ||

ಮಾಡಿದ್ದೊಂದೆ ಊಟದ ಹುಡುಕು
ಬೆಳೆಯಿತು ಸಂಖ್ಯೆ ದಿನಕು ದಿನಕು
ಊರಿಗೆ ಇಳಿದವು ಬೆಟ್ಟದ ಇಲಿಗಳು
ಇಲ್ಲಾ ಕಡೆಯಲು ಜನಗಳ ಗೋಳು ||ಇಲಿ ಇಲಿ||

ದೃಶ್ಯ – ೨

(ಹಳ್ಳಿಯ ಜನಗಳ ಪ್ರವೇಶ. ಕೆಲವು ಇಲಿಗಳು ರಂಗದಲ್ಲಿ ಓಡಾಡುತ್ತಿರುತ್ತವೆ.
ಜನರನ್ನು ನೋಡಿ ಗಡಿಬಿಡಿಇಂದ ಪಲಾಯನ)

ಎಲ್ಲರು ಒಟ್ಟಿಗೆ: ಇಲಿ…….ಇಲಿ……ಇಲಿ……. ಈ ಇಲಿಗಳಿಂದ ಯಾವಾಗ ಮುಕ್ತಿ ಸಿಗುತೋ?

ವ್ಯಕ್ತಿ ೧   : ಅಯ್ಯಯಪ್ಪಾ….. ಹೆಜ್ಜೆ ಇಡುವಾಗಿಲ್ಲ ಕಾಲಿಗೇ ಸಿಕ್ಕಿಕೊಳ್ತಿವೆ ಶನಿಗಳು.

ವ್ಯಕ್ತಿ ೨   : ಏನು ಹೇಳ್ತಿ ಇವುಗಳ ಕತೆನಾ ? ಚಪ್ಲಿನೇ ತಿಂದು ಬಿಟ್ವು. ಚಪ್ಲಿಇಲ್ದೆ ನಡೀಬೇಕು ನೋಡು.

ವ್ಯಕ್ತಿ ೩   : ಅಯ್ಯಯೋ….. ನೋಡಿಲ್ಲಿ, ಜೇಬಲ್ಲೂ ಇಲಿ.

ವ್ಯಕ್ತಿ ೪   : ನನ್ ಮಗ್ಳ ಮೋಟು ಜಡೆ ರಾತ್ರೆ ಇತ್ತು. ಬೆಳಿಗ್ಗೆ ಎದ್ದಾಗ ಜಡೆ ಹಾಸಿಗೆಯಲ್ಲಿ!

ವ್ಯಕ್ತಿ ೧   : ದೇವಸ್ಥಾನದ ಪೂಜಾರಪ್ಪನ ಜುಟ್ಟೇ ಕಟ್ಟು……..!

ವ್ಯಕ್ತಿ ೫   : ಅದೇನ್ ಹೇಳ್ತಿ? ಸ್ನಾನ ಮಾಡಿದ್ಮೇಲೆ ಮೈ ಉಜ್ಕೋಳಕೋದ್ರೆ ಟವಲಲ್ಲಿ ದೊಡ್ಡ ತೂತು.

ವ್ಯಕ್ತಿ ೨   : ಬೀದಿಯಲ್ಲೂ ಇಲಿ, ಮನೆಗಳಲ್ಲೂ ಇಲಿ, ಎಲ್ಲೆಲ್ಲೂ ಇವುಗಳದ್ದೇ ಕಾಟ.

ವ್ಯಕ್ತಿ ೩   : ಊರಿಡೀ ಇಲಿಗಳದ್ದೇ ಸಾಮ್ರಾಜ್ಯ.

ವ್ಯಕ್ತಿ ೪   : ಸಣ್ಣಿಲಿ, ದೊಡ್ದಿಲಿ, ಅವ್ವಿಲಿ, ಅಪ್ಪಿಲಿ, ಕಪ್ಪಿಲಿ, ಬಿಳಿ ಇಲಿ, ದಪ್ಪ ಇಲಿ, ಕಡ್ಡಿ ಇಲಿ.

ವ್ಯಕ್ತಿ ೧   : ಹೊಟ್ಟೆ ಡುಮ್ಮಿಲಿ, ಇಲಿಯೋ ಇಲಿ.

ವ್ಯಕ್ತಿ ೫   : ಸರ್ವಂ ಮೂಷಿಕಮಯಂ.

ವ್ಯಕ್ತಿ ೨   : ನಮ್ಮ ಪುಸ್ತಕ , ಬಟ್ಟೆ ಎಲ್ಲಾ ಚೂರು ಚೂರು.

ವ್ಯಕ್ತಿ ೪   : ಇಲಿಗಳ ಎದುರು ನಾಯಿಗಳ ಸುದ್ದಿಯೇ ಇಲ್ಲ.

ವ್ಯಕ್ತಿ ೫   : ಅವು ಬೆಕ್ಕುಗಳಿಗೂ ಕ್ಯಾರೇ ಮಾಡೋದಿಲ್ಲ.

ವ್ಯಕ್ತಿ ೨   : ತೊಟ್ಟಿಲಲ್ಲಿರುವ ಮಕ್ಕಳನ್ನು ಕಚ್ಚುತ್ತವೆ!

ವ್ಯಕ್ತಿ ೧   : ಇಷ್ಟೆಲ್ಲಾ ಆಗುವಾಗ ಊರಗೌಡ ಏನ್ಮಾಡ್ತಿದ್ದಾನೆ?

ವ್ಯಕ್ತಿ ೨   : ಥೂ ! ಛೀ ! ಈ ಊರಗೌಡ ಹಾಳಾಗ.

ವ್ಯಕ್ತಿ ೩   : ಏ ಊರಗೌಡ ಏನು ಮಾಡ್ತಿದ್ದಿಯೋ? ತೆರಿಗೆ ಕಾಸು ಬಿಡದೆ ಕಸಿದುಕೊಳ್ತೀಯಾ. ಈ ಇಲಿಗಳನ್ನು ಕೊಲ್ಸೊ ಕೆಲ್ಸ ಮಾಡೋ.

ವ್ಯಕ್ತಿ ೪   : ನಿನ್ನ ರುಮಾಲಿನ ಜರಿಹಾಳಾಗ. ನಿನ್ನ ಗಂಟಲು ಕಟ್ಟಿಹೋಗ.

ವ್ಯಕ್ತಿ ೧   : ನಿನ್ನ ಬಾಯಿಗೆ ಮಣ್ಣು ಬೀಳಾ. ನಿನ್ ಮನೆ ಎಕ್ಕುಟ್ಟಿ ಹೋಗ.

ವ್ಯಕ್ತಿ ೨   : ಇಲಿಗಳನ್ನ ಕೊಲ್ಲಿಸದಿದ್ರೆ ನಿನ್ನ ಮನೆ ಸುಟ್ಟಾಕ್ತೇವೆ.

