ಕಲ್ಲು ಹಿತ್ತಾಳೆ ನೆಲ ಕೊನೆಯಿರದ ಕಡಲ ಜಲ
ಎಲ್ಲದರ ಬಲ ಮೀರಿ ಆಳುತ್ತಿರಲು ಸಾವು
ಹೂವಿಗೂ ಹೆಚ್ಚು ಕೋಮಲವೆನ್ನಿಸುವ ವಿರಳ
ಚೆಲುವು ತಡೆದೀತೇನು ಅದರ ಆಕ್ರೋಶವನು ?
ದುರ್ಭೇದ್ಯ ಶಿಲೆಗೆ, ಉಕ್ಕಿನ ದ್ವಾರಗಳ ಧೃತಿಗೆ
ಕಾಲ ಮಣಿಯುವ ಬದಲು ಅವುಗಳೇ ಸಮೆದಿರಲು,
ಅವಶೇಷಭರಿತ ಕಾಲದ ಬಡಿಗೆಯೇಟಿಗೆ
ಬೇಸಿಗೆ ವಸಂತಸಿರಿ ಹೇಗೆ ಎದೆಯೊಡ್ಡುವುದು ?
ಎಂಥ ಭೀಕರ ಚಿಂತೆ, ಅಯ್ಯೋ ಬಟ್ಚಿಡಲೆಲ್ಲಿ
ಕಾಲ ಸಂಪುಟದಿಂದ ಮಣಿ ರತ್ನ ಪದಕವನು ?
ಅವನ ಮಿಂಚಿನ ಹೆಜ್ಜೆ ಹಿಂದೆಳೆವ ಕೈಯೆಲ್ಲಿ ?
ಚೆಲುವಿನೀ ಸುಲಿಗೆ ತಡೆಯುವ ಧೀರ ಯಾರವನು ?
ಇಲ್ಲ ಯಾರೂ ಇದು ಪವಾಡವೊಂದಕೆ ಸಾಧ್ಯ,
ಕಪ್ಪು ಮಸಿಯೊಳು ಜ್ವಲಿಸಬಹುದು ಒಲವಿದು ನಿತ್ಯ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 65
Since brass nor stone, nor earth, nor boundless sea