ನನ್ನ ನಲ್ಲ ಹಮ್ಮುಬಿಮ್ಮಿನ ಒಡೆಯ
ನಾ ನಕ್ಕರೂ ನಗಲಾರ
ಬಿಗುಮಾನಕ್ಕೆ ಅವನೇ ಪತಿ
ಸತಿಯಲ್ಲಿ ಅಕ್ಕರೆಯ ಸಕ್ಕರೆಯ ಪಾಕ
ತೋರಿಕೆಗೆ ಮಾತ್ರ ಜಂಭದ ವಿವೇಕ
ಸೋಗು ನುಡಿಗಾರನಲ್ಲ
ಮರಳು ಮಾತುಗಾರನಲ್ಲ
ನಿಷ್ಠುರತೆಯ ಕಟು ವ್ಯಕ್ತಿ
ನೇಮಗಾರ
ಹುಟ್ಟುಗುಣಗಳು ಕೆಲವು
ಸಿಟ್ಟು ಸೆಡವು ಅಹಮಿಕೆಯು
ದಿಟ್ಟ ಗುಣಗಳು ಹಲವು
ಧೈರ್ಯ, ಸ್ಥೈರ್ಯ ಸಹಕಾರವು
ಕುಹಕತನವಿಲ್ಲ
ನೀಚತನವಿಲ್ಲ
ಒರಟುತನವು ದಿಟವು
ಅಸಮಾಧಾನಕ್ಕೆ ರುಧ್ರನರ್ತನವುಂಟು
ಮಧುರ ಮಾತಿಗೆ ಪ್ರೇಮಸಿಂಚನವುಂಟು
ಮಮತೆಯಾಸರೆಯವನು
ಮತ್ತೆ ಮನದಿನಿಯನು
*****