ಶಬರಿ – ೧೧

ಶಬರಿ – ೧೧

ಪೂಜಾರಪ್ಪ ಒಡೆಯರ ಮನೆ ಬಳಿಗೆ ಬಂದಾಗ ಅವರು ಜೋಯಿಸರ ಜೊತೆ ಮಾತಾಡುತ್ತ. ಅಡಿಕೆಲೆ ಜಗಿಯುತ್ತ ಕೂತಿದ್ದರು. ಪೂಜಾರಪ್ಪ “ಅಡ್ ಬಿದ್ದೆ ದಣೇರ” ಎಂದು ಹೇಳಿ ಹಜಾರದ ತುದಿಯಲ್ಲಿ ನಿಂತುಕೊಂಡ.

“ಕುಂತ್ಯಳಯ್ಯ” ಎಂದರು ಒಡೆಯರು. ಕೂತುಕೂಂಡ.
“ಏನು, ನಿಮ್ ಅಟ್ಟಿ ಭಾಳ ಬದ್ಲಾಗ್ತ ಇದ್ದಂಗೈತಲ್ಲ?”- ಒಡೆಯರು ಬಿಗುವಾಗಿಯೇ ಕೇಳಿದರು.

“ನಿಮ್ಮನ್ ಕೇಳ್ದೆ ಅದೆಂಗ್ ಬದ್ಲಾಗ್ತೈತೆ ದಣೇರ”- ಪೂಜಾರಪ್ಪ ಉತ್ತರಿಸಿದ. ಉತ್ತರದಲ್ಲೇ ಒಡೆಯರನ್ನು ಎತ್ತರಿಸಿದ.

“ಅದೆಲ್ಲ ಕಂತೆ ಪುರಾಣ ಬಿಚ್‍ಬ್ಯಾಡ ಕಣಯ್ಯ ಇವಾಗ. ನಿಮ್ ಅಟ್ಟಿ ಯೆಂಗುಸ್ರೇ ಎಂಗೆಂಗೊ ಮಾತಾಡ್ತವೆ. ಕಾನೂನು ಗೀನೂನು ಅಂಬ್ತ ಕಿಸೀತವೆ. ಉಟ್ ಬಟ್ಟೆ ಕಿತ್ತು ನಡು ಬೀದಿನಾಗ್ ನಿಲ್ಲಿಸ್ ಬಿಡ್ತೀನಿ. ಒಸಿ ಉಸಾರಾಗಿರಾಕೇಳು.”

ಒಡೆಯನ ಮಾತು ಕೇಳಿ ಪೂಜಾರಪ್ಪ ಕಂಗಾಲಾದ. ಹಟ್ಟಿಯಲ್ಲಿ ಒಂದು ಕಡ್ಡಿ ಅಲುಗಾಡಿದರೂ ತನಗೆ ಗೊತ್ತಾಗುತ್ತಿತ್ತು. ಈಗ ಇದೇನೊ ಆದಂತೆ ಕಾಣುತ್ತಿದೆಯಲ್ಲ! ಆಶ್ಚರ್ಯ, ಆತಂಕಗಳಿಂದ ಕೇಳಿದ- “ಅಂತಾದ್ದೇನಾತು ದಣೇರ. ನೀವು ಅಪ್ಪಣೆ ಕೊಡ್ಸಿ. ನಡು ಬೀದೀಗೆ ನಾನೇ ಕರ್‍ಕಂಡ್ ಬತ್ತೀನಿ.”

ಒಡೆಯ ಅಡಿಕಲೆ ಉಗುಳಿದ. ಗಂಟಲು ಸರಿಮಾಡಿಕೊಂಡ. ಆನಂತರ ಜೋಯಿಸರ ಕಡೆ ತಿರುಗಿ “ನೀವೇ ಒಸಿ ಸರ್‍ಯಾಗ್ ಯೇಳ್ರಿ ಸಾಮೇರ” ಎಂದ. ಜೋಯಿಸರು ಜುಟ್ಟು ಸರಿಮಾಡಿಕೊಂಡು ಮಾತಿಗೆ ಶುರು ಮಾಡಿದರು.

“ನೋಡಯ್ಯ ಪೂಜಾರಪ್ಪ, ಕೂಲಿ ಮಾಡಾಕ್ ಬಂದಾಗ ಆ ಶಬರಿ ಭೂಮಿನಾಗೆ ಪಾಲ್ ಬರ್‍ಬೇಕು. ಉಳುವವನೇ ಹೊಲದೊಡೆಯ ಅಂತ ಕಾನೂನು ಇದೆಯಂತೆ- ಅಂತಲ್ಲ ಜಗ್ಗಿಸಿ ಮಾತಾಡ್ತ ಇದ್ಲಂತಪ್ಪ. ನಿನ್ ಮಗಳು ಗೌರೀನೂ ಇದ್ಲಂತಪ್ಪ. ಹೀಗೆಲ್ಲ ಕಾನೂನು ಅಂತ ಹೋದ್ರೆ ನಿಮ್ ಹಟ್ಟೀನೋರ್ ಹೊಟ್ಟೆ ಖಾಲೀನೇ ಇರ್‍ಬೇಕಾಗುತ್ತೆ. ಆದ್ರಿಂದ ಮುಂದೆ ಏನಾದ್ರೂ ಆಗೋಕ್ ಮುಂಚೇನ ಚಿವುಟ್‍ಬೇಕು. ತಿಳೀತೇನಯ್ಯ?”

ಪೂಜಾರಪ್ಪನಿಗೂ ಬೇಸರವಾಯಿತು. ತನ್ನ ಗಮನಕ್ಕೆ ಬಾರದೆ ಏನೆಲ್ಲ ನಡಯುತ್ತಿರಬಹುದೆಂದು ಯೋಜಿಸಿದ. ಅದೇ ಬೇಸರದಲ್ಲಿ “ಅದಂಗಾಯ್ತದೆ ಬುದ್ದೇರ ಭೂಮಿ ಕೇಳಾಕೆ? ಒಡೇರ್ ನೀವ್ ಕೊಡ್ಬೇಕು ನಾವು ಬದುಕ್ಬೇಕು. ಇದಿಲ್ಲ ಆ ಸೂರ್ಯಂದೇ ಕೆಲ್ಸ ಅನ್ನುಸ್ತೈತೆ. ಅಕ್ಸರ ಕಲ್ಸಯ್ಯ ಅಂದ್ರೆ ಅದ್ರ್ ಜತ್ಗೆ ಬ್ಯಾರೆ ಏನೇನೊ ಮಾಡ್ತಾ ಇದ್ದಂಗೈತೆ. ಇವತ್ತೇ ಓಡಿಸ್ಸಿಡ್ತೀನಿ ಆ ಕಳ್ ನನ್ ಮಗನ್ನ” ಎಂದು ಅಬ್ಬರಿಸಿದ.

ಒಡೆಯನಿಗೆ ಪೂಜಾರಪ್ಪನ ನಿಷ್ಠೆ ಇಷ್ಟವಾದರೂ ತನ್ನಂತೆ ಅಬ್ಬರಿಸಿದ್ದು ಪಥ್ಯವಾಗಲಿಲ್ಲ.

“ಯಾಕ್ಲ ಅಂಗ್ ಒದ್ರುತೀಯ ಅದುರಿಗ್ ಬಂದ್ ಅಸು ಕಂಡಾನಂಗೆ. ಆ ಸೂರ್ಯಂಗೇನ್ ಮಾಡ್ಬೇಕು, ಎಂಗ್ ನಡ್ಕಾಬೇಕು ಅಂಬಾದೆಲ್ಲ ನಾವ್ ಯೇಳ್ತೀವಿ. ಎಲ್ಲಾ ನೀನೆ ಮಾಡಾದಾದ್ರೆ ನಾವ್ಯಾಕಿರ್‍ಬೇಕು” ಎಂದು ಬೇಸರದಿಂದ ಹೇಳಿದರು.

ಒಡಯನನ್ನು ಮೆಚ್ಚಿಸಲೆಂದು ಆಡಿದ ಮಾತುಗಳು ತನಗೇ ತಿರುಗುಬಾಣವಾದದ್ದು ಕಂಡು ಪೂಜಾರಪ್ಪ ಪೆಚ್ಚಾದ. “ನೀವಂಗೇಳಿರಂಗೆ ದಣೇರ” ಎಂದು ಮೆಲ್ಲಗೆ ಉಸುರಿದ.

ಜೋಯಿಸರಿಗೆ ಪರಿಸ್ಥಿತಿ ಅರ್ಥವಾಯಿತು. ಸಮಾಧಾನಪಡಿಸುವ ರೀತಿಯಲ್ಲಿ ಹೇಳತೊಡಗಿದರು- “ನರಸಿಂಹರಾಯಪ್ಪ ಹೀಗಂದ್ರೂ ಅಂತ ಬೇಸರ ಮಾಡ್ಕೋ ಬೇಡ ಕಣಯ್ಯ. ಇದು ಸೂಕ್ಷ್ಮವಾದ ವಿಷ್ಯ. ಆತುರ ಬೀಳ್ ಬಾರದು ಅಂತ ಅವ್ರು ಹಾಗಂದ್ರು. ಈಗ ನೋಡು, ನಿಮ್ ಹಟ್ಟಿ ಜನ ಅಷ್ಟೂ ಇಷ್ಟೂ ಓದೋದು ಬರ್‍ಯೋದು ಕಲ್ತು ಒಂಥರಾ ವಿಶ್ವಾಸ ಮೂಡಿಸ್ಕೂಂಡಿದಾರೆ. ಅವ್ರನ್ನ ಈಗ ಒರಟಾಗಿ ದಾರಿಗೆ ತರೋ ಪ್ರಯತ್ನಬೇಡ. ಇಷ್ಟಕ್ಕೂ ಆ ಸೂರ್ಯನ ಹಿಂದೆ ಏನೇನ್ ಇದ್ಯೋ ಗೊತ್ತಿಲ್ಲ. ನನಗನ್ಸುತ್ತೆ- ಅದ್ಯಾವನೋ ನವಾಬ ಅಂತ ಸಾಬರೋನ್ ಬಂದವ್ನಂತಲ್ಲ, ಯಾಕ್ ಬಂದಿರ್ ಬಹುದು? ಮತಾಂತರ ಮಾಡೋ ಕೆಲ್ಸ ಏನಾದ್ರೂ ನಡೀತಿದ್ಯಾ ಅಂತ?”