ವ್ಯಕ್ತಿ ೫   : ಹಾಗೆಲ್ಲಾ ಮಾತಾಡ್ಬಾರು . ಊರಗೌಡ ಒಬ್ನೇ ಏನ್ಮಾಡ್ಬೋದು? ನಾವೆಲ್ಲಾ ಒಟ್ಟಾಗಿ ಅವನಲ್ಲಿ ಮಾತಾಡಿ,
ಈ ಸಮಸ್ಯಗೆ ಪರಿಹಾರ ಹುಡುಕೋಣ

ವ್ಯಕ್ತಿ ೧   : ನಿಂಗೂ ತಲೆ ಇದೆ!

ವ್ಯಕ್ತಿ ೨   : ತಲೆಯೊಳಗೆ ಮೆದುಳೂ ಇದೆ !!

ವ್ಯಕ್ತಿ ೧   : ಅಲ್ಲ ನಿನ್ನದರ ಹಾಗೆ ಸೆಗಣಿ ಇರುತ್ತಾ?

ವ್ಯಕ್ತಿ ೩,  : ನೀನು ಹೇಳಿದ್ದೇ ಸರಿ. ಎಲ್ಲಾ ಊರಗೌಡನ ಸಮ್ಮುಖದಲ್ಲೇ ——-.
ವ್ಯಕ್ತಿ ೪

(ನಿರ್ಗಮನ)

ದೃಶ್ಯ – ೩
(ಊರಗೌಡನ ಮನೆ )

ಎಲ್ಲರೂ     : ನಮಸ್ಕಾರ ಬುದ್ದೀ …. ನಮಸ್ಕಾರ ಸ್ವಾಮೀ .

ಊರಗೌಡ   : ನಮಸ್ಕಾರ ….. ನಮಸ್ಕಾರ ….. ಏನು ವಿಶೇಷ ? ಯಾಕೆ ಎಲ್ಲಾ ಇಲ್ಲಿ ಸೇರಿದ್ದೀರಿ?

ವ್ಯಕ್ತಿ ೧   : ಸ್ವಾಮೀ. ನಮ್ಮ ಊರ ತುಂಬಾ ಇಲಿಗಳದ್ದೇ ಕಾರುಬಾರು.

ವ್ಯಕ್ತಿ ೨   : ನಾವು ಎಲ್ಲ ಹೋಗ್ತಿವೋ, ಅಲ್ಲೆಲ್ಲ ಇಲಿಗಳೇ ಇಲಿಗಳು.

ವ್ಯಕ್ತಿ ೩   : (ತಲೆಯ ಮೇಲೆ ಪೆಟ್ಟಿಗೆ) ನೋಡಿ ಸ್ವಾಮಿ, ಇಲಿಗಳು ನನ್ನ ಪೆಟ್ಟಿಗೆಯನ್ನೇ ತೂತು ಮಾಡಿಬಿಟ್ಟಿವೆ. ಇಷ್ಟಾದ್ರು ಉಳೀಲೀಂತ
ತಲೆಮೇಲೆ ಹೊತ್ಕೊಂಡು ಓಡಾಡ್ತಿದ್ದೀನೆ.

ವ್ಯಕ್ತಿ ೪   : ಒಡೆಯ… ನನ್ನಲ್ಲಿದ್ದ ಒಂದೇ ಒಂದು ಅಂಗಿಯನ್ನು ಈ ಇಲಿಗಳು ತಿಂದಾಕಿವೆ. ಅದ್ಕೇ ಹೀಗೆ ಬರ್ ಬೇಕಾಯ್ತು.

ವ್ಯಕ್ತಿ ೫   : ನನ್ನ ಚಪ್ಪಲಿನೇ ಇಲ್ಲ.

ವ್ಯಕ್ತಿ ೬   : ನನ್ನ ತಲೆಯನ್ನು ಒಮ್ಮೆ ನೋಡಿ ಇಲಿಗಳನ್ನು ಓಡಿಸದಿದ್ರೆ  ನನ್ನ ತಲೇಲಿ ಒಂದೂ ಕೂದಲು ಉಳಿಯೋದಿಲ್ಲ.

ಊ.ಗೌಡ    : ಸಾಕು, ನಿಲ್ಸಿ ನಿಮ್ಮ ಮಾತು. ನಮ್ಮಲ್ಲೂ ಅದೇ ಸಮಸ್ಯೆ.

ಅಸಿಸ್ಟೆಂಟ್
ಗೌಡ      : ಎಲ್ರ ಮನೆ ದೋಸೆನೂ ತೂತೇ.

ಊ.ಗೌಡ    : ಹೌದೌದು. ನನ್ನ ಗೌಡ್ತಿಯ ರೇಶ್ಮೆ ಸಿರೇನಾ ತೂತು ಮಾಡಿವೆ.

ಡೆಪ್ಯುಟಿ
ಗೌಡ      : ಬೇರೆ ಊರಿಂದ ಬೆಕ್ಕುಗಳನ್ನು ತರಿಸೋದಕ್ಕೆ ಆರ್ಡರ್ ಮಾಡಿದ್ದೇವೆ.

ಅಸಿಸ್ಟೆಂಟ್
ಗೌಡ      : ಸಾವಿರ ಇಲಿ ಬೋನುಗಳಿಗೆ ಈಗಾಗಲೇ ಅಡ್ವಾನ್ಸ್ ಕೊಟ್ಟಿದ್ದೇನೆ.

ಡೆಪ್ಯುಟಿ
ಗೌಡ      : ಬೀದಿಯ ಎರಡು ಬದಿಗಳಲ್ಲಿ ಇಲಿಪಾಷಾಣ ಹರಡಿದ್ದೇನೆ.

ವ್ಯಕ್ತಿ ೧   : ಈಗಿನ ಇಲಿಪಾಶಾಣ ತಿಂದ್ರೆ ಸ್ವಾಮಿ , ಇಲಿಗ್ಳು ಸಾಯಲ್ಲ.

ಊ.ಗೌಡ    : ಹಾಗಾದ್ರೆ ಏನು ಮಾಡೋಣಾ?

ವ್ಯಕ್ತಿ ೨   : ಇಲಿ ಕೊಲ್ಲುವ ಎಕ್ಸ್‍ಪರ್ಟ್ಸ್‍ನ ಕರೆಸಿದ್ರೆ ಹೇಗೆ ?

ವ್ಯಕ್ತಿ ೩   : ಇಲಿ ನಿರ್ಮೂಲನ ಸಮಸ್ಯೆ ಪರಿಹಾರ ಸಮಿತಿಯ ರಚನೆ ಮಾಡೋಣ.

ವ್ಯಕ್ತಿ ೪   : ಇದರ ಬಗ್ಗೆ ವಿಶೇಷ ಅಧ್ಯಯನಕ್ಕಾಗಿ ವಿದೇಶಕ್ಕೆ ತಂಡವೊಂದನ್ನು ಕಳಿಸೋಣ.

ವ್ಯಕ್ತಿ ೫   : ಜೋಯಿಸರನ್ನ ಕರೆಸಿ ಮೂಷಿಕ ನಿವಾರಣಾ ಹೋಮ ಮಾಡಿದರೇನು?

