ನೀನಿಳಿಯುವಾಗಿನ ನಿನ್ನ ನಗ್ನಕಾಲುಗಳ ಸೊಬಗನ್ನು
ಕಣ್ಣುಗಳಲ್ಲಿನ ಆಚಾನಕ ಬೆರಗನ್ನು
ಭಯ ಹಾಗೂ ಲಜ್ಜೆಗಳನ್ನು
ನಾನು ಕಂಡಿರುವೆನು.

ನೀನು ಬಂದಿಳಿದ ಬಸ್ಸು
ಮುಂದೆಲ್ಲಿಗೊ ಹೊರಟು ಹೋಯಿತು.
ಎದ್ದ ಧೂಳಿನಲ್ಲಿ ಯಾರೊ ಹಿಂದಿರುಗಿ ನೋಡಿದರು.

ನೀನು ಮುಖ ಒರೆಸಿಕೊಂಡೆ
ಮುಂಗುರುಳನ್ನು ನೀವಿದೆ
ಒಂದು ಕ್ಷಣ ದಿಕ್ಕೆಟ್ಟವಳು
ಅದನ್ನು ತೋರಿಸಿಕೊಳ್ಳದೆ ನಿಂತೆ

ಆಚೀಚೆ ಅಂಗಡಿಗಳು
ಒಂದು ಆಲದ ಮರ-
ರಸ್ತೆ ಎಲ್ಲಿಗೆ ಹೋಗುತ್ತದೋ
ತಿಳಿಯದು.

ನಾನಾದರೂ ನಿನ್ನ ಬಳಿ ಬರಲಾರೆ
ಕಲ್ಪನೆಯ ಕನ್ನಡಿಯನ್ನು ಒಡೆಯಲಾರೆ
ಒಡೆದರೆ ನೀನಿಲ್ಲ
ನೀ ಬಂದ ನಗರವೂ ಇಲ್ಲ!
*****