“ಅಂಗಂದ್ರೇನ್ ಬುದ್ದೇರ?”- ಪೂಜಾರಪನಿಗೆ ತಿಳಿಯದೆ ಕೇಳಿದ.

“ಮತಾಂತರ ಅಂದ್ರೆ ನಿಮ್ಮನ್ನೆಲ್ಲ ಅವ್ರ್ ಧರ್ಮಕ್ ಸೇರಿಸ್ಕೊಳ್ಳೋದು. ನನಗದೇ ಅನ್ಮಾನ. ಈ ಸೂರ್ಯಾನು ಯಾತಕ್ ಸೇರ್ದೋನೊ ಯಾರಿಗ್ಗೊತ್ತು? ಕ್ರೈಸ್ತರೋನಿರಬಹುದೆ ಅಂತ?” ಜೋಯಿಸರು ಹೀಗ ಅನುಮಾನದ ಮಾತಾಡುತ್ತಿರುವಾಗ ನರಸಿಂಹರಾಯಪ್ಪ “ಭೂಮಿ ವಿಸ್ಯ ಬಿಟ್ಟು ಇದೇನೊ ಬ್ಯಾರೇನೆ ತೆಗೀತಿದ್ದಿರಲ್ಲ ಸಾಮೇರ. ನನ್ ವಿಸ್ಯಕ್ ಬರ್ರಿ ಮದ್ಲು” ಎಂದು ನನಪಿಸಿದ.

ಆಗ ಜೋಯಿಸರು “ನಿನ್ ವಿಷ್ಯ ಬೇರೆ ಅಲ್ಲ ಈ ವಿಷ್ಯ ಬೇರ ಅಲ್ಲ. ಭೂಮಿ ಕೊಡುಸ್ತೀವಿ, ಮನೆ ಕೊಡುಸ್ತೀವಿ ಅಂತ ಹೇಳ್ಕೂಂಡೇ ಮತಾಂತರ ಮಾಡ್ಸೋಕೆ ಶುರು ಮಾಡ್ತಾರೆ ನರಸಿಂಹರಾಯಪ್ಪ. ಭೂಮಿಗೂ ಧರ್ಮಕ್ಕೂ ಸಂಬಂಧ ಇದೆ. ಈಗ ನೋಡು, ಹಿಂದಿನ ಜನ್ಮದ ಕರ್ಮಫಲದ ಮೇಲ ಇವತ್ತಿನ ಸ್ಥಿತಿಗತಿ ಇದೆ ಅಂತ ನಮ್ ಧರ್ಮ ಹೇಳುತ್ತೆ. ನಿನಗೆ ಇಷ್ಟೂಂದು ಭೂಮಿ ಯಾಕಿದೆ? ಹಿಂದಿನ ಜನ್ಮದ ಪುಣ್ಯಫಲ. ಈ ಹಟ್ಟಿ ಜನಕ್ಕೆ ಪುಣ್ಯ ಇಲ್ಲ; ಭೂಮಿ ಇಲ್ಲ. ಅಂದ್ ಮೇಲೆ ಭೂಮಿಗೂ ಧರ್ಮಕ್ಕೂ ಸಂಬಂಧ ಇದೆ ಅಲ್ವಾ?” ಎಂದು ವಿವರಿಸಿದಾಗ ನರಸಿಂಹರಾಯಪ್ಪ ಬೆಳಕು ಕಂಡವನಂತೆ ಮುಖ ಅರಳಿಸಿ ಕೂತ. “ಬೋಪಸಂದಾಗೇಳಿದ್ರಿ ಸಾಮೇರ” ಎಂದು ಮೆಚ್ಚುಗೆ ಸೂಚಿಸಿದ.

ಜೋಯಿಸರು ಮತ್ತೆ ಮಾತು ಮುಂದುವರೆಸಿದರು.

“ಸೂರ್ಯ-ನವಾಬ ಇಬ್ರೂ ಸೇರಿ ಇದೇ ಕೆಲ್ಸ ಮಾಡ್ತಿರಬಹುದಾ ಅಂತ ನಂಗನ್ಮಾನ” ಎನ್ನುತ್ತಿರುವಾಗಲೇ ನರಸಿಂಹರಾಯಪ್ಪ “ನಂದೊಂದ್ ಅನ್ಮಾನ” ಎಂದ. ಜೋಯಿಸರು ಮುಖ ನೋಡಿದರು. ನರಸಿಂಹರಾಯಪ್ಪ ಅನುಮಾನವನ್ನು ಅನಾವರಣ ಮಾಡಿದ- “ಅಲ್ಲಾ ಅದ್ರಾಗ್ ಒಬ್ಬ ಸಾಬ್ರು, ಇನ್ನೊಬ್ಬ ನೀವೇಳ್ದಂಗೆ ಕಿಸ್ತರ ಮತದೋನಾದ್ರೆ ಅದೆಂಗ್ ಇಬ್ರೂ ಒಂದಾಗ್ ಈ ಕೆಲ್ಸ ಮಾಡ್ತಾರೆ?”

ಜೋಯಿಸರ ಉತ್ತರ ಸಿದ್ಧವಿತ್ತು. “ನಮ್ ಧರ್ಮ ಹಾಳ್ ಮಾಡಾಕೆ ಅವ್ರಿಬ್ರು ಒಂದಾಗ್ತಾರೆ. ಅಷ್ಟೆ.”

ಒಡೆಯನಿಗೆ ತಲೆ ಬಿಸಿಯಾಯಿತು. “ಅದೇನೊ ಬ್ಯಾಗ್ ಮುಗಿಸ್ಬಿಡ್ರಿ. ಒಟ್ನಲ್ಲ ನನ್ ಎದ್ರಿಗೆ ಒಂದು ನರಪಿಳ್ಳೆನೂ ಕಮಕ್ ಕಿಮಕ್ ಅನ್ಬಾರ್‍ದು. ಅಂಗ್ ತಿಕಾ ಅದಿಮ್ಕಂಡ್ ಬಿದ್ದಿರ್‍ಬೇಕು. ಆಟೇಯ” ಎಂದ.

“ಅದೇ ಕೆಲ್ಸ ನಾನ್ ಮಾಡ್ತಾ ಇದ್ದೀನಿ.” ಎಂದು ಜೋಯಿಸರು ಪೂಜಾರಪ್ಪನನ್ನು ಕುರಿತು ಹೇಳಿದರು: “ಆತುರ ಬೀಳ್ದೆ ಹದ್ದುಬಸ್ತಿಗ್ ತರಬೇಕು. ಆ ನವಾಬನ ಮೇಲೆ ಸರ್‍ಯಾಗ್ ಕಣ್ಣಿಟ್ಟಿರು. ಅವ್ನ್ ಇಲ್ಲಿ ಏನೋ ಕರಾಮತ್ ಮಾಡೋಕೆ ಬಂದಿದಾನೆ. ಸಮಯ ಬಂದ್ರೆ ನವಾಬ-ಸೂರ್ಯ ಇಬ್ರಲ್ಲೂ ಒಡಕುಂಟ್ ಮಾಡ್ಬೇಕು. ಹಾದಿ ತಪ್ ಬೇಡಿ ಅಂತ ನಿಮ್ ಜನಕ್ಕೆ ಸರ್‍ಯಾಗಿ ಬುದ್ಧಿ ಹೇಳ್ಬೇಕು. ಏನೇನ್ ನಡ್ಯುತ್ತೆ ನಮ್ಗೆಲ್ಲ ಬಂದ್ ಹೇಳ್ಬೇಕು” ಜೋಯಿಸರ ಮಾತು ಮುಗಿಯುತ್ತಿದ್ದಂತೆ “ತಿಳೀತೇನ್ಲ” ಎಂದ ನರಸಿಂಹರಾಯಪ್ಪ “ಇನ್ ಮ್ಯಾಲ್ ನಂಗ್ ಬಿಟ್ ಬಿಡಿ ದಣೇರ. ಎಲ್ಲಾ ಅದ್ ಬಸ್ತೀಗ್ ತತ್ತೀನಿ.” ಎಂದು ಪೂಜಾರಪ್ಪ ಉತ್ಸಾಹದಲ್ಲಿ ನುಡಿಯುವ ವೇಳಗೆ ಹೂರಗೆ ಬಂದ ಸಾವಿತ್ರಮ್ಮ “ಅದ್ ಬಸ್ಮಿಗ್ ತತ್ತೀನಿ ಅಂಬ್ತ ಅಡ್ಡಾದಿಡ್ಡಿ ರಗಳೆ ಮಾಡ್ ಬ್ಯಾಡ” ಎಂದು ಎಚ್ಚರಿಕೆಯ ಮಾತಾಡಿದಳು. ಜೊತೆಗೆ “ನನ್ನಿಸ್ರಿಗೇ ಭೂಮಿ ಬರ್‍ದಿಲ್ಲ ಇವ್ರು, ಇನ್ನು ಅಟ್ಟಿ ಯಂಗುಸ್ರಿಗ್ ಬರ್‍ಕೊಡಾದುಂಟಾ? ಅವ್ರಿಗ್ ಸರ್‍ಯಾಗ್ ತಿಳುವಳ್ಕೆ ಯೇಳು. ಆಗಲ್ಲ ವೋಗಲ್ಲ ಅಂತಾದ್ಕಾಸೆ ಪಟ್ಕಂಡು, ಆಮ್ಯಾಕ್ ವೂಟ್ಟೆ ಮ್ಯಾಲ್ ತಣ್ಣೀರ್ ಬಟ್ಟೆ ಆಕ್ಕಳಂಗಾಯ್ತದೆ. ಇವ್ರೇನ್ ಸುಮ್ಕೆ ಬಿಡಾಕಿಲ್ಲ ಆಮ್ಯಾಕೆ” ಎಂದು ವಿಸ್ತರಿಸಿದಳು.

