ಉತ್ತರಣ – ೧೧

ಉತ್ತರಣ – ೧೧

ಅಚಲ ಕೆಲಸಕ್ಕೆ ಸೇರಿದ

ಈ ಎಲ್ಲಾ ಗಲಾಟೆಗಳ ನಡುವೆಯೇ ಅಚಲ ವಾಯುದಳಕ್ಕೆ ಸೇರಿದ್ದು. ಅವನು ತರಬೇತಿಗಾಗಿ ಡುಂಡಿಗಲ್‌ಗೆ ಹೊರಟು ನಿಂತಾಗ ಯಾರೂ ಪ್ರತಿ ಭಟಿಸಲಿಲ್ಲ. ಸುಶೀಲಮ್ಮ ಬಾಯಿ ಬಿಡದಿದ್ದರೂ ಮೌನವಾಗಿ ರೋಧಿಸಿದ್ದರು. ತರಬೇತಿ ಮುಗಿಯಲು ಒಂದೂವರೆ ವರುಷದ ಸಮಯವಿದೆ ಎನ್ನುವ ಯೋಚನೆ ಎಲ್ಲರಿಗೂ ಸಮಾಧಾನ ತಂದಿತ್ತು. ಅಚಲ ಹೋಗುವಾಗ ಪೂರ್ಣಿಮಾ ಶ್ರೀಕಾಂತರೂ ಬಂದಿದ್ದರು.

ತಾಯಿಯ ಅಳುಮುಖ ನೋಡಿದ ಅಚಲ; “ಅಮ್ಮಾ, ನೀವೊಂದು ಅಳುಬುರುಕಿಯೇ ಆಗಿ ಹೋದಿರಲ್ಲ? ನನ್ನ ಅಮ್ಮ ಹೀಗಲ್ಲ ಇರುವುದು. ನಗು. ನಗುತ್ತಾ ಕಳುಹಿಸಿಕೊಡಬೇಕು ನಾನಿನ್ನು ನಿಮ್ಮ ಮಗ ಮಾತ್ರವಲ್ಲ, ಈ ದೇಶಕ್ಕೂ ಮಗ. ನನ್ನಿಂದ ಇಬ್ಬರೂ ತಾಯಂದಿರಿಗೂ ಅಪಚಾರವಾಗಬಾರದು. ನೀವೂ ನಗಬೇಕು, ಆ ತಾಯಿಗೆ ನಾನು ಮಾಡಬೇಕಾಗಿರುವ ಕರ್ತವ್ಯವನ್ನೂ ನಾನೂ ಪೂರೈಸಬೇಕಲ್ಲ? ನೀವು ನಗುತ್ತಾ ಕಳುಹಿಸಿದರೆ ಮಾತ್ರ ಅದು ಸಾಧ್ಯ. ಇಲ್ಲದಿದ್ದರೆ ನನ್ನ ಮನಸ್ಸೆಲ್ಲಾ ಈ ಅಳುವ ತಾಯಿಯ ಕಡೆಗೆಳೆಯುತ್ತದೆ. ನಾನು ಕರ್ತವ್ಯಚ್ಯುತನಾಗುತ್ತೇನೆ.”

ರಾಮಕೃಷ್ಣಯ್ಯನವರು ಮಗನ ಈ ಮಾತು ಕೇಳಿ ಅವನು ಬೆಳೆದ ಎತ್ತರ ಅರ್ಥೈಸಿಕೊಂಡು ತುಂಬಿ ಬಂದ ಕಣ್ಣನ್ನು ಮುಚ್ಚಿಕೊಂಡೇ ಮಗನನ್ನು ಬೀಳ್ಕೊಡುತ್ತಾರೆ. ಅನುರಾಧಳ ಕಣ್ಣ ಮುಂದೆ ನಿಂತಿರುವ ಅಚಲ ಸಂಪೂರ್ಣ ಮರೆಯಾಗಿದ್ದ. ಸುಶೀಲಮ್ಮ ಅಚಲನನ್ನು ಚಿಕ್ಕ ಮಗುವನ್ನು ತಬ್ಬುವಂತೆ ತಬ್ಬಿಕೊಂಡೇ ಬೀಳ್ಕೊಟ್ಟಿದ್ದರು. ಪೂರ್ಣಿಮಾ ನಿರ್ವಿಕಾರಳಾಗಿ ವಿದಾಯ ಹೇಳಿದ್ದಳು. ನಿರುಪಮ ಚಿಕ್ಕ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಳು.