ಗೌಡ      : ಹಾಂ……….. ಒಳ್ಳೆಯ ಸಲಹೆ ಕೊಟ್ಟಿದ್ದಿರಿ. ಯೋಚ್ನೆ ಮಾಡಿ ಕಾರ್ಯ ಕೈಗೊಂಡು, ನಿಮ್ಗೆ ತಿಳಿಸ್ತೀನಿ,
ತಾವೆಲ್ಲಾ .ತಾವೆಲ್ಲಾ ಇನ್ನು ದಯ ಮಾಡಿಸೋಣವಾಗಲಿ

ದೃಶ್ಯ – ೪
(ಡಂಗೂರ ಸಾರುವವರ ಪ್ರವೇಶ)

ಒಂದನೇ ಡಂಗುರದವ    : ಕೇಳ್ರಪ್ಪೋ ಕೇಳಿ.

ಎರಡನೇ ಡಂಗುರದವ   : ಕಿವಿಗೊಟ್ಟು ಕೇಳೀ.

ಒಂದನೇ ಡಂಗುರದವ    : ಮತ್ತೆ ಕೇಳಲಿಲ್ಲ ಅಂತ ಮಾತ್ರ ಹೇಳ್ಬೇಡಿ.

ಎರಡನೇ ಡಂಗುರದವ   : ಊರಗೌಡ್ರ ಅಪ್ಪಣೆಯಾಗಿದೆ.

ಒಂದನೇ ಡಂಗುರದವ    : ಇಲಿಗಳನ್ನೆಲ್ಲಾ ನಾಶಮಾಡಿದವ್ರಿಗೇ…….

ಎರಡನೇ ಡಂಗುರದವ   : ೧೦ ಸಾವಿರ ರೂಪಾಯಿ ಬಹುಮಾನವಂತೆ !

ಒಂದನೇ ಡಂಗುರದವ    : ಕುಳಿತಂತ ಕುಶಲರೇ, ನಿಂತ ನಿಪುಣರೇ,

ಎರಡನೇ ಡಂಗುರದವ   : ಅಣ್ಣಂದಿರೇ , ಅಕ್ಕಂದಿರೇ,

ಒಂದನೇ ಡಂಗುರದವ     : ಮಾವಂದಿರೇ ಅತ್ತೆಯಂದಿರೇ,

ಎರಡನೇ ಡಂಗುರದವ   : ತರುಣರೇ, ತರುಣಿಯರೇ,

ಒಂದನೇ ಡಂಗುರದವ    : ಮಾಜಿ ತರುಣರೇ , ಮಾಜಿ ತರುಣಿಯರೇ,

ಎರಡನೇ ಡಂಗುರದವ   : ಭಾವಿ ತರುಣರೇ, ಭಾವಿ ತರುಣಿಯರೇ,

ಒಂದನೇ ಡಂಗುರದವ    : ನಿಮ್ಮ ಅದೃಷ್ಟ ಪರೀಕ್ಷೆ ಮಾಡೋ ಕಾಲ ಬಂದಿದೆ

ಎರಡನೇ ಡ್ಂಗುರದವ    : ಒಂದಲ್ಲಾ, ಎರಡಲ್ಲಾ, ೧೦ ಸಾವಿರ ಬಹುಮಾನ .

ಇಬ್ಬರು                : ಕೇಳ್ರಪ್ಪೋ ……ಕೇಳಿ………(ನಿರ್ಗಮನ)

(ಟೋಪಿವಾಲಾನ ಅಗಮನ)

ಹಾಡು                 : ಲಲಲ…..ಲಲಲ……ಲಾಲ….ಲಾಲ…..ಲ
ಬಓದ…..ಬಂದ…. ಟೋಪಿವಾಲಾ ಬಂದ….ಬಂದ…ನೋಡಿರೋ
ಲಲಲಲ್ …..ಲಲಲ….ಲಾಲ…ಲಾಲಲ (೨)
(ಹಿನ್ನಲೆಯಲ್ಲೆ ಹಾಡು ವೇದಿಕೆಯಲ್ಲೆ ಎಲ್ಲರೂ ಸ್ತಬ್ದರಾಗಿ ನಿಲ್ಲುವರು)

ಹಾಡು                 : ಕಿನ್ನರಿ ನುಡಿಸೋನ ದನಿ ಚಂದವೋ………

ಕುಣೆತ                : ಎಲ್ಲೋ ಜೋಗಪ್ಪ ನಿನ್ನ್ ತಳಮಾ..ನೆ

ಟೋಪಿವಾಲಾ            : ನಂಗೆ ಅರಗಿಣಿಯಂತ ಹುಡುಗಿ ಸಿಗ್ತಾಳೆ ಲಲಲ……
ನಾನವ್ಳನ ಮದುವೆ ಆಗ್ತೇನೆ…ಲಲಲ….
ಅವಳಿಗೆ ಬಣ್ಣ ಬಣ್ಣದ ಸೀರೆ ತಂದ್ಕೊಡ್ತೀನಿ ಲಲಲ…….
ಫಳ ಫಳ ಹೊಳೆಓ ಚಿನ್ನದ ಆಭರಣಗಳನ್ನ
ತೊಡಿಸ್ತೇನೆ  ಲಲಲ………
ನಮಗಾಗಿ ಚೆಂದದ ಅರಮನೆ ಕಟ್ಟೆಸ್ತೇನೆ  ಲಲಲ …….

ವ್ಯಕ್ತಿ ೧              : ಇವನ್ಯಾವನು ? ಒಳ್ಳೆ ವಿಚಿತ್ರವಾಗಿದ್ದಾನಲ್ಲಾ?

ವ್ಯಕ್ತಿ ೨              : ಹೌದೌದು, ವೆರಿ ವೆರಿಸ್ಟ್ರೇಂಜು  ಫಿಗರು .

ವ್ಯಕ್ತಿ ೩              : ಕೆದರಿದ ಕೂದ್ಲು.

ವ್ಯಕ್ತಿ ೪              : ತಲೆಗೆ ಅವನಿಗಿಂತ ಉದ್ದದ ಟೋಪಿ………
ಏನೋ ವಿಚಿತ್ರವಾಗಿದಾನಪ್ಪ.

(ಟೋಪಿವಾಲನ ಬಳಿಗೆ ಹೋಗಿ)

ವ್ಯಕ್ತಿ ೧              : ಸ್ವಾಮಿ ತಾವು ಯಾರು ?

ವ್ಯಕ್ತಿ ೨              : ತಮ್ಮ ಹೆಸರು ಏನು ?

ವ್ಯಕ್ತಿ ೩              : ತಮ್ಮ ಊರು ಯಾವುದು?

ವ್ಯಕ್ತಿ ೪              : ತಮ್ಮ ಕುಲ , ಗೋತ್ರ, ಜಾತಿ, ಬಳಿ, ನಕ್ಷತ್ರ, ರಾಶಿ ಯಾವುದು?

