ಬಸವೇಶ್ವರನ ಒಂದು ಪಾದವ ರುದ್ರ ಪಿಡಿದನು
ಬಸವೇಶ್ವರನ ಒಂದು ಪಾದವ ವಿಷ್ಣು ಪಿಡಿದನು
ಬಸವೇಶ್ವರನ ಒಂದು ಪಾದವ ತೆತ್ತೀಸಕೋಟಿ ದೇವತೆಗಳು ಪಿಡಿದರು
ಬಸವೇಶ್ವರನೇ ಸಕಲ ಜಗವನು ನಾಲ್ಕುಯುಗದಿ ಸಲಹುವನು
ನಂದಿ ಜಯ ಜಯ ಎನುತಲಿಪ್ಪರು
ಗಂಗಾ ಪಾರ್ವತಾದೇವಿಯರು ಬಸವೇಶ್ವರನ ವಶಿಕರು
ಬಸವೇಶ್ವರನ ಒಂದು ಪಾದ ಮಂದರಗಿರಿ ಪರ್ವತದ ತುದಿಯ ಮೇಲೆ
ಬಸವೇಶ್ವರನ ಒಂದು ಪಾದ ಲಂಕಾದ್ರಿ ಪರ್ವತದ ಶಿಖರದ ಮೇಲೆ
ಬಸವೇಶ್ವರನ ಒಂದು ಪಾದ ಸಿಂಹಳದ್ವೀಪದ ಗಡ್ಡೆಯ ಮೇಲೆ
ಬಸವೇಶ್ವರನ ಒಂದು ಪಾದ ಜಂಬುದ್ವೀಪದ ಗಡ್ಡೆಯ ಮೇಲೆ
ಬಸವೇಶ್ವರನ ನಾಲ್ಕು ಪಾದಗಳ ಮೇಲೆ ನಾಲ್ಕು ವೇದಗಳು ಹುಟ್ಟಿದವು
ಅದು ಎಂತೆಂದೊಡೆ, ಯಜುರ್ವೇದ, ಋಗ್ವೇದ, ಸಾಮವೇದ,
ಅಥರ್ವಣವೇದ
ಈ ನಾಲ್ಕು ವೇದಗಳು ಸ್ವರ್ಗ ಮರ್ತ್ಯ ಪಾತಾಳದೊಳಗೆ ಇದ್ದ ವೇದಗಳಾ
ವಿಷ್ಣು ತಂದು ಬ್ರಹ್ಮನಿಗೆ ಕೊಟ್ಟನು
ಬ್ರಹ್ಮನು ತಂದು ಸರಸ್ವತಿಗೆ ಕೊಟ್ಟನು
ಸರಸ್ವತಿಯು ತಂದು ವಿಘ್ನೇಶ್ವರನಿಗೆ ಕೊಟ್ಟಳು
ವಿಘ್ನೇಶ್ವರನು ತಂದು ರೇವಣಸಿದ್ದೇಶ್ವರನಿಗೆ ಕೊಟ್ಟನು
ರೇವಣ್ಡಸಿದ್ದೇಶ್ವರನು ತಂದು ಎನಗೆ ಕೊಟ್ಟನು
ನಾ ಮುಟ್ಟಿ ಹವಲಿಕ್ಕಿದೆ.