ಅಚಲ ಆಚೆ ಹೋಗುತ್ತಲೇ ಶಂಕರನೂ ಡಿಲ್ಲಿಗೆ ಹೊರಟುನಿಂತ. ಮತ್ತೆ ಯಾರ ಜೊತೆಗೆ ಹೋಗುವುದೆಂದು ಅನುರಾಧಳೂ ಮಗುವಿನೊಡನೆ ಹೊರಟಿದ್ದಳು. ಜತೆಗೆ ಕೆಲಸಕ್ಕೆ ಒಬ್ಬಾಕೆ ಹೆಂಗಸು ಸಿಕ್ಕಿದ್ದುದರಿಂದ ಸುಶೀಲಮ್ಮನ ಯೋಚನೆ ಸ್ವಲ್ಪ ಕಡಿಮೆಯಾಗಿತ್ತು. ಎಷ್ಟಾದರೂ ಕೊಟ್ಟ ಹೆಣ್ಣು. ಎಷ್ಟು ದಿನವೆಂದು ತಾಯಿಯ ಮನೆಯಲ್ಲಿ ನಿಲ್ಲಲು ಸಾಧ್ಯ? ಆದರೂ ಅನುರಾಧ ಹೊರಟಾಗ ಸುಶೀಲಮ್ಮನಿಗೆ ಎಲ್ಲರಿಂದಲೂ ದೂರವಾದ ಅನುಭವ. ಎಲ್ಲಾ ಇದ್ದೂ ಕೈಗೆಟಕದೇ ಸೋಲುತ್ತಿರುವ ಭಾವನೆಯಿಂದ ಸುಶೀಲಮ್ಮ ಜರ್ಜರಿತರಾದರು. ಯಾವುದರಲ್ಲೂ ಉತ್ಸಾಹವಿಲ್ಲದಂತಾದರು. ಎಲ್ಲಾ ನೀರ ಮೇಲಣ ಗುಳ್ಳೆಯಂತೆ ಎಂದು ಎಣಿಸಿ ಎಣಿಸಿ ಹೆದರಿಕೆಗೊಳಗಾದರು.

ಪೂರ್ಣಿಮಾ ಶ್ರೀಕಾಂತ ಅಮೇರಿಕಕ್ಕೆ ಹೋಗಿ ಹಿಂದೆ ಬರುವ ತನಕವೂ ಟ್ರಾನ್ಸ್‌ಫರ್ ತೆಗೆದುಕೊಳ್ಳುವುದು ಬೇಡವೆಂಬ ನಿರ್ಧಾರಕ್ಕೆ ಬಂದಿದ್ದುದರಿಂದ ಅವಳು ಮನೆಯಲ್ಲೇ ಉಳಿದಳು. ಶ್ರೀಕಾಂತ ರಜೆಮುಗಿಸಿ ಹೈದರಾಬಾದಿಗೆ ಹೊರಟ.

ಎಲ್ಲರೂ ಹೊರಟುಹೋದ ಮೇಲೆ ಮನೆಯಲ್ಲಿ ಸ್ಮಶಾನ ಮೌನ! ಮಾತನಾಡುವುದಾದರೂ ಯಾರು? ಇರುವವರು ತಂದೆ ತಾಯಿ; ಇಬ್ಬರು ಹೆಣ್ಣು ಮಕ್ಕಳು. ಪೂರ್ಣಿಮಾ ಮೊದಲೇ ಮೌನಿ, ನಿರುಪಮಾ ಅಚಲನಿರುವಾಗ ಅವನೊಡನೆ ಚರ್ಚಿಸಿ, ಜಗಳಾಡಿ, ನಕ್ಕು ನಲಿದು ಗಲಾಟೆ ಎಬ್ಬಿಸುತ್ತಿದ್ದಳು. ಈಗ ಅವಳಿಗೂ ಜತೆಯಿಲ್ಲ. ಅಚಲನ ನಿರ್‍ಗಮನ ಅವಳ ಉತ್ಸಾಹಕ್ಕೂ ತಣ್ಣೀರೆರಚಿತ್ತು. ಅವಳೂ ಮೌನದ ಮೊರೆ ಹೊಕ್ಕಿದ್ದಳು. ಪ್ರೇರಣಾ ಬಂದಾಗಲೂ ಮೊದಲಿನಂತೆ ಮಾತಾಡಲು ಇಬ್ಬರಿಗೂ ಆಗುತ್ತಿರಲಿಲ್ಲ. ಯಾವಾಗಲೂ ತಮ್ಮೊಡನೆ ಇರುತ್ತಿದ್ದ ಅಚಲನ ನೆನಪು ಅಲ್ಲೂ ಇಣುಕುತ್ತಿತ್ತು. ಅಚಲ ಹೆಚ್ಚಾಗಿ ಅವರ ಮಾತುಕತೆಯಲ್ಲಿ ಬೆರೆಯುತ್ತಿದ್ದ. ಇಬ್ಬರು ಗೆಳೆತಿಯರನ್ನೂ ರೇಗಿಸಿ ನಗಿಸುತ್ತಿದ್ದ. ಹೋಗುವಾಗ ನಗುವ ಉತ್ಸಾಹವನ್ನೂ ಅವನು ಅವನೊಡನೇ ತೆಗೆದುಕೊಂಡು ಹೋಗಿದ್ದಾನೋ ಎನ್ನುವ ಹಾಗೆ ಆಗಿತ್ತು ಎಲ್ಲರಿಗೂ.