ವ್ಯಕ್ತಿ ೫              : ರೇಷನ್ನು  ಕಾರ್ಡು ಪ್ರಕಾರ ತಮಗೆ ಮಕ್ಕಳೆಷ್ಟು?

ವ್ಯಕ್ತಿ ೧              : ತಮಗೆ ಎಷ್ಟು ಮದ್ವೆಯಾಗಿದೆ?

ವ್ಯಕ್ತಿ ೨              : ತಮ್ಮ ಕೈಯಲ್ಲಿರೋ ವಾದ್ಯ ಯಾವುದು?

ವ್ಯಕ್ತಿ ೩              : ಅಂದ ಹಾಗೆ , ಯಾವ ರಾಗ ನುಡಿಸ್ತಾ ಇದ್ದೀರಿ?

ಟೋಪಿವಾಲಾ            : ಮಾಯಾಲೋಕದಿಂದ ಬಂದಿದ್ದೇನೆ , ಇದು ಮಾಯೆಯ ಕೊಳಲು.

ವ್ಯಕ್ತಿ ೧              : ಮಾಯಲೋಕ ………!?

ವ್ಯಕ್ತಿ ೨              : ಮಾಯೆಯ ಕೊಳಲು………!!?

ಟೋಪಿವಾಲಾ            : ನೀವೆಲ್ಲಾ ಏನೋ ಸಮಸ್ಯೆಯಲ್ಲಿರೋ ಹಾಗೆ ಕಾಣಿಸ್ತೀರಾ?

ವ್ಯಕ್ತಿ ೩              : ಹೌದೌದು…….. ನಮ್ಗೆ  ಇಲಿಗಳದ್ದೇ ಚಿಂತೆ.

ವ್ಯಕ್ತಿ ೪              : ಊರ ತುಂಬಾ ಹೆಗ್ಗಣಗಳದ್ದೇ ಸಮಸ್ಯೆ.

ವ್ಯಕ್ತಿ ೧              : ಹೌದು ಸ್ವಾಮೀ, ನಮ್ಮ ಹಳ್ಳೀಲಿ ಇಲಿ, ಹೆಗ್ಗಣಗಳದ್ದೇ ಸಾಮ್ರಾಜ್ಯ.

ವ್ಯಕ್ತಿ ೩              : ನೀವು ನಂಬ್ತೀರೋ  ಬಿಡ್ತೀರೋ? ನನ್ನ ಪೆಟ್ಟಿಗೆ ತೂತಾಗಿರೋದು ಇಲಿಗಳಿಂದ (ತೂತಿನಲ್ಲಿ ಕೈಯಾಡಿಸುವನು ).

ವ್ಯಕ್ತಿ ೫              : ನಿನ್ನೆ ರಾತ್ರಿ ನನ್ನ ಕನ್ನಡಕವನ್ನೇ ಕಡ್ದಾಕಿವೆ.

ವ್ಯಕ್ತಿ ೬              : ರಾತ್ರಿ ಮಾತ್ರ ಅಲ್ಲ…….ಹಗಲಲ್ಲೂ ಈ ಇಲಿಗಳು
ಸುಮ್ನಿರೋದಿಲ್ಲ. ಎಲ್ಲೆಂದರಲ್ಲ ಓಡಾಡ್ತಾನೇ  ಇರ್ತವೆ.

ವ್ಯಕ್ತಿ ೧              : ಮಕ್ಕನ್ನು ಕಚ್ಚೊದೇನು? ನಾಯಿ ಬೆಕ್ಕು……..ಒಂದೂ ಅವಕ್ಕೆ ಕ್ಯಾರೇ ಇಲ್ಲ.

ಟೊ. ವಾಲಾ            : ಅದೇನು ಮಹಾ? ಬೆಳಿಗ್ಗೆ, ಮದ್ಯಾಹ್ನ, ರಾತ್ರಿಗೆ ಇಲಿಸಾರು ಮಾಡಿದ್ರಾಯ್ತು.
ದೊಡ್ಡ ಹೆಗ್ಗಣವಾದ್ರೆ ರುಚಿ ಹೆಚ್ಚು

ಎಲ್ಲರೂ                : ಎಲ್ಲಾದ್ರೂ ಉಂಟಾ? ಇಲಿಗಳನ್ನು ತಿನ್ನೋದಾ?

ವ್ಯಕ್ತಿ ೧              : ಹೆಗ್ಗಣಗಳನ್ನಾದ್ರೆ ಒಂದು ಕೈ ನೋಡ್ಬೋದಪ್ಪಾ.

ಟೊ.ವಾಲಾ             : ಹೌದು. ನಾನು ತುಂಬಾ ಊರು ನೋಡಿದ್ದೇನೆ. ಎಂತೆಂಥಾ ಜನ ಇದ್ದಾರೆ ಗೊತ್ತಾ?
—- ತಿನ್ನೋರು, ಹಾವು ತಿನ್ನೋರು, ಹಲ್ಲಿ ತಿನ್ನೋರು. ಥೂ ಹಾಳು ಮನುಷ್ಯರು . ಏನನ್ನೂ ಬಿಡೋದಿಲ್ಲ.

ವ್ಯಕ್ತಿ ೨              : ಇಲ್ಲಪ್ಪ……. ನಾವೆಲ್ಲಾ ಅದನ್ನು ತಿನ್ನೋದಿಲ್ಲ.

ವ್ಯಕ್ತಿ ೪              : ಹಾವು ನಮ್ಮ ಈಶ್ವರ ದೇವರ ಆಭರಣ.

ವ್ಯಕ್ತಿ ೩              : ಇಲಿ ನಮ್ಮ ಡೊಳ್ಳುಹೊಟ್ಟೆ ಗಣಪನ ವಾಹನ.

ಟೋ. ವಾಲಾ            : ಹಾಂ………ನಿಮ್ಮ ಸಮಸ್ಯೆಗೆ ನಂಗೊದು ಪರಿಹಾರ ಹೊಳೀತಾ ಇದೆ.

ಎಲ್ಲರೊ                : ಪರಿಹಾರಾನಾ?

ಟೋ.ವಾಲಾ             : ಹೌದು…. ನನ್ನ ಮಾತು ಕೇಳಿ . ನಿಮ್ಮ ಊರಿಂದ ಇಲಿಗಳನ್ನೆಲ್ಲಾ ಓಡಿಸ್ತೇನೆ, ಆದ್ರೆ…..?

ಎಲ್ಲರೂ                : ಆದ್ರೆ…….. ಏನು ಸ್ವಾಮಿ?

ಟೋ.ವಾಲಾ             : ನಂಗೆ………೧೦ ಸಾವಿರ ಬಹುಮಾನ ಕೊಡ್ತೀರಿ ತಾನೇ?