“ಯೇ ಅದೆಲ್ಲ ನಂಗ್ ಬಿಟ್ ಬಿಡ್ರವ್ವ, ಅಕ್ಷರ ಬಂತು ಅಂದ್ರೆ ಆಸ್ತೀನೂ ಬ್ಂದ್ ಬಿಡ್ತೈತ? ಒದ್ದ್ ಬುದ್ಧಿ ಯೇಳಾಕೂ ಸೈ ನಾನು” ಎಂದು ಮೇಲೆದ್ದ.

ಸಂಪ್ರೀತನಾಗಿದ್ದ ನರಸಿಂಹರಾಯಪ್ಪ “ನಾನು ಗಡಂಗ್ನೋರ್‍ಗೇಳಿವ್ನಿ. ನೀನ್ ಎಷ್ಟಾನ ಕುಡಿ. ದುಡ್ ಕೊಡಂಗಿಲ್ಲ” ಎಂದು ವರ ನೀಡಿದ.

ಆಗ ಸಾವಿತ್ರಮ್ಮ “ಕುಡುದ್ರೇನ್ ವೊಟ್ಟೆ ತುಂಬ್ತೈತಾ. ಒಂದತ್ ಸೇರು ರಾಗಿ ಕೊಡ್ತೀನಿ ತಗಂಡೋಗು” ಎಂದು ಒಳಗಿಂದ ಖಾಲಿ ಗೋಣಿಚೀಲ ತಂದುಕೊಟ್ಟು ಆನಂತರ ಮೂರದಲ್ಲಿ ಎರಡುಸಾರಿ ರಾಗಿ ತಂದು ಹಾಕಿದಳು.

ಫೂಜಾರಪ್ಪ “ನಿಮ್ಮೊಟ್ಟೆ ತಣ್ಣಗಿರ್‍ಲವ್ವ” ಎಂದು ಹೇಳಿ ರಾಗಿ ಸಮೇತ ಹೂರಟ.

ಸರಿಯಾದ ಸಮಯವನ್ನು ನೋಡಿ ನವಾಬ ಮತ್ತು ಸೂರ್ಯನಿಗೆ ಬುದ್ಧಿ ಹೇಳಬೇಕೆಂದು ಲೆಕ್ಕ ಹಾಕಿಕೂಂಡ ಪೂಜಾರಪ್ಪ ಮಾರನೇ ದಿನ ಬಳಗ್ಗಯೇ ಮಗಳು ಗೌರಿ ಬಳಿ ನವಾಬನ ವಿಷಯ ಎತ್ತಿದ.

“ಆ ಸಾಬ್ರೋನು ಎಂಗೆ?”
“ಅಂಗಂದ್ರೆ?”
“ಅಲ್ಲ, ಅವ್ನು ನಿಮ್ಗೆಲ್ಲ ಸಾಬರಾಗ್ರಿ ಅಂಬ್ತ ಯೇಳಾಕಿಲ್ವ?”
“ಯಾಕೇಳ್ತಾರೆ? ನಮ್ಗೆ ಓದು ಬರಾ ಕಲುಸ್ತಾರೆ. ಆಟೇ”
“ಆಮ್ಯಾಕ್ ನೀವೆಲ್ಲ ಸಾಬುರು ಜಾತಿಗ್ ಸೇರ್‍ಬಿಟ್ಟೀರಾ ಅವ್ನ್ ಮಾತ್ ಕಟ್ಕಂಡು.”
“ಆ ಇಸ್ಯಾನೇ ಯೇಳಿಲ್ಲ ಅಂದ್ನಲ್ಲ. ತೀರ್‍ಗಾ ಯಾಕಂಗಂಬ್ತೀಯ? ಅವ್ರು ಬೋಲ್ ಒಳ್ಳೇರು. ನಿಂಗೇನ್ ಗೊತ್ತು”
“ಬೋಲ್ ಒಳ್ಳೇರು ಅಂಬ್ತಾ ತೋರಿಸ್ಕಂಡೇ ಅಡ್ನಾಡಿ ಕೆಲ್ಸ ಮಾಡಾದು. ಉಸಾರು.”
“ಯೇ ಅಂಗೆಲ್ಲ ಅನ್ ಬ್ಯಾಡ ಕಣಪ್ಪೊ. ಅವ್ರು ನಮ್ಗೆಲ್ಲ ಏಟೊಂದ್ ಒಳ್ಳೆ ಇಸ್ಯ ಯೇಳ್ತಾರೆ ಗೊತ್ತ?”
“ಆಯ್ತಾಯ್ತು. ನಿನ್ ಬುದ್ದಿ ನಿನ್ ಕೈಯ್ಯಾಗಿರ್‍ಲಿ”- ಪೂಜಾರಪ್ಪ ಎಚ್ಚರಿಸಿದ.

ಗಂರಿ ಯೋಚನೆಗೀಡಾದಳು. ಅಪ್ಪನಿಗೆ ಅನುಮಾನ ಬಂದಿದೆಯೆ? ತನ್ನ ಮತ್ತು ನವಾಬನ ಬಗ್ಗೆ ಕೇಳುವ ಬದಲು ಹೀಗೆ ಸುತ್ತಿ ಬಳಸಿ ಕೇಳುತ್ತಿದ್ದಾನೆಯೆ? ಒಳಗೇ ಇಟ್ಟುಕೊಂಡು ನರಳುವುದು ಬೇಡವೆಂದು ಶಬರಿಯ ಹತ್ತಿರ ನಡೆದದ್ದೆಲ್ಲ ಬಿಚ್ಚಿಟ್ಟಳು. ಶಬರಿಯೂ ಯೋಚಿಸಿದಳು. ನವಾಬಣ್ಣನ ಬಗ್ಗೆ ಮಾತ್ರ ಯಾಕೆ ಕೇಳಿದ್ದಾನೆ ಎಂಬ ಪ್ರಶ್ನೆಯೂ ಆಕೆಗೆ ಎದುರಾಯಿತು. ಮುಂದೆ ಏನಾಗುತ್ತೊ ನೋಡೋಣ ಎಂಬ ತೀರ್ಮಾನಕ್ಕೆ ಬಂದರು. ಕಾದುನೋಡಿ ಸರಿಯಾಗಿ ನಡೆದುಕೊಳ್ಳುವ ನಿರ್ಧಾರ ಅವರದಾಗಿತ್ತು.

ಅಂದು ರಾತ್ರಿ ಶಾಲೆಯಲ್ಲಿ ನವಾಬನೊಬ್ಬನೇ ಪಾಠ ಮಾಡುತ್ತಿದ್ದ. ಸೂರ್ಯ ಬಂದಿರಲಿಲ್ಲ. ಎಲ್ಲರಿಗೂ ಪಾಠ ಹೇಳಿ, ಕೆಲವು ಪದಗಳನ್ನು ಬರೆಯಲು ಹೇಳಿದ. ಓಬ್ಬೊಬ್ಬರ ಬಳಿಯೂ ಹೋಗಿ ನೋಡಿ ತಿದ್ದಿ ಬರೆಸತೂಡಗಿದ. ಆನಂತರ “ಇವತ್ತು ಒಂದ್ ವಿಷ್ಯ ಹೇಳ್ತೀನಿ” ಎಂದು ಎಲ್ಲರೆದುರು ನಿಂತುಕೊಂಡು ಮಾತು ಶುರುಮಾಡಿದ. “ಈಗ ನಮ್ಮ ಪಾಠ ಒಂದು ಹಂತಕ್ ಬರ್‍ತಾ ಇದೆ. ನಿಮಿಗೆ ಕಲವು ಪದಗಳನ್ನ ಓದೋದು ಬರೆಯೋದು ಅಭ್ಯಾಸ ಆಗ್ತಾ ಇದೆ. ಹುಚ್ಚೀರಂಗೆ ಅಂತ ಪ್ರತ್ಯೇಕ ಗಮನಕೊಟ್ಟು ಅತನಿಗೆ ಬರವಣಿಗೆ ಕಲ್ಸಿದ್ದೀವಿ ಅಂದ್ ಮೇಲೆ ನಿಮ್ಗೆ ಎಲ್ಲ ಗೊತ್ತಾಗುತ್ತೆ. ಇನ್ ಮೇಲೆ ಪಾಠ ಮುಗುದ್ಮೇಲೆ ದಿನಾ ಯಾವ್‍ದಾದ್ರೂ ಒಂದು ವಿಷ್ಯದ ಮೇಲೆ ಮಾತಾಡ್ತೀನಿ. ಸೂರ್ಯಾನೂ ಮಾತಾಡ್ತಾನೆ. ನೀವು ಅದ್ರ್ ಮೇಲೆ ಏನೇನ್ ಅನ್ಸುತ್ತೊ ಅದೆಲ್ಲ ಕೇಳ್‍ಬಹುದು. ಇವತ್ತು ಮಾನವ ಧರ್ಮ ಅನ್ನೊ ವಿಷಯದ ಮೇಲೆ ಮಾತಾಡ್ತೀನಿ” ಎಂದು ಪೀಠಿಕೆ ಹಾಕಿದ. ಆನಂತರ ಮನುಷ್ಯ ಜಾತಿ ಒಂದೇ ಎಂದು ಸಾರಿದ ಸಾಧಕರ ವಿಷಯಗಳನ್ನು ಅವರಿಗೆ ತಿಳಿಯುವಂತೆ ಹೇಳತೂಡಗಿದ. ಯಾವ ಯಾವ ಧರ್ಮದಲ್ಲಿ ಏನೇನು ಒಳ್ಳೆಯ ಮಾತುಗಳಿವೆಯಂದು ವಿವರಿಸತೂಡಗಿದ.

