ಯಾರು ಹೇಳಿದರು
ಜಾಗತೀಕರಣದಿಂದ ಅಳಿಯಿತು ಕನ್ನಡ?
ಅಂತರ್ ಜಾಲದಲ್ಲಿ ಕನ್ನಡ ಲಿಪಿ ಸೇರಿ
ಜಗದಗಲ ಪಸರಿಸಿದೆ ಕನ್ನಡ.

ಅಭಿಮಾನಿಯ ಹೊಸಿಲೊಳಗೆ
ಮಾತೃಭಾಷೆಯ ಕೊಲೆ?! ಇಲ್ಲ ಸಾಧ್ಯವಿಲ್ಲ.
ನಿರಭಿಮಾನಿಯ ಮನೆಯಲ್ಲಿ
ಅಳಿಯುತ್ತಿದೆ ಕನ್ನಡ!

ಪಾಶ್ಚಾತ್ಯೀಕರಣದ ಹುಚ್ಚು,
ಆಧುನೀಕರಣದ ಭ್ರಮೆ ಕಾಡಿದಾಗ
ಬೆಳೆದ ನಿರಭಿಮಾನ
ಕೊಲ್ಲುತ್ತಿದೆ ಕನ್ನಡ

ಕನ್ನಡಿಗರ ಅಭಿಮಾನ ಶೂನ್ಯತೆ
ಅಳಿಸಿ ಹಾಕುತ್ತಿದೆ ಕನ್ನಡ.
ನಮ್ಮದೆನ್ನುವುದನ್ನು ಪ್ರೀತಿಸಲಾರದವರಲ್ಲಿ
ಮರೆಯಾಗುತ್ತಿದೆ ಕನ್ನಡ.

ನಮ್ಮ ನೆಲ, ನಮ್ಮ ಭಾಷೆ, ನಮ್ಮ ಸಂಸ್ಕೃತಿ
ಎನ್ನುವ ಅಭಿಮಾನವಿದ್ದಲ್ಲಿ
ಎಂದೆಂದೂ ಅಮರ ನಮ್ಮ ಕನ್ನಡ.
ಜಾಗತೀಕರಣದಿಂದ ಅಳಿಯಲಿಲ್ಲ ಕನ್ನಡ
ನಿರಭಿಮಾನದಿಂದ ಅಳಿಯುತ್ತಿದೆ ಕನ್ನಡ!
*****