Home / ಕವನ / ಕವಿತೆ / ಭಯ ಪುರಾಣ

ಭಯ ಪುರಾಣ

ಭಯಕೆ ನಾನಾ ರೂಪಗಳ ಕೊಟ್ಟು
ಬಂಗಾರ ಬೆರಳುಗಳಿಂದ ಅಲಂಕರಿಸಿ
ಕಳ್ಳರ ಭಯಕ್ಕೆ ಭದ್ರವಾಗಿ ಬೀಗ ಜಡಿದು ಕುಳ್ಳರಿಸಿ
ಮಾರಿ ಕಾಲರಾ ಭಯ, ರೋಗ ರುಜಿನ ಭಯ
ಸಾವು ವೈರಿಗಳ ಭಯ ಮೊದಲಾದ ಅನೇಕ ಭಯಗಳು
ದೂರಾಗಲೆಂದು ಭಯದಿಂದ ಅಡ್ಡ ದಿಡ್ಡ ಬೋರಲು
ಬಿದ್ದು ಬೇಡುತ್ತೇವೆ
ಕತ್ತಲೆಯು ಕತ್ತಲೆಯನ್ನು ಹಡೆದಂತೆ
ಭಯವು ಭಯವನ್ನೇ ಹಡೆಯುತ್ತ ಹಡೆಯುತ್ತ
ದೇಶದಲ್ಲೆಲ್ಲಾ ಭಯದ ಹುಳುಗಳೇ ತುಂಬಿವೆ
ಭಯದ ಕೊಳ ಪಾಚಿಗಟ್ಟಿದೆ
ಅದರಲ್ಲೇ ಶಾಶ್ವತ ಕೊಳೆಯಲು
ಭಯಾನಕ ಅದ್ಭುತ ಗೊಳ್ಳು ಪುರಾಣಗಳು ಸಂಕೀರ್ತನೆಗಳು
ಕೊಳೆ ಹೊಳೆ ನಿರಂತರ ಹರಿದಿವೆ
ಭಯದಿಂದ ಅದನ್ನು ಕೇಳುತ್ತ ಕೇಳುತ್ತ
ಪ್ರಶ್ನೆ ಮಾಡುವ ಶಕ್ತಿ ಸತ್ತು ಹೋಗಿದೆ
ಭಯದ ಪಾಳುಬಾವಿ ಎಂದೆಂದೂ ಬತ್ತದಂತೆ
ವಟಗುಟ್ಟುವ ಕಪ್ಪೆಗಳು ಹೊಟ್ಟೆ ಬೆಳೆಸಿಕೊಳ್ಳುತ್ತವೆ
ಶರಣಾಗಿ ತಲೆಬಾಗದವರನ್ನು
ರಕ್ತ ಕಾರಿಸಿ ಕೊಲ್ಲುತ್ತವೆ
ಅವರ ಮಕ್ಕಳ ಮರಿ ಕಬಳಿಸುತ್ತವೆ
ಎಂದೇನೇನೋ ನಿಗೂಢ ಭಯಗಳು
ರಾಜ ಮರ್ಯಾದೆಯ ಷೋಡಶೋಪಚಾರ ಶೃಂಗಾರಗಳೆಲ್ಲ
ದೇವರೆಂಬ ಗೊಂಬೆಗಳಿಗೆ ಬೇಕು
ಹೆಣ ಸಿಂಗಾರವಲ್ಲದೆ ಬೇರೆ ಫಲವಿಲ್ಲ
ಹೊಗಳಿಕೆಗೆ ಬಾಯಿ ಬಿಡುವ ಅವು
ತೆಗಳುವವರ ಶಿಕ್ಷಸದೆ ಬಿಡುವುದಿಲ್ಲ
ಅವನ್ನು ಒಲಿಸಿಕೊಳ್ಳಲು ಪ್ರಾರ್ಥನೆ ಕೀರ್ತನೆ
ವಾದ್ಯಗಳ ಮೊರೆತ ಬೆಂಕಿಹಾರಾಟ
ಮುಂತಾದ ಭಯಾನಕಗಳು
ಕುರಿ ಕೋಣಗಳ ಬಲಿಯನ್ನು
ಕೆಲವು ಕೇಳುತ್ತವೆ ಶಾಖಾಹಾರಿಗಳು
ಇನ್ನೂ ಕೆಲವು ಸಸ್ಥಾಹಾರಿಗಳು
ಅವಕ್ಕೆ ನವರಸ ಭಕ್ಷ್ಯ ಭೋಜ್ಯಗಳು ಬೇಕು
ದೈವ ಸಾಕ್ಷಾತ್ಕಾರಕ್ಕೆ ತಾವೇ ಪರವಾನಿಗೆದಾರರೆಂದು
ಮೆರೆಯುವ ಬಗೆಬಗೆಯ ಗುರು ಜಗದ್ಗುರುಗಳಿಗೆ
ಬುದ್ದೀ ಸ್ಥಾಮೀ ಎಂದು ಭಯದಿಂದ ಅಡ್ಡ ಬೀಳಬೇಕು
ರಾಜರ ಮೆರೆದಾಟ ವೈಭವಗಳೆಲ್ಲ ಈ ಸನ್ಯಾಸಿಗಳಿಗೂ ಬೇಕು
ಯಾವುದೋ ಪುಣ್ಯಾತ್ಮನ ಹೆಸರಿನಲ್ಲಿ ಮಠಗಳು
ಅವುಗಳಲ್ಲಿ ಗದ್ದುಗೆಯೇರಿದ ಹದ್ದುಗಳು ಮರ್ಕಟಗಳು
ಹೀಗೆ ಗುಡಿ ಮಠ ಜಾತ್ರೆ ಪೂಜೆ ಪುರಾಣಾದಿ
ಕೊಳಚೆಯ ಪ್ರವಾಹದಲ್ಲಿ ಮುಳಿಗೇಳುತ್ತ
ಮತ್ತೆ ಮತ್ತೆ ಮತ್ತೇರಿ ಮುಳುಗಿ
ಹೆಣಗಳಾಗಿ ಹೋಗಿರುವ ನನ್ನ ಜನರೇ
ಸಾಕಿನ್ನು ಭಯಾವಳಿ ಭವಾವಳಿಗಳ
ಬೆಂಡು ಬೆಂಡಾದ ತುಂಡು ತುಂಡಾದ ಬೀಳು ಬಾಳುಗಳು
ಭಯವನ್ನೇ ತುಂಬಿ ಬೆಳಸುತ್ತಾ ಬಂದ
ಪುರಾಣ ಕಂತೆಗಳ ಕಟ್ಟಿಟ್ಟು ಬಿಡಿ
ಇಲ್ಲಾ ತಿಪ್ಪೆಗೆಸೆದು ಬಿಡಿ
ಭಯದ ಕೋಟೆಗಳಂತಿರುವ ಗುಡಿ ಗುಂಡಾರಗಳ
ಮ್ಯೂಜಿಯಮ್ಮುಗಳಾಗಿ ಮಾಡಿ
ಗೊಂಬೆಗಳ ಮಕ್ಕಳಿಗೆ ಕಲೆಗಾಗಿ ತೋರಿಸಿ
ಜನರ ಭಯದ ಆಧಾರದ ಮೇಲೆ ಬೊಚ್ಚು ಬೆಳೆಸಿರುವ
ಮಠಾಧೀಶ್ವರ ಪೂಜಾರಿ ಬಾಬಾಗಳನ್ನಲ್ಲ
ಹೊಲ ಗದ್ದೆ ತೋಟ ಕಟ್ಟಡ ಕಾರ್ಖಾನೆಗಳಿಗೆ
ಎಳೆ ತಂದು ದುಡಿಯ ಹಚ್ಚಿರಿ ನಮ್ಮ ನಿಮ್ಮಂತೆ
ಜಾತ್ರೆ ಪರಿಷೆಗಳನ್ನೆಲ್ಲ ಜನ ಬಾಳಲು ನೆರವಾಗುವ
ಜಾನಪದ ಕುಶಲ ಕಲಾಮೇಳಗಳನ್ನಾಗಿ ಮಾಡಿ
ದೇವರು ಮೈಯಲ್ಲಿ ಬರುವ ಭಕ್ತಿಯಾವೇಶದ ಭ್ರಮಿಷ್ಟರನ್ನು
ಹುಚ್ಚಾಸ್ಪತ್ರೆಗಳಿಗೆ ಸೇರಿಸಿ ತಲೆ ಸರಿಮಾಡಿ
ಮಠಗಳನ್ನೆಲ್ಲಾ ಕಾಯಕ ಕೇಂದ್ರಗಳನ್ನಾಗಿ ಪರಿವರ್ತಿಸಿ
ಮಾನವ, ಮಾನವ ಚೈತನ್ಯ, ಮಾನವತೆಯನ್ನು ಬಿಟ್ಟು
ಬೇರೆ ದೇವರಿಲ್ಲ ಕಾಣಿರೋ .

ಭಯದ ಕೂಸುಗಳಾದ ಚಿಲ್ಲರೆ ದೇವರುಗಳನ್ನು
ಆ ಚಿಲ್ಲರೆಗಳ ಮೇಲೆ ಹೊಟ್ಟೆ ಹೊರೆಯುವ
ಪರೋಪಜೀವಿ ಬುರುಸುಗಳನ್ನು ಕೊಳೆಯನ್ನೆಲ್ಲ
ಸಾರಾಸಗಟಾಗಿ ತೊಳೆಯಿರಿ
ಭಯವಿಲ್ಲದ ಮಾನವರಾಗಿ ಬೆಳೆಯಿರಿ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...