ಈ ಮೌನದಿಂದ ವಿಪರೀತ ಕಂಗೆಟ್ಟವರು ರಾಮಕೃಷ್ಣಯ್ಯನವರು ಹಾಗೂ ಸುಶೀಲಮ್ಮ. ಮೊನ್ನೆ ಮೊನ್ನೆ ತುಂಬಿದ್ದ ಮನೆ ಹೇಗೆ ಖಾಲಿಯಾಯಿತು! ಅದೂ ಪೂರ್ಣಿಮಾ ಹೆಚ್ಚೆಂದರೆ ಇನ್ನೊಂದೆರಡು ವರುಷ ಇಲ್ಲಿರುತ್ತಾಳೆ. ಶ್ರೀಕಾಂತ ಅಮೇರಿಕಾದಿಂದ ಬಂದ ಕೂಡಲೇ ಅವಳೂ ಹೋಗುತ್ತಾಳೆ. ಆಮೇಲೆ ನಿರುಪಮಾಳೊಬ್ಬಳೇ, ಅದೂ ಈ ವರುಷ ಅವಳ ಡಿಗ್ರಿಯೂ ಮುಗಿಯುತ್ತದೆ. ಆಮೇಲೆ ಅವಳ ಭವಿಷ್ಯವೇನೋ? ಒಟ್ಟು ಮಕ್ಕಳು ಬೆಳೆಯುವವರೆಗೆ ನಮ್ಮವರು. ಆಮೇಲೆ? ಯಾರಿಗೆ ಯಾರುಂಟು ಎರವಿನ ಸಂಸಾರ ಎನ್ನುವ ಪುರಂದರ ದಾಸರ ಹಾಡನ್ನು ಇಬ್ಬರೂ ಸಾವಿರ ಬಾರಿ ನೆನೆಸಿಕೊಳ್ಳುತ್ತಿದ್ದರು. ಹಲವು ವರುಷದ ಹಿಂದೆ ಹಾಡಿದ ಹಾಡಾದರೂ ಅದರೊಳಗಿನ ಸತ್ಯ, ಚಿರನೂತನ. ಎಂದೆಂದಿಗೂ ಅದು ನಿಜವೇ ಎಂದುಕೊಳ್ಳುತ್ತಿದ್ದರು.

ಜೀವನ ಯಾಂತ್ರಿಕವಾಗುತ್ತದೆ. ಯಾರಲ್ಲೂ ಉತ್ಸಾಹವಿಲ್ಲ, ನಲಿವಿಲ್ಲ, ನಗುವಿಲ್ಲ. ಅನುರಾಧಳ ಪತ್ರ ಹದಿನೈದು ದಿನಗಳಿಗೊಮ್ಮೆ ಬಂದಾಗ ರಾಮಕೃಷ್ಣಯ್ಯನವರು ಗೆಲುವಾಗುತ್ತಿದ್ದರು. ಶ್ರೀಕಾಂತನ ಪತ್ರಗಳು ಪೂರ್ಣಿಮಾಳ ಜೀವನದಲ್ಲಿನ ಸಂತಸದ ಚಿಲುಮೆಗಳು! ನಿರುಪಮಾ ಅಚಲನ ಕಾಗದಕ್ಕಾಗಿ ಯಾವಾಗಲೂ ಕಾಯುತ್ತಿದ್ದಳು. ಅಲ್ಲೂ ಅವನ ಹಾಸ್ಯ ಪ್ರಜ್ಞೆ ತುಂಬಿರುತ್ತಿತ್ತು. ಅದನ್ನೋದಿ ಕಿಲಕಿಲ ನಗುತ್ತಿದ್ದಳು ಅವಳು. ಅಚಲನೂ ತಪ್ಪದೇ ಕಾಗದ ಬರೆಯುತ್ತಿದ್ದ. ಅವನ ಉತ್ಸಾಹ ತುಂಬಿದ ಕಾಗದ ನೋಡಿ ಎಲ್ಲರ ಹೃದಯದಲ್ಲಿನ ಭಾರವೂ ಸ್ವಲ್ಪ ಸ್ವಲ್ಪ ಜರಗಲು ಸುರುವಾಗಿತ್ತು.

