ಕನ್ನಡ ಭಾಷೆ-ಸಂಸ್ಕೃತಿ- ಸಿನಿಮಾ: ಒಂದು ಮಾಂಟಾಝ್

‘ಕನ್ನಡ ಸಿನಿಮಾ’ ಕುರಿತಂತೆ ಬರೆಯಿರಿ ಎಂಬ ಆಹ್ವಾನ. ಬೇಕಿರಲಿ – ಬೇಡದಿರಲಿ ಇದೊಂದು ಪ್ರತ್ಯೇಕವಾದ ಪ್ರತ್ಯಯ ಎಂಬಂತೆ ಬಳಕೆಯಾಗುತ್ತಿದೆ. ‘ಕನ್ನಡ ಸಿನಿಮಾ’ ಕುರಿತಂತೆ ಬರೆಯುವಾಗ ಇದರ ನಿರ್ದಿಷ್ಟ ಗುಣಗಳು ಯಾವುವು ಎಂಬ ಪ್ರಶ್ನೆ ಎದುರಾದಾಗ ಬೇರೆ ಎಲ್ಲಾ ಭಾಷೆಯ ಚಿತ್ರಗಳಿಗಿಂತ ವಿಭಿನ್ನವಾದ ಅಸ್ತಿತ್ವ ಕನ್ನಡ ಸಿನಿಮಾಕ್ಕೆ ಇದೆಯೆ ಎಂಬುದನ್ನು ನೋಡಬೇಕಾಗುತ್ತದೆ. ತಮಿಳು – ತೆಲುಗು – ಮಲಯಾಳಂ – ಹಿಂದಿ ಭಾಷಾ ಚಿತ್ರಗಳಿಂದ ಕನ್ನಡ ಸಿನಿಮಾವನ್ನು ಪ್ರತ್ಯೇಕಿಸಿ ನೋಡುವ ಯತ್ನ ಮಾಡಿದರೆ ಈ ಎಲ್ಲಾ ಭಾಷೆಯ ಸಿನಿಮಾಗಳಿಗೂ ಕನ್ನಡ ಭಾಷೆಯ ಸಿನಿಮಾಕ್ಕು ಅಂತಹ ವ್ಯತ್ಯಾಸವೇನೂ ಕಾಣುವುದಿಲ್ಲ. ಸ್ವಾರಸ್ಯವೆಂದರೆ ‘ಕನ್ನಡ ಸಿನಿಮಾ’ ಎಂಬುದು ಇಂದು ಉಕ್ತಿಯಾಗಿ ಚಿತ್ರೋದ್ಯಮದಲ್ಲೂ, ಪತ್ರಿಕೆಗಳಲ್ಲೂ ಆಗಾಗ್ಯೆ ಬಳಕೆಯಾಗುತ್ತಲೇ ಇರುತ್ತದೆ. ಈ ಉಕ್ತಿಯ ಬಳಕೆಯ ಬೆನ್ನಿಗೇ ‘ಮುಷ್ಕರ – ಬಂದ್’ಗೂ ಕರೆ ಕೊಡಲಾಗುತ್ತಿರುತ್ತದೆ. ಕನ್ನಡ ಚಿತ್ರೋದ್ಯಮದ ಉಳಿವಿಗೆ ಇದು ಅನಿವಾರ್ಯ ಎಂಬಂತಹ ವಾತಾವರಣವೂ ನಿರ್ಮಾಣವಾಗಿ ಹೋಗಿದೆ. ಕನ್ನಡ ಚಿತ್ರ ನಿರ್ಮಾಪಕರುಗಳ ಸಂಘ ಕೋಟ್ಯಂತರ ರೂಪಾಯಿಗಳ ನಷ್ಟವನ್ನು ಅಂದಾಜಿಸಿ ಹೇಳುತ್ತದೆ. ಸುಳ್ಳೂ ಅಲ್ಲ – ನಿಜವೂ ಅಲ್ಲ. ಇಂದಿನ ಈ ವಾತಾವರಣಕ್ಕೆ ಯಾರೂ ಹೊಣೆಗಾರರಲ್ಲವೆ? – ಇಂದಿನ ಈ ಅಸಹಾಯಕ ಸ್ಥಿತಿ ನಿರ್ಮಾಣ ತನ್ನಂತೆ ತಾನೇ ಉದ್ಭವವಾಗಿಲ್ಲ. ಇತಿಹಾಸವನ್ನು ನೋಡಬೇಕಾಗುತ್ತದೆ. ನೋಡಲು ಆರಂಭಿಸಿದಾಗ ಬೆಂಗಳೂರು ಮೊದಲು ಕಾಣಿಸುತ್ತದೆ. ಬೆಂಗಳೂರು ಕನ್ನಡ ಚಿತ್ರಗಳ ಇಂದಿನ ಗತಿಸ್ಥಿತಿಗೆ ಮೂಲಕಾರಣ. ಜೊತೆಗೆ ಇನ್ನೂ ಅನೇಕ ಕಾರಣಗಳೂ ಇವೆ. ಮೊದಲು ಬೆಂಗಳೂರನ್ನು ನೋಡಿ ಉಳಿದ ಕಾರಣಗಳನ್ನು ಸಂದರ್ಭಾನುಸಾರ ನೋಡುವ ಯತ್ನ ಮಾಡೋಣ. ಆಗ ಕನ್ನಡ ಸಿನಿಮಾದ ಇಂದಿನ ಸ್ಥಿತಿಗತಿಯ ಒಳನೋಟ ದಕ್ಕುತ್ತದೆ ಎಂದೇ ಅನ್ನಿಸುತ್ತದೆ.

ನಾನು ಬೆಂಗಳೂರಿನಲ್ಲಿ ಸಿನಿಮಾ ನೋಡಲು ಆರಂಭಿಸಿದ್ದು ರ ಸುಮಾರಿಗೆ. ಈಗ ನಾವು ವಿವರಿಸಿರುವ ಸಂಗತಿಗಳು ಸುಮಾರು ರಲ್ಲಿ ನಡೆದವು ಎಂದು ಇಟ್ಟುಕೊಳ್ಳಬಹುದು – ಅಂದರೆ ಇಪ್ಪತ್ತೈದು ವರ್ಷಗಳ ಹಿಂದೆ, ಅಂದರೆ ಆಗ ಇನ್ನೂ ಕನ್ನಡ ಚಿತ್ರಗಳ ಚಿತ್ರೀಕರಣ ಮದ್ರಾಸಿನಿಂದ ಬೆಂಗಳೂರಿಗೆ, ಅಂದರೆ ಕರ್ನಾಟಕಕ್ಕೆ ಸಂಪೂರ್ಣವಾಗಿ ಸ್ಥಳಾಂತರವಾಗಿರಲಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ಸಿನಿಮಾ ಜಿಯಾಗ್ರಫಿಯನ್ನು ಹೀಗೆ ವಿಂಗಡಿಸಬಹುದು.

ಬೆಂಗಳೂರು ಕರ್ನಾಟಕದ ರಾಜಧಾನಿ. ಅಂದರೆ ಕನ್ನಡಿಗರ ರಾಜಧಾನಿ. ಸಹಜವಾಗಿಯೇ ಕನ್ನಡ ಚಿತ್ರಗಳಿಗಷ್ಟೆ ಪ್ರಾಧಾನ್ಯ ಎಂಬ ತರ್ಕಕ್ಕೆ ದೂರವಾಗಿ ಎಷ್ಟೊಂದು ಭಾಷೆಯ ಚಿತ್ರಗಳು ಪ್ರದರ್ಶನ ಕಾಣುತ್ತಿತ್ತು. ಒಂದು ರೀತಿಯಲ್ಲಿ ನನ್ನಂತಹವರ ಅದೃಷ್ಟ. ತಮಿಳಿನ ಎಂ.ಜಿ.ಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್, ಮುತ್ತುರಾಮನ್, ರವಿಚಂದ್ರನ್, ಜೈಶಂಕರ್ ಚಿತ್ರಗಳು, ತೆಲುಗಿನ ಎನ್.ಟಿ.ರಾಮರಾವ್, ನಾಗೇಶ್ವರರಾವ್, ಕೃಷ್ಣ, ಎಸ್.ವಿ.ರಂಗರಾವ್, ಕಾಂತರಾವ್ ಚಿತ್ರಗಳು, ಹಿಂದಿಯಲ್ಲಿ ಧರ್ಮೇಂದ್ರ, ರಾಜೇಂದ್ರ ಕುಮಾರ್, ದಿಲೀಪ್ ಕುಮಾರ್, ರಾಜ್‍ಕಪೂರ್, ಇಂಗ್ಲಿಶ್‍ನಲ್ಲಿ ಷಾನ್ ಕಾನರಿ, ಗ್ರಿಗರಿಪೆಕ್, ಮುಂತಾದವರ ಚಿತ್ರಗಳು. ಭಾರತ ದೇಶದ ಇನ್ಯಾವ ನಗರಿಗರಿಗೆ ಇಷ್ಟೊಂದು ಭಾಷೆಯ ಚಿತ್ರಗಳು ನೋಡಲು ಲಭ್ಯವಿರುತ್ತದೆ? ಇವೆಲ್ಲವನ್ನು ಪ್ರೇಕ್ಷಕರಲ್ಲಿ ಪ್ರೇಕ್ಷಕನಾಗಿ ನೋಡುತ್ತ ನೊಡುತ್ತ ಬೆಳೆಯುವುದು ಅದೃಷ್ಟವಲ್ಲದೆ ಮತ್ತೇನು?

