ಸುಗ್ಗಿಯ ಹಬ್ಬವು
ಬಂದಿದೆ ಅಣ್ಣ
ತಂದಿದೆ ಸಂಭ್ರಮ
ಸಗ್ಗದ ಬಣ್ಣ

ಹಾಲಕ್ಕಿ ಒಕ್ಕಲ ಕುಂಚವು ಕುಣಿದಿದೆ
ರೈತನ ಬವಣೆಯ ಕಾಲವು ಕರಗಿದೆ
ಖಾಲಿಯಾ ಕಿಸೆಯದು
ಝಣ-ಝಣ ಎಂದಿದೆ
ಬತ್ತದ ಕಣಜವು ಉಕ್ಕೆದ್ದು ಬಂದಿದೆ

ಮಾಮರದ ಸೆರಗಿನಲಿ
ಹೂ ಬಿಸಿಲ ವೈಯಾರ
ಕೋಕಿಲದ ಕುಕಿಲವು
ದುಂಬಿಗಳ ಝೇಂಕಾರ

ಮಲೆನಾಡ ಕಾಡು
ಹಸಿರಿನಾ ತೇರು
ಒತ್ತಾದ ಗಿಡಮರ
ಮುತ್ತಿನ ಸೇರು

ಸುಗ್ಗಿಯಾ ಮುಷ್ಟಿಯಲಿ
ಸೃಷ್ಟಿಯಿದು ಸತ್ಯದಲಿ
ಶಿವನ ಸೌಂದರ್ಯ ಸ್ಪೂರ್ತಿ
ಉಕ್ಕಿಸಿದೆ ಭೂ ವ್ಯೋಮಗಳಲ್ಲಿ

ಹಬ್ಬದ ಹರುಷ
ತುಂಬಿನ ಮನಸ
ಧರಿಸಿದೆ ಜಗವು
ಹಬ್ಬದ ದಿರಿಸ
*****