ಸತ್ಯ

ಸತ್ಯ

ಚಿತ್ರ: ಕರಿನ್ ಹೆನ್ಸೆಲರ್‍
ಚಿತ್ರ: ಕರಿನ್ ಹೆನ್ಸೆಲರ್‍

ಆಕೆ ಚಿಕ್ಕವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ಹೆಂಗಸು.  ನೋಡಲು ಸುಂದರಿ.  ತವರುಮನೆಯಲ್ಲಿದ್ದ ಆಕೆ ವಿಧವಾ ಬದುಕನ್ನು ಸಹಜವಾಗಿ ಅನುಭವಿಸತೊಡಗಿದ್ದಳು.  ಪುರಾಣ, ಪುಣ್ಯಕಥೆಗಳನ್ನು ಆಲಿಸುವಲ್ಲಿ, ಮಠ, ದೇವಾಲಯಗಳಿಗೆ ಹೋಗುವಲ್ಲಿ ಶ್ರದ್ಧೆ ಬೆಳೆಸಿಕೊಂಡಿದ್ದಳು.  ಅವಳ ಅಲೌಕಿಕ ತುಡಿತಗಳನ್ನು ಊರಿನ ಮಠದ ಸ್ವಾಮಿಗಳು ತುಂಬಾ ಮೆಚ್ಚಿಕೊಂಡಿದ್ದರು.  ಮತ್ತು ಅವಳನ್ನು ಗೌರವಿಸುತ್ತಿದ್ದರು.  ಅವಳ ಪರಿಶುದ್ಧ ಜೀವನ ಬಗೆ ಜನರಿಗೂ ಹೆಮ್ಮೆ ತಂದಿತ್ತು.

ಮನುಷ್ಯನ ಜೀವನದ ಘಟನೆಗಳು ತೀರ ಆಕಸ್ಮಿಕ.

ಅಂಥದೊಂದು ಪ್ರಸಂಗ ಅವಳನ್ನು ಆತಂಕಕ್ಕೀಡು ಮಾಡಿಬಿಟ್ಟಿತು.  ಈಗವಳ ಬಗ್ಗೆ ಜನರ ನಾಲಗೆಗಳು ಪಿಸುಪಿಸು ನುಡಿಯಲಾರಂಭಿಸಿದವು.  ಆಕೆಯ ಬಸಿರು ಅದಕ್ಕೆ ಕಾರಣ.

ಹೊಟ್ಟೆ ಬೆಳೆಯುತ್ತಿದ್ದಂತೆ ಮನೆಯ ಜನರಂತೂ ಮುಳ್ಳಿನ ಮೇಲೆ ಮಲಗಿದಂತೆ ಒದ್ದಾಡತೊಡಗಿದರು.  ಜನರು ತಮ್ಮ ಗೊಡವೆಗಳನ್ನು ಬದಿಗಿಟ್ಟು ಅವಳ ಬಸಿರಿನ ಮೂಲ ಜಾಲಾಡುತ್ತ ರೋಚಕ ಸಂಗತಿಗಳನ್ನು ಹೆಣೆಯತೊಡಗಿದರು.  ಆದರೆ ಆಕೆ ಮಾತ್ರ ಮೌನಿಯಾಗಿದ್ದಳು.

ಈ ಬಸಿರಿಗೆ ಕಾರಣರಾದ ಪುರುಷ ಯಾರು?  ಎಲ್ಲರದೂ ಇದೆ ಪ್ರಶ್ನೆ-ಆದರೆ ಆಕೆ ಮಾತ್ರ `ಗೊತ್ತಿಲ್ಲ’ ಎನ್ನವಳು.  ರಮಿಸುವ, ಶಿಕ್ಷಿಸುವ, ಬೆದರಿಸುವ ಎಲ್ಲ ತಂತ್ರಗಳಿಗೂ ಅವಳದು ಒಂದೇ ಉತ್ತರ.  ಕೊನೆಗೆ ಮನೆಯವರು ಅವಳನ್ನು ಮಠಕ್ಕೆ ಕರೆದುಕೊಂಡು ಬಂದು ಸ್ವಾಮಿಗಳೆದುರು ನಿಲ್ಲಿಸಿದರು.

ಮಠದ ಬಗ್ಗೆ, ಸ್ವಾಮಿಗಳ ಬಗ್ಗೆ ಬಹಳ ಭಕ್ತಿ, ಶ್ರದ್ಧೆ, ಗೌರವ ಇರಿಸಿಕೊಂಡಿದ್ದ ಆಕೆ ಅಲ್ಲಿ ನಿಜಸಂಗತಿಯನ್ನು ಹೇಳುತ್ತಾಳೆಂದು ತಾಯಿ-ತಂದೆಗಳ ನಂಬಿಕೆಯಾಗಿತ್ತು.

“ಮನುಷ್ಯ ತಪ್ಪು ಮಾಡುವುದು ಸಹಜ.  ಆದರೆ ಅದಕ್ಕೆ ಪಶ್ಚಾತ್ತಾಪ ಪಟ್ಟರೆ ದೇವರಿಗೆ ಇಷ್ಟವಾಗುವುದು” ಎಂದು ಸ್ವಾಮೀಜಿ ಅವಳ ಗರ್ಭದ ಸತ್ಯ ಹೊರಗೆ ಹಾಕಲು ಯತ್ನಿಸಿದರು.

“ನನ್ನ ತಪ್ಪು ಒಪ್ಪಿಕೊಳ್ಳುತ್ತೇನೆ.  ಆದರೆ ಈ ಬಸಿರಿಗೆ ಕಾರಣರಾದವರ ಹೆಸರು ಹೇಳುವುದಿಲ್ಲ”  ಆಕೆ ಮೊದಲ ಬಾರಿ ಇಷ್ಟು ಮಾತನಾಡಿದ್ದಳು.

“ಇದು ನಿನ್ನ ಚಾರಿತ್ರ್‍ಯದ ಪ್ರಶ್ನೆ.  ನಿನ್ನ ಮನೆಯವರ ಮಾನದ ಪ್ರಶ್ನೆ.  ಎಲ್ಲರಿಗೂ ಸತ್ಯ ಗೊತ್ತಾಬೇಕು.  ನಿನ್ನ ಬದುಕಿಗೆ ಅನ್ಯಾಯವಾಗಬಾರದು” ತುಸು ಏರುಧ್ವನಿಯಲ್ಲಿ ಸ್ವಾಮೀಜಿ ನಿಗೂಢತೆಯನ್ನು ಬಯಲುಗೊಳಿಸಲು ಪ್ರೇರೇಪಿಸಿದರು.

“ನಾನು ಬಸಿರಾಗಿದ್ದೇನೆ ಇದು ಸತ್ಯ” ತಲ್ಲಣಕ್ಕೀಡಾಗದೆ ಹೇಳಿದಳಾಕೆ.

“ನೀನು ಅಂತರಂಗದ ಸತ್ಯವನ್ನು ಹೇಳುತ್ತಿಲ್ಲ”  ಸಮಾಜದ ಮುಖ್ಯಸ್ಥನೊಬ್ಬ ಕೆರಳಿದ್ದ.

“ನೀವು ಈ ಜೀವ ತೆಗೆದರೂ ನಾನು ಈ ಬಸಿರಿಗೆ ಕಾರಣರಾದವರ ಬಗ್ಗೆ ಹೇಳುವುದಿಲ್ಲ” ಅವಳು ದೃಢವಾಗಿದ್ದಳು.

ಜನರು ಸ್ತಂಭೀಭೂತರಾಗಿ ಕುಳಿತರು.  ಸ್ವಾಮಿಗಳೆದುರು ಅವಳು ಉದ್ಧಟತನ ತೋರುತ್ತಿದ್ದಾಳೆಂದು ಒಳಗೊಳಗೆ ಸಿಟ್ಟು.  ಮತ್ತೊಬ್ಬ ಎದ್ದು ನಿಂತು ಹೇಳಿದ “ಸ್ವಾಮಿಗಳು ನಮಗೆ ಪೂಜ್ಯರು.  ನಿರ್ಮಲ ಚಿತ್ತದವರು.  ಅವರೆದುರಾದರೂ ಸತ್ಯ ಹೇಳು” ಕೂಡಿದ ಜನರೂ ಈ ಮಾತಿಗೆ ಬೆಂಬಲಿಸಿದರು.

ಆಕೆ ತನ್ನ ನಿಲುವನ್ನು ಪ್ರಕಟಿಸಲಿಲ್ಲ.

ಸಭೆಯಲ್ಲಿ ಹಿಂಸಾತ್ಮಕ ಧೋರಣೆಯ ಪ್ರವೃತ್ತಿ ಕಾವುಗೊಳ್ಳುತ್ತಿರುವಂತೆ ಸ್ವಾಮೀಜಿ “ಸತ್ಯ ಕಠೋರ ಮತ್ತು ನಿಷ್ಠುರ.  ಅದು ಬಹಿರಂಗವಾದರೆ ಆಗುವ ಪರಿಣಾಮ ಎಂಥದೋ?  ಅವಳಿಗೆ ಒಂದಿಷ್ಟು ಸಮಯ ಕೊಡಿರಿ” ಎಂದರು.

ಸಭೆ ಸಮ್ಮತಿಸಿತು.  ಕೂಡಿದ ಜನ ನಾಳೆ ಸೇರೋಣವೆಂದು ಎದ್ದು ನಡೆದರು.  ಆಕೆ ನಿಂತಲ್ಲಿಯೆ ಕುಳಿತಳು.  “ನೀನು ಸತ್ಯ ಹೇಳುವ ತನಕ ನಮ್ಮ ಮನೆಗೆ ಬರಬೇಡ” ಎಂದು ತಾಯಿ-ತಂದೆಗಳು ಹೊರಟು ಹೋದರು.

ಮರುದಿನ ಸತ್ಯ ಬಯಲಾಗಿತ್ತು.  ಸ್ವಾಮೀಜಿ ಬರೆದಿಟ್ಟಿದ್ದರು.

“ಅವಳ ಬಸಿರಿಗೆ ಕಾರಣ ನಾನು.  ಕಾವಿಯಲ್ಲಿ ಕಾಮನೆಗಳನ್ನು ಬಚ್ಚಿಟ್ಟುಕೊಂಡು ನಿಮ್ಮನ್ನು ವಂಚಿಸಲು ನನ್ನಿಂದ ಸಾಧ್ಯವಿಲ್ಲ.  ಕ್ಷಮಿಸಿ, ನಾವು ದೂರ ಹೋಗುತ್ತಿದ್ದೇವೆ.”

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೪೫
Next post ಆ ದಿನಗಳ ಹುಡುಗಿ

ಸಣ್ಣ ಕತೆ

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಹುಟ್ಟು

  ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

 • ಮಿಂಚು

  "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

 • ಆವಲಹಳ್ಳಿಯಲ್ಲಿ ಸಭೆ

  ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…