ತನ್ನ ನಡೆನುಡಿ ಪರಮಸತ್ಯ ಎಂದೇ ನಲ್ಲೆ
ಆಣೆಯಿಡುವಳು, ಸುಳ್ಳು ! ಆದರೂ ನಂಬುವೆನು ;
ಲೋಕ ಬೇಡುವ ಸುಳ್ಳು ಸೂಕ್ಷ್ಮ ಅರಿಯದ ಬೆಳ್ಳ,
ಕಲಿಯದವ ಎಂದು ತಿಳಿಯಲಿ ಎಂದು ನಟಿಸುವೆನು.
ಪ್ರಾಯ ಆರಿರುವೆ, ಅವಳದನು ಅರಿತಿದ್ದರೂ
ತರುಣನೆಂದೇ ನನ್ನ ತಿಳಿಯಲೆಂಬಾಸೆಗೆ,
ಅವಳ ಹುಸಿನಾಲಗೆಯ ಮನ್ನಿಸಿರುವೆನು ನಾನು
ಅಡಗಿಸಿರುವೆವು ನಿಜವ ಹೀಗೆ ಎರಡೂ ಕಡೆಗೆ.
ತನ್ನದನ್ಯಾಯ ಎಂದೇಕವಳು ತಿಳಿಸಳು,
ಮುದುಕ ನಾ ಎನ್ನುವುದ ನಾನೇಕೆ ತಿಳಿಸೆನು,
ನಂಬಿಕೆಯ ನಟಿಸುವುದು ಪ್ರೇಮದಭ್ಯಾಸವೇ ?
ಪ್ರೀತಿಯೊಳು ಪ್ರಾಯ ಒಲ್ಲದು ವಯಸ್ಸಿನರಿವನ್ನು
ನಾನು ಅವಳಿಗೆ, ಅವಳು ನನಗೆ ಸುಳ್ಳಾಡುವೆವು,
ಸುಳ್ಳಾಡಿ ನಮಗೆ ನಾವೇ ಒಳಗೆ ಉಬ್ಬುವೆವು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 138
When my love swears that she is made of truth