ಸಿನಿಮಾ ಜಿಯಾಗ್ರಫಿ

ಅಲಸೂರು ಕೆರೆಗೆ ಹೊಂದಿಕೊಂಡಂತೆ ಇರುವ ಲಕ್ಷ್ಮಿ, ಅಜಂತಾ, ಶ್ರೀ, ಬ್ರಿಗೇಡ್ ರಸ್ತೆ ಕೊನೆಗಿರುವ ನ್ಯೂ ಅಪೇರ, ಟೌನ್‍ಹಾಲ್ ಬಳಿಯಿರುವ ನ್ಯೂ ಸಿಟಿ, ಶಿವಾಜಿ, ಶೇಷಾದ್ರಿಪುರ ಬಳಿ ಇದ್ದ ಸ್ವಸ್ತಿಕ್, ಸೆಂಟ್ರಲ್‍ನಲ್ಲಿ ತಮಿಳು ಚಿತ್ರಗಳು, ಅಂದರೆ ಮೇಲೆ ಪಟ್ಟಿ ಮಾಡಿರುವ ನಟರುಗಳ ಚಿತ್ರಗಳಷ್ಟೇ ಬಿಡುಗಡೆಯಾಗುತ್ತಿದ್ದವು. ಇನ್ನೂ ನಿರ್ದಿಷ್ಟವಾಗಿ ಹೇಳಬೇಕಾದರೆ ಶ್ರೀ, ನ್ಯೂ ಅಪೇರಾ, ಶಿವಾಜಿ, ಸೆಂಟ್ರಲ್‍ನಲ್ಲಿ ಎಂ.ಜಿ.ಆರ್ ಚಿತ್ರಗಳು, ಲಕ್ಷ್ಮಿ, ಅಜಂತಾ, ನ್ಯೂ ಸಿಟಿ, ಸ್ವಸ್ತಿಕ್‍ನಲ್ಲಿ ಶಿವಾಜಿ ಗಣೇಶನ್‍ರ ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಟೈಂ ಗ್ಯಾಪ್ ಇದ್ದಾಗ ಜೆಮಿನಿ ಗಣೇಶನ್, ಮುತ್ತುರಾಮನ್, ರವಿಚಂದ್ರನ್, ಜೈ ಶಂಕರ್ ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಜಯನಗರದ ಶಾಂತಿ, ನಂದಾ ಥಿಯೇಟಗಳು ಸಹ ತಮಿಳು ಚಿತ್ರಗಳನ್ನು ಬೇರೆ ಭಾಷೆಯ ಚಿತ್ರಗಳೊಂದಿಗೆ ಪ್ರದರ್ಶಿಸುತ್ತಿದ್ದವು. ಮೆಜೆಸ್ಟಿಕ್‍ನ ಗೀತಾದಲ್ಲೂ ತಮಿಳು.

ಶಿವಾಜಿ ಥಿಯೇಟನಿಂದ ಸ್ವಲ್ಪ ಕೆಳಗೆಯಿದ್ದ ಭಾರತ್‍ನಲ್ಲಿ ಕನ್ನಡ ಚಿತ್ರಗಳು, ಅದರಲ್ಲೂ ರಾಜ್‍ಕುಮಾರ್ ಚಿತ್ರ ಬಿಡುಗಡೆಯಾಗುತ್ತಿತ್ತು. ಮೆಜೆಸ್ಟಿಕ್ ಅಂದರೆ ಕೆಂಪೇಗೌಡ ನಗರದ ಮೂವಿಲ್ಯಾಂಡ್, ಸ್ಟೇಟ್ಸ್, ಮಾವಳ್ಳಿಯ ಮಿನರ್ವ ಥಿಯೇಟರುಗಳಲ್ಲಿ ಎನ್.ಟಿ.ಆರ್, ಏ.ಎನ್.ಆರ್, ಕೃಷ್ಣ ಮುಂತಾದವರ ತೆಲುಗು ಚಿತ್ರಗಳು ಪ್ರದರ್ಶಿತವಾಗುತ್ತಿತ್ತು. ಅಲಂಕಾರ್, ಕಲ್ಪನ, ಸಂಗಂ ಥಿಯೇಟರುಗಳಲ್ಲಿ ಹಿಂದಿ ಸಿನಿಮಾ, ನ್ಯೂ ಎಂಪೈರ್, ಬಿ.ಆರ್.ವಿ, ಪ್ಲಾಜಾ, ಲಿಡೋ, ಲಿಬರ್ಟಿ ಥಿಯೇಟರುಗಳಲ್ಲಿ ಇಂಗ್ಲಿಷ್ ಚಿತ್ರಗಳು.

ಆಗ ಕಪಾಲಿ, ಮೆಜಸ್ಟಿಕ್, ಸಾಗರ್, ಶಂಕನಾಗ್, ಪುಟ್ಟಣ್ಣ, ಸಂದೀಪ್, ಪ್ರದೀಪ್, ಸಂಜಯ್, ಆದರ್ಶ…. ಹೀಗೆ ಇನ್ನೂ ಎಷ್ಟೋ ಥಿಯೇಟರುಗಳು ಇನ್ನೂ ಬಂದಿರಲಿಲ್ಲ.

ಇಷ್ಟು ಹೇಳಿರುವುದು ಕನ್ನಡ ಚಿತ್ರ ಹಾಗೂ ಇತರ ಚಿತ್ರಗಳ ತುಲನಾತ್ಮಕವಾದ ಚಿತ್ರಣ ಒಟ್ಟೊಟ್ಟಿಗೆ ದೊರೆಯಲೆಂದು ಅಷ್ಟೆ. (ವಿವರಗಳಲ್ಲಿ ದೋಷವಿರಬಹುದು.) ಕನ್ನಡ ಚಿತ್ರೋದ್ಯಮ ಸಂಪೂರ್ಣವಾಗಿ ಕರ್ನಾಟಕಕ್ಕೆ ಸ್ಥಳಾಂತರಗೊಂಡಿರಲಿಲ್ಲ. ಅಷ್ಟು ಹೊತ್ತಿಗಾಗಲೆ ರಾಜ್‍ಕುಮಾರವರು ಕನ್ನಡ ಚಿತ್ರಗಳ ಮಟ್ಟಿಗೆ ಪ್ರಮುಖ ನಟರಾಗಿದ್ದರು ಎಂಬುದನ್ನು ಗಮನದಲ್ಲಿಟ್ಟುಕೊಂಡಿರಬೇಕು.

ಮದ್ರಾಸಿನಲ್ಲಿಯೇ ರಾಜ್‍ಕುಮಾರೊಂದಿಗೆ ಇತರ ನಟರೂ ಇದ್ದರು. ಉದಯ್‍ಕುಮಾರ್, ಪಂಢರೀಬಾಯಿ, ಲೀಲಾವತಿ, ಜಯಂತಿ, ಬಿ. ಸರೋಜಾದೇವಿ, ಬಿ. ಆರ್. ಪಂತುಲು, ಪುಟ್ಟಣ್ಣ ಕಣಗಾಲ್, ಹೀಗೆ ಕನ್ನಡ ಚಿತ್ರದ ಗಣ್ಯರೆಲ್ಲ ಅಲ್ಲಿಯೇ ಇರಬೇಕಾಗಿತ್ತು. ಕರ್ನಾಟಕದಲ್ಲಿ ಕನ್ನಡ ಚಿತ್ರ ನಿರ್ಮಾಣಕ್ಕೆ ಬೇಕಾದ ಸಲಕರಣೆಗಳು ಇರಲಿಲ್ಲ. ಅವರುಗಳೆಲ್ಲ ಅಲ್ಲೇ ಉದ್ಯೋಗವನ್ನರಸಿ ಹೋದ ವಲಸಿಗರಾಗಿದ್ದರು. ರಾಜ್‍ಕುಮಾರಿಗೆ ನಾಟಕಗಳಲ್ಲಿ ಅಭಿನಯಿಸಿದ್ದ ಹಿನ್ನೆಲೆ ಇದ್ದೇ ಇತ್ತು. ತೆಲುಗು ಚಿತ್ರಗಳ ಚಿತ್ರೀಕರಣ ಆಗುತ್ತಿದ್ದದ್ದೂ ಸಹ ಮದ್ರಾಸಿನಲ್ಲಿಯೇ.