ಚನ್ನಾಗಿ ಸಾರಾಯಿ ಸೇವಿಸಿದ್ದ ಪೂಜಾರಪ್ಪ ರಾತ್ರಿ ಶಾಲೆಯ ಬಳಿಬಂದು ನಿಂತಿದ್ದ. ಅದರ ಪರಿವೆಯಿಲ್ಲದೆ ನವಾಬನ ಮಾತು ಸಾಗಿತ್ತು. ಜೋಯಿಸರು ಹೇಳಿದ್ದಕ್ಕೂ ನವಾಬನು ಧರ್ಮದ ಬಗ್ಗೆ ಮಾತನಾಡುತ್ತಿರುವುದಕ್ಕೂ ತಾಳೆ ಹಾಕಿದ ಪೂಜಾರಪ್ಪನಿಗೆ ಪೈಗಂಬರ್ ಬಗ್ಗೆ ನವಾಬನು ಏನೋ ಹೇಳುತ್ತಿರುವುದು ಕೇಳಿಸಿತು. ವಾಸ್ತವವಾಗಿ ಆತ ಒಳ್ಳೆಯ ವಿಚಾರವನ್ನೇ ಹೇಳುತ್ತಿದ್ದ. ಬಡವರೆಲ್ಲ ಒಂದೇ ಜಾತಿ, ಒಂದೇ ಧರ್ಮ ಎಂಬ ತರ್ಕಕ್ಕೆ ತೆಗೆದುಕೊಂಡು ಹೋಗುವುದು ಆತನ ಉದ್ದೇಶವಾಗಿತ್ತು. ಅದಕ್ಕಾಗಿ ಪೀಠಿಕೆಯನ್ನು ವಿಸ್ತರಿಸುತ್ತಿದ್ದ. ಆದರೆ ಜೋಯಿಸರು ಹೇಳಿದ್ದು ನಿಜವಿರಬೇಕಂದು ಅಮಲೇರಿದ ಪೂಜಾರಪ್ಪ ಭಾವಿಸಿದ. ಹಿಂದೆಮುಂದೆ ನೋಡದೆ “ನಿಲ್ಸಲೇ ನವಾಬ?” ಎಂದು ಒಳಗೆ ನುಗ್ಗಿದ.

ಎಲ್ಲರಿಗೂ ದಿಗ್ಭ್ರಾಂತಿ!
ಅರ್ಥವಾದದ್ದೆಷ್ಟೊ ಆಗದ್ದೆಷ್ಟೊ ಏಕಾಗ್ರತಯಿಂದ ಒಂದಾಗಿ ಕೇಳುತ್ತ ಕೂತಿದ್ದವರು ಬೆಚ್ಚಿಬಿದ್ದರು; ನಿಧಾನವಾಗಿ ಎದ್ದರು.
ನವಾಬ ನಿರೀಕ್ಷಿಸದ ಘಟನಗೆ ಸಿದ್ಧನಾಗಿ ನಿಂತ.
“ಯಾಕೆ? ಯಾಕ್ ಪೂಜಾರಪ್ಪ? ಏನಾಗಿದೆ ನಿಂಗೆ?” ಕೇಳಿದ.
ಪೂಜಾರಪ್ಪನಿಗೆ ಅಷ್ಟು ಸಾಕಾಗಿತ್ತು ಅಬ್ಬರಿಸತೂಡಗಿದ.
“ನಂಗೇ ಏನಾಗೈತೆ ಅಂಬ್ತ ಕೇಳ್ತೀಯೇನ್ಲಾ ಸಾಬಣ್ಣ? ಒಂದ್ ಕೊಟ್ಟೆ ಅಂದ್ರೆ ನಿಂತ್ಕಡೇನೇ ಉಚ್ಚೆ ವೊಯ್ಕಬೇಕು. ಗೊತ್ತೇನ್ಲ?

ಪೂಜಾರಪ್ಪನ ಮಾತು ಯಾರಿಗೂ ಸರಿಬರಲಿಲ್ಲ. ಆದರೆ ಯಾರೂ ಪ್ರತಿಕ್ರಿಯಿಸಲಿಲ್ಲ. ನವಾಬನೇ ಉತ್ತರಿಸಿದ-

“ಹಾಗೆಲ್ಲ ಮಾತಾಡ್ ಬೇಡಾ ಪೂಜಾರಪ್ಪ. ನಿನ್ ನೋಡಿದ್ರೆ ಕುಡಿದಿರೋ ಹಾಗಿದ. ಏನಿದ್ರೂ ಬೆಳಿಗ್ಗೆ ಮಾತಾಡೋಣ.”

ಪೂಜಾರಪ್ಪನಿಗೆ ಮತ್ತಷ್ಟು ರೇಗಿತು.

“ನನ್ನೇ ಕುಡುಕ ಅಂಬ್ತಿಯೇನ್ಲ? ನನ್ನೇನಾರ ಕುಡುಕ ಅಂಬ್ತ ಇನ್ನೊಂದ್ಸಾರಿ ಅಂದ್ರೆ ನಿನ್ನ ಕಳ್ಳುಪಚ್ಚಿ ಕಿತ್ತು ತ್ವಾರಣ ಕಟ್‍ಬಿಡ್ತೀನಿ. ಉಸಾರೋ ಸಾಬಣ್ಣ ಉಸಾರು” ಎಂದು ಬಯ್ಗಳು ಮುಂದುವರಿಸಿದ.

ಶಬರಿಗೆ ತಡೆಯಲಾಗಲಿಲ್ಲ. ರಭಸವಾಗಿ ಹತ್ತಿರ ಬಂದಳು.

“ಅಂಗೆಲ್ಲ ಮಾತಾಡ್ ಬ್ಯಾಡ ಪೂಜಾರಪ್ಪ. ನವಾಬಣ್ಣ ನಮ್ಗೆಲ್ಲ ಓದು ಬರಾ ಕಲ್ಸವ್ರೆ” ಎಂದಳು.

“ಓದು ಬರಾ ಕಲ್ಸವ್ನೊ. ಅವ್ನ್ ಜಾತೀಗ್ ಸೇರ್‍ಕ್ಂಡ್ ಬಿಡ್ರಿ ಅಂಬ್ತ ಯೆಳ್ತಾ ಅವ್ನೊ? ಇವಾಗ್‍ತಾನೆ ಏನೇನೋ ಒದ್ರುತಾ ಇದ್ನಲ್ಲ. ಇಂಗೇ ಬಿಟ್ರೆ ನಿಮ್ಗೆಲ್ಲ ಕರೀಬಟ್ಟೆ ಆಕ್ ಬಿಡ್ತಾನೆ ಈ ಊಸರ್‍ವಳ್ಳಿ”- ಪೂಜಾರಪ್ಪ ಆರೋಪಿಸಿದ.

“ಬಾಯ್ಮುಚ್ಚು ಪೂಜಾರಪ್ಪ”- ಶಬರಿ ಸಿಡಿದಳು. “ದೂಡ್ಡೋನು ಅಂಬ್ತ ಸುಮ್ಕಿದ್ರೆ ಬಾಯೋದಂಗೆಲ್ಲ ಮಾತಾಡ್ತೀಯಲ್ಲ. ಏನಂದ್ಕಂಡೆ ನಮ್ ನವಾಬಣ್ಣನ್ನ? ಎಲ್ಲಾರೂ ಒಂದೇ ಅಂಬ್ತ ಈ ಅಣ್ಣ ಯೇಳ್ತಾ ಇದ್ದ. ಅದು ತಪ್ಪಾ?

ಆಗ ನವಾಬ ಸ್ಪಷ್ಟಪಡಿಸಿದ. “ನೋಡು ಪೂಜಾರಪ್ಪ, ನಂಗೆ ಧರ್ಮ, ಜಾತಿ ಅಂತ ಯಾವ್ದು ಇಲ್ಲ. ಆದ್ರೆ ಕೆಲವರು ಜಾತಿ-ಧರ್ಮ ಅಂತ ಹೇಳ್ಕೊಂಡು ಹಾದಿ ತಪ್ಪುಸ್ತಾ ಇದಾರೆ; ಅದಕ್ಕಾಗಿ ಕೆಲವು ವಿಷಯ ಹೇಳ್ತಾ ಇದ್ದೆ. ಅಷ್ಟೆ.”

“ಯೇ ಅದೆಲ್ಲ ನಂತಾವ್ ಕಂತೆ ಪುರಾಣ ಬಿಚ್‍ಬ್ಯಾಡ. ವೊತ್ತುಟ್ಟೊದ್ರೊಳ್ಗೆ ಗೊತ್ತುಗುರಿ ಒಂದೂ ಇಲ್ಬಂಗ್ ಮಾಡ್‍ಬಿಡ್ತೀನಿ ನಿಂಗೆ. ಇನ್‍ಮ್ಯಾಗ್ ಅಟ್ಟಿ ಜನ ಏನಿದ್ರೂ ನಾನ್ ಆಕಿದ್ದ ಗೆರೆ ದಾಟ್ ಬಾರ್‍ದು?”- ಪೂಜಾರಪ್ಪ ಅದೇ ಆವೇಶದಲ್ಲಿ ಹೇಳಿದ.

“ಅದೆಲ್ಲ ಆಗಾಕಿಲ್ಲ”-ಶಬರಿ ನೇರವಾಗಿ ನುಡಿದಾಗ ಪೂಜಾರಪ್ಪ ಬೆಚ್ಚಿದ.

“ಆಗಾಕಿಲ್ಲ ಅಂದ್ರೆ ನಾನ್ ಕೇಳಾಕಿಲ್ಲ. ನಾವೆಲ್ಲ ಒಡೇರ್ ಯೇಳ್ದಂಗೆ ಕೇಳ್ಕಂಡ್ ಬಿದ್ದಿರ್‍ಬೇಕು. ಪಾಟಗೀಟ ಬೇಕು ಅಂದ್ರೆ ಜೋಯಿಸ್ರನ್ ಕರ್‍ಕಂಡ್ ಬರ್‍ತೀನಿ” ಎಂದು ತನ್ನ ಮಾತಿನ ಬಿರುಸನ್ನು ಮುಂದುವರಿಸಿದ.

“ಜೋಯಿಸ್ರು ಈಟ್‍ದಿನ ಯಾಕ್ ಪಾಠ ಮಾಡಾಕ್ ಬರ್‍ಲಿಲ? ಇವಾಗ್ ಇವ್ರು ಬಂದವ್ರೆ ಅಂಬ್ತ ವೊಟ್ಟೆ ವುರೀಗ್ ಬತ್ತಾರೇನು? ನೋಡು ಪೂಜಾರಪ್ಪ, ನಾವು ನಮ್ ನವಾಬಣ್ಣನ್ನ ಬಿಟ್‍ಕೊಡಾಕಿಲ್ಲ. ಅಣ್ಣನ್ ಥರಾ ಅ ಆ ಇ ಈ ಕಲ್ಸಿರಾ ನವಾಬಣ್ಣನ ನಡ್‍ನೀರ್‍ನಾಗ್ ಬಿಡಾಕ್ ನಾವೇನು ಮೂರೂ ಬಿಟ್ಟೋರಲ್ಲ” ಎಂದು ದೃಢವಾಗಿ ಹೇಳಿದ ಶಬರಿ ಎಲ್ಲರನ್ನು ಉದ್ದೇಶಿಸಿ “ಏನಂಬ್ತೀರ ಎಲ್ಲಾ” ಎಂದು ಕೇಳಿದಾಗ ಇದೇ ಸಂದರ್ಭಕ್ಕೆ ಕಾಯುತ್ತಿದ್ದವರಂತೆ “ಬಿಟ್ ಕೂಡಾಕಿಲ್ಲ” ಎಂದರು. ಸಣ್ಣೀರ ಮುಂದೆ ಬಂದು “ಯಾಕ್ ಪೂಜಾರಪ್ಪ ಇಂಗೆಲ್ಲ ಮಾಡ್ತೀಯ? ನವಾಬಣ್ಣ ಎಂದೂ ಮೇಲುಕೀಳು ಮಾಡಿಲ್ಲ. ಜಾತಿ ವಿಸ್ಯ ಎತ್ತಿಲ್ಲ. ನಮ್ಗೆಲ್ಲ ಎಲ್ಡಕ್ಸರ ಕಲ್ಸಿ ಎದೆಗಾರಿಗೆ ಬರಂಗ್ ಮಾಡವ್ನೆ. ನೀನ್ ಸುಮ್ಕೆ ಇಲ್ಲಿಂದ ವೊಲ್ಟೋಗು. ಅವ್ರಿವ್ರ್ ಮಾತ್ ಕಟ್ಕಂಡು ಕಾಲ್ ಕೆರೀಬ್ಯಾಡ” ಎಂದು ಹೇಳಿದಾಗ ಉಳಿದವರಿಗೂ ಬಾಯಿ ಬಂದಂತಾಯಿತು. ಎಲ್ಲರೂ ಒಂದೊಂದು ಮಾತು ಬುದ್ಧಿ ಹೇಳಿದರು. ಹುಚ್ಚೀರನೂ ತನ್ನದೇ ರೀತಿಯಲ್ಲಿ ಪೂಜಾರಪ್ಪನಿಗೆ ಪ್ರತಿಕ್ರಿಯಿಸಿದ. ಗದ್ದಲ ಜಾಸ್ತಿಯಾಯಿತು. ಆಗ ನವಾಬನೇ ಪೂಜಾರಪ್ಪನನ್ನು ಕೈಹಿಡಿದು ಹೊರಗೆ ಕರೆತಂದು “ಬಾ ಹಟ್ಟೀಗ್ ಹೋಗೋಣ. ನಾಳೆ ನಿಧಾನವಾಗಿ ಎಲ್ಲಾ ಮಾತಾಡೋಣ” ಎಂದ. ಪೂಜಾರಪ್ಪ “ನಂಗೂ ದಾರಿಗೊತ್ತೈತೆ” ಎಂದು ಕೈಕೂಡವಿಕೊಂಡು ತೂರಾಡುತ್ತ ಹೋದ.

ಮಾರನೇ ದಿನ ಪೂಜಾರಪ್ಪನಿಂದ ಘಟನೆಯ ವಿವರಗಳನ್ನು ತಿಳಿದ ನರಸಿಂಹರಾಯಪ್ಪ ಕಿಡಿಕಿಡಿಯಾದ. “ಒಬ್ಬೊಬ್ರ ಗ್ವಾಮಾಳ ಕಿತ್ತು ಮರಕ್ ನೇಣ್ ಆಕ್ ಬಿಡ್ತೀನಿ” ಎಂದೆಲ್ಲ ಕೂಗಾಡಿದ. ಜೋಯಿಸರು ಸಮಾಧಾನ ಮಾಡಿದರು. “ಸಂದರ್‍ಭಾನ ಅರ್ಥ ಮಾಡ್ಕೋಬೇಕು. ಹಟ್ಟಿ ಜನ್ರಲ್ಲಿ ಅರಿವು ಬರ್‍ತಾ ಇರ್‍ವಾಗ ನಾವ್ ಹುಷಾರಾಗ್ ಹೆಜ್ಜೆ ಹಾಕ್ಬೇಕು” ಎಂದು ಕಾರ್ಯಸಾಧ್ಯ ಸಂಗತಿಗಳತ್ತ ಗಮನ ಸೆಳೆದರು. ಒಡಯನಿಗೂ ಸರಿಯೆನ್ನಿಸಿತು.

ಪೂಜಾರಪ್ಪ ಘಾಸಿಗೊಂಡಿದ್ದ. ಮೊದಲು ಸಿಡಿದವಳು ಶಬರಿ ಎಂಬ ಚಿತ್ರ ಅಚ್ಚೊತ್ತಿತ್ತು. ತಿಮ್ಮರಾಯಿಯ ಬಳಿಗೆ ಬಂದ. “ನಿನಿಗ್ ಸೇಂದಿ ಸಾರಾಯ್ ಕುಡ್ಸಿದ್ದು ಸುಮ್ ಸುಮ್ಕೇನ? ನಿನ್ ಮಗಳಿಗೆ ಎಲ್ಡ್ ಕೊಟ್ಟು ಬುದ್ದಿ ಯೇಳು” ಎಂದು ಒತ್ತಾಯಿಸಿದ. ಹೇಳುವುದನ್ನೆಲ್ಲ ಸಾವಧಾನದಿಂದ ಕೇಳಿದ ತಿಮ್ಮರಾಯಿ ಒಂದೇ ಮಾತು ಹೇಳಿದ-
“ನಮ್ ಕಾಲ ವೋಗ್ತಾ ಐತೆ ಪೂಜಾರಪ್ಪ. ನಿನ್ ಉಸಾರ್‍ನಾಗ್ ನೀನ್ ಇರಾದ್ ಕಲ್ತ್‍ಕಳಪ್ಪ. ನಿಂಗೂ ಒಳ್ಳೇದು ಅಟ್ಟೀಗೂ ಒಳ್ಳೇದು.”

ಪೂಜಾರಪ್ಪ ದಂಗು ಬಡಿದಂತೆ ಕೂತ.
* * *

ವಿಷಯ ಗೊತ್ತಾದ ಒಡೆಯ ಹೆಡೆಯೆತ್ತಿದ.
ಹೊಲದ ಬಳಿ ಬಂದು ಹರಿದಾಡಿದ;
ಉರಿಯಾಗಿ ಹೊರಟ. ತೋಪಿನ ಬಳಿ ಬಂದಾಗ ಅಲ್ಲಿ ಶಬರಿ ಕಂಡಳು.
ಮರವನ್ನು ತಬ್ಬಿಕೊಂಡವಳು ಕಣ್ಣಿಗೆ ಒತ್ತಿಕೊಂಡು ಬುಡದ ಬಳಿ ಕೂತಳು.
ಒಡೆಯ ನೋಡಿದ; ಬುಸ್ಸೆಂದು ಹತ್ತಿರ ಹೋದ.
“ಏನೇ ಬೋಸುಡಿ; ಬೋಲ್ ಜೋರ್ ಮಾಡ್ತೀಯಂತಲ್ಲ?”
ಸಬರಿ ನಿಂತುಕೊಂಡಳು. ನೋಡಿದಳು.

“ಏನೇ ಅಂಗ್ ನೋಡ್ತೀಯ? ಏನ್ ಎಲ್ಲಾ ಆ ನವಾಬನ್ನೇ ವಯಿಸ್ಕಂಡು ಪೂಜಾರಪ್ಪಂಗ್ ಮರ್‍ವಾದೆ ಕೊಡ್ಲಿಲ್ವಂತೆ. ಅವತ್ತೇ ನಿನ್ ಕೂಡಿಕೆ ಮಾಡ್ಕಂಡಿದ್ರೆ ಅದ್‍ಬಸ್ತ್‍ನಾಗಿರಿತ್ತಿದ್ದೆ?”

ಶಬರಿಗೆ ಸುಮ್ಮನಿರಲಾಗಲಿಲ್ಲ.

“ಕಂಡ್ ಕಂಡಾರೆಲ್ಲ ಕೂಡಿಕೆ ಮಾಡ್ಕಮಾಕೆ ನಾನೇನ್ ಬಿಟ್ಟಿ ಸಿಕ್ಕಿಲ್ಲ.”
“ಈಗ್ಲೂ ಯೇಳ್ತಿವ್ನಿ. ನನ್ ಮಾತ್ ಕೇಳು. ಕೂಡಿಕೆ ಮಾಡ್ಕಂಡ್ರೆ ಹಟ್ಟಿನಾಗೇ ಇಟ್ಟಿಗೆ ಮನೆ ಕಟ್ಟಿಸ್ಕೂಡ್ತೀನಿ”- ಒಡೆಯ ಒತ್ತಾಯಿಸಿದ.

“ಇಟ್ಟಿಗೆ ಮನನಾಗೆ ನನ್ನ ಮೈಯ್ಯಿ ಮಾನ ಸುಟ್ಕಮಾಕೆ ನಾನೇನ್ ಅರಕೆ ಕಟ್ಕಂಡಿಲ್ಲ”- ಶಬರಿ ಸಿಡಿದಳು.

“ನಾನ್ ಅಕಿದ್ ಕಟ್ಟು ಕಟ್ಟಳೆ ಮೀರಿದ್ರೆ ಮಾನಾನು ಸುಟ್ಕಬೇಕು; ಮೈಯ್ಯೀನೂ ಸುಟ್ಕಬೇಕು. ಅಂಗಾಗ್ತೈತೆ.”

“ಕನಸ್‍ಕಾಣ್ ಬ್ಯಾಡ್ರಿ ಒಡೇರ. ಕನಸ್ ಕಾಣ್ ಬ್ಯಾಡ್ರಿ. ಅದೆಲ್ಲ ಅವತ್ತಿನ್ ಕಾಲಕ್ಕೇ ವೋತು ಅಂಬ್ತ ತಿಳ್ಕಳಿ. ತಿರ್‍ಗಾ ಇನ್ನೊಂದ್ ಕಿತ ಕೂಡಿಕೆ ಗೀಡಿಕೆ ಅಂಬ್ತ ಕೇಳ್‍ಬ್ಯಾಡ್ರಿ” ಎಂದವಳೆ ಬಿರುಗಾಳಿಯಂತೆ ಹೋದಳು.

ಒಡೆಯನ ಒಡಲಲ್ಲಿ ಕೆಂಡದ ಮಳೆ.
ಬುಸುಗುಡುವ ಹೆಡಯಲ್ಲಿ ನಡಗುವ ನಾಲಗೆ.

ಏನು ಮಾತಾಡಿದನೊ ಆತನಿಗೇ ಗೊತ್ತಾಗಲಿಲ್ಲ.
ಆಡಿದ್ದೇ ಆಟವೆಂಬಂತೆ ಇದ್ದಕಾಲ ಬದಲಾಗುತ್ತಿದೆಯೆಂದು ಗೊತ್ತಾಯಿತು.
* * *

ನವಾಬ ಬೆಟ್ಟದ ಬಳಿಗೆ ಬಂದು ಒಬ್ಬನೇ ಕೂತಿದ್ದ. ಪೂಜಾರಪ್ಪ ಬಂದು ಗಲಾಟೆ ಮಾಡಿದಾಗ ಶಬರಿಯ ನೇತೃತ್ವದಲ್ಲಿ ಅಲ್ಲಿದ್ದವರೆಲ್ಲ ಒಗ್ಗಟ್ಟಾಗಿ ತನ್ನ ಪರ ನಿಂತದ್ದು ನವಾಬನನ್ನು ಭಾವುಕನನ್ನಾಗಿಸಿತ್ತು. ಎಲ್ಲಾ ಭಾವನೆಗಳನ್ನು ಸೂರ್ಯನ ಜೊತೆ ಹಂಚಿಕೂಳ್ಳುವ ಕಾತರದಿಂದ ಕಾಯುತ್ತಿದ್ದ. ಆದರೆ ಆತ ಬಂದಿರಲಿಲ್ಲ. ಅಲ್ಲಿ ಏನಾಯಿತೂ ಏನೊ ಎಂಬ ಆತಂಕ ಬೇರೆ. ಜಾಮೀನು ಸಿಗುವವರೆಗೆ ಸೂರ್ಯ ಆಕಡೆ ಹೋಗದಿರುವುದೇ ಉತ್ತಮ. ಆದರೇನು ಮಾಡುವುದು ಕೆಲವೊಮ್ಮೆ ಹೋಗಲೇಬೇಕಾಗುತ್ತದೆ. ಜೊತಗೆ ಸಂಘಟನೆಯ ಸ್ನೇಹಿತರನ್ನು ಭೇಟಿ ಮಾಡಬೇಕಲ್ಲ? ಒಟ್ಟಿನಲ್ಲಿ ಆತ ಹಿಂತಿರುಗಿದಾಗ ಭಾವನೆಗಳನ್ನು ಹಂಚಿಕೊಳ್ಳಬೇಕು; ಆಗಲೇ ಮನಸ್ಸು ಹಗುರವಾಗುವುದು- ಹೀಗೆಲ್ಲ ಒಬ್ಬನೇ ಯೋಚಿಸುತ್ತ ಕೂತಿರುವಾಗ ಗೌರಿ ಬಂದಳು.

“ಇದೇನ್ ಗೌರಿ. ಒಬ್ಬಳೇ?”
“ಯಾಕೆ ಒಬ್ಳೇ ಬರ್‍ಬಾರ್‍ದ?”
“ಛೆ! ನಾನೆಲ್ ಹಾಗೆಂದೆ? ಹೂತ್ತು ಮುಳುಗೋ ಸಮಯ. ಕೂಲಿ ಹೋದೋರೆಲ್ಲ ಒಟ್ಟಿಗೇ ಬರ್‍ಬೇಕಿತ್ತಲ್ಲ? ಅದಕ್ಕೇ ಹಾಗಂತ ಕೇಳ್ದೆ”
“ಅವ್ರನ್ನೆಲ್ಲ ಮುಂದಕ್ ಸಾಗಾಕ್ದೆ. ನೀನೋಬ್ನೆ ಕುಂತಿರಾದ್ ನೋಡಿ ಬಂದೆ”
“ಒಳ್ಳೇದಾಯ್ತು. ಕೂತ್ಕೊ.”
ಗೌರಿ ಪಕ್ಕದಲ್ಲೇ ಕೂತಳು. ನವಾಬನ ಕೈ ಹಿಡಿದುಕೊಂಡಳು.
“ನಮ್ಮಪ್ಪಯ್ಯ ಅಂಗೆಲ್ಲ ಅಂದಿದ್ಕೆ ಬ್ಯಾಸ್ರ ಮಾಡ್ಕಬ್ಯಾಡ”- ಕೇಳಿಕೂಂಡಳು.
“ಬೇಸರ ಎಲ್ಲಾ ಆಗ್ಲೇ ಹೋಯ್ತಲ್ಲ. ಎಲ್ರೂ ನನ್ ಪರ ನಿಂತ್ ಮೇಲೆ, ನವಾಬಣ್ಣ ನಮ್ಮಣ್ಣ ಅಂದ್ಮೇಲೆ ಇನ್ನೇನಿದೆ ಹೇಳು.”
“ನಾನ್ ಮಾತ್ರ ಅಣ್ಣ ಅನ್ನಲಪ್ಪ”- ನಾಚಿಕೆಯಿಂದ ಹೇಳಿದಳು ಗೌರಿ.
“ಮತ್ತೇನಂತೀಯ?”
“ನಾನ್ ಯೇಳಾಕಿಲ್ಲ” ಎಂದು ಕೈಯನ್ನು ಭದ್ರವಾಗಿ ಹಿಡಿದುಕೊಂಡಳು. ನವಾಬ ಮತ್ತಷ್ಟು ಭಾವುಕನಾದ. ಆಕೆಯ ತಲೆ ನೇವರಿಸಿದ. ಗೌರಿ “ನನ್ ಕೈ ಬಿಡ್‍ಬ್ಯಾಡ” ಎಂದಳು.

“ಈಗ ಕೈ ಭದ್ರವಾಗ್ ಹಿಡ್ದಿರೋದು ನೀನು. ನಾನ್ ಬಿಡೋ ಪ್ರಶ್ನೆ ಬರೋದೇ ಇಲ್ಲ” ಎಂದು ನವಾಬ ನಕ್ಕಾಗ “ಎಲ್ಲಾ ನಗ್ಸಾರಾಟ ಆಡಬ್ಯಾಡ. ಸೂರ್ಯಣ್ಣ ಬಂದಾಗ ವಿಸ್ಯ ಯೇಳ್ಬೇಕು” ಎಂದಳು. “ಖಂಡಿತ. ನಾನೂ ಸೂರ್ಯಂಗೇ ಕಾಯ್ತಾ ಇದ್ದೀನಿ” ಎಂದು ನವಾಬ “ಹೂತ್ತಾಯ್ತು. ಶಾಲೆ ಶುರುಮಾಡ್‍ಬೇಕಲ್ಲ ನಡಿ” ಎಂದು ಮೇಲೆದ್ದ.

ಇಬ್ಬರೂ ಹಟ್ಟಿಗೆ ಹೋಗದೆ ಶಾಲೆಯ ಬಳಿ ಬಂದರು. ಇವರು ಬಂದು ಸ್ವಲ್ಪ ಹೊತ್ತಿನಲ್ಲಿ ಶಬರಿಯಾದಿಯಾಗಿ ಉಳಿದವರು ಬಂದರು. ಶಬರಿ ತಮಾಷೆ ಮಾಡಿದಳು- “ಏನಮ್ಮ ಗೌರಿ, ನಮ್ಮನ್ನೆಲ್ಲ ಬಿಟ್ಟು ಒಬ್ಳೇ ಬಂದಿದ್ದೀಯ? ಹೊಸ ಪಾಠಾನ?”

ಗೌರಿ ನಾಚಿಕೆಯಿಂದ “ಎಂತದೂ ಇಲ್ಲ” ಎಂದಳು.
ಅಲ್ಲಿದ್ದವರೆಲ್ಲ ತಮಾಷೆಯನ್ನು ಸಹಜವಾಗಿಯೇ ತೆಗೆದುಕೊಂಡರು.
ನವಾಬ “ಬನ್ನಿ ಬನ್ನಿ- ಪಾಠ ಶುರು ಮಾಡ್ಬೇಕು. ಹೂಸ್‍ಪಾಠ ಅಲ್ಲಿದೆ” ಎಂದು ಒಳಗೆ ಕರದೊಯ್ದ.
* * *

ದೀಪದ ಬೆಳಕಲ್ಲಿ ಕೂತು ಶಬರಿ ಓದಲು ಪ್ರಯತ್ನಿಸುತ್ತಿದ್ದಳು. ಆಕೆ ಒಂದೊಂದೇ ಪದಗಳನ್ನು ಉಚ್ಚರಿಸುತ್ತಿರುವಾಗ ತಿಮ್ಮರಾಯಿ ಅಚ್ಚರಿಯ ಭಾವದಲ್ಲಿ ಸವಿಯುತ್ತ ಕೂತಿದ್ದ.

“ಬಾಕ್ಕೇತ್ವ ಬೆ ಟಾಕ್ ಟಾವತ್ತು ಟ್ಟ- ಬೆಟ್ಟ
ಗ ಕ್ಕೊಂಬು ಗು ಡಾಕ್‍ಡಾವತ್ತು ಡ್ಡ- ಗುಡ್ಡ
ಭಾ ಕೂಂಬಿನ್ ದೀರ್ಘ ಭೂ ಮಾ ಗುಡ್ಸು ಮಿ – ಭೂಮಿ”
-ಹೀಗೆ ಸಾಗಿತ್ತು ಶಬರಿಯ ಓದು

ಗಲ್ಲದ ಮೇಲೆ ಕೈಯ್ಯಿಟ್ಟುಕೊಂಡು ಕೇಳಿಸಿಕೊಳ್ಳುತ್ತ ಕೂತಿದ್ದ ತಿಮ್ಮರಾಯಿ “ನಿನ್ನವ್ವ ಇವಾಗ್ ಜೀವ್‍ಸಯ್ತ ಇದ್ದಿದ್ರೆ ಏಟಂದ್ ಕುಣ್ದಾಡ್ತಿದ್ಲೊ ಕಣವ್ವ” ಎಂದ.

“ಯಾಕಪ್ಪ?”- ಶಬರಿ ಲೋಕಾಭಿರಾಮವಾಗಿ ಕೇಳಿದಳು.
“ಯಾಕ್ ಅಂದ್ರೆ? ಮಗ್ಳು ಇಂಗೆಲ್ಲ ಓದ್ ಕಲ್ತವ್ಳೆ ಅಂದ್ರೆ ಕುಣಿಬೇಕು ಅನ್ಸಾಕಿಲ್ಲ?”

ಶಬರಿಗೆ ಮಾತು ಹೊರಡಲಿಲ್ಲ. ಓದಲೂ ಸಾಧ್ಯವಾಗಲಿಲ್ಲ.
ಗಾಳಿಗೆ ತುಯ್ದಾಡುವ ದೀಪವನ್ನು ನೋಡುತ್ತ ಕೂತಳು.

ತಿಮ್ಮರಾಯಿಗೆ ಈ ಮೌನ ಅರ್ಥವಾಗಲಿಲ್ಲ. “ಯಾಕ್ ಮಗ್ಳೆ ಸುಮ್ಕೆ ಕುಂತ್ಕಂಡೆ?” ಎಂದು ಕೇಳಿದ. “ಯಾಕೂ ಇಲ್ಲ ಕಣಪ್ಪ ಇಲ್ಲಿ ಪುಸ್ತಕದಾಗೆ ಏನೋ ನೋಡ್ತಾ ಇದ್ದೆ” ಎಂದಳು. “ಅದೇನವ್ವ ಒಸಿ ಓದು. ಕೇಳಿಸ್ಕಮಾನ” ಎಂದು ಒತ್ತಾಯಿಸಿದ. ತಿಮ್ಮರಾಯಿ.

“ತಾಗ್ ದೀರ್‍ಗ ತಾ ಯ ಗುಡ್ಸು ಯಿ – ತಾಯಿ – ಅಂದ್ರೆ ಅಮ್ಮ ಅಂತ.”
ಶಬರಿ ಹೇಳುತ್ತ ಕಣ್ಣು ಒರೆಸಿಕೊಂಡಳು. ತಿಮ್ಮರಾಯಿಗೆ ಅರ್ಥವಾಯಿತು. ಮಾತು ಬದಲಾಯಿಸಲು ಒಂದು ಪ್ರಶ್ನೆ ಹಾಕಿದ- “ಅಲ್ಲ ಈ ಸೂರ್ಯ ಬಂದು ಈಟ್ ದಿನ ಆಯ್ತು. ಅವ್ನ್, ಅಪ್ಪ ಅಮ್ಮ ಎಲ್ಲವ್ರೆ ಏನ್ಕತೆ ಅಂಬ್ತ ಒಂದ್‍ಕಿತಾನಾರೂ ಕೇಳ್ಳಿಲ್ಲ ನೋಡವ್ವ, ನಿಂಗೇನಾರ ಗೊತ್ತ?”

“ಇಲ್ಲ ಕಣಪ್ಪ. ಸೂರ್ಯ ಒಂದ್‍ಕಿತಾನೂ ಅದೆಲ್ಲ ಯೇಳ್ಳಿಲ್ಲ. ಯೇಳ್ಬೇಕು ಅಂಬ್ತ ನಾವು ಕೇಳ್ಳಿಲ್ಲ.”
“ಇವಾಗೋಗಿರಾದು ಅಪ್ಪ ಅಮ್ಮನ್ನೇ ನೋಡಾಕಿರ್‍ಬೋದು…”
“ಇರ್‍ಬೋದು ಕಣಪ್ಪ.”
-ಶಬರಿಗೆ ಮಾತು ಬೆಳೆಸಲು ಆಸಕ್ತಿಯಿರಲಿಲ್ಲ.
“ಮಲೀಕಳಪ್ಪ. ನಾನಂಗೇ ಓದ್ಕಂಬ್ತೀನಿ” ಎಂದಳು.
“ಆತು ಕಣವ್ವ” ಎಂದು ತಿಮ್ಮರಾಯಿ ಹಳೆಯ ಗೋಣಿಚೀಲ ಹಾಸಿಕೊಂಡು ಮಲಗಿದ.
ದೀಪ ತುಯ್ದಾಡುತ್ತಿದೆ ಗಾಳಿಗೆ
ಎಣ್ಣೆ ಉಳಿಯುವುದೆ ಬಾಳಿಗೆ?
ಶಬರಿಯ ಮುಖದಲ್ಲಿ ಅಲೆಯ ಉಯ್ಯಾಲೆ;
ಮನಸ್ಸು ಬರೆದ ಓಲೆ.
ಎಷ್ಟು ಹೊತ್ತು ಕೂತಿದ್ದಳೋ ಹೀಗೆ. ಬಿರುಗಾಳಿಯ ಸದ್ದಿಗೆ ಎದ್ದಳು. ಹೊರಗೆ ನೋಡಿದಳು.

ಕಪ್ಪು ಮೋಡಗಳಲ್ಲಿ ಗೂಢವಾದ ಬಯಲು.
ದೂರದಲ್ಲೆಲ್ಲೋ ಗುಡುಗಿನ ಉಯಿಲು
ಹತ್ತಿರದಲ್ಲಿ ಮಾತಿನ ಮಿಂಚು.
ಯಾರ ದನಿ? ಒಂದಲ್ಲ ಎರಡು! ಗಂಡು-ಹೆಣ್ಣು
ಕಿವಿ ನಿಮಿರಿತು-ಪಂಚೇಂದ್ರಿಯಗಳೆಲ್ಲ ಅಲ್ಲಿಗೇ ಬಂದು ನಿಂತಂತೆ.
ನವಾಬ-ಗೌರಿ!
ಬಿರುಗಾಳಿಯ ನಡುವಿನ ನಿಶ್ಶಬ್ಧದಲ್ಲಿ ಅಸ್ಪಷ್ಟ ದನಿಗಳು.
ಶಬರಿಯ ಮನಸ್ಸಿನಲ್ಲಿ ಏನೇನೋ ಭಾವನೆ.
ಕೇಳಿಸಿಕೊಳ್ಳುವ ಕುತೂಹಲವೇಕೆ ಎಂದು ಮತ್ತೆ ದೀಪದ ಬಳಿ ಕೂತು ಪುಸ್ತಕಕ್ಕೆ ಕೈ ಹಾಕಿದಳು. ಪುಟಗಳನ್ನು ತಿರುವಿದಳು- ಮನಸ್ಸಿನ ಪದರುಗಳಂತೆ.

ಹೊರಗೆ ಗಾಳಿ ಹೆಚ್ಚಾದಂತೆ ಒಳಗೆ ದೀಪಕ್ಕೆ ಗೂಳಿಭಯ.
ದಂಗುಬಡಿದ ದೀಪವನ್ನು ನೋಡದಾದಳು ಶಬರಿ.
ಆರಿಸಿದಳು. ಹೋಗಿ ಮಲಗಿದಳು-ನಿದ್ದಯಿಲ್ಲದೆ.
ಇದ್ದಕ್ಕಿದ್ದಂತೆ ಮಳೆ ಸುರಿಯತೊಡಗಿತು.
ದಪದಪ ಸದ್ದಿನ ಮಳೆಯಲ್ಲಿ ಬಾಯಿಲ್ಲದೆ ಬಿದ್ದ ಮನಸ್ಸು.
ಕತ್ತಲಲ್ಲಿ ತೂರಿಬರುವ ಸೂರ್ಯಕಿರಣ.
ಹೊದ್ದ ದುಪ್ಪಟಿಯಲ್ಲಿ ಬೆಚ್ಚನೆಯ ಭಾವ.
ನವಾಬ-ಗೌರಿಯ ಪಿಸುದನಿ ಹೀಗೆ ಗಾಳಿಯಾಗುವುದೆ? ಮಳೆಯಾಗುವುದೆ?
ಮಾಯೆಯಾಗುವುದೆ?
‘ಪಿಸುಮಾತು ಆಡೋಣ ಬಾ ಕತ್ತಲೆ
ಬೆಳಕೆಂಬ ಮಾಯೆ ಬರಿಬೆತ್ತಲೆ’
-ಹೀಗೆ ಹೇಳಲುಬಾರದ ಏರಿಳಿತಗಳ ಶಬರಿ ಸುಖ-ಸಂಕಟಗಳ ನಡುವಿನ ಹೂಸದೊಂದು ಭಾವದಲ್ಲಿ ತತ್ತರಿಸುತ್ತಿರುವಾಗ ಮಳೆ-ನಿಸರ್ಗದ ನುಡಿಯನ್ನು ಬಿತ್ತರಿಸುತಿತ್ತು
ಅದಷ್ಟು ಹೊತ್ತಾಯಿತೊ ಗೊತ್ತಾಗಲಿಲ್ಲ. ಮಳೆಯ ಅಬ್ಬರ ಕಡಿಮೆಯಾಗಿತ್ತು.
ನಿದ್ದೆ ಸದ್ದು ಮಾಡದೆ ಕಾದು ಕೂತಿತ್ತು.
ಹೊದ್ದ ದುಪ್ಪಟಿಯನ್ನು ಒಗೆದು ಹೊರಳಿದಳು ಶಬರಿ.
ಹೂಂಚು ಹಾಕುವ ನಿದ್ದೆ ನಿಬ್ಬೆರಗಾಗುವಂತೆ ಎದ್ದು ಕೂತಳು.
ಅವಳ ಕಿವಿಗಳಿಗೆ ಸದ್ದೊಂದು ಕೇಳಿಸುತ್ತಿತ್ತು.
ಮಳೆಯ ನೀರಲ್ಲಿ ಮನುಷ್ಯನ ನಡಿಗೆ.
ಕಾದು ಕೂತಳು. ಮನೆಯ ಬಾಗಿಲಿಗೇ ಬಂತು ನಡಿಗೆ.

ಬಾಗಿಲು ಬಡಿದ ಸದ್ದು. ಸರಸರನೆ ಎದ್ದು ಹೇಳದೆ ಕೇಳದೆ ಬಾಗಿಲು ತೆಗೆದಳು.
ಸೂರ್ಯ ಒಳಬಂದ.
ಬೆಂದ ಭಾವನೆಗಳ ಎದುರು ಮಳಯಲ್ಲಿ ನೆಂದ ಸೂರ್ಯ.
“ಇದ್ಯಾತ್ರುದು ಇಂಗ್ ನೆಂದ್ಕಂಡ್ ಬಂದಿದ್ದೀಯ. ಬಾ ಬಾ ವಲ್ಲೀಬಟ್ಟೆ ಕೊಡ್ತೀನಿ” ಎಂದು ಶಬರಿ ಒಳಗೆ ಕರೆದಳು.

ಸೂರ್ಯ ಒಳಬರುತ್ತ “ನನ್ ಗೆಳೆಯ ರಸ್ತೇಲ್ ಬಿಟ್ ಹೋಗಿದ್ದೇ ತಡ, ಮಳೆ ಶುರುವಾಯ್ತು. ಇಷ್ಟೊತ್ತೂ ಮಂಟಪ್‍ದಲ್ ನಿಂತಿದ್ದೆ. ಸ್ವಲ್ಪ ಕಡ್ಮೆ ಆಯ್ತಲ್ಲ. ಬಂದೆ” ಎಂದು ಹೇಳಿ ಒದ್ದೆಯಾದ ಷರಟನ್ನು ಬಿಚ್ಚಿದ.

“ಈಟೊತ್ತಿಗ್ ಬತ್ತೀನಿ ಅಂಬ್ತ ಮದ್ಲೇ ಯೇಳಿರ್ ಯಾರಾನ ಬರಾಕಿಲ್ವ? ನವಾಬಣ್ಣಾನೇ ಬತ್ತಿದ್ದ ಗೌರಿತಾವ್ ಮಾತಾಡಾದ್ ಬಿಟ್ಟು” ಎಂದಳು ಶಬರಿ.

ಸೂರ್ಯ, ಯಾಕೆ ಈರೀತಿಯ ಮಾತು ಎಂಬಂತೆ ನೋಡಿದ. ಶಬರಿ ಹಾಗೆ ಮಾತಾಡಿದ್ದು ಸರಿಯಲ್ಲವೇನೊ ಎನ್ನಿಸಿ ತುಟಿಕಚ್ಚಿಕೊಂಡಳು. ಟವಲನ್ನು ತಂದು “ಎಲ್ಲಿ ಕುಂತ್ಕ, ನಾನೇ ತಲೆ ಉಜ್‍ತೀನಿ” ಎಂದಳು. “ನಾನೇ ಒರಿಸ್ಕಂತೀನಿ. ಕೊಡು” ಎಂದು ಸೂರ್ಯ ಹೇಳಿದರೂ ಕೇಳದೆ ಶಬರಿ ಆತನ ಒದ್ದೆ ತಲೆಯನ್ನು ಒರೆಸಿದಳು. ಹಾಗೇ ಮೈಯನ್ನು ಒರೆಸುತ್ತ ಹೋದಂತೆ ಬೆಚ್ಚನೆಯ ಅನುಭವ.

ಹೂರಗೆ ಜಿಟಿಜಿಟಿ ಮಳೆ.
ಒಳಗೆ ಭಾವನೆಗಳ ಬೆಳೆ.
ತೆನೆಯೊಡೆದು ತೂಗಾಡುವ ಪೈರು.
ಕೆನೆಗಟ್ಟಿದ ಒಲೆಯ ಮೇಲಿನ ಹಾಲು.
ಸೂರ್ಯ-ಶಬರಿ ಒಂದಾಗಿದ್ದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನದಿನಿಯ
Next post ಕಾಗೆ ಮತ್ತು ಕೋಗಿಲೆ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys