ಮುಂಜಾನೆಯ ಹಗಲಲ್ಲಿ
ಮಿಂದ ಬೆಳ್ಳಿ ನಾನಾಗಿ
ಹಸನಾದ ಬಾಳಿಗೆ
ಹೊಸತಾದ ಪ್ರೀತಿ
ತುಂಬಿದ ಭಾಸ್ಕರ ನೀನಾಗಿ ||

ಋತು ಚಕ್ರಧಾರೆ ಹೊನಲಲ್ಲಿ
ಓಕುಳಿ ಚೆಲ್ಲಿದ
ವಸಂತ ನೀನಾಗಿ
ನಿನ್ನಲಿ ಬೆರೆತ ಮನವು
ತಂಪನೊಸೆದ ಪ್ರಕೃತಿ ನಾನಾಗಿ ||

ಹೊಂಬೆಳಕ ಸಂಜೆಯಲಿ
ಮೇಘದಲೆ ಚಿತ್ತಾರ ಬಿಡಿಸಿ
ಅನಂತ ನೀನಾಗಿ
ರೂಪ ಮಾಲಿಕೆಯ ಬಣ್ಣಹೊಯ್ದ
ಸ್ವರೂಪ ನಾನಾಗಿ ||

ಹುಣ್ಣಿಮೆಯ ರಾತ್ರಿಯಲಿ
ಚಂದ್ರಮನ ಬೆಳಕಲಿ ಬೀಸುವ
ತಂಗಾಳಿ ನೀನಾಗಿ
ಹಸಿರಾದ ಒಡಲಲಿ ಹಸನಾದ ಒಲುಮೆಯ
ಇಬ್ಬನಿ ನಾನಾಗಿ ||

ಮೂಡಣದಾ ಭಾಸ್ಕರ
ನಿನ್ನಲಿ ನಾನಿ ಕಿರಣವಾಗಿ
ಬೆಳ್ಳಿ ನಾನಾಗಿ ಭಾಸ್ಕರ ನೀನಾಗಿ ||
*****