ಸ್ವಾತಂತ್ರ್ಯೋತ್ತರ ಮದ್ರಾಸಿನಲ್ಲಿ ಬ್ರಾಹ್ಮಣ ವಿರೋಧಿ ಚಳವಳಿ ದ್ರಾವಿಡ ಪರಿವಾರದ ಚಳವಳಿಯಾಗಿ ಮಾರ್ಪಾಟಾಗಿ ಭಾರತದ ರಾಜಕೀಯದಿಂದ ಕವಲೊಡೆದು ‘ತನ್ನತನವನ್ನು’ ಸ್ಥಾಪಿಸಿಕೊಳ್ಳಲು ಹೋರಾಡುತ್ತಿತ್ತು. ಭಾರತ – ಪಾಕಿಸ್ತಾನದಂತೆಯೇ ದ್ರಾವಿಡರ ನಾಡನ್ನು ಸೃಷ್ಟಿಸುವ ಯತ್ನದಲ್ಲಿ “ದ್ರಾವಿಡ ಕಳಗಂ” ಅಲ್ಲಿನ ಜನರಿಗೆ ಒಂದು ತೆರನಾದ ಐಡೆಂಟಿಟಿಯನ್ನು ಕೊಡುತ್ತಿತ್ತು. ಹಿಂದಿ ಭಾಷೆಯನ್ನು ಭಾರತಾದ್ಯಂತ ‘ಐಕ್ಯತೆ’ಗಾಗಿ ಸಮಗ್ರೀಕರಣದ ಪರಿಕರವನ್ನಾಗಿ ಬಳಸಲು ಆರಂಭಿಸಿದ ಕಾಲದಲ್ಲಿ ‘ಹಿಂದಿ ವಿರೋಧಿ ಚಳವಳಿ’ ಅತ್ಯಂತ ಉಗ್ರವಾಗಿ ನಡೆಯಿತು. ದ್ರಾವಿಡ ಕಳಗಂನಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದ ಎಂ.ಜಿ.ಆರ್, ಶಿವಾಜಿ ಗಣೇಶನ್‍ರು ಒಟ್ಟೊಟ್ಟಿಗೆ ಅಂದರೆ ‘ನಟರಾಗಿ ರಾಜಕೀಯ ವ್ಯಕ್ತಿಗಳಾಗಿ’ ಎರಡೂ ರೀತಿಯಲ್ಲಿ ಪ್ರಬಲರಾಗಿದ್ದರು. ಅವರುಗಳ ಜನಪ್ರಿಯತೆಯನ್ನು ಕಳಗಂ ಬಳಸಿಕೊಂಡಿತು. ಕಳಗಂನ ಸಿದ್ಧಾಂತವನ್ನು ಇವರಿಬ್ಬರೂ ಬಳಸಿಕೊಂಡರು. ಎಂ.ಜಿ.ಆರಂತೂ ನಟ – ಕಾರ್ಯಕರ್ತರಿಗಿದ್ದ ಗಡಿರೇಖೆಯನ್ನು ಅಳಿಸಿ ಹಾಕಿ ಎರಡನ್ನೂ ಮೇಳೈಸಿಬಿಟ್ಟರು.

ಕರ್ನಾಟಕದ ಗಡಿಯಂಚಿನಲ್ಲಿದ್ದ ತಮಿಳರು ಮದ್ರಾಸ್ ‘ರಾಜಧಾನಿ’ಯ ಸೌಲಭ್ಯಗಳಿಗೆ ದೂರಾಗಿ ಅವರಿಗೆ ಹತ್ತಿರವಾಗಿದ್ದ ಬೆಂಗಳೂರಿಗೆ ವಲಸೆ ಬಂದು ನೆಲೆಸಿದರು. ಅವರುಗಳು ಎಂ.ಜಿ.ಆರನ್ನು, ಶಿವಾಜಿ ಗಣೇಶ್‍ರನ್ನು ‘ತಮಿಳಿನ ಸಾಂಸ್ಕೃತಿಕ ರಾಯಭಾರಿ’ಗಳನ್ನಾಗಿಯೇ ನೋಡಿದರಲ್ಲದೇ ಅವರಿಬ್ಬರೂ ನೀಡಿದ ಐಡೆಂಟಿಟಿಯನ್ನು ಸುಲಭವಾಗಿ ಒಪ್ಪಿಕೊಂಡುಬಿಟ್ಟಾಗ ಕರ್ನಾಟಕದಲ್ಲಿ ತಮಿಳರ ತಮಿಳುತನಕ್ಕೆ ಒಂದಿನಿತು ಭಂಗ ಬರಲೇ ಇಲ್ಲ.

ಇಂತಹ ಸಾಮಾಜಿಕ ಸನ್ನಿವೇಶದಲ್ಲಿ ಎಂ.ಜಿ.ಆರ್, ಶಿವಾಜಿ ಗಣೇಶ್‍ರಿಬ್ಬರೂ ಬೆಂಗಳೂರಿನಲ್ಲಿ ಪ್ರಚಂಡ ಯಶಸ್ಸು ಗಳಿಸಿದ್ದರಲ್ಲಿ ಆಶ್ಚರ್ಯವೂ ಇಲ್ಲ, ತಪ್ಪೂ ಇಲ್ಲ. ಮದ್ರಾಸಿನಲ್ಲಿ ಎಂ.ಜಿ.ಆರ್, ಶಿವಾಜಿ ಗಣೇಶನ್‍ರೂ ಮೇಲಿಂದ ಮೇಲೆ ಚಿತ್ರಗಳಲ್ಲಿ ನಟಿಸಲಾರಂಭಿಸಿದರು. ಮದ್ರಾಸಿನ ಚಿತ್ರೋದ್ಯಮದ ಸೌಲಭ್ಯವೆಲ್ಲ ಇವರಿಬ್ಬರ ಚಿತ್ರಗಳಿಗೆ ಮೀಸಲಾದಾಗ ‘ಕನ್ನಡ ಚಿತ್ರಗಳಿಗೆ’ ಸೌಲಭ್ಯವನ್ನು ಒದಗಿಸುವುದಾದರೂ ಹೇಗೆ? ಬೆಂಗಳೂರಿನಲ್ಲೂ ಕನ್ನಡ ಚಿತ್ರಗಳು ಯಶಸ್ವಿಯಾಗುತ್ತಿಲ್ಲ. ಯಶಸ್ವಿಯಾದರೆ ಹಣ ಹೂಡುವ ದೈರ್ಯಬಂದೀತು – ಮಾಡಲಾರೆ ಬಿಡಲಾರೆ ಎಂಬ ಇಬ್ಬಂದಿ ಸ್ಥಿತಿಯಲ್ಲೇ ಕಡಿಮೆ ಬಂಡವಾಳ ಹೂಡಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಪರಿಸ್ಥಿತಿ ಕನ್ನಡ ನಿರ್ಮಾಪಕನದು. ಮದ್ರಾಸಿನಲ್ಲಿ ಚಿತ್ರ ನಿರ್ಮಾಣ ‘ಉದ್ಯಮ’ವಾಗಿತ್ತು. ಉದ್ಯಮದಲ್ಲಿ ಮೊದಲು ಹಣ ಕೊಡು ಅಥವಾ ನೀನು ಕೊಟ್ಟ ಹಣಕ್ಕೆ ತಕ್ಕಂತಹ ಕೆಲಸ ಎಂಬ ಧೋರಣೆ. ಸಹಜವಾಗಿಯೇ ಕನ್ನಡ ಚಿತ್ರಗಳು ಆಗ ತೆರೆಯ ಮೇಲೆ ಮಂಕಾಗಿ ಕಂಡವು. ತಮಿಳು ಚಿತ್ರಗಳು ವಿಜೃಂಭಿಸುತ್ತಿದ್ದವು. ತಾಂತ್ರಿಕ ಗುಣಮಟ್ಟದಲ್ಲಿ ಎದ್ದು ಕಾಣುವಂತಹ ವ್ಯತ್ಯಾಸಗಳಿಂದಲೇ ಕನ್ನಡ ಹಾಗು ತಮಿಳು ಚಿತ್ರಗಳನ್ನು ಬೆಂಗಳೂರು ಪ್ರೇಕ್ಷಕ ಹೋಲಿಸಿ ನೋಡುವಂತಾಗಿ, ತಮಿಳು ಚಿತ್ರಗಳತ್ತ ಬೆಂಗಳೂರು ಚಿತ್ರ ಪ್ರೇಕ್ಷಕ ಮತ್ತಷ್ಟು ಒಲಿಯಲಾರಂಭಿಸಿದ. ಇದು ಎಷ್ಟರಮಟ್ಟಿಗಾಯಿತೆಂದರೆ ದೂರದರ್ಶನ, ಕೇಬಲ್, ಸ್ಯಾಟಲೈಟ್ ಚಾನಲ್‍ಗಳು ಇಲ್ಲದೇ ಇದ್ದ ಕಾಲದಲ್ಲಿ ಅದೊಂದು ಸಾಮೂಹಿಕ ಸನ್ನಿಯೇ ಆಗಿತ್ತು.

ಇಂಗ್ಲಿಷ್ ಹಾಗು ಹಿಂದಿ ಚಿತ್ರಗಳನ್ನು ನೋಡುತ್ತಾ ‘ಕಲೋನಿಯಲ್ ಕಸಿನ್ಸ್’ ಆಗುತ್ತಾ ಬಂದ ಕನ್ನಡಿಗ ತಮಿಳು ಚಿತ್ರಗಳನ್ನು ನೋಡುತ್ತಿರಲಿಲ್ಲಿ. ತಮಿಳು ಚಿತ್ರಮಂದಿರಗಳ ಮುಂದಿನ ದೊಂಬಿಯ ಬಗೆಗೆ ಅವನಿಗೆ ಅಸಹ್ಯ. ಇಂಗ್ಲಿಶ್ ಹಾಗು ಹಿಂದಿ ಚಿತ್ರಮಂದಿರಗಳಲ್ಲಿ ಟಿಕೆಟ್‍ಗಳನ್ನು ಅಡ್ವಾನ್ಸ್ ಬುಕಿಂಗ್‍ನಲ್ಲಿ ಕೊಡುತ್ತಿದ್ದರು. ಕ್ಯೂನಲ್ಲಿ ‘ಇತರೆ ಬಡವರ’ ಮಧ್ಯೆ ನಿಂತು ಟಿಕೆಟ್‍ಕೊಳ್ಳುವ ಸ್ವಭಾವ ಆರ್ಥಿಕವಾಗಿ ಗಟ್ಟಿಯಾಗಿದ್ದ ಜನರಿಗೆ ಸಾಧ್ಯವೇ ಇರುತ್ತಿರಲಿಲ್ಲಿ. ಕನ್ನಡಿಗ ಒಂದು ರೀತಿಯಲ್ಲಿ ‘ಕ್ಲಾಸ್ ಆಡಿಯನ್ಸ್’ ಆಗಿದ್ದ. ತಮಿಳಿನ ವೈಭವಕ್ಕೆ ಸರಿದೂಗದ ಕನ್ನಡ ಚಿತ್ರಗಳ ಬಗೆಗೆ ಒಂದು ರೀತಿಯ ಅಸಡ್ಡೆ. ಹಿಂದಿ ಹಾಗು ಇಂಗ್ಲಿಷ್‍ನ ಬಣ್ಣದ ಚಿತ್ರಗಳ ವೈಭವದಲ್ಲಿ ತಮ್ಮನ್ನು ಗುರುತಿಸಿಕೊಂಡು ಮಧ್ಯಮ ವರ್ಗದ ಜನರು ಖುಷಿಯಾಗಿದ್ದರು. ಇವರಿಗೆ ಕ್ಲಾಸ್ ಐಡೆಂಟಿಟಿ ಇರುತ್ತಿತ್ತಾದರೂ “ಸ್ಟಾರ್ ಐಡೆಂಟಿ”ಯ ಬಗೆಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲಿ. ತಲೆಕೆಡಿಸಿಕೊಂಡರೂ ಶಿಷ್ಟರ ಪರಿಭಾಷೆಯಲ್ಲಷ್ಟೆ ಅದು ವ್ಯಕ್ತವಾಗುತ್ತಿದ್ದುದು. ಸಾಮೂಹಿಕ ಸನ್ನಿಗೆ ಆಸ್ಪದವೇ ಇರುತ್ತಿರಲಿಲ್ಲಿ. ಸಾಮೂಹಿಕ ಸನ್ನಿ ಎಂದರೆ ಜನ ಸಮುದಾಯ ಸಾಗರದಂತೆ ಥಿಯೇಟರುಗಳ ಕಡೆ ಮೆರವಣಿಗೆಯಲ್ಲಿ ಬರುತ್ತಿರಲಿಲ್ಲಿ.

ಎಂ.ಜಿ.ಆರ್, ಶಿವಾಜಿ ಗಣೇಶನ್ ಚಿತ್ರಗಳು ಬಿಡುಗಡೆಯಾದರೆ ನೀರಸವಾಗುತ್ತಿರಲಿಲ್ಲಿ. ಬೃಹತ್‍ಗಾತ್ರದ ಸ್ಟಾಗಳನ್ನು ನಿರ್ಮಾಣ ಮಾಡಿ ಮೆರವಣಿಗೆಯಲ್ಲಿ ಬರುತ್ತಿದ್ದರು. ಥಿಯೇಟರುಗಳನ್ನು ಕ್ರೇಪ್‍ಪೇಪನಿಂದ ಅಲಂಕರಿಸಿ ಪ್ರೇಕ್ಷಕನಿಗೆ ಸಿಹಿ ಹಂಚಲಾಗುತ್ತಿತ್ತು. ಪ್ರಥಮ ಟಿಕೆಟ್ ಕೊಳ್ಳಲು ಪಂದ್ಯಗಳೇ ಆಗುತ್ತಿದ್ದವು. ಈ ಸಾಮೂಹಿಕ ಚಟುವಟಿಕೆ ಸಾಂಸ್ಕೃತಿಕ ಚಟುವಟಿಕೆಯಾಗಿ ಹೋಗುತ್ತಿತ್ತು. ಈ ಸಾಂಸ್ಕೃತಿಕ ಚಟುವಟಿಕೆ ಭಾಷಾ ಸ್ವಾಭಿಮಾನದ ಚಟುವಟಿಕೆಯಾಗುತ್ತಿತ್ತು – ಇದು ಪ್ರೇಕ್ಷಕ ವರ್ಗದ ಸಂಕ್ಷಿಪ್ತ ಪರಿಚಯ.

ನಟನೆ ವೃತ್ತಿಯಾಗಿದ್ದ ಎಷ್ಟೋ ಕನ್ನಡಿಗರ ಮಧ್ಯೆ ಕಲ್ಯಾಣ್‍ಕುಮಾರ್ ಎಂ.ಜಿ.ಆರೊಂದಿಗೆ ‘ಪಾಶಂ’ ಚಿತ್ರದಲ್ಲಿ ನಟಿಸಿದ್ದರು. ಚಿತ್ರ ಯಶಸ್ಸು ಕಂಡಿರಲಿಲ್ಲ. ಶ್ರೀಧರ್ ನಿರ್ದೇಶನದ ‘ನೆಂಜಿಲ್ ಒರು ಆಲಯಂ’ನಲ್ಲಿ ನಟಿಸಿದರು. ಚಿತ್ರ ಯಶಸ್ವಿಯಾದಾಗ ಅವರು ತಮಿಳಿನ ಸ್ಟಾರ್ ಆದರು. ಅಂದರೆ ಕನ್ನಡದ ಮಟ್ಟಿಗೆ ಸ್ಟಾನ ರೇಟ್ ಕೇಳಲಾರಂಭಿಸಿದ್ದರು. ಉದಯ್‍ಕುಮಾರ್ ಖಳನಟರಾಗಿದ್ದರು. ಸುದರ್ಶನ್‍ರೂ ಮಂಕಾಗಿದ್ದರು. ಉಳಿದವರಲ್ಲಿ ರಾಜ್‍ಕುಮಾರ್ ಹೊಟ್ಟೆಪಾಡಿನ ನಟನಾಗಿದ್ದಾಗ ಕನ್ನಡ ಚಿತ್ರ ನಿರ್ಮಾಪಕ, ನಿರ್ದೇಶಕ ಹೇಳಿದಂತೆ ಕೇಳುವ ವಿನಯವಂತರಾಗಿದ್ದರು. ‘ಎಂ.ಜಿ.ಆರ್, ಶಿವಾಜಿ ಗಣೇಶನ್, ಎನ್.ಟಿ.ರಾಮರಾವ್’ – ಈ ಮೂವರು ನಟರ ಯಶಸ್ಸಿನ ಎರಕಕ್ಕೆ ರಾಜ್‍ರನ್ನು ಕನ್ನಡ ಚಿತ್ರರಂಗ ತಿದ್ದಲಾರಂಭಿಸಿತು. ತಮಿಳು – ತೆಲುಗು ಚಿತ್ರಗಳು ಪ್ರವೇಶಿಸಿದ ಕರ್ನಾಟಕದ ಇತರೆ ಜಿಲ್ಲೆಗಳಲ್ಲಿ ರಾಜ್‍ರ ಚಿತ್ರಗಳು ಯಶಸ್ವಿಯಾಗಲಾರಂಭಿಸಿದವು. ಹೀಗಾಗಿ, ‘ಹಾಕಿದ ದುಡ್ಡಿಗೆ ಮೋಸವಿಲ್ಲ’ ಎಂಬಂತಹ ಧೋರಣೆ ಕಾಣಿಸಿಕೊಂಡಿತು.

ಎಂ.ಜಿ.ಆರ್ ಚಿತ್ರಗಳಲ್ಲಿ ‘ತಮಿಳು ಅನ್ನೈ’ ತಮಿಳರಿಗೆ ಐಡೆಂಟಿಟಿಯಾಗಿದೆ. ಅದೇ ಸೂತ್ರವನ್ನು ಕನ್ನಡದಲ್ಲಿ ಬಳಸಿಕೊಂಡು ಕನ್ನಡ ತಾಯಿ, ಜೈ ಭುವನೇಶ್ವರಿ, ‘ರಾಜರಾಜೇಶ್ವರಿ’ ಇತ್ಯಾದಿಯೂ ಬಂತು. ರಾಜ್‍ರೊಬ್ಬರೇ ನೂರು ಚಿತ್ರಗಳನ್ನು ಪೂರೈಸಿದ ಮೊದಲ ಕನ್ನಡಿಗರಾದರು.

ತಮಿಳಿನ ಅನ್ನೈ, ಭುವನೇಶ್ವರಿ ತೆರೆಗಷ್ಟೇ ಸೀಮಿತವಾಗಲಿಲ್ಲ. ಜನರ ನಡುವೆಯೂ ಒಂದು ತೆರನಾದ ಆವೇಶವನ್ನು ತಂದೊಡ್ಡುವಂತಹ ಸಂಗತಿಗಳಾಗಿಬಿಟ್ಟಿದ್ದವು. ಕನ್ನಡ ಚಳವಳಿಯನ್ನು ಕನ್ನಡ ಪತ್ರಿಕೆಗಳು ಪ್ರಮುಖವಾಗಿ ಪ್ರಕಟಿಸಲಾರಂಭಿಸಿದವು. ಮೂರನೇ ಪುಟದಲ್ಲಿ ಸಿಂಗಲ್ ಕಾಲಂ ಆಗಿ ಪ್ರಕಟಗೊಳ್ಳುತ್ತಿದ್ದ ಸುದ್ದಿ ಮುಖಪುಟದಲ್ಲಿ ರಾರಾಜಿಸತೊಡಗಿದವು. ವಾಟಾಳ್‍ರನ್ನು ಪೋಲೀಸರು ಸೆರೆ ಹಿಡಿದು ದರದರನೆ ಎಳೆದೊಯ್ಯುತ್ತಿರುವ ದೃಶ್ಯದ ಫೋಟೋಗಳೂ ಸಹ ಪ್ರಕಟವಾಗಲಾರಂಭಿಸಿ ವಾಟಾಳ್ ನಾಗರಾಜ್‍ರವರು ಕನ್ನಡಕ್ಕಾಗಿ ಹೋರಾಡುವುದನ್ನೇ ತಮ್ಮ ವೃತ್ತಿಯಾಗಿಸಿಕೊಂಡರು. ರಾಜ್ಯೋತ್ಸವಗಳನ್ನು ಹಮ್ಮಿಕೊಳ್ಳಲಾಯಿತು. ಕನ್ನಡನಾಡಿನಲ್ಲಿ ಕನ್ನಡ ರಾಜ್ಯೋತ್ಸವವಾದರೆ ಜನ ಬರುತ್ತಿರಲಿಲ್ಲಿ. ಜನರನ್ನು ತರುವುದಾದರೂ ಹೇಗೆ? ಕನ್ನಡ ನಟನಟಿಯರು ರಾಜ್ಯೋತ್ಸವ ಕಾರ್ಯಕ್ರಮಗಳ ವೇದಿಕೆಯನ್ನು ಅಲಂಕರಿಸತೊಡಗಿದರು. ಕನ್ನಡ ಭಾಷೆಯ ಸೇನೆಗೂ ಕನ್ನಡ ಚಿತ್ರೋದ್ಯಮಕ್ಕೂ ಹೀಗೆ ನಂಟು ಬೆಳೆಯತೊಡಗಿದಾಗ ರಾಜ್‍ಕುಮಾರು ಇನ್ನೂ ಮದ್ರಾಸಿನಲ್ಲೇ ಇದ್ದರು.

ರಾಜ್‍ಕುಮಾರಿಗೆ ಎಂ.ಜಿ.ಆರ್, ಶಿವಾಜಿ ಗಣೇಶನ್ ಮುಂತಾದವರು ಆಕ್ರಮಿಸಿದ್ದ ರೀತಿಯಲ್ಲಿ ಬೆಂಗಳೂರನ್ನು ಆಕ್ರಮಿಸಲಾಗಲಿಲ್ಲಿ. ಅಂದರೆ ಬೆಂಗಳೂರಿನಲ್ಲಿ ರಾಜ್‍ಕುಮಾರ ಬೆಳವಣಿಗೆ ಸಹಜವಾದದ್ದಲ್ಲ. ಅಂದರೆ ಎಂ.ಜಿ.ಆರ್, ಶಿವಾಜಿ ಬೆಂಗಳೂರಿನಲ್ಲಿ ಸ್ಟಾಗಳಾಗಿದ್ದಂತೆ ರಾಜ್‍ಕುಮಾರಿನ್ನೂ ಸ್ಟಾರ್ ಆಗಿರಲಿಲ್ಲ. ಆದರೆ ಕನ್ನಡ ಚಿತ್ರ ನಿರ್ಮಾಪಕರಿಗೆ ಪ್ರಮುಖ ನಟರಾಗಿದ್ದರು. ನೂರು ಚಿತ್ರಗಳನ್ನು ಪೂರೈಸಿದ್ದರು. ಮದ್ರಾಸಿನಲ್ಲಿ ಅವರ ವಾಸ್ತವ್ಯ, ಚಿತ್ರೋದ್ಯಮದವರೆಲ್ಲ ಪರಿಚಿತರೆ. ಕನ್ನಡಿಗರು ರಾಜ್‍ರನ್ನು, ಜೊತೆಗೆ ಎಂ.ಜಿ.ಆರ್, ಶಿವಾಜಿಯನ್ನು ಸ್ವೀಕರಿಸಿದಂತೆ ರಾಜ್‍ರನ್ನು ಮದ್ರಾಸಿನಲ್ಲಿ ತಮಿಳರು ‘ಸ್ಟಾರ್’ ಆಗಿ ಸ್ವೀಕರಿಸಲಿಲ್ಲ. ನೂರು ಚಿತ್ರಗಳನ್ನು ಪೂರೈಸಿದ್ದ ದಾಕ್ಷಿಣಾತ್ಯ ನಟರ ಪೈಕಿ ರಾಜ್‍ರವರೂ ಒಬ್ಬರಾಗಿದ್ದ ಸಂದರ್ಭದಲ್ಲಿ ತಮಿಳು ಚಿತ್ರರಂಗದಿಂದ ರಾಜ್‍ರಿಗೆ ಆಹ್ವಾನ ಬಂದಾಗ ಅವರು ಹೊಸ ಪ್ರಯೋಗ ಮಾಡಲು ಹಿಂಜರಿದು ನಾನು ಕನ್ನಡ ಚಿತ್ರದಲ್ಲಷ್ಟೇ ನಟಿಸುವುದು ಎಂದು ವಿನಯವಾಗಿಯೇ ಆಹ್ವಾನವನ್ನು ತಿರಸ್ಕರಿಸಿದರು. ಸಹಜವಾಗಿಯೇ ರಾಜ್‍ರನ್ನು ಕನ್ನಡ ಚಳವಳಿಗಾರರು ಕನ್ನಡ ಸ್ವಾಭಿಮಾನದ ಪ್ರತೀಕವಾಗಿ ಕಾಣಲಾರಂಭಿಸಿದಾಗ ‘ಕನ್ನಡಿಗ ರಾಜ್’ ರವರ ವರ್ಚಸ್ಸು ಬೆಳೆಯಲಾರಂಭಿಸಿತು. ಹೊರನಾಡಿನಲ್ಲಿದ್ದುಕೊಂಡು ‘ಕನ್ನಡ ಸೇವೆ’ಯನ್ನು ರಾಜ್‍ರವರು ಮಾಡುವ ರೀತಿ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿ ಕಂಡಿತಲ್ಲದೆ ರಾಜ್‍ರವರು ‘ಮೇಯರ್ ಮುತ್ತಣ್ಣ’, ‘ದೂರದ ಬೆಟ್ಟ’ ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಕರ್ನಾಟಕದ ಜಿಲ್ಲಾ ಪ್ರದೇಶಗಳಲ್ಲಿ ಪ್ರಮುಖರಾಗತೊಡಗಿ ಅವರ ಚಿತ್ರಗಳೂ ಸಹ ಎಂ.ಜಿ.ಆರ್ – ಶಿವಾಜಿ ಗಣೇಶನ್‍ರಂತೆಯೇ ಯಶಸ್ವಿಯಾಗತೊಡಗಿದವು. ರಾಜ್‍ಕುಮಾರ್ – ಕನ್ನಡ ಚಿತ್ರಗಳು ಹೀಗೆ ಒಟ್ಟೊಟ್ಟಿಗೆ ತಳಕು ಹಾಕಿಕೊಂಡು ಯಶಸ್ವಿಯಾಗತೊಡಗಿದಾಗಲೇ ತಮ್ಮ ವರ್ಚಸ್ಸಿಗೆ ತಕ್ಕಂತೆ ಕನ್ನಡ ಚಿತ್ರ ನಿರ್ಮಾಪಕರು ತಮ್ಮನ್ನು ಕಾಣುತ್ತಿಲ್ಲ ಎಂಬ ಕೊರಗು ರಾಜ್‍ರಿಗೆ ಕಾಣಿಸಿಕೊಂಡಿರಬೇಕು.

ಕನ್ನಡ ಸ್ವಾಭಿಮಾನ – ರಾಜ್ಯೋತ್ಸವ – ರಾಜ್ ಒಂದಾಗತೊಡಗಿದರು. ಬೆಂಗಳೂರಿನ ಸುಭಾಷ್‍ನಗರದಲ್ಲಿ ನಡೆಯುತ್ತಿದ್ದ ವಸ್ತು ಪ್ರದರ್ಶನದಲ್ಲಿ ರಾಜ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳತೂಡಗಿದರು. ಬೆಂಗಳೂರಿನಿಂದ ಮದ್ರಾಸಿಗೆ ಪ್ರವಾಸ ಹೋಗುತ್ತಿದ್ದ ಕನ್ನಡಿಗರು ರಾಜ್‍ಕುಮಾರನ್ನೂ ಒಮ್ಮೆ ಭೇಟಿ ಮಾಡಿ ಬರುವ ಪರಿಪಾಠವೂ ಬೆಳೆಯಿತು. ಬೆಳಗಿನ ಹೊತ್ತು ರಾಜ್‍ರವರು ಚಿತ್ರೀಕರಣಕ್ಕೆ ಹೊರಡುವ ಮುನ್ನ ಕರ್ನಾಟಕದಿಂದ ತಮ್ಮನ್ನು ಭೇಟಿಯಾಗಲೆಂದೇ ಬರುತ್ತಿದ್ದ ಅಭಿಮಾನಿಗಳೊಂದಿಗೆ ಮಾತನಾಡಿಕೊಂಡು ಹೋಗುವ ಪರಿಪಾಠ ಬೆಳೆಸಿಕೊಂಡರು.

ಇಷ್ಟಾದರೂ ಕನ್ನಡ ಚಿತ್ರಗಳ ನಿರ್ಮಾಣ ಕನ್ನಡದ ನೆಲದಲ್ಲಿ ಆಗುತ್ತಿರಲಿಲ್ಲಿ. ಕನ್ನಡ ಭಾಷಾ ಚಳವಳಿ ಸ್ವಾಭಿಮಾನದ ಪ್ರಶ್ನೆಗಳು ಹುಟ್ಟಿಕೊಂಡ ಪರಿಣಾಮವಾಗಿ ಬೆಂಗಳೂರಿನ ಚಾಮುಂಡೇಶ್ವರಿ, ಕಂಠೀರವ, ಮೈಸೂರಿನ ಪ್ರೀಮಿಯರ್ ಸ್ಟುಡಿಯೋಗಳಲ್ಲಿ ಚಿತ್ರೀಕರಣದ ಚಟುವಟಿಕೆಗಳು ಆರಂಭವಾದವು. ರಾಜ್‍ರವರು ಹದಿನೈದು ದಿನ ಬೆಂಗಳೂರಿನ ಹೋಟೆಲ್ ಹೈಲ್ಯಾಂಡ್ ಹಾಗು ಉಳಿದ ದಿನಗಳನ್ನು ಮದ್ರಾಸಿನಲ್ಲಿ ಕಳೆಯತೊಡಗಿದರು. ವರ್ಚಸ್ಸು ಹೆಚ್ಚಿದಂತೆಲ್ಲಾ ಬೇಡಿಕೆ ಹೆಚ್ಚಿ – ಬೇಡಿಕೆ ಹೆಚ್ಚಿದಂತೆಲ್ಲಾ ರಾಜ್‍ಕುಮಾರ ಸಂಭಾವನೆಯೂ ಏರತೊಡಗಿತು.

ಈ ಮಧ್ಯೆ ಕನ್ನಡ ರಾಜರಾಜೇಶ್ವರಿಯ ಸ್ಲೋಗನ್ನನ್ನು ಬಳಸುವುದು ಒಂದು ರೀತಿ ಹುಸಿಯಾದುದು ಎಂಬಂತೆಯೋ ಏನೋ ಪುಟ್ಟಣ್ಣ ಕಣಗಾಲರು ಕನ್ನಡ ಕಾದಂಬರಿಗಳನ್ನು ಆಧರಿಸಿ, ಕನ್ನಡ ಕವಿಗಳ ಕವನಗಳನ್ನು ಬಳಸಿಕೊಂಡು ಭಾಷೆಯೊಂದೇ ಅಲ್ಲ ಸಂಸ್ಕೃತಿಯೂ ಇದೆ ಎಂಬ ಮಾರ್ಗದಲ್ಲಿ ಹೊರಟು ಯಶಸ್ವಿಯೂ ಆಗಿದ್ದರು. ಅಂದರೆ ರಾಜ್‍ರ ಅನಿವಾರ್ಯತೆಯನ್ನು ಅವರು ಉಪೇಕ್ಷಿಸಿಯೂ ಯಶಸ್ವಿಯಾದರು. ‘ಮಲ್ಲಮ್ಮನ ಪವಾಡ’, ‘ಸಾಕ್ಷಾತ್ಕಾರ’, ‘ಕರುಳಿನ ಕರೆ’ ಈ ಮೂರೂ ಚಿತ್ರಗಳ ಯಶಸ್ಸಿನ ಪಾಲನ್ನು ರಾಜ್‍ಕುಮಾರ್ ಪುಟ್ಟಣ್ಣನವರೊಂದಿಗೆ ಹಂಚಿಕೊಳ್ಳಲೇಬೇಕಾಯ್ತು. ಕನ್ನಡದ ಮಟ್ಟಿಗೆ ರಾಜ್ ನಟರಾದರೆ, ನಟರನ್ನೇ ಹುಟ್ಟುಹಾಕಬಲ್ಲ ತಾಕತ್ತಿನ ನಿರ್ದೇಶಕರಾದರು ಪುಟ್ಟಣ್ಣ ಕಣಗಾಲ್.

‘ನಾಗರಹಾವು’ ಹಾಗೂ ‘ಬಂಗಾರದ ಮನುಷ್ಯ’ ಒಂದೇ ವರ್ಷದಲ್ಲಿ ಬಿಡುಗಡೆಯಾದ ಚಿತ್ರಗಳು. ಅಪಾರ ಯಶಸ್ಸು ಗಳಿಸುವ ಮೂಲಕ ವಿಷ್ಣುವರ್ಧನ್ ಹುಟ್ಟಿಕೊಂಡಿದ್ದರು. ರಾಜ್ ವಿಷ್ಣುವರ್ಧನ್‍ರ ನಡುವೆ ರಾಜೇಶ್, ಶ್ರೀನಾಥ್ ಹುಟ್ಟಿಕೊಂಡಿದ್ದರಲ್ಲದೆ ಅಲ್ಪ ಸ್ವಲ್ಪ ಯಶಸ್ಸನ್ನೂ ಕಂಡಿದ್ದರು. ಅಂದರೆ ಕನ್ನಡ ಚಿತ್ರೋದ್ಯಮ ರಾಜ್‍ರನ್ನು ಮೀರಿ ವಿಸ್ತರಿಸಿಕೊಳ್ಳುತ್ತಿತ್ತು. ರಾಜ್ ಇಲ್ಲದಿದ್ದರೂ ಉಳಿದವರು ಇದ್ದರು. ಎಂ.ಜಿ.ಆರ್, ಶಿವಾಜಿ ಗಣೇಶನ್ ಮುಂತಾದವರಿಗಷ್ಟೇ ಅಲ್ಲದೆ ಕನ್ನಡದ ಇತರೆ ನಟರಿಂದಲೂ ರಾಜ್‍ಕುಮಾರ್ ಪೈಪೋಟಿ ಎದುರಿಸಬೇಕಾಯಿತು.

ರಾಜ್‍ಕುಮಾರಿಗೆ ಎಂ.ಜಿ.ಆರ್, ಶಿವಾಜಿ ಗಣೇಶನ್ ಮುಂತಾದವರು ‘ಆಲ್ಟರ್ ಈಗೋ’, ಎಂ.ಜಿ.ಆಗೆ ಶಿವಾಜಿ, ಹೀಗೆ ಒಂದರೊಡನೆ ಇನ್ನೊಂದು ಬೆಸೆದುಕೊಂಡೇ ಚಿತ್ರರಂಗ ರೂಪುಗೊಳ್ಳುತ್ತಾ ಹೋಗುತ್ತಿರುತ್ತದೆ. ದ್ವೇಷ – ಪ್ರೀತಿ ಎರಡೂ ಸಹಜವಾದ ಸ್ಥಿತಿಯೇ – ದೃಷ್ಟಾಂತವಾಗಿ ಹೇಳಬಹುದಾದರೆ ಯು.ಆರ್.ಅನಂತಮೂರ್ತಿಯವರ ‘ಮೌನಿ’ ಕತೆಯಲ್ಲಿ ಬರುವ ಅಪ್ಪಣ್ಣಭಟ್ಟ – ಕುಪ್ಪಣ್ಣಭಟ್ಟರಿದ್ದಂತೆ.

ಎಂ.ಜಿ.ಆರ್ ರಲ್ಲಿ ಸಂಪೂರ್ಣವಾಗಿ ರಾಜಕೀಯದಲ್ಲಿ ಮುಳುಗಿದರು. ಶಿವಾಜಿ ಗಣೇಶನ್ ಸಹ ಮಂಕಾದರು. ಇತ್ತ ರಾಜ್‍ರವರಿಗೆ ಉಳಿದದ್ದು ಕನ್ನಡ ಚಿತ್ರರಂಗವೊಂದೇ. ಕನ್ನಡ ಚಿತ್ರೋದ್ಯಮಕ್ಕೆ ಎಂ.ಜಿ.ಆರ್, ಶಿವಾಜಿ ಮುಂತಾದವರು ಪೈಪೋಟಿ ನೀಡಿದಾಗ ಇದ್ದ ರಾಜ್‍ಕುಮಾರವರೇ ಬೇರೆ. ಅನಂತರದ ರಾಜ್‍ಕುಮಾರವರೇ ಬೇರೆಯಾದರು. ಅಂದರೆ ವಿನಯಶಾಲಿ ಕಲಾವಿದ ‘ಸ್ಟಾರ್’ ಆದರು. ವಿನಯಶಾಲಿ ಕಲಾವಿದ ಸ್ಟಾರ್ ರಾಜ್‍ಕುಮಾರಾಗಿ ಬೆಳೆಯಲು ಕನ್ನಡ ಭಾಷಾ ಚಳವಳಿ ಒಂದು ರೀತಿಯಲ್ಲಿ ಕಾರಣವಾದಂತೆ, ರಾಜ್ ತಮ್ಮ ಚಿತ್ರಗಳನ್ನು ತಾವೇ ಅಂದರೆ ತಮ್ಮ ಕುಟುಂಬದವರೇ ನಿರ್ಮಿಸಲು ಪ್ರಾರಂಭಿಸಿದ್ದು ಮಾತ್ರವಲ್ಲ ರಾಜ್ ಅಭಿಮಾನಿಗಳ ಸಂಘವೂ ಒಂದು ಕಾರಣ. ಇದು ಬೆಳೆಯಲು ಬೇರೆಯ ಕಾರಣಗಳೂ ಇದ್ದವು. ಅವುಗಳೆಂದರೆ….

ವಿಷ್ಣುವರ್ಧನ್ ಮದ್ರಾಸಿಗೆ ಹೋಗಲಿಲ್ಲ. ಕನ್ನಡ ಭಾಷಾ ಚಳವಳಿ ವ್ಯಾಪಕವಾದಂತೆಯೇ ಕನ್ನಡ ಚಿತ್ರೋದ್ಯಮ ಚಟುವಟಿಕೆಗಳು ವಿಸ್ತರಿಸಿಕೊಳ್ಳುತ್ತದೆಯಲ್ಲದೆ ಕರ್ನಾಟಕಕ್ಕೆ ಸಂಪೂರ್ಣ ಸ್ಥಳಾಂತರಿಸಿಕೊಳ್ಳುವುದು ಇತ್ತು. ‘ಬಂಗಾರದ ಮನುಷ್ಯ’ ನಿರ್ದೇಶಿಸಿದ ಸಿದ್ದಲಿಂಗಯ್ಯನವರು ಪುಟ್ಟಣ್ಣನವರ ಜಾಡನ್ನೇ ಹಿಡಿದರು – ಅಂದರೆ ವಿಷ್ಣುವರ್ಧನ್‍ರೊಂದಿಗೆ ‘ಭೂತಯ್ಯನ ಮಗ ಅಯ್ಯು’ವನ್ನು ನಿರ್ದೇಶಿಸಿದಾಗ ಹುಟ್ಟಿಕೊಂಡಿದ್ದ ವಿಷ್ಣುವರ್ಧನ್‍ರು ರಾಜ್‍ಕುಮಾರಿಗೆ ಪರ್ಯಾಯವಾಗಿ ಬೆಳೆಯತೊಡಗಿದರು. ಎಂ.ಜಿ.ಆರ್, ಶಿವಾಜಿ ಗಣೇಶನ್‍ರಿಗೆ ಸ್ಟಾಗಳನ್ನು ಮೆರವಣಿಗೆಯಲ್ಲಿ ತರುವುದರ ಬಗೆಗೆ ಪ್ರಸ್ತಾಪಿಸಲಾಗಿದೆ. ಅಭಿಮಾನಿಗಳ ಸಂಘವಿಲ್ಲದೆ ಹೋದರೆ ಕಲಾವಿದ ಸ್ಟಾರ್ ಆಗುವುದೇ ಇಲ್ಲ. ರಾಜ್‍ಕುಮಾರ ಅಭಿಮಾನಿಗಳ ಸಂಘ ಹುಟ್ಟಿಕೊಂಡಿತು – ಆಗಾಗ್ಗೆ ವಿಷ್ಣುವರ್ಧನ್ ಚಿತ್ರಗಳು ಬಿಡುಗಡೆಯಾದಾಗಲೆಲ್ಲ ಇರುಸುಮುರಿಸಿನ ಸಂಗತಿಗಳು ನಡೆಯತೊಡಗಿದವು.

ರಾಜ್‍ಕುಮಾರವರ ‘ಶಂಕ-ಗುರು’ ಅರ್ಧಕ್ಕೆ ನಿಂತು ಹೋಗಿತ್ತು. ಘನತೆಗೆ ತಕ್ಕದ್ದಲ್ಲವೆಂದು ರಾಜ್‍ಕುಮಾರವರೇ ಅದನ್ನು ಪೂರೈಸಿದರು. ಮೂರು ರಾಜ್‍ಕುಮಾರನ್ನು ಒಂದೇ ಕಡೆ ಕಂಡ ಅಭಿಮಾನಿಗಳು ಬೆರಗಾದರು. ಆ ಚಿತ್ರ ಅದ್ಭುತವಾದ ಯಶಸ್ಸು ಕಂಡಿತು. ಈ ಮಧ್ಯೆ ಅನಂತ್‍ನಾಗ್, ಶಂಕನಾಗ್‍ರವರೂ ಹುಟ್ಟಿಕೊಂಡಿದ್ದರು. ರಾಜ್‍ಕುಮಾರ್ ‘ಶಂಕ-ಗುರು’ ಯಶಸ್ಸಿನೊಂದಿಗೆ ಸಾಂಸ್ಕೃತಿಕವಾಗಿ ಮಾತ್ರವಲ್ಲ ಚಿತ್ರೋದ್ಯಮದಲ್ಲೂ ಸ್ಟಾರ್ ಆದರು. ಯಶಸ್ಸಿನ ಪ್ರತಿಫಲ ಬೇರೆಯವರಿಗಾದರೂ ಯಾಕೆ ಹೋಗಬೇಕು? ಹೀಗಾಗಿ ರಾಜ್ ಕುಟುಂಬ ವರ್ಗದವರೇ ರಾಜ್‍ರ ಚಿತ್ರಗಳನ್ನು ನಿರ್ಮಿಸತೊಡಗಿದರು.

ಎಂ.ಜಿ.ಆರ್, ಶಿವಾಜಿ ಗಣೇಶನ್‍ರ ಚಿತ್ರಗಳು ಹೆಚ್ಚೂ ಕಡಿಮೆ ನಿಂತೇ ಹೋಗಿದ್ದವು. ತೆಲುಗಿನಲ್ಲಿ, ಎನ್.ಟಿ.ಆರ್, ಏ.ಎನ್.ಆರನ್ನು ಮೀರಿ ಚಿರಂಜೀವಿ ಎಂಬ ಸ್ಟಾರ್ ಉದಯಿಸಿ ಬೆಂಗಳೂರನ್ನು ಆಕ್ರಮಿಸಿಯಾಗಿತ್ತು. ಕಮಲಹಾಸನ್, ರಜನೀಕಾಂತ್ ಮುಂತಾದವರು ಬೆಂಗಳೂರು ಮಾರುಕಟ್ಟೆಯನ್ನು ಆಕ್ರಮಿಸಿದ್ದರು. ರಾಜ್‍ರ ಚಿತ್ರಗಳಿಗೆ ಪೈಪೋಟಿ ತಪ್ಪಲೇ ಇಲ್ಲ. ಈ ಸಂದರ್ಭದಲ್ಲೇ ಅವರ ನೆರವಿಗೆ ಬಂದದ್ದು ‘ಗೋಕಾಕ್ ಚಳವಳಿ’. ಇದರಿಂದಾಗಿ ರಾಜ್ ಕನ್ನಡ ಚಿತ್ರೋದ್ಯಮದಲ್ಲಿ ಭಾಷೆಯಲ್ಲಿ, ಸಂಸ್ಕೃತಿಯಲ್ಲಿ ವ್ಯಕ್ತಿಯಾಗಲ್ಲದೆ ‘ಶಕ್ತಿ’ಯಾಗಿ ಸಮೀಕರಣಗೊಂಡುಬಿಟ್ಟಿದ್ದರು. ಅಂದರೆ ‘ಕನ್ನಡ ಭಾಷೆ – ಸಿನಿಮಾ – ಸಂಸ್ಕೃತಿ – ರಾಜ್‍ಕುಮಾರ್’ ಒಂದರಿಂದ ಮತ್ತೊಂದನ್ನು ಬೇರೆ ಮಾಡಲಾಗದಷ್ಟು ಏಕತ್ರವಾಗಿ ಏಕೀಕರಣವಾಗಿ ಹೋಯಿತು.

ಕನ್ನಡ ಚಿತ್ರೋದ್ಯಮ ಬೆಂಗಳೂರಿನಲ್ಲಿ ನೆಲೆಯಾಗಲು ಸಹಾಯಧನ, ತೆರಿಗೆ ವಿನಾಯ್ತಿ ಘೋಷಿಸಿದ ಸರ್ಕಾರ ‘ಕನ್ನಡ ಚಿತ್ರಗಳ ಚಿತ್ರೀಕರಣ ಕರ್ನಾಟಕದಲ್ಲೇ ಆಗಬೇಕು’ ಎಂದೂ ನಿರ್ಬಂಧಿಸಿದಾಗ ಕರ್ನಾಟಕದಲ್ಲಿ ಚಿತ್ರೋದ್ಯಮ ಬೇರೂರತೊಡಗಿತು. ಅನಿವಾರ್ಯವಾಗಿ ರಾಜ್‍ಕುಮಾರು ಸಿನಿಮಾದಲ್ಲಿ, ಭಾಷೆಯಲ್ಲಿ, ಸಂಸ್ಕೃತಿಯಲ್ಲಿ ‘ಅಣ್ಣಾವ್ರು’ ಆಗಿ ಬೆಂಗಳೂರಿನಲ್ಲೇ ಬಂದು ನೆಲೆಸಿದರು. ಶ್ರೀನಾಥ್, ರಾಜೇಶ್, ವಿಷ್ಣುವರ್ಧನ್, ಅನಂತ್‍ನಾಗ್, ಶಂಕನಾಗ್ ಮುಂತಾದ ಎರಡನೆ ಪೀಳಿಗೆ ನಟರೆ ಇವರೊಂದಿಗೆ – ಹೊಸ ಹೊಸ ಕಾಸ್ಟ್ಯೂಮ್ಸ್, ಡ್ಯಾನ್ಸ್, ಹಾಡುಗಳ ಪರಿಭಾಷೆಯೊಂದಿಗೆ – ಅಂದರೆ ಕನ್ನಡ ಜನಜೀವನ – ಸಂಸ್ಕೃತಿಗೆ ಸಂಬಂಧವೇ ಇಲ್ಲದ ರೀತಿಯ ನವಪೀಳಿಗೆಯ ನಟರು ಕಾಣಿಸಿಕೊಳ್ಳಲಾರಂಭಿಸಿದರು. ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಕುಮಾರ್ ಬಂಗಾರಪ್ಪ, ರವಿಚಂದ್ರನ್, ಶಶಿಕುಮಾರ್ ಇವರುಗಳನ್ನು – ನವಪೀಳಿಗೆಯ ನಟರು ಎಂದೇ ಕರೆಯಬಹುದು. ರಾಜ್‍ಕುಮಾರ್, ಕಲ್ಯಾಣ್‍ಕುಮಾರ್, ಉದಯ್‍ಕುಮಾರ್ ಮುಂತಾದವರು ಒಂದು ಪೀಳಿಗೆಯವರು. ರಾಜೇಶ್, ಗಂಗಾಧರ್, ಶ್ರೀನಾಥ್ ಒಂದು ಪೀಳಿಗೆಯವರು. ವಿಷ್ಣುವರ್ಧನ್, ಅನಂತ್‍ನಾಗ್, ಶಂಕನಾಗ್, ಮುಂತಾದವರು ಒಂದು ಪೀಳಿಗೆಯವರು, ಶಿವರಾಜ್‍ಕುಮಾರ್, ಕುಮಾರ್ ಬಂಗಾರಪ್ಪ, ರಾಘವೇಂದ್ರ ರಾಜ್‍ಕುಮಾರ್, ರವಿಚಂದ್ರನ್ ಮುಂತಾದವರು ಒಂದು ಪೀಳಿಗೆಯವರು. ಈ ನಾಲ್ಕೂ ಪೀಳಿಗೆಯ – ಅಥವ ವರ್ಗದ ನಡುವೆ ಕನ್ನಡ ಚಿತ್ರೋದ್ಯಮ ಹೊಸ ಅಭಿವ್ಯಕ್ತಿಯ ಸಾಧ್ಯತೆಗಳನ್ನು ಬಳಸಿಕೊಳ್ಳುವುದೇ ಇಲ್ಲ ಎಂಬ ನಿರಾಶಾದಾಯಕ ಸ್ಥಿತಿ ಇದೆ.

ಕನ್ನಡ ಭಾಷೆ – ಸಂಸ್ಕೃತಿ – ಜನಜೀವನಕ್ಕೂ ಇಂದಿನ ಕನ್ನಡ ಸಿನಿಮಾಕ್ಕೂ ಯಾವುದೇ ರೀತಿಯ ಸಂಬಂಧವೇ ಇಲ್ಲ. ಅತ್ತ ಗಂಭೀರವೂ ಅಲ್ಲದ ಪ್ರಯತ್ನಗಳ ನಡುವೆ “ಕನ್ನಡ ಸಿನಿಮಾ” ಎಂಬುದನ್ನು ಜಜಿಟಿ ಮಾಡುವುದು ಸಾಧ್ಯವೇ ಇಲ್ಲ ಎಂದೇ ಅನ್ನಿಸುತ್ತದೆ.
*****

——————————————————————————–

ಈ ಲೇಖನ “ಸಂಚಯ” ದ್ವೈ ಮಾಸಿಕ (ಜನವರಿ ೧೯೯೭) ರಲ್ಲಿ ಪ್ರಕಟಗೊಂಡಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಿವಾಯತ ಹೊತಗಿ ಹೋಯಿತೋ
Next post ತಮ್ಮನಿಗೆ

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…