ರಾಮಕೃಷ್ಣಯ್ಯನವರು ಆ ದಿಸೆಯಲ್ಲಿ ಹೆಚ್ಚಿಗೆ ಯೋಚಿಸುವುದಕ್ಕೆ ಹೋಗಿರಲಿಲ್ಲ. ಎಲ್ಲಾದರೂ ಕೆಲಸಕ್ಕೆ ಸೇರಬೇಕು. ಇರಲಿ, ಅವನಿಗೆ ಸಂತಸತರುವ ಕೆಲಸಕ್ಕೆ ಸೇರಿದ್ದಾನಲ್ಲ? ಅವನ ಆಯುಷ್ಯವೊಂದನ್ನು ದೇವರು ಕಾಪಾಡಿದರೆ ಮತ್ತೇನು ಬೇಕು ಎಂದು ನಿರ್ಧರಿಸಿಕೊಂಡಿದ್ದರು. ಆಯುಷ್ಯ ಗಟ್ಟಿಯಿದ್ದರೆ ಯಾವುದರಲ್ಲೂ ಭಯವಿಲ್ಲ.

ಸುಶೀಲಮ್ಮನ ಹೃದಯದ ಮೂಲೆಯಲ್ಲಿ ಅತೃಪ್ತಿ ಗಟ್ಟಿಯಾಗಿ ನೆಲೆಯೂರಿತ್ತು. ಒಬ್ಬ ಮಗ ದೂರವಾದ, ಅಚಲನಾದರೂ ಹತ್ತಿರವಿರುತ್ತಿದ್ದರೆ ಎಂದು ಯಾವಾಗಲೂ ಯೋಚಿಸಿಕೊಂಡು ಮಲಗುತ್ತಿದ್ದರು. ಅಚಲನಿದ್ದರೆ ಮನೆಯಲ್ಲಿ ಹತ್ತು ಜನರಿದ್ದಂತೆ. ಯಾವಾಗಲೂ ಗಲ ಗಲ ಗಲಾಟೆ ಎಬ್ಬಿಸುತ್ತಿದ್ದ. ಈಗ ಮನೆಯಲ್ಲಿ ನೆಲಸಿರುವ ಮೌನ ಅವರಿಂದ ಸಹಿಸಲಾಗುತ್ತಿರಲಿಲ್ಲ. ನಿರುಪಮಾಳೇನೋ ಆಚೀಚೆ ಓಡಾಡುತ್ತಿದ್ದರೂ, ಅವಳೂ ಗಂಭೀರಳಾಗಿದ್ದಾಳೆ ಈಗ. ಮೊದಲಿನ ಚೆಲ್ಲುತನ ಸಂಪೂರ್ಣ ಮರೆಯಾಗಿದೆ.

ಯಾವ ನೋವು ನಲಿವುಗಳೂ ಕಾಲಕ್ಕೆ ತಡೆಹಾಕಲಾರವು, ಕಾಲ ಚಕ್ರ ಉರುಳುತ್ತಲೇ ಇರುತ್ತದೆ. ದಿನಗಳೋಡುತ್ತಲೇ ಇರುತ್ತವೆ. ನಿಧಾನವಾಗಿ ಚಲಿಸಿದಂತೆ ಕಂಡ ದಿನಗಳೂ, ಹಿಂತಿರುಗಿ ನೋಡಿದಾಗ, ಕಳೆದುದೇ ತಿಳಿಯಲಿಲ್ಲ. ಎಂಬಂತಾಗುತ್ತದೆ. ಭೂತಕಾಲದಲ್ಲಿ ಹೂತ ದಿನಗಳು ನೋವು ನಲಿವುಗಳೊಡನೆಯೇ ಹೂತು ಹೋಗುತ್ತವೆ. ಆದರೆ ಆ ನೋವು ನಲಿವುಗಳು ನಮ್ಮ ಹೃದಯದಲ್ಲಿ ಒತ್ತಿದ ಪಡಿಯುಚ್ಚುಗಳು, ನಮ್ಮೊಡನೆ ಭವಿಷ್ಯದುದ್ದಕ್ಕೂ ಹೆಜ್ಜೆ ಹಾಕುತ್ತವೆ. ಅದರಲ್ಲೂ ನೋವುಗಳು ಮೂಡಿಸಿದ ಸಂವೇದನೆಗಳು ನಲಿವುಗಳು ಒತ್ತಿದ ಪಡಿಯುಚ್ಚಿಗಿಂತಲೂ ತೀವ್ರತರವಾದವು. ಆ ನೋವುಗಳೇ ನಲಿವಾಗಿ ಬಂದಾಗ ಮಾತ್ರ ಹಿಂದಿನ ನೋವನ್ನು ಅಳಿಸಲು ಶಕ್ತವಾಗುತ್ತವೆ.