ಎಂಟು ದಿಕ್ಕಿಗೆ ಎಂಟು ಜನ ದುರ್ಗಿಯರ ಕಾವಲವು
ಎಂಟು ದಿಕ್ಕಿಗೆ ಎಂಟು ಮಧುಕರಿಯ ಕಾವಲವು
ಎಂಟು ದಿಕ್ಕಿಗೆ ಎಂಟು ಶಾರ್ದೂಲ ಕಾವಲವು
ನಡುವೆ ಸರ್ಪನ ಕಾವಲವು
ಮೂರುದಿನಕ್ಕೆ ಹುಟ್ಟಿದ ಗೋಲದೇವತೆಯ ಕಾವಲವು
ಆ ಗೋಲದೇವತೆಗೆ ನಳನ ಕಾವಲವು
ಆ ನಳನಿಗೆ ಈಶಾನ್ಯನ ಕಾವಲವು
ಆ ಈಶಾನ್ಯನಿಗೆ ಇಂದ್ರನ ಕಾವಲವು
ಆ ಇಂದ್ರನಿಗೆ ಅಗ್ನಿಯ ಕಾವಲವು
ಆ ಆಗ್ನಿಗೆ ಯಮನ ಕಾವಲವು
ಆ ಯಮನಿಗೆ ನೈರುತ್ಯನ ಕಾವಲವು
ಆ ನೈರುತ್ಯನಿಗೆ ವರುಣನ ಕಾವಲವು
ಆ ವರುಣನಿಗೆ ಧನಪನ ಕಾವಲವು
ಆ ಧನಪನಿಗೆ ತೆಂಕನ ದಿಕ್ಕಿನ ಲಂಕೆಯ ಹನುಮಂತನ ಕಾವಲವು
ಆ ಲಂಕೆಯ ಹನುಮಂತನಿಗೆ ಪೂರ್ವಭಾಗದ ಕಾಲೇಶನ ಕಾವಲವು
ಆ ಕಾಲೇಶನಿಗ ಮೋಕ್ಷ ಬ್ರಹ್ಮನ ಕಾವಲವು
ಆ ಮೋಕ್ಷ ಬ್ರಹ್ಮನಿಗೆ ಸರಸ್ವತಿಯ ಕಾವಲವು
ಆ ಸರಸ್ವತಿಗೆ ವೀರಭದ್ರನ ಕಾವಲವು
ಆ ವೀರಭದ್ರನಿಗೆ ಕಾಲಿಕಾದೇವಿಯ ಕಾವಲವು
ಆ ಕಾಲಿಕಾದೇವಿಗೆ ಪಾರ್ವತಿಯ ಕಾವಲವು
ಆ ಪಾರ್ವತಿಗೆ ಕೈಯೊಳಗೆ ಪಿಡಿದಿರ್ದ ತ್ರಿಶೂಲವೇ ಕಾವಲವು
ಆ ತ್ರಿಶೂಲಂಗೆ ಕೆಂಚೆಡೆಯ ಪರಮೇಶ್ವರನ ಕಾವಲವು
ಆ ಕೆಂಚೆಡೆಯ ಪರಮೇಶ್ವರನಿಗೆ ಏಕಮುಖದವರ ಕಾವಲವು
ಆ ಏಕಮುಖದವರಿಗೆ ದ್ವಿಮುಖದವರ ಕಾವಲವು
ಆ ದ್ವಿಮುಖದವರಿಗೆ ತ್ರಿಮುಖದವರ ಕಾವಲವು
ಆ ತ್ರಿಮುಖದವರಿಗೆ ಚತುರ್ಮುಖದವರ ಕಾವಲವು
ಆ ಚತುರ್ಮುಖದವರಿಗೆ ಪಂಚಮುಖದವರ ಕಾವಲವು
ಆ ಪಂಚಮುಖದವರಿಗೆ ಷಣ್ಮುಖದವರ ಕಾವಲವು
ಆ ಷಣ್ಮುಖದವರಿಗೆ ಸಪ್ತಮುಖದವರ ಕಾವಲವು
ಆ ಸಪ್ತಮುಖದವರಿಗೆ ಅಷ್ಟಮುಖದವರ ಕಾವಲವು
ಆ ಆಷ್ಟಮುಖದವರಿಗೆ ನವಮುಖದವರ ಕಾವಲವು
ಆ ನವಮುಖದವರಿಗೆ ದಶಮುಖದವರ ಕಾವಲವು
ಆ ದಶಮುಖದವರಿಗೆ ಏಕಮುಖದವರ ಕಾವಲವು
ಇಂತು ಕಾವಲವ ಕಟ್ಟಿ ಮೂರುಸಾರೆ ವಿಭೂತಿಯ ಮಂತ್ರಿಸಿ
ಫಣಿಯಲ್ಲಿ ಧರಿಸಿಕೊಂಡು ಜಗದ ಮುಂದೆ ಹೋಗಲು
ರಾಜ್ಕವಶ ಜನವಶ ಮುಖವಶವಾಗುವದು
ಇಂತು ಅರವತ್ತಾರು ಕೋಟಿ ಭೂತ ಪ್ರೇತ ಪಿಶಾಚಿಗಳು
ಶಿಶುನಾಳಧೀಶನ ಕರುಣದಿಂದ ಬಿಟ್ಟು ಹೋಗುವವು
ಗುರುನಾಥ ಗೋವಿಂದನ ಪಾದಸಾಕ್ಷಿ
ಓಂ ಶಾಂತಿ ಶಾಂತಿ ಶಾಂತಿ|
*****