ಎಲ್ಲರೂ                : ಓ…. ನಮ್ಮ ಊರಗೌಡ್ರು ಮಾತಿಗೆ ತಪ್ಪುವವರಲ್ಲ……..ಹಣಾ ಏನು ಮಹಾ ಬರುತ್ತೇ.
ಹೋಗುತ್ತೆ . ವಿಶ್ವಾಸ ಮುಖ್ಯ ಸ್ವಾಮಿ, ಕೊಟ್ಟ ಮಾತಿಗೆ ತಪ್ಪುವುದುಂಟಾ?

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂದು ಬಳಗ
ಸತ್ಯ ವಾಕ್ಯಕೆ ತಪ್ಪಿನಡೆದರೆ ಮೆಚ್ಚನಾ ಆ ಪರಮಾತ್ಮನು.

ಟೋ.ವಾಲಾ             : ನಿಮ್ಮನ್ನು ನಾನು ನಂಬ್ತೇನೆ …..(ಎಲ್ಲರೂ ಸಂಭ್ರಮದಿಂದ ಕುಣಿಉವರು)

ಹಾಡು: ಬಂದ… ಬಂದ…ಟೋಪಿವಾಲಾ
(ಊರ್ ಗೌಡ ಮತ್ತು ಸಹಾಯಕರ ಪ್ರವೇಶ)

ಎಲ್ಲರೂ                : ಗೌಡ್ರು ಬಂದ್ರು…. ಗೌಡ್ರು ಬಂದ್ರು.

ಊ.ಗೌಡ               : ಏನು ನಡೀತಾ ಇದೇ ಇಲ್ಲಿ? ಇವನ್ಯಾರು ಪರದೇಶಿ?
ನಮ್ಮ ಅಪ್ಪಣೇ ಇಲ್ಲದೆ ಊರಿಗೇ ಯಾಕೆ ಬಂದಿದ್ದಾನೆ?

ಎಲ್ಲರೂ                : ಸ್ವಾಮಿ ಇವನು ಮಾಯಾಲೋಕದವನು. ಅವನ ಕೈಯಲ್ಲಿರೋದು ಮಾಯಾಕೊಳಲು.
ನಮ್ಮೂರ ಇಲಿಗಳನ್ನೆಲ್ಲ ಓಡಿಸ್ತಾನಂತೆ. ನೀವು ಅವನಿಗೆ ೧೦ ಸಾವಿರ ಕೊಡಬೇಕಂತೆ.

ಊ.ಗೌಡ               : ಹೇಯ್ ಟೊಪ್ಪಿ….ಸುಮ್ನೆ ಬುಡ್ ಬುಡಿಕೆನಾ? ಅಥ್ವಾ ನಮ್ಗೇ ಟೋಪಿ ಹಾಕ್ತೀಯಾ?

ಟೋ.ವಾಲಾ             : ನಾನು ಮಾತು ಕೊಟ್ಟಾಗಿದೆ. ನಿಮ್ಮ ಮಾತು ಉಳ್ಸಿಕೊಳ್ಳಿ.

ಊ.ಗೌಡ               : ನಮ್ಮ ಊರಿಗೆ ಒಳ್ಳೆದಾಗುತ್ತಾ?

ಟೋ.ವಾಲಾ             : ನಿಮ್ಮ ಮನ್ಸು ಒಳ್ಳೆದಿದ್ರೆ ನಿಮ್ಮೂರಿಗೆ ಒಳ್ಳೆದಾಗುತ್ತೆ

ಡೆಪ್ಯುಟಿ ಗೌಡ            : ನಮ್ಮ ಮನ್ಸು ಬಂಗಾರ.

ಅಸಿಸ್ಟೆಂಟ್ ಗೌಡ        : ನಿನ್ನ ಕೆಲ್ಸ ಮುಗ್ಸಿ ನನ್ನನ್ನು ಕಾಣು, ಕೊಡೋದನ್ನು ನಾನು ಕೊಡ್ತೇನೆ.

(ಆಲಾಪನೆ: ಬಂದ……..ಬಂದ)

ದೃಶ್ಯ-೫

(ರಂಗದಲ್ಲಿ ಟೋಪಿವಾಲಾ ಕುಣಿಯುತ್ತಾನೆ. ಹಿನ್ನಲೆಯಲ್ಲೆ ಹಾಡು ಇಲಿಗಳು ಒಂದೊಂದಾಗಿ ರಂಗಕ್ಕೆ ಬರುತ್ತವೆ. ಟೋಪಿವಾಲಾ ಕುಣಿಯುತಾ ರಂಗದಿಂದ ಹೊರಹೋಗುವನು. ಇಲಿಗಳು ಅವನ್ನು ಹಿಂಬಾಲಿಸುತ್ತವೆ ಆಗ ರಂಗದಲ್ಲಿ ಜನ ಕಾಣಿಸಿಕೊಳ್ಳುತ್ತಾರೆ)

ವ್ಯಕ್ತಿ ೧    : ವಿಚಿತ್ರ! ಅದ್ಬುತ!!

ವ್ಯಕ್ತಿ ೨    : ಆಶ್ಚರ್ಯ! ಪರಮಾಶ್ಚರ್ಯ!!

ವ್ಯಕ್ತಿ ೩    : ಟೋಪಿವಾಲಾನಿಂದ ಇದು ಹೇಗೆ ಸಾಧ್ಯವಾಯ್ತು?

ವ್ಯಕ್ತಿ ೪    : ಇವನು ಯಾವ ಲೋಕದಿಂದ ಬಂದವ

ವ್ಯಕ್ತಿ ೫    : ಆ ಕೊಳಲನ್ನು ಎಲ್ಲಿಂದ ತಂದವ ?

ವ್ಯಕ್ತಿ ೬    : ಅಯ್ಯೋ…ನೋಡಿ…..

ವ್ಯಕ್ತಿ ೧    : ಅವನು ನದಿಗೆ ಧುಮುಕುತ್ತಿದ್ದಾನೆ….

ವ್ಯಕ್ತಿ ೨    : ಇಲಿಗಳೂ ಧುಮುಕುತ್ತಿವೆ…..

ವ್ಯಕ್ತಿ ೩    :ಏನು ಮೋಡಿ ಮಾಡಿದ ?

ಎಲ್ಲರೂ      : ಅವನು ಜೋಗಿ…ಅವನು ಜೋಗಪ್ಪ.

(ಹಿನ್ನೆಲೆ ಎಲೋ ಜೋಗಪ್ಪ ನಿನ್ನ ಅರಮನೆ……… ಕಿನ್ನರಿ ನುಡಿಸೊನ ದನಿ ಚೆಂದವೋ……)

ದೃಶ್ಯ – ೬

(ಪುರಭವನ – ಟೋಪಿವಾಲಾನ ಪ್ರವೇಶ)
ಹಾಡು: ಬಂದ…. ಬಂದ…..

ಟೋ.ವಾಲಾ    : ಗೌಡ್ರೇ, ನೋಡಿದ್ರಲ್ಲಾ? ಈ ಊರಲ್ಲಿ ಒಂದೇ ಒಂದು ಇಲಿ ಉಳಿದಿಲ್ಲ. ನನ್ನ ಮಾತನ್ನು ನಾನು
ಉಳಿಸಿಕೋಡಿದ್ದೇನೆ. ಇನ್ನು ನಿಮ್ಮ ಮಾತು ನೀವು ಉಳಿಸಬೇಕಾಗಿದೆ.

ಊ.ಗೌಡ      : ಭೇಷ್… ಪರದೇಶೀ ಟೋಪಿವಾಲಾ. ನೀನು ಅದ್ಬುತವನ್ನೇ ಸಾಧಿಸಿದ್ದಿ. ಆದರೆ…ಇಲ್ಲಿ ಈಗ ಹಣ
ಇಲ್ಲ. ಇರುವುದೆಲ್ಲಾ ಬರಪರಿಹಾರ ನಿಧಿಗೆ ಹೋಗಿದೆ.

ಅ. ಗೌಡ     : ಹೌದೌದು. ನಮ್ಮ ಖರ್ಚಿಗೆ ರಾಜ ಇನ್ನೂ ಹಣ ಮಂಜೂರು ಮಾಡಿಲ್ಲ.

ಡೆ. ಗೌಡ    : ವಿಶ್ವಾಸ ಮುಖ್ಯ, ಹಣ ಮುಖ್ಯವಲ್ಲ. ನಿನ್ನ ಕೆಲ್ಸ ಜನಸೇವೆ ಎಂದು ತಿಳಿದರಾಯ್ತಪ್ಪ.

ಟೋ.ವಾಲಾ    : ಅದೆಲ್ಲಾ ನಿಮ್ಮ ತಲೆನೋವು. ಆಗ ನೀವು ಹೇಳಿದ್ದೇನು?
ಈಗ ನೀವು ಮಾಡೋದೇನು? ನುಡಿದಂತೆ ನಡೆಯಬೇಕು.

ಊ.ಗೌಡ      : ಏನು ಮಹಾ ಘನಾಂದಾರಿ ಕೆಲ್ಸ ಮಾಡಿದ್ದಿಯಾ ನೀನು?

ಡೆ. ಗೌಡ    : ನನ್ನಲ್ಲೂ ಮಂತ್ರದ ಕೊಳಲಿರುತ್ತಿದ್ದರೆ, ಆ ಕೆಲ್ಸ ನಾನೇ ಮಾಡುತ್ತಿದ್ದೆ.

ಟೋ,ವಾಲಾ    : ಸ್ವಲ್ಪ ಅಡ್ಜೆಸ್ಟ್ ಮಾಡಿಕೋ. ಗೌಡ್ರು ಸುಳ್ಳು  ಹೇಳ್ತಿಲ್ಲ. ಈಗ ನಿಜಕ್ಕೂ ಇಲ್ಲ.

ವ್ಯಕ್ತಿ ೧     : ಇಲಿ ಓಡಿಸಿದ್ದಕ್ಕೆ ಇಷ್ಟು ಕೇಳ್ತಾನೆ. ಇನ್ನು ಆನೆ ಓಡಿಸ್ತಿದ್ರೆ ಎಷ್ಟು ಕೇಳ್ತಿದ್ನೋ?

ಟೋ.ವಾಲಾ    : ಮೋಸ ಮಾಡ್ತೀರಾ? ಕಲಿಸ್ತೇನೆ ಬುದ್ದಿ………

(ಜನ ಸಂಮೋಹಿನಿಗೊಳಪಟ್ಟವರಂತೆ ನೋಡುವರು . ಕೊಳಲು ಊದುತ್ತಾ ಟೋಪಿವಾಲಾ, ಅವನನ್ನು ಹಿಂಬಾಲಿಸಿಕೊಂಡು ಮಕ್ಕಳು,

ಇಲಿಗಳು, ಹೋದ ಹಾದಿಯಲ್ಲಿ ರಂಗದಿಂದ ನಿರ್ಗಮನ. ಎಲ್ಲರೂ ಕಣ್ಮರೆಯಾದ ಬಳಿಕ ಜನರು ಸಹಜ ಸ್ಥಿತಿಗೆ ಮರಳುವರು )

ವ್ಯಕ್ತಿ ೧    : ನಮಗೆ ಈ ವರೆಗೆ ಏನಾಗಿತ್ತು?

ವ್ಯಕ್ತಿ ೨    : ನಾವೇಕೆ ಹೀಗೆ ಸುಮ್ಮನೇ ನಿಂತಿದ್ದೇವೆ.

ವ್ಯಕ್ತಿ ೩    : ಏನೋ ಗರಬಡಿದಂತಾಗಿತ್ತು.

ವ್ಯಕ್ತಿ ೪    : ಯಾರೋ ಮಾಟ ಮಾಡಿದಂಗಿತ್ತು.

ವ್ಯಕ್ತಿ ೫    : ಏನೋ ಕನಸು ಕಂಡ ಹಾಗಿತ್ತು.

ವ್ಯಕ್ತಿ ೬    : ಕನಸಲ್ಲ….ಇದು ನಿಜ. ನಮ್ಮ ಮಕ್ಕಳೊಂದೂ ಕಾಣಿಸ್ತಾ ಇಲ್ಲ.

ಎಲ್ಲರೂ      : ಅಯ್ಯೋ….ಈಗೇನು ಮಾಡೋದು? (ಗೌಡನ ಕಡೆಗೆ ತಿರುಗಿ) ಹೇ ಗೌಡ……!
ಹಣ ಇಲ್ಲಾ ನುಂಗಿ ಇಲ್ಲ ಅಂದಿಯಾ? ಒಳ್ಳೆ ಮಾತಿನಲ್ಲಿ ನಮ್ಮ ಮಕ್ಕಳನ್ನು ಬರುವ
ಹಾಗೆ ಮಾಡು. (ಹೊಡೆಯಲು ಹೋಗುವರು)

ಊ.ಗೌಡ     : ಅಯಯ್ಯೋ… ಹೊಡೀಬೇಡೀ ನಿಮ್ಮ ದಮ್ಮಯ್ಯಾ. ಇದರಲ್ಲಿ ನನ್ನ ತಪ್ಪೇನಿಲ್ಲ.
ನಿಜಕ್ಕೂ ನನ್ಕೈಲ್ಲೀಗ ಹಣ ಇಲ್ಲ.

ಜನರು      : ಕಂದಾಯದ ಹಣದಿಂದ ಹೆಂಡ್ತಿಗೆ ಒಡ್ವೆ ಮಾಡ್ಸಿದ್ದೀಯಾ?
ಎರಡನೇ ಹೆಂಡ್ತಿಗೆ ಜರತಾರಿ ಸೀರೆ ತೆಗ್ಸಿಕೊಟ್ಟಿದ್ದೀಯಾ?
ಮೂರನೇ ಹೆಂಡ್ತಿಗೆ ಕಿವಿಓಲೆ ಮಾಡ್ಸಿದ್ದೀಯಾ?
ಮಕ್ಳಿಗೆ ಹೊಸ ಬಟ್ಟೆ ತೆಗ್ಸಿ ಕೊಟ್ಟಿದ್ದೀಯಾ?

ಊ.ಗೌಡ     : ನನ್ನದು ತಪ್ಪಾಗಿದೆ. ಹಣ ಎಲ್ಲಾ ಮುಗಿದು ಹೋಗಿದೆ.

ಡೆ ಗೌಡ    : ಈ ಕೇಸು ಇಲ್ಲಿ ಇತ್ಯರ್ಥ ಆಗೋದಿಲ್ಲ. ರಾಜನಲ್ಲಿಗೆ ಜನತಾದರ್ಶನಕ್ಕೆ ಹೋಗುವಾ?

ಅ ಗೌಡ     : ರಾಜ ಗ್ರಾಮವಾಸ್ತವ್ಯಕ್ಕೆ ಹೋಗಿದ್ದರೆ?

ಜನರು      : (ಮೂವರ ಕೈಗಳನ್ನು ಹಿಡಿದುಕೊಂಡು) ಉಪ್ಪು ತಿಂದವರು ನೀರು ಕುಡಿಯಲೇ ಬೇಕು .
ಬನ್ನಿ ರಾಜನಲ್ಲಿಗೆ……..(ಎಳಕೊಂಡು ಹೋಗುವರು)

ದೃಶ್ಯ – ೭

(ಅರಮನೆ ಮಹಾದ್ವಾರ. ಮಹಾದ್ವಾರ ಬಳಿ ಇಬ್ಬರು ದ್ವಾರಪಾಲಕರು ಆಗಾಗ ನಿದ್ರೆಯಿಂದ ತೂಕಡಿಸುತ್ತಿರುವರು , ಜನರು ಗುಂಪು ಬರುವುದು. ದ್ವಾರಪಾಲಕರನ್ನು ನೋಡಿ ಸ್ತಬ್ದರಾಗಿ ನಿಲ್ಲುವರು)

ವ್ಯಕ್ತಿ ೧    : ಆ ದ್ವಾರದ ಬಳಿ ನಿಂತಿರುವವರನ್ನು ನೋಡು.

ವ್ಯಕ್ತಿ ೨    : ಮನುಷ್ಯರೋ……?…. ಮೂರ್ತಿಗಳೋ?

ಜನರು      : (ಬೊಬ್ಬೆ ಹಾಕುವರು) ಓ ಹೋಯ್. ತೂಕಡಿಸುತ್ತಿದಾರೆ….ಅವರು ಮನುಷ್ಯರೇ.

(ಇವರು ಗಲಾಟೆಗೆ ದ್ವಾರಪಾಲಕರು ಬೆಚ್ಚಿಬಿದ್ದು ನೋಡುವರು)

ದ್ವಾರಪಾಲಕ ೧   : ನಿಮ್ಗೆ ಬರೋದಿಕ್ಕೆ ಹೊತ್ತುಗೊತ್ತು ಇಲ್ವೇನ್ರೋ?

ದ್ವಾರಪಾಲಕ ೨   : ದಂಡಪಿಂಡಗಳು. ನೀವೂ ನಿದ್ದೆ ಮಾಡೋದಿಲ್ಲ,ನಮ್ಗೂ ಮಾಡೋದಿಕ್ಕೆ ಬಿಡೋದಿಲ್ಲ.

ಊ ಗೌದ           : ನಾನು ಊರಗೌಡ. ಮಹಾರಾಜರನ್ನು ಕೂಡಲೇ ಕಾಣಬೇಕಾಗಿದೆ.

ಡೇ ಗೌಡ          : ನಾನು ಡೇಪ್ಯೂಟಿಗೌಡ. ಇವರು ಹೇಳೋದು ಸರಿ

ಅ ಗೌಡ           : ನಾನು ಅಸಿಸ್ಟೆಂಟ್ ಗೌಡ. ಇವರಿಬ್ಬರೂ ಹೇಳೋದು ಸರಿ.

ದ್ವಾ ಪಾಲಕ ೧     : ರಾಜನನ್ನು ಭೇಟಿಯಾಗ್ಬೇಕಾದ್ರೆ ಅಪಾಯಿಂಟೆಂಟ್ ತೆಗೆದುಕೊಳ್ಳಬೇಕು.

ದ್ವ ಪಾಲಕ ೨     : ಇಲ್ಲದಿದ್ದರೆ ನಾಳೆ ಜನತಾದರ್ಶನಕ್ಕೆ ಬನ್ನಿ.

ಜನರು            : ಇದು ತುಂಬಾ ಅರ್ಜೆಂಟು. ನೀವು ಬಿಡದಿದ್ದರೆ ನಾವು ಒಳಗೆ ಹೋಗಬೇಕಾಗುತ್ತದೆ.

ದ್ವಾರಪಾಲಕರು    : ನಿಮ್ಮನ್ನು ಲಾಕಪ್ಪಿಗೆ ಹಾಕಿ, ಏರೋಪ್ಲೇನ್ ಹತ್ತಿಸ್ತೇವೆ.

ಜನರು            : ಹತ್ತಿಸಿನೋಡುವ (ದ್ವಾರಪಾಲಕರನ್ನು ಓಡಿಸುವರು)
(ಬೊಬ್ಬೆ ಕೇಳಿ ರಾಜನ ಆಗಮನ)

ರಾಜ             : ಏನದು ಬೊಬ್ಬೆ? ಆಗಿನಿಂದ ನೋಡ್ತಾನೆ ಇದ್ದೇನೆ.

ವ್ಯಕ್ತಿ ೧          : ನಮ್ಮೂರಿನ ಇಲಿಗಳ್ನೆಲ್ಲಾ ಕೊಂದ.

ವ್ಯಕ್ತಿ ೨          : ಗೌಡ್ರು ಅವನಿಗೆ ೧೦ ಸಾವಿರ ಕೊಡಲಿಲ್ಲ.

ವ್ಯಕ್ತಿ ೪          : ಅದಕ್ಕೆ ನಮ್ಮೆಲ್ಲರ ಮಕ್ಳನ್ನು ಕರಕೊಂಡು ಹೋದ.

ರಾಜ             : ಸಾಕು….ನಿಲ್ಸಿ……ನಿಲ್ಸಿ.ಏ ಗೌಡಾ. ಇಷ್ಟೆಲ್ಲಾ
ಆಗುವಾಗ ನೀನೀನು ಬಿಲ ತೋಡ್ತಾ ಇದ್ಯಾ? ಯಾಕೆ ಅವನಿಗೆ ೧೦ ಸಾವಿರ ಕೊಡಲಿಲ್ಲ?

ಊ ಗೌಡ           : ಇದ್ದ ಹಣವನ್ನು ಬರ ಪರಿಹಾರ ನಿಧಿಗೆ ಕಳಿಸಿದ್ದೆ ಸ್ವಾಮಿ.

ಜನರು            : ಇಲ್ಲ ಮಹಾರಾಜರೇ, ಈ ಗೌಡ ತಿಂದಾಕಿದ್ದಾನೆ. ಡೆಪ್ಯುಟಿ ಗೌಡ ತಿನ್ನೂದ್ರಲ್ಲಿ ತಿಮಿಂಗಿಲ.
ಅಸಿಸ್ಟಂಟ್ ಗೌಡ ನುಂಗೋದ್ರಲ್ಲಿ ಹೆಗ್ಗಣ.

ರಾಜ             : ಕಳ್ ನನ್ಮಕ್ಳೇ, ನಿಮ್ಮನ್ನೆಲ್ಲಾ ಗಲ್ಲಿಗೇರಿಸಿ ಬಿಡ್ತೇನೆ.

ಜನರು            : ಗಲ್ಲಿಗೇರಿಸಿದ್ರೆ ನಮ್ಮ ಮಕ್ಕು ಸಿಕ್ತಾರಾ ಸ್ವಾಮಿ?

ಒಬ್ಬ              : ಟೋಪಿವಾಲಾನಿಗೆ ೧೦ ಸಾವಿರ ಕೋಟ್ರೆ ಸಿಗ್ಬೋದು ಸ್ವಾಮಿ.

ರಾಜ             : ಹಾಂ….ನಿಂಗೆ ತಲೆ ಇದೆ.

ಇನ್ನುಬ್ಬ           : ತಲೆಯೊಳಗೆ ಮೆದುಳೂ ಇದೆ.

ರಾಜ             : ಯಾರಲ್ಲಿ…? ೧೦ ಸಾವಿರ ತೆಗೆದುಕೊಂಡು ಬನ್ನಿ, ನಾವೆಲ್ಲಾ
ನಿಮ್ಮ ಊರಿಗೇ ಬರುತ್ತೇವೆ

(ಟೊಪಿವಾಲಾನ ಹಾಡು ಕೇಳಿಬರುವುದು ರಾಜನ ಪ್ರವೇಶ ಹಿಂದಿನಿಂದ ಜನರು)

ಜನರು            : ಇದೇ ನದಿಯಲ್ಲಿ ಸ್ವಾಮೀ ಇಲಿಗಳು ಕೊಚ್ಚಿಕೊಂಡು ಹೋದದ್ದು.
ಇದೇ ನದಿಯಲ್ಲಿ ಸ್ವಾಮಿ ನಮ್ಮ ಮಕ್ಕಳು ಕಾಣೆಯಾದದ್ದು.ಇದೇ ನದಿಗೆ ಸ್ವಾಮಿ ಟೊಪಿವಾಲಾ ಧುಮುಕಿದ್ದು.

ಊ. ಗೌಡ           : ನದಿ ಇರೋದೇ ಈ ಎಲ್ಲಾ ಸಮಸ್ಯೆಗೆ ಕಾರಣ ಸ್ವಾಮಿ.

ರಾಜ             : ಮುಚ್ಚು ಬಾಯಿ. ಹಣ ನುಂಗಿದವರು ಹೇಳೋದು ಹೀಗೇನೇ .
ಈಗ ನಾವು ಏನು ಮಾಡಬಹುದು?

ಒಬ್ಬ              : ಅವನು ಬರುವಾಗ ಹಾಡು ಕೇಳಿಸುತ್ತಿತ್ತು.

ಇನ್ನೊಬ್ಬ           : ಹಾಡಿಗೆ ಅವನು ಕುಣಿದುಕೋಂಡು ಬರುತ್ತಾನೆ.
ಆ ಹಾಡುನ್ನು ನಾವೂ ಹಾಡಿ ನೋಡೋಣ .

(ಹಿನ್ನಲೆಯಲ್ಲಿ: ಕಿನ್ನರಿ ನುಡಿಸೋನ….. ಎಲ್ಲೋ ಜೋಗಪ್ಪ……)
(ಟೋಪಿವಾಲಾನ ಪ್ರವೇಶ: ಹಾಡು : ಬಂದ…..ಬಂದ)

ರಾಜ             : ಟೋಪಿವಾಲಾನ, ಈ ಗೌಡನಿಂದ ನಿಂಗೆ ಅನ್ಯಾಯವಾಗಿದೆ. ನಿನಗೆ ಕೊಡ್ಬೇಕಾಗಿದ್ದ ೧೦ ಸಾವಿರ
ಇಗೋ ಇಲ್ಲಿದೆ. ಮಕ್ಕಳ್ನು ವಾಪಾಸು ಕೊಟ್ಟುಬಿಡು.

ಟೊ.ವಾಲಾ         : ನನಗೆ ಹಣಬೇಡ ಸ್ವಾಮೀ. ಊರನ್ನು ಆಳುವವರು ಹೇಗಿರಬೇಕೆಂದು ತೋರಿಸಿಕೊಡೋದೇ  ನನ್ನ ಉದ್ದೇಶ.
ನಿಮ್ಮ ಅಧಿಕಾರಿಗಳ ಬಣ್ಣ ಬಯಲಾಯಿತು.

ಊ. ಗೌಡ          : ನನ್ನದು ಸರ್ವಾಪರಾಧವಾಯ್ತು. ನನ್ನನ್ನು ಕ್ಷಮಿಸಬೇಕು

ಡೆ. ಗೌಡ         : ನಾನು ತಪ್ಪು ಮಾಡಿದ್ದೇನೆ. ಇನ್ನು ಮುಂದೆ ತಿದ್ದಿಕೊಳ್ಳುತ್ತೆನೆ.

ಅ. ಗೌಡ          : ನನ್ನ ತಪ್ಪು ನನಗೆ ಗೊತ್ತಾಗಿದೆ. ಜನರ ಹಣವನ್ನು ನಾನಿನ್ನು ಮುಟ್ಟುವುದೇ ಇಲ್ಲ.

ಟೊ.ವಾಲಾ         : ಪಶ್ಚಾತ್ತಾಪಕ್ಕಿಂತ ದೊಡ್ಡ ಶಿಕ್ಷೆ ಇಲ್ಲ. ಮಕ್ಳು ಇಲ್ಲೇ ಇದ್ದಾರೆ. (ಸಭೆಯಿಂದ ನೋಡಿ)
ಬನ್ನಿ ಮಕ್ಕಳೇ.
(ಮಕ್ಳು ಸಭೆಯಿಂದ ಎದ್ದು ಬರುವರು. ಎಲ್ಲರೂ ಒಟ್ಟಿಗೆ ಕುಣಿಯುವರು.
ಹಿನ್ನಲೆಯಲ್ಲೆ: ಎಲ್ಲೋ ಜೋಗಪ್ಪ….. ಹಾಡು ನಿಧಾನವಾಗಿ ನಿಲ್ಲುತ್ತಿರುವಂತೆ ರಂಗವನ್ನು ಕತ್ತಲೆ
ಆವರಿಸಿಕೊಳ್ಳುತ್ತದೆ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತರಂಗದ ಅಕ್ಷರಮಾಲೆ
Next post ದೀಪದ ಕಂಬ – ೫ (ಜೀವನ ಚಿತ್ರ)

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys