ದಿನದಿನಕ್ಕೂ ಹೆಮ್ಮರವಾಗಿ
ಬೆಳೆಯುತ್ತಿರುವ ನೋವುಗಳು,
ಗೋಜಲುಗೋಜಲಾಗಿ
ಸ್ಪಷ್ಟತೆಯಿಲ್ಲದೆ ತಡಕಾಡುವ
ಸಾವಿರಾರು ಸಮಸ್ಯೆಗಳು,
ಜರ್ಜರಿತವಾಗಿ ಹತಾಶವಾಗಿರುವ
ಸುಂದರ ಕನಸುಗಳು,
ಅರಳಿ ಘಮಘಮಿಸಿ
ನಳನಳಿಸಲಾಗದೇ
ಬತ್ತಿ ಹೋಗುತ್ತಿರುವ
ಮೊಗ್ಗು ಮಲ್ಲಿಗೆಗಳು,
ಹರಡಿ ಹ೦ದರವಾಗಿ
ಹಸಿರುಟ್ಟು ನಲಿದು
ತಂಪನೀಯಲಾಗದೇ
ಕಪ್ಪಿಟ್ಟ ಬಳ್ಳಿಗಳು,
ಎಲ್ಲೆಡೆಗೂ ಅಸಹಾಯಕತೆ
ನೋವಿನ ಆರ್ತನಾದ
ಧ್ವನಿ – ಪ್ರತಿಧ್ವನಿಗಳ
ಕಿವಿಗಡಚಿಕ್ಕುವ ಶಬ್ದಗಳು,
ನಡೆಯಲಾಗದಿದ್ದರೂ
ತೆವಳುವ ಹಠ ತೊಟ್ಟ
ಅಲೆದಲೆದು ಸೋತಿರುವ,
ದಣದ ಕಾಲುಗಳಿಗೆ
ಗುರಿ ಸೇರುವ ತವಕ.
ಏನಾದರೂ ಮಾಡಲೇಬೇಕು
ಹೇಗಾದರೂ ಸಾಧಿಸಲೇಬೇಕು,
ಧಗಧಗನೇ ಉರಿಯುತ್ತಿರುವ
ತಂಪು ಕಾಣದೇ
ಬಾಯ್ಬಿರಿದು ನಿಂತ ಧರೆಗೆ
ತಂಪು ಮಳೆಯಾಗಿ
ಕಂಪ ಸೂಸುವ ಆಸೆಯೆನಗೆ,
ಬಾಯ್ಬಿರಿದು ಧರೆಯಲ್ಲಿ
ಇಂಗಿಹೋಗುವ ಸೀತೆಯಾಗದೇ
ಮಳೆಯಾಗಿ – ಹಸಿರಾಗಿ
ಧರೆಯ ಮೇಲೆಯೇ
ಇರುವ ಆಸೆಯೆನಗೆ.
*****