ಹಾಗೇ ನೋವಾಗಿ ಹೋದ ಅಚಲ ಮೊದಲಿನ ತರಬೇತಿ ಮುಗಿಸಿ ಬಂದಾಗ ನಲಿವಾಗಿ ಹಿಂತಿರುಗಿದ್ದ. ಅಚಲನನ್ನು ನೋಡಿದ ಮೇಲೆ ತಂದೆ ತಾಯಿ ಸಮಾಧಾನದಿಂದ ಅವನನ್ನು ಎದುರಿಸಿದರು. ಅಚಲ ಮೊದಲಿಗಿಂತಲೂ ಚೆನ್ನಾಗಿ ಬೆಳೆದಿದ್ದ. ಮುಖದಲ್ಲಿ ಆತ್ಮವಿಶ್ವಾಸದ ಭಾವ ಎದ್ದು ತೋರುತ್ತಿತ್ತು. ಅವನ ಉತ್ಸಾಹ, ಧೈರ್ಯ, ಜೀವನವನ್ನು ನೋಡುವ ರೀತಿ ಎಲ್ಲರಲ್ಲೂ ಮನೋಬಲವನ್ನು ತುಂಬಿಸಿತ್ತು. ಮನೆಯಲ್ಲಿದ್ದ ಹದಿನೈದು ದಿನದಲ್ಲಿ ಅವನು ಎಲ್ಲರಲ್ಲೂ ಪುನಃ ಉತ್ಸಾಹದ ಚಿಲುಮೆ ಉಕ್ಕಿಸಿದ್ದ. ಹಾಗಾಗಿ ರಜೆ ಮುಗಿಸಿ ಅವನು ಉಳಿದ ತರಬೇತಿ ಮುಗಿಸಲು ಬೀದರ್‌ಗೆ ಹೊರಟು ನಿಂತಾಗ ಯಾರೂ ಅವನನ್ನು ಮುಖ ಚಿಕ್ಕದು ಮಾಡಿ ಕಳುಹಿಸಿಕೊಡಲಿಲ್ಲ. ಮನೆಯವರೆಲ್ಲರಲ್ಲೂ ಮೂಡಿದ ಸಮಾಧಾನ ಅವನ ಉತ್ಸಾಹವನ್ನು ಇಮ್ಮಡಿಸಿತ್ತು.

ಮನಸ್ಸು ಸಮಾಧಾನದಲ್ಲಿದ್ದಾಗ ದಿನಗಳ ಓಟ ನಾಗಾಲೋಟ! ಹಾಗೆ ಹೀಗೆ ಎನ್ನುವಷ್ಟರಲ್ಲಿ ಅವನ ತರಬೇತಿ ಮುಗಿದಾಗ ಮಾತ್ರ ಅಚಲ ಇನ್ನು ದೂರಹೋಗುವನಲ್ಲ ಎನ್ನುವ ನೋವು ಎಲ್ಲರನ್ನೂ ಕಾಡಿತ್ತಾದರೂ ಅಚಲ ಅವರೆಲ್ಲರ ಹೃದಯದಲ್ಲಿ ಚಿಗುರೊಡಿಸಿದ್ದ ಧೈರ್ಯ ಅವನು ಯಾವ ಯೋಚನೆಗೂ ಒಳಗಾಗದೇ ಕೆಲಸಕ್ಕೆ ಸೇರುವಂತೆ ಮಾಡಿತ್ತು. ಅಂಬಾಲಕ್ಕೆ ಅವನ ಪೋಸ್ಟಿಂಗ್ಸ್ ಆದಾಗ ಉಲ್ಲಾಸದಿಂದಲೇ ಹೊರಟ ಅಚಲ. ಆದರೆ ಅಷ್ಟು ದೂರ ಹೋಗಬೇಕಲ್ಲಾ ಎನ್ನುವ ನೋವು ಅವನನ್ನು ಕಾಡದಿರಲಿಲ್ಲ. ಅವನು ಈ ತನಕವೂ ತಂದೆ ತಾಯಿಗೆ, ಅಕ್ಕಂದಿರಿಗೆ, ತಂಗಿಗೆ ಅತೀ ಹತ್ತಿರವಾಗಿಯೇ ಬೆಳೆದಿದ್ದ. ಈಗ ಒಮ್ಮೆಲೇ ಸಾವಿರಾರು ಮೈಲು ದೂರ ಹೋಗಬೇಕೆನ್ನುವುದು ಅವನಿಗೂ ಅರೆಕ್ಷಣದ ನೋವು ತಂದಿತ್ತು. ಆದರೆ ಅವನ ಇಷ್ಟು ದಿನದ ತರಬೇತಿ ಹಾಗೂ ತಾನಾಯ್ದುಕೊಂಡ ಕೆಲಸದ ಮೇಲಿನ ಆಸೆ ಅವನನ್ನು ಯಾವ ಭಾವಾವೇಶಕ್ಕೂ ಒಳಪಡಿಸದೇ ಕಾದಿತ್ತು.

ಮಗ ಮೊದಲ ತಿಂಗಳ ಸಂಬಳವೆಂದು ರೂ. ಎಂಟುನೂರು ಕಳುಹಿಸಿದಾಗ ತಂದೆ ತಾಯಿಯ ಹೃದಯ ತುಂಬಿ ಬಂದಿತ್ತು. ಅದರ ಜೊತೆಗೇ ಅಚಲ ಚೊಕ್ಕದಾಗಿ ತಂದೆಗೆ ಕಾಗದ ಬರೆದಿದ್ದ. “ಅಪ್ಪಾ, ನೀವಿನ್ನು ನಿಮ್ಮ ಕೆಲಸಕ್ಕೆ ರಾಜೀನಾಮೆ ಕೊಡಬೇಕು. ಇಷ್ಟು ದಿನ ಒದ್ದಾಡಿದ್ದು ಸಾಕು. ಇನ್ನು ಮನೆಯಲ್ಲೇ ಹಾಯಾಗಿ ದಿನ ಕಳೆಯಬೇಕು. ನನಗೆ ಬೇಕಾದಷ್ಟು ಹಣ ಇಟ್ಟುಕೊಂಡೇ ನಿಮಗೆ ಕಳುಹಿಸಿರುವೆ. ನಿಮಗೆ ಇನ್ನು ಯಾವ ಯೋಚನೆಯೂ ಬೇಡ. ಎಲ್ಲವನ್ನೂ ನನಗೇ ಬಿಟ್ಟುಕೊಡಿ. ನಾನೆಂದೂ ನನ್ನ ಜವಾಬುದಾರಿಗಳಿಂದ ವಿಮುಖನಾಗಲಾರೆನೆಂಬ ಭರವಸೆ ನಿಮಗೆ ಕೊಡುತ್ತಿದ್ದೇನೆ. ನೀವಿಬ್ಬರೂ ಧೈರ್ಯವಾಗಿರಿ.”

ಎಲ್ಲರ ದೃಷ್ಟಿಯಲ್ಲೂ ಅಚಲನಿನ್ನೂ ಚಿಕ್ಕವನೇ. ಹಾಗಾಗಿ ಅವನ ಕಾಗದ ಓದಿ ಕಣ್ಣು ತುಂಬಿಸಿಕೊಳ್ಳದವರು ಯಾರೂ ಇರಲಿಲ್ಲ. ಅಚಲನ ಕಾಗದ ಬಂದ ಮೇಲೆ ರಾಮಕೃಷ್ಣಯ್ಯನವರ ಮಾತಿಗೆ ಕಿವಿಗೊಡದೆ. ಪೂರ್ಣಿಮಾ, ನಿರುಪಮಾ ಇಬ್ಬರೂ ಸೇರಿ ತಂದೆಯಿಂದ ಕೆಲಸಕ್ಕೆ ರಾಜಿನಾಮೆ ಕೊಡಿಸಿದರು.

ಪೂರ್ಣಿಮಾಳ ಒತ್ತಾಯದಂತೆ ರಾಮಕೃಷ್ಣಯ್ಯನವರು ಮಗ ಕಳುಹಿಸಿದ ಹಣದಿಂದ ರೂ. ಐನೂರನ್ನು ತೆಗೆದುಕೊಂಡು ಹೋಗಿ ಸಾಲಕ್ಕೆ ತುಂಬಿಸಿ ಬಂದರು. ಪೂರ್ಣಿಮಾ ಅಲ್ಲಿರುವ ತನಕ ಮನೆಯ ಖರ್ಚಿಗೆ ಯೋಚನೆಯಿರಲಿಲ್ಲ.

ಈಗಾಗಲೇ ಅನುರಾಧ ಆ ಸಾಲಕ್ಕೆ ಐದು ಸಾವಿರ ಕಳುಹಿಸಿದ್ದಳು. ಪೂರ್ಣಿಮಾಳೂ ಸ್ವಲ್ಪ ಸ್ವಲ್ಪವೆಂದು ಈ ಒಂದೂವರೆ ವರುಷದಲ್ಲಿ ಮೂರು ಸಾವಿರದಷ್ಟು ತುಂಬಿಸಿದ್ದಳು. ತಾನು ಈ ಮನೆ ಬಿಡುವ ಮೊದಲು ತನ್ನಿಂದ ಆದಷ್ಟು ಸಾಲದ ಮೊತ್ತ ತಗ್ಗಿಸುವ ಸಿದ್ಧತೆಯಲ್ಲೇ ಅವಳಿದ್ದಳು. ತನಗಾಗಿ ತೆಗೆದ ಸಾಲ. ಅದೆಲ್ಲಾ ಅಚಲನ ಮೇಲೆಯೆ ಭಾರವಾಗಬಾರದು ಎಂದು ಅವಳ ಯೋಚನೆ. ಈ ಮನೆಯಲ್ಲದೇ ತಂದೆ ತಾಯಿಗೆ ಬೇರೇನೂ ಇಲ್ಲವೆಂದು ಅವಳಿಗೆ ತಿಳಿದ ಸಂಗತಿಯೇ. ಆನಂದನಷ್ಟು ಅವಿವೇಕಿ ಅವಳಲ್ಲ.

ಅಚಲನ ಹಣ ತಿಂಗಳು ತಿಂಗಳು ಸರಾಗವಾಗಿ ಹರಿದು ಬಂದಾಗ ಮನೆಯ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿತ್ತು. ಅಚಲ ಅಂಬಾಲಕ್ಕೆ ಹೋದ ಮೇಲೆ ಬರೆಯುತ್ತಿದ್ದ ಕಾಗದಗಳೂ ರಸವತ್ತಾಗಿರುತ್ತಿದ್ದುವು. ಅಲ್ಲಿಯ ತನ್ನ ಅನುಭವಗಳನ್ನೂ ತಾನು ನೋಡಿ ಆನಂದಿಸಿದ ಜಾಗಗಳನ್ನೂ ಚೆನ್ನಾಗಿ ವರ್ಣಿಸುತ್ತಿದ್ದ. ಅವನ ಕಾಗದಗಳಲ್ಲಿ ತುಂಬಿ ತುಳುಕುತ್ತಿದ್ದ ಧೈರ್ಯ, ಉತ್ಸಾಹ, ಆತ್ಮವಿಶ್ವಾಸ, ಸುಶೀಲಮ್ಮನ ದುಗುಡವನ್ನು ಸ್ವಲ್ಪ ಸ್ವಲ್ಪವಾಗಿಯೇ ಹೊಡೆದೋಡಿಸುತ್ತಿತ್ತು. ಅವರ ಮುಖದಲ್ಲೂ ಧೈರ್ಯ ಸಂಚಯವಾಗುತ್ತಿತ್ತು. ಮಕ್ಕಳು ಎಲ್ಲಾದರೂ ಸುಖವಾಗಿದ್ದರೆ ಸರಿ ಎಂದು ಸಮಾಧಾನ ತಂದುಕೊಳ್ಳುವುದನ್ನು ಪ್ರಯತ್ನ ಪೂರ್ವಕವಾಗಿ ಅಳವಡಿಸಿಕೊಳ್ಳಲು ಶಕ್ತರಾಗಿದ್ದರು ಈಗ.

ಅಚಲ, ತಾನು ವಿಮಾನ ಹಾರಿಸುವಾಗ ಹಕ್ಕಿಯಂತೆ ಹಾರಾಡಿದ್ದು, ಪಲ್ಟಿ ಹೊಡೆದದ್ದು, ಹಾರಿಕೊಂಡೇ ತಾನೆಸೆದ ಬಾಂಬುಗಳು ಸಿಡಿದಾಗ ತನಗಾಗುವ ವಿಜಯೋನ್ಮಾದ, ಹಾಗೇ ಹಾರಾಡುವಾಗ ಅಡ್ಡ ಬರುವ ಪರ್ವತಶ್ರೇಣಿಗಳು, ಹಿಮತುಂಬಿದ ಕಣಿವೆಗಳು, ಅಡ್ಡ ಬರುತ್ತಿರುವ ಮೋಡಗಳು, ಕಾಡಿನ ಮೇಲಿನಿಂದ ಹಾರುವಾಗ ಕಾಣುವ ರಮ್ಯನೋಟ, ಎಲ್ಲವನ್ನೂ ಸವಿಸ್ತಾರವಾಗಿ ಬರೆಯುತ್ತಿದ್ದ. ಪ್ರತಿ ಕಾಗದದಲ್ಲೂ ಈ ಕೆಲಸಕ್ಕೆ ಸೇರಿ ತನ್ನ ಜನ್ಮ ಸಾರ್ಥಕ ಮಾಡಿಕೊಂಡೆನೆಂದು ಬರೆಯಲು ಮರೆಯುತ್ತಿರಲಿಲ್ಲ. ತಮ್ಮನ ಆತ್ಮತೃಪ್ತಿಯಿಂದ ಪೂರ್ಣಿಮಾಗೆ ಸಮಾಧಾನವಾದರೂ ಅವನಿಲ್ಲೇ ಕೆಲಸಕ್ಕೆ ಸೇರಿದ್ದರೆ ಎಷ್ಟು ಚೆನ್ನಾಗಿತ್ತು, ಎಂದು ಪ್ರತಿಬಾರಿಯೂ ಅನಿಸದೇ ಇರುತ್ತಿರಲಿಲ್ಲ.

