ಈತನು ‘ಮಹಾಶಯನು’ ನಾಲ್ಕು ಜನರಲಿ ಗಣ್ಯ-
ನೆಂದು ಮನ್ನಣೆವೆತ್ತ ಸಾಮಂತ. ಎಂತೆಂತು
ಲಕ್ಷ್ಮಿಯನ್ನು ಒಲಿಸುವುದು,- ಇದರಲಿವಗಿಹ ಪುಣ್ಯ-
ವೆಲ್ಲ ವ್ಯಯವಾಗಿಹುದು. ಇವ ತನ್ನನುಳಿದನ್ಯ-
ರನ್ಯಾಯವನ್ನು ತಡೆಯ. ಯಮನ ಕೊಂತಕೆ ಕಂತ
ವನು ಕೊಡುವ ಮುಂಚಿತವೆ ಸುಖಿಯಾಗಬೇಕೆಂತ
ಮೈಯೊಣಗಿಸುವನಿವನು- ತೇಜ ಕುಂದಿಹ ತಂತು-
ಬರಿಜಂತು! ಇವನ ಮನೆಯಲ್ಲಿ ವಾಸಿಸಿಹಳೊರ್‍ವ
ಬಾಲವಿಧವೆಯು. ಎದೆಯೊಳಮಿತ ದುಃಖವನಾಂತು
ಮೋರೆಯಲಿ ಮಾರಿ ಮಿಡಿಯುವ ನಗೆಯ ತಳೆದಿಹಳು.
ವಿತ್ತವಿದೆ; ಗೊತ್ತಿಲ್ಲ. ರೂಪವಿದೆ ಬಳಿಸಾರ್‍ವ
ಬಾಳ ನಾಯಕನಿಲ್ಲ; ಒಮ್ಮನದಿ ಬೆಳೆದಿಹಳು, –
ಒಂದು ದಿನ ಇದು ಎಲ್ಲ ಮುಗಿವುದೆನುವ ವಿತಂತು.
*****