ಕಲ್ಲು ಕರಗಿತು ಹೂವು ಅರಳಿತು
ಹಕ್ಕಿ ಪಟಪಟ ಹಾರಿತು
ಅತ್ತ ಇತ್ತ ಸುತ್ತ ಮುತ್ತ
ಬೆಳ್ಳಿ ಬೆಳಕು ತುಂಬಿತು
ದೂರ ಮುಗಿಲಿನ ದೇವ ಸೂರ್‍ಯನು
ತೇರು ಏರಿ ಬಂದನು
ಮನೆಯ ಬಾಗಿಲು ಮನದ ಬಾಗಿಲು
ಬಡಿದು ಬಂದೆನು ಎಂದನು
ಮೌನಗರ್‍ಭವೆ ಮಾತನಾಡಿತು
ಶೂನ್ಯಗರ್‍ಭವು ಬಿರಿಯಿತು
ಅಂತರಂಗದ ಆಳ ತಳದಲಿ
ಸ್ವರ್‍ಣ ಸಂಭ್ರಮ ಚಿಮ್ಮಿತು
ಸುಖದ ಸಾಗರ ಗಾನ ಮೌನವು
ಪ್ರೇಮ ಮಿಲನವ ಪಡೆಯಿತು
ಯಂತ್ರ ಜೀವನ ಮಂತ್ರವಾಯಿತು
ಕೋಟಿ ಮಿಲನವು ಸುರಿಯಿತು
*****



















