ತಾಳಲಾರೆ ತಗಣಿಕಾಟವಾ ಶಿವಹರನು ಬಲ್ಲ
ತಾಳಲಾರೆ ತಗಣಿಕಾಟವಾ ||ಪ||

ತಾಳಲಾರೆ ತಗಣಿಕಾಟಾ
ಘನಘೋರ ಇದರಾರ‍್ಭಾಟ
ಮಾಳಗಿ ಮನಿಯ ಜಂತಿ ಸೇರಿ
ಗೋಳುಮಾಡಿ ಬಿಟ್ಟವಣ್ಣಾ ||ಅ.ಪ.||

ಮೈಯ ಮೇಲೆ ಬಿದ್ದರ ತಿಂಡಿ
ಹಚ್ಚಿದಂತೆ ಪುಂಡಿ
ಮಾಯದೇಹ ರಕ್ತದ ಉಂಡಿ
ಗಾಯ ಮಾಯವು ಕೆರೆದು ಹುರುಕು
ನಾಯಿಯಾದೆ ರಾತ್ರಿಯನ್ನು
ನಾ ಎನಿತೀ ದಿವಸ ಕಳೆವೆ
ಬಾಯಿಬಿಟ್ಟು ಬಳಲುತಿರುವೆ ||೧||

ಮೋಜಿನ ಮಾತು ಕೌತುಕವಾಯಿತು
ಜ್ಞಾನಕ್ಕೇನು ಗೊತ್ತು
ರಾಜಿಸುತಿಹ ರಾಜನ ಗತ್ತು
ರಾಜಯೋಗಿ ಶಿಶುನಾಳೇಶನ
ತೇಜಿಸುತಿಹ ಸದರಿನೆಡೆಗೆ
ನೀ ಜವದೊಳು ಬಂದು ಕೆಟ್ಟಿ
ಮಾಜು ನಿನ್ನ ದುರ್ಗುಣವನು ||೨||