ಅವನು Solo flying ಮಾಡಿದ ದಿನ ಬರೆದ ಕಾಗದದಲ್ಲಿ ಇಡೀ ರಾಜ್ಯ ಗೆದ್ದ ವಿಜಯೋನ್ಮಾದವಿತ್ತು. “ಅಪ್ಪಾ, ಇವತ್ತಿನ ದಿನ ನನ್ನ ಜೀವನದಲ್ಲಿನ ಸರ್ವಶ್ರೇಷ್ಠ ದಿನ. ನನ್ನ ಸಾಧನೆಗಳಿಗೆ ವಜ್ರದ ಕಿರೀಟವೆಂದೇ ತಿಳಿಯಿರಿ. ನನ್ನ ಇನ್‌ಸ್ಪೆಕ್ಟರ್ ವಿಂಗ್ ಕಮಾಂಡರ್ ಮನೋಹರ್ ನನ್ನನ್ನು ಎಷ್ಟೊಂದು ಹೊಗಳಿದರೆಂದಿಲ್ಲ. ಅವರಿಗೆ ನನ್ನ ಮೇಲಿರೋ ಅಭಿಮಾನ ನನ್ನ ಭುಜಕ್ಕೆ ಹೊಸತಾಗಿ ಸೇರುವ ಮೆಡಲಿಗಿಂತಲೂ ಹೆಚ್ಚಿನದ್ದು. ಕೆಲವೇ ಗಂಟೆಗಳಲ್ಲಿ Solo flying ಮುಗಿಸಿ ಬಂದ ನನ್ನನ್ನು ತಬ್ಬಿ ವಿಜಯ ಸಾರಿದ ಆ ಗಳಿಗೆಯನ್ನೆಂದೂ ನಾನು ಮರೆಯಲಾರೆ. ಅವರಿಗೆ ನನ್ನ ಮೇಲೆ ತಮ್ಮನಿಗಿಂತಲೂ ಹೆಚ್ಚಿನ ಪ್ರೀತಿ. ಈ ಸಂತಸವು ನಿಮ್ಮೆಲ್ಲರ ಮಧ್ಯೆ ನಿಂತು ಅನುಭವಿಸುವ ಆಸೆ ತುಂಬಾ ಆಗಿದೆ. ಅಮ್ಮನ ಮುಖದ ಮೇಲೆ ಮೂಡುವ ತೃಪ್ತಿಯ ಕಳೆ ನೋಡಿದರೆ, ನನ್ನ ಗೆಲುವಿಗೆ ಇನ್ನೂ ಹೆಚ್ಚಿನ ಮಹತ್ವ ಬರ್‍ತಿತ್ತೇನೋ? ಎಲ್ಲೂ ಕುಂದಿಲ್ಲದಂತೆ ವಿಮಾನ ಹಾರಿಸುವ ದಕ್ಷತೆ ಸಂಪಾದಿಸಿದ್ದೇನೆ. ನಾನು !”

ಮಗನ ಮೇಲೆ, ಸಾಧನೆ ಎಲ್ಲರಲ್ಲೂ ಸಂತಸವನ್ನು ತುಂಬಿತ್ತು. ಅಚಲ ಭೋರ್‍ಗರೆಯುವ ಸಮುದ್ರ, ಅವನ ಉತ್ಸಾಹಕ್ಕೆ ತಡೆಯಿಲ್ಲ. ಸಾಧನೆ ಅವನ ಧಮನಿಗಳಲ್ಲಿ ಹರಿಯುತ್ತಿದೆ ಎಂದೂ ಎಲ್ಲರಿಗೂ ಅರಿವಾಗಿತ್ತು. ಅವನ ಸಾಧನೆ ನಿರಂತರ! ಗೆಲ್ಲಲಿಕ್ಕೆಂದೇ ಹುಟ್ಟಿದ ಹುಡುಗ ಅವನು.

ಅಚಲನ ಸಾಧನೆ, ಗೆಲವು, ಅವನು ತನ್ನ ಕಾಗದಗಳ ಮೂಲಕ ರವಾನಿಸುತ್ತಿದ್ದ ಆತ್ಮಸ್ಥೆರ್ಯ, ಎಲ್ಲರ ಹೃದಯವನ್ನು ಹೊಕ್ಕು ಎಲ್ಲರ ಧಮನಿಗಳಲ್ಲಿ ಹರಿಯಲು ಶುರು ಮಾಡಿದಾಗ ಅವರ ಜೀವನದ ಮೇಲೆ ಪಸರಿಸಿದ್ದ ಕಾರ್‍ಮುಗಿಲು ಚದುರಲಾರಂಭಿಸಿತ್ತು. ಸುಶೀಲಮ್ಮ-ರಾಮಕೃಷ್ಣಯ್ಯನವರ ಜೀವನದಲ್ಲಿ ಮತ್ತೆ ಹಿಂದಿನ ಹುರುಪು ಕಾಣಿಸಿಕೊಳ್ಳತೊಡಗಿತು. ಮನೆಯ ವಾತಾವರಣ ತಿಳಿಯಾದುದರ ಜೊತೆಗೆ ಸ್ವಲ್ಪ ಸಂತಸವೂ ತಲೆ ಹಾಕಿತು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಳಾಸ
Next post ಕಲ್ಲು ಹಿತ್ತಾಳೆ ನೆಲ ಕೊನೆಯಿರದ ಕಡಲ